ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬುಧವಾರ ಹೊಸ 'ಏರ್ ಫೋರ್ಸ್ ಒನ್' ವಿಮಾನದಲ್ಲಿ ತಮ್ಮ ಮೊದಲ ಪ್ರಯಾಣವನ್ನು ಕೈಗೊಂಡಿದ್ದಾರೆ.
ಗಲ್ಫ್ ರಾಷ್ಟ್ರವಾದ ಕತಾರ್ ಉಡುಗೊರೆಯಾಗಿ ನೀಡಿರುವ, 400 ಮಿಲಿಯನ್ ಡಾಲರ್ (ಸುಮಾರು 3,300 ಕೋಟಿಗೂ ಅಧಿಕ) ಮೌಲ್ಯದ ಬೋಯಿಂಗ್ 747-800 ವಿಮಾನವನ್ನು ಅಮೆರಿಕ ಅಧ್ಯಕ್ಷರ ಬಳಕೆಗೆ ತಕ್ಕಂತೆ ನವೀಕರಿಸಲಾಗಿದೆ.
ವಿಮಾನದ ಸಿದ್ಧತೆಯ ಬಗ್ಗೆ ಪತ್ರಕರ್ತರೊಂದಿಗೆ ಹೆಮ್ಮೆಯಿಂದ ಮಾತನಾಡಿದ ಅಧ್ಯಕ್ಷ ಟ್ರಂಪ್, "ನಮ್ಮ ದೇಶವನ್ನು ಜಗತ್ತಿನ ಮುಂದೆ ಸರಿಯಾಗಿ ಪ್ರತಿನಿಧಿಸಬೇಕಾದ ಅಗತ್ಯವಿದೆ. ಇಂತಹ ಐಷಾರಾಮಿ ವಿಮಾನದ ವಿಷಯದಲ್ಲಿ ನಾವು ಎರಡು ಕೆಲಸ ಮಾಡಬಹುದು; ಒಂದೋ ಇದನ್ನು ಯಾರಿಗೂ ತಿಳಿಯದಂತೆ ರಹಸ್ಯವಾಗಿಡಬಹುದು ಅಥವಾ ಇಡೀ ಜಗತ್ತಿಗೆ ವೈಭವದಿಂದ ಪ್ರದರ್ಶಿಸಬಹುದು" ಎಂದು ಹೇಳಿದ್ದಾರೆ.
ಇಷ್ಟು ವರ್ಷಗಳ ಕಾಲ ಅಮೆರಿಕ ಅಧ್ಯಕ್ಷರ ಅಧಿಕೃತ ವಿಮಾನಗಳ ಗುರುತಾಗಿದ್ದ ಸಾಂಪ್ರದಾಯಿಕ ತಿಳಿ ನೀಲಿ ಬಣ್ಣವನ್ನು (ಲೈಟ್ ಬ್ಲೂ) ಈ ಹೊಸ ವಿಮಾನದಿಂದ ಕೈಬಿಡಲಾಗಿದೆ. ಟ್ರಂಪ್ ಅವರ ನೆಚ್ಚಿನ ಬಣ್ಣಗಳಾದ ಗಾಢ ನೀಲಿ (ನೇವಿ ಬ್ಲೂ) ತಳಭಾಗ, ಹಾಗೂ ಕೆಂಪು ಮತ್ತು ಚಿನ್ನದ ಬಣ್ಣದ ಪಟ್ಟಿಗಳಿಂದ ವಿಮಾನದ ಹೊರಭಾಗವನ್ನು ಅಲಂಕರಿಸಲಾಗಿದೆ. ವಿಮಾನದ ಒಳಭಾಗದಲ್ಲಿ ಅತ್ಯಂತ ಮೃದುವಾದ ಕಾರ್ಪೆಟ್ಗಳು, ಮಲಗಲು ಅನುಕೂಲವಾಗುವ ಆಸನಗಳು, ಅತ್ಯಾಧುನಿಕ ಮರದ ಪೀಠೋಪಕರಣಗಳು ಹಾಗೂ ಸೀಟ್ ಬೆಲ್ಟ್ಗಳ ಮೇಲೆ ಅಮೆರಿಕ ಅಧ್ಯಕ್ಷರ ಅಧಿಕೃತ ಮುದ್ರೆಯನ್ನು (ಪ್ರೆಸಿಡೆನ್ಶಿಯಲ್ ಸೀಲ್) ಅಳವಡಿಸಲಾಗಿದೆ.
