ಬೀದರ: ಅಮೆರಿಕ ಇಸ್ರೇಲ್, ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಕತಾರ್‌ನಲ್ಲಿ ಸಿಲುಕಿ ತಾಯ್ನಾಡಿಗೆ ಮರಳಲು ಪ್ರಯತ್ನಿಸುತ್ತಿದ್ದ ಬೀದರ ದಕ್ಷಿಣ ಕ್ಷೇತ್ರದ ಬಕಚೌಡಿ ಗ್ರಾಮದ ಅಮರ ಭಾವಿಕಟ್ಟಿ ಸಮಸ್ಯೆಗೆ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಸ್ಪಂದಿಸಿದ್ದು, ಶೀಘ್ರವೇ ಅಮರ್ ಸ್ವಗ್ರಾಮಕ್ಕೆ ಬರಲಿದ್ದಾರೆ.
ಅಮರ್ ಕೆಲಸದ ನಿಮಿತ್ತ ಕತಾರ್ ದೇಶಕ್ಕೆ ತೆರಳಿದ್ದರು. ಯುದ್ಧದಿಂದ ಆತಂಕದ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಮರಳಿ ಬರಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದರು. ಹಣದ ಕೊರತೆಯೂ ಎದುರಾಗಿತ್ತು. ಗ್ರಾಮಸ್ಥರು ಹಾಗೂ ಪಾಲಕರು ವಿಷಯವನ್ನು ಗಮನಕ್ಕೆ ತಂದ ಬೆನ್ನಲ್ಲೇ ಶಾಸಕ ಡಾ. ಬೆಲ್ದಾಳೆ ಸ್ಪಂದಿಸಿ, ತಕ್ಷಣ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ತಿಳಿಸಿ ನೆರವು ಕೋರಿದ್ದರು.
ಅವರು ವಿದೇಶಾಂಗ ಸಚಿವಾಲಯದೊಂದಿಗೆ ಸಂಪರ್ಕ ಸಾಧಿಸಿ ನೆರವಾಗಿದ್ದಾರೆ. ಜತೆಗೆ ದೂರವಾಣಿಯಲ್ಲಿ ಅಮರ್ ಜತೆ ಮಾತನಾಡಿ ಧೈರ್ಯ ತುಂಬಿದ್ದಾರೆ. ಅಲ್ಲದೇ ಶಾಸಕರು ಟಿಕೆಟ್‌ಗೆ ಅಗತ್ಯವಾದ 30 ಸಾವಿರ ರೂ. ನೀಡಿದ್ದಾರೆ.

