ಕಾಸರಗೋಡು: ಕೇರಳದಲ್ಲಿ ಯಾರು ಆಡಳಿತ ನಡೆಸಬೇಕು ಎಂಬುದನ್ನು ತೀರ್ಮಾನಿಸಲು ಫೆ. 9ರಂದು ಮತದಾನ ನಡೆಯಲಿದ್ದು, ಕಾಸರಗೋಡು ಜಿಲ್ಲೆಯ 5 ಕ್ಷೇತ್ರಗಳಲ್ಲೂ ಸಿದ್ಧತೆಗಳು ಪೂರ್ಣಗೊಂಡಿವೆ. ಮತದಾನ ಬೆಳಗ್ಗೆ 7 ಗಂಟೆಗೆ ಆರಂಭಗೊಂಡು ಸಂಜೆ 6 ಗಂಟೆ ವರೆಗೆ ನಡೆಯಲಿದೆ.
ಮತದಾನಕ್ಕೆ ಅಗತ್ಯವಿರುವ ಸಾಮಗ್ರಿ: ಗಳನ್ನು ಬುಧವಾರ ವಿತರಿಸಲಾಯಿತು.
ಮಂಜೇಶ್ವರ, ಕಾಸರಗೋಡು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಸಾಮಗ್ರಿಗಳನ್ನು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ವಿತರಿಸಲಾಯಿತು. ಉದುಮ ಕ್ಷೇತ್ರದ ಸಾಮಗ್ರಿ
ಗಳನ್ನು ನಾಯಮ್ಮಾರಮೂಲೆ ಟಿಐಎಚ್‌ಎಸ್‌ಎಸ್‌ನಲ್ಲಿ ವಿತರಿಸಲಾಯಿತು. ಕಾಂಞಂಗಾಡ್, ತೃಕ್ಕರಿಪುರ ಕ್ಷೇತ್ರದ ಮತದಾನ ಸಾಮಗ್ರಿಗಳನ್ನು ಹೊಸದುರ್ಗ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿತರಿಸಲಾಯಿತು, ಕಾಸರಗೋಡು ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಒಟ್ಟು 11,03,618 ಮಂದಿ ಮತದಾರರಿದ್ದು, ಈ ಪೈಕಿ 5,44,543 ಪುರುಷರು, 5,59,063 ಮಹಿಳೆಯರು ಮತ್ತು 12 ಮಂಗಳಮುಖೀಯರಿದ್ದಾರೆ. ಒಟ್ಟು 269 ಮತಗಟ್ಟೆಗಳಿವೆ.
ಮನೆಗಳಲ್ಲಿ ಮತ ಚಲಾವಣೆ: ಕಾಸರಗೋಡು ಜಿಲ್ಲೆಯಲ್ಲಿ 6,670 ಮಂದಿ ಈಗಾಗಲೇ ಮನೆಗಳಲ್ಲಿಯೇ ಮತ ಚಲಾಯಿಸಿದ್ದಾರೆ. ಹೀಗೆ ಮತ ಚಲಾಯಿಸಿದವರಲ್ಲಿ 85ಕ್ಕಿಂತ ಮೇಲ್ಪಟ್ಟ ಪ್ರಾಯದ 3,189 ಮಂದಿ ಮತ್ತು 3,490 ಅಂಗವಿಕಲರು ಒಳಗೊಂಡಿದ್ದಾರೆ.