ತಾತ್ಕಾಲಿಕ ವಿಮಾನ
ಕಳೆದ 36 ವರ್ಷಗಳಿಂದ ಅಮೆರಿಕದ ಅಧ್ಯಕ್ಷರಿಗೆ ಸೇವೆ ಸಲ್ಲಿಸುತ್ತಿರುವ ಹಳೆಯ ಬೋಯಿಂಗ್ ವಿಮಾನಗಳ ಜಾಗಕ್ಕೆ ಹೊಸದಾಗಿ ಎರಡು ವಿಮಾನಗಳನ್ನು ಸಿದ್ಧಪಡಿಸಲಾಗುತ್ತಿದೆ. ಆದರೆ, ಆ ವಿಮಾನಗಳ ನಿರ್ಮಾಣ ಕಾರ್ಯ ತಡವಾಗುತ್ತಿದ್ದು, ಅವುಗಳು ಸಿದ್ಧವಾಗಲು ಕನಿಷ್ಠ 2028 ಆಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲಿಯವರೆಗೆ ಕತಾರ್ ನೀಡಿದ ಈ ವಿಮಾನವನ್ನು ಒಂದು ತಾತ್ಕಾಲಿಕ ವ್ಯವಸ್ಥೆಯಂತೆ ಬಳಸಲು ಟ್ರಂಪ್ ನಿರ್ಧರಿಸಿದ್ದಾರೆ.
ಸುರಕ್ಷತೆಯ ಬಗ್ಗೆ ತಜ್ಞರ ಕಳವಳ
ಅತಿ ಕಡಿಮೆ ಅವಧಿಯಲ್ಲಿ ಈ ವಿಮಾನವನ್ನು ಸಿದ್ಧಪಡಿಸಬೇಕಾಗಿದ್ದರಿಂದ, ಇದರಲ್ಲಿ ಕೆಲವು ಪ್ರಮುಖ ತಾಂತ್ರಿಕ ಬದಲಾವಣೆಗಳನ್ನು ಮಾಡಲು ಸಾಧ್ಯವಾಗಿಲ್ಲ. ಈ ವಿಮಾನದ ಚಿತ್ರಗಳನ್ನು ಪರಿಶೀಲಿಸಿರುವ ರಕ್ಷಣಾ ಮತ್ತು ವಿಮಾನಯಾನ ತಜ್ಞರು, ಹಳೆಯ ಏರ್ ಫೋರ್ಸ್ ಒನ್ ವಿಮಾನಗಳಲ್ಲಿದ್ದ ಕ್ಷಿಪಣಿ ಪತ್ತೆ ಹಚ್ಚುವ ವ್ಯವಸ್ಥೆ ಮತ್ತು ಕ್ಷಿಪಣಿ ನಿರೋಧಕ ರಕ್ಷಣಾ ತಂತ್ರಜ್ಞಾನಗಳು ಇದರಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ರಕ್ಷಣಾತ್ಮಕ ಸಂಪರ್ಕ ಸಾಧನಗಳ ಆಂಟೆನಾಗಳ ಸಂಖ್ಯೆಯೂ ಕಡಿಮೆ ಇದೆ.
ಈ ಬಗ್ಗೆ ವಿಮಾನಯಾನ ಸಲಹಾ ಸಂಸ್ಥೆಯ ಹಿರಿಯ ವಿಶ್ಲೇಷಕರಾದ ಜೆರೆಮಿಯಾ ಗರ್ಟ್ಲರ್ ಮಾತನಾಡಿ, "ನಾವು ದೂರದ ಪ್ರಯಾಣ ಬೆಳೆಸುವಾಗ ದೊಡ್ಡ ಐಷಾರಾಮಿ ಕಾರನ್ನು ಆರಿಸಿಕೊಳ್ಳುತ್ತೇವೆ. ಆದರೆ ಕೇವಲ ನಗರದ ಒಳಗೆ ತಿರುಗಾಡಲು ಸಣ್ಣ ಕಾರು ಸಾಕು. ಈ ವಿಮಾನವನ್ನು ನೋಡಿದರೆ ಇದು ಕೇವಲ ಅಮೆರಿಕದ ಒಳಗಿನ ದೇಶೀಯ ಪ್ರಯಾಣಕ್ಕೆ ಮಾತ್ರ ಸೂಕ್ತವಾಗಿರುವಂತೆ ಕಾಣುತ್ತಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ. ಕಡಿಮೆ ವೆಚ್ಚದಲ್ಲಿ ಮತ್ತು ವೇಗವಾಗಿ ವಿಮಾನವನ್ನು ಸಿದ್ಧಪಡಿಸಿರುವುದರಿಂದ ಕೆಲವು ಪ್ರಮುಖ ಭದ್ರತಾ ವ್ಯವಸ್ಥೆಗಳು ಇದರಲ್ಲಿ ಕಡಿತವಾಗಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಆದರೆ, ಮುಂದಿನ ವಾರ ಟರ್ಕಿಯಲ್ಲಿ ನಡೆಯಲಿರುವ ನಾಟೋ (NATO) ಶೃಂಗಸಭೆಗೆ ಇದೇ ವಿಮಾನದಲ್ಲಿ ಪ್ರಯಾಣಿಸುವುದಾಗಿ ಟ್ರಂಪ್ ಈಗಾಗಲೇ ಪ್ರಕಟಿಸಿದ್ದಾರೆ.
