ಕುಂದಾಪುರ: ಬೆಳ್ಳಿತೆರೆಯ ಮೇಲೆ ಅದ್ಭುತ ನಟನೆಯ ಮೂಲಕ 'ಡಿವೈನ್ ಸ್ಟಾರ್' ಆಗಿ ಮಿಂಚಿರುವ ʼಕಾಂತಾರʼ ಖ್ಯಾತಿಯ ರಿಷಬ್ ಶೆಟ್ಟಿ (Rishab Shetty) ನಿಜ ಜೀವನದಲ್ಲೂ ಹೀರೋ ಆಗಿರುವ ಕೆಲಸವನ್ನು ಮಾಡಿದ್ದಾರೆ.
ತಮ್ಮ ಸಾಮಾಜಿಕ ಕಳಕಳಿಯ ಮೂಲಕ ಕೋಟ್ಯಂತರ ಹೃದಯಗಳನ್ನು ಗೆದ್ದಿರುವ ರಿಷಬ್, ಇದೀಗ ತಮ್ಮ ಹುಟ್ಟೂರಿನ ಶಾಲೆಯ ಉದ್ಧಾರಕ್ಕೆ ನಿಲ್ಲುವ ಮೂಲಕ ಮಾದರಿಯಾಗಿದ್ದಾರೆ.
ರಿಷಬ್ ಶೆಟ್ಟಿ ಫೌಂಡೇಶನ್ ಮೂಲಕ ಕೆರಾಡಿ ಶಾಲೆಯ ಅಭಿವೃದ್ಧಿ:
ರಿಷಬ್ ಶೆಟ್ಟಿ ಅವರು ತಮ್ಮದೇ ಆದ 'ರಿಷಬ್ ಶೆಟ್ಟಿ ಫೌಂಡೇಶನ್' ಮೂಲಕ ತಮ್ಮ ಹುಟ್ಟೂರು ಕೆರಾಡಿಯ ಸರ್ಕಾರಿ ಶಾಲೆಯನ್ನು ದತ್ತು ಪಡೆದು, ಅದರ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಈ ಫೌಂಡೇಶನ್ ಮೂಲಕ ಶಾಲೆಯ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಲು ರಿಷಬ್ ಶ್ರಮಿಸುತ್ತಿದ್ದಾರೆ.

ಬಡ ವಿದ್ಯಾರ್ಥಿಗಳಿಗೆ ಎರಡು ವರ್ಷದ ಸ್ಕಾಲರ್‌ಶಿಪ್:
ಕೇವಲ ಶಾಲೆಯ ಕಟ್ಟಡ ಅಭಿವೃದ್ಧಿ ಮಾತ್ರವಲ್ಲದೆ, ಅಲ್ಲಿ ಓದುತ್ತಿರುವ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ರಿಷಬ್ ಶೆಟ್ಟಿ ಆಸರೆಯಾಗಿದ್ದಾರೆ. ಫೌಂಡೇಶನ್ ವತಿಯಿಂದ ಶಾಲೆಯ ಅರ್ಹ ವಿದ್ಯಾರ್ಥಿಗಳಿಗೆ ಸತತ ಎರಡು ವರ್ಷಗಳ ಕಾಲ ಉಚಿತ ಸ್ಕಾಲರ್‌ಶಿಪ್ (ವಿದ್ಯಾರ್ಥಿವೇತನ) ಘೋಷಿಸಿ, ವಿತರಿಸಲಾಗಿದೆ. ರಿಷಬ್ ಶೆಟ್ಟರ ಈ ಉದಾತ್ತ ಕಾರ್ಯದಿಂದಾಗಿ ಆರ್ಥಿಕವಾಗಿ ಹಿಂದುಳಿದ ಹಲವು ಕುಟುಂಬಗಳ ಮಕ್ಕಳ ಶಿಕ್ಷಣದ ಕನಸು ನನಸಾಗುತ್ತಿದೆ.
ರಿಷಬ್ ಶೆಟ್ಟಿ ಅವರ ಈ ಮಹತ್ಕಾರ್ಯದ ಕುರಿತಾದ ವಿಶೇಷ ವಿಡಿಯೋವೊಂದನ್ನು ಅವರ ಹುಟ್ಟುಹಬ್ಬದ (ಜು.7) ಸಂದರ್ಭದಲ್ಲಿ 'ರಿಷಬ್ ಶೆಟ್ಟಿ ಫೌಂಡೇಶನ್'ನ ಅಧಿಕೃತ ಸಾಮಾಜಿಕ ಜಾಲತಾಣದ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಈ ವಿಡಿಯೋದಲ್ಲಿ ರಿಷಬ್ ಶೆಟ್ಟರ ಸಹಾಯವನ್ನು ನೆನೆದು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕಣ್ಣೀರು ಹಾಕುತ್ತಾ, ಭಾವುಕರಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಶೆಟ್ರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
'ಕಾಸರಗೋಡು' ಚಿತ್ರದ ಹಿನ್ನೆಲೆ ಧ್ವನಿಯ ಸ್ಪರ್ಶ:
ವಿಶೇಷವೆಂದರೆ, ರಿಷಬ್ ಶೆಟ್ಟಿ ನಿರ್ದೇಶಿಸಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ "ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು" ಸಿನಿಮಾದಲ್ಲಿನ ಹಿರಿಯ ನಟ ಅನಂತ್ ನಾಗ್ ಅವರ ಹಿನ್ನೆಲೆ ಧ್ವನಿಯನ್ನು ಬಳಸಿ ಈ ಸ್ಕಾಲರ್‌ಶಿಪ್ ವಿಡಿಯೋವನ್ನು ಎಮೋಷನಲ್ ಆಗಿ ಮೂಡಿ ಬರುವಂತೆ ಮಾಡಲಾಗಿದೆ.
"ಶಿಕ್ಷಣವು ಕೇವಲ ಜೀವನವನ್ನು ಬದಲಾಯಿಸುವುದಿಲ್ಲ, ಅದು ಜೀವನವನ್ನೇ ರೂಪಿಸುತ್ತದೆ"ಎಂಬ ಅರ್ಥಪೂರ್ಣ ಸಾಲುಗಳನ್ನು ಈ ವಿಡಿಯೋದ ಅಡಿಯಲ್ಲಿ ಬರೆಯಲಾಗಿದ್ದು, ರಿಷಬ್ ಶೆಟ್ಟಿ ಅವರ ಈ ಕಾರ್ಯ ಇಡೀ ಸಮಾಜಕ್ಕೆ ಪ್ರೇರಣೆಯಾಗಿದೆ. ಒಟ್ಟಿನಲ್ಲಿ ಸಿನಿಮಾದಲ್ಲಿ ಮಾತ್ರವಲ್ಲದೆ, ಸಮಾಜಮುಖಿ ಕೆಲಸಗಳಲ್ಲೂ ರಿಷಬ್ ಶೆಟ್ಟಿ ಅವರು ನಿಜವಾದ 'ಡಿವೈನ್ ಸ್ಟಾರ್' ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