ಈ ಭದ್ರತಾ ಕಳವಳಗಳ ನಡುವೆ ಅಮೆರಿಕ ವಾಯುಪಡೆಯು ಸ್ಪಷ್ಟನೆ ನೀಡಿದ್ದು, ಭದ್ರತೆ, ಸುರಕ್ಷತೆ ಅಥವಾ ರಹಸ್ಯ ಸಂಪರ್ಕ ವ್ಯವಸ್ಥೆಗಳ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ಸಮರ್ಥಿಸಿಕೊಂಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್:
ಸಾಮಾನ್ಯವಾಗಿ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಮಾಧ್ಯಮದವರಿಗೆ ವಿಮಾನದ ಒಳಭಾಗದ ಚಿತ್ರಗಳನ್ನು ತೆಗೆಯಲು ಅನುಮತಿ ಇರುವುದಿಲ್ಲ. ಆದರೆ, ಬುಧವಾರದ ಚೊಚ್ಚಲ ಪ್ರಯಾಣದ ಸಂದರ್ಭದಲ್ಲಿ ಶ್ವೇತಭವನದ ಉನ್ನತ ಅಧಿಕಾರಿಗಳು ವಿಮಾನದ ಒಳಗಿನ ವೈಭವದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಶ್ವೇತಭವನದ ಸಂವಹನ ನಿರ್ದೇಶಕ ಸ್ಟೀವನ್ ಚೆಯುಂಗ್ ಅವರು ಅಧಿಕಾರಿಗಳು ವೃತ್ತಾಕಾರದ ಮೇಜಿನ ಸುತ್ತ ಚರ್ಮದ ಆಸನಗಳಲ್ಲಿ ಕುಳಿತು ಚರ್ಚಿಸುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಯು.ಎಸ್ ಪ್ರೋಟೋಕಾಲ್ ಮುಖ್ಯಸ್ಥೆ ಮೋನಿಕಾ ಕ್ರೌಲಿ ಅವರು ಏರ್ ಫೋರ್ಸ್ ಒನ್ ಲೋಗೋ ಇರುವ ದಿಂಬುಗಳ ಮಧ್ಯೆ ಕುಳಿತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಈ ವಿಮಾನದ ಮೊದಲ ಅಧಿಕೃತ ಪ್ರಯಾಣವು ಉತ್ತರ ಡಕೋಟಾಕ್ಕೆ ಆಗಿದ್ದು, ಅಲ್ಲಿ ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವದ ನೆನಪಿಗಾಗಿ ನಿರ್ಮಿಸಲಾಗುತ್ತಿರುವ 'ಥಿಯೋಡರ್ ರೂಸ್ವೆಲ್ಟ್ ಅಧ್ಯಕ್ಷೀಯ ಗ್ರಂಥಾಲಯ'ಕ್ಕೆ ಟ್ರಂಪ್ ಭೇಟಿ ನೀಡಿದ್ದಾರೆ.
ಮಧ್ಯಪ್ರಾಚ್ಯದ ಪ್ರಭಾವಿ ದೇಶವಾದ ಕತಾರ್ನಿಂದ ಇಷ್ಟು ದೊಡ್ಡ ಮೊತ್ತದ ಐಷಾರಾಮಿ ವಿಮಾನವನ್ನು ಉಡುಗೊರೆಯಾಗಿ ಪಡೆದಿರುವುದು ಅಮೆರಿಕದಲ್ಲಿ ಕೆಲವು ರಾಜತಾಂತ್ರಿಕ ಮತ್ತು ನೈತಿಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದರೆ, ಹಳೆಯದಾಗುತ್ತಿರುವ ಹಿಂದಿನ ವಿಮಾನಗಳನ್ನು ಬದಲಾಯಿಸಲು ಇದು ಅತ್ಯಗತ್ಯವಾಗಿತ್ತು ಎಂಬುದು ಟ್ರಂಪ್ ಅವರ ವಾದವಾಗಿದೆ. ನಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ದೇಶ ನೀಡಿದ ಉಡುಗೊರೆ ಇದಾಗಿದೆ. ಇದರಿಂದ ಅಮೆರಿಕದ ತೆರಿಗೆದಾರರ ಕೋಟ್ಯಂತರ ಹಣ ಉಳಿತಾಯವಾಗಿದೆ" ಎಂದು ಸಮರ್ಥಿಸಿಕೊಂಡಿದ್ದಾರೆ.

