ಪುಣೆ: ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್‌ಗೆ ಸುಳ್ಳು ಪತ್ತೆ ಪರೀಕ್ಷೆ (ಪಾಲಿಗ್ರಾಫ್ ಟೆಸ್ಟ್) ನಡೆಸಲು ಅನುಮತಿ ನೀಡುವಂತೆ ಪುಣೆ ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಪ್ರಕರಣದ ತನಿಖೆ ವೇಳೆ, ಕೇತನ್ ಅಗರ್ವಾಲ್ ಅವರನ್ನು ಕಂದಕಕ್ಕೆ ತಳ್ಳಿದ್ದು ಯಾರು ಎಂಬುದನ್ನು ದೃಢಪಡಿಸುವ ಯಾವುದೇ ನೇರ ಸಾಕ್ಷಿದಾರರು ಅಥವಾ ನಿರ್ಣಾಯಕ ಪುರಾವೆಗಳು ಲಭ್ಯವಾಗಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಆರೋಪಿ ಸಿಯಾ ಗೋಯಲ್ ಮತ್ತು ಸಹ ಆರೋಪಿ ಚೇತನ್ ಚೌಧರಿ ಅವರ ಹೇಳಿಕೆಗಳನ್ನು ಈಗಾಗಲೇ ದಾಖಲಿಸಿಕೊಳ್ಳಲಾಗಿದೆ. ಆದರೆ ತನಿಖೆಯನ್ನು ಮತ್ತಷ್ಟು ಮುಂದುವರಿಸಲು ಹಾಗೂ ಹೊಸ ಸುಳಿವುಗಳನ್ನು ಪತ್ತೆಹಚ್ಚಲು ಪಾಲಿಗ್ರಾಫ್ ಪರೀಕ್ಷೆ ಅಗತ್ಯವಾಗಿದೆ ಎಂದು ಪೊಲೀಸರು ವಾದಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಯಾ ಗೋಯಲ್ ಪರ ವಕೀಲ ವಿಪುಲ್ ದುಶಿಂಗ್, ತನಿಖಾ ಸಂಸ್ಥೆ ನ್ಯಾಯಾಲಯದ ಅನುಮತಿಗಾಗಿ ಅರ್ಜಿ ಸಲ್ಲಿಸಿರುವುದನ್ನು ದೃಢಪಡಿಸಿದ್ದು, "ಇಂತಹ ಪರೀಕ್ಷೆ ನಡೆಸುವ ಮೊದಲು ಹಲವು ಕಾನೂನು ಹಾಗೂ ತಾಂತ್ರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಸುಳ್ಳು ಪತ್ತೆ ಪರೀಕ್ಷೆ ನಡೆಸಲು ಆರೋಪಿಯ ಒಪ್ಪಿಗೆ ಕಡ್ಡಾಯವಾಗಿದ್ದು, ಆಕೆಯ ಅನುಮತಿಯಿಲ್ಲದೆ ಪರೀಕ್ಷೆ ನಡೆಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ತನಿಖೆಗೆ ನೆರವಾಗುವುದು ಯಾವುದು?
ಪ್ರಾಥಮಿಕ ಅಥವಾ ಪೂರಕ ಸಾಕ್ಷ್ಯಗಳು ಸೀಮಿತವಾಗಿರುವ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಪಾಲಿಗ್ರಾಫ್ ಪರೀಕ್ಷೆಗೆ ಮೊರೆ ಹೋಗಲಾಗುತ್ತದೆ. ಆದರೆ ಈ ಪರೀಕ್ಷೆಯ ಫಲಿತಾಂಶಗಳನ್ನು ನ್ಯಾಯಾಲಯದಲ್ಲಿ ನೇರ ಸಾಕ್ಷ್ಯವಾಗಿ ಪರಿಗಣಿಸಲಾಗುವುದಿಲ್ಲ.ಬದಲಾಗಿ, ತನಿಖಾಧಿಕಾರಿಗಳಿಗೆ ಹೊಸ ಸುಳಿವುಗಳನ್ನು ಒದಗಿಸಲು ಹಾಗೂ ತನಿಖೆಯ ದಿಕ್ಕನ್ನು ನಿರ್ಧರಿಸಲು ಮಾತ್ರ ಇಂತಹ ಪರೀಕ್ಷೆಗಳನ್ನು ಮಾಡಲಾಗುತ್ತದೆ.
ದೇಶದ ಗಮನ ಸೆಳೆದ ಪ್ರಕರಣ
ಪುಣೆ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಜೂನ್ 18ರಂದು ಲೋಹಗಡ್ ಕೋಟೆಯ ಬಂಡೆಯ ಮೇಲಿಂದ ತಳ್ಳಿಕಿ ಹತ್ಯೆ ಮಾಡಲಾಗಿತ್ತು. ಪ್ರಕರಣ ರಾಷ್ಟ್ರದ ಗಮನ ಸೆಳೆದಿದೆ. ಕೇತನ್ ಮತ್ತು ಸಿಯಾ ಗೋಯಲ್ ಅವರ ನಿಶ್ಚಿತಾರ್ಥವಾಗಿದ್ದು, ಇಬ್ಬರ ವಿವಾಹ ಇದೇ ವರ್ಷದ ನವೆಂಬರ್‌ನಲ್ಲಿ ನಡೆಯಬೇಕಾಗಿತ್ತು.ಆದರೆ ಸಿಯಾ ಗೋಯಲ್ ಹಾಗೂ ಆಕೆಯ ಆಪ್ತ ಸ್ನೇಹಿತ ಎನ್ನಲಾದ ಚೇತನ್ ಚೌಧರಿ ಸೇರಿ ಕೇತನ್ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಪೊಲೀಸರು ಆರೋಪಿಸಿ ಇಬ್ಬರನ್ನೂ ಬಂಧಿಸಿದ್ದಾರೆ. ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಜುಲೈ 3ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಮೊಬೈಲ್‌ನಲ್ಲಿನ ಸಾಕ್ಷ್ಯ?
ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಪುಣೆ ಗ್ರಾಮೀಣ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದು, ಕೇತನ್ ಅವರ ಮೊಬೈಲ್ ಫೋನ್‌ನಲ್ಲಿದ್ದ ಯಾವುದೇ ಮಾಹಿತಿ ಅಳಿಸಲಾಗಿದೆ ಅಥವಾ ತಿದ್ದುಪಡಿ ಮಾಡಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದರು.
ಘಟನೆಯ ಬಳಿಕ ಕೆಲಕಾಲ ಕೇತನ್ ಅವರ ಮೊಬೈಲ್ ಸಿಯಾ ಗೋಯಲ್ ಅವರ ವಶದಲ್ಲಿದ್ದು, ನಂತರ ಅದನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿತ್ತು ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ಮೊಬೈಲ್‌ನಲ್ಲಿದ್ದ ಮಹತ್ವದ ಮಾಹಿತಿಯನ್ನು ಅಳಿಸಲಾಗಿದೆಯೇ ಎಂಬುದನ್ನು ವಿಧಿವಿಜ್ಞಾನ ತಜ್ಞರು ಪರಿಶೀಲಿಸುತ್ತಿದ್ದಾರೆ.
ಘಟನೆ ಮರುಸೃಷ್ಟಿ
ತನಿಖೆಯ ಭಾಗವಾಗಿ ಜುಲೈ 1ರಂದು ಪೊಲೀಸರು ಚೇತನ್ ಚೌಧರಿ ಅವರನ್ನು ಲೋಹಗಡ್ ಕೋಟೆಗೆ ಕರೆದೊಯ್ದು ಘಟನೆಯ ಮರುಸೃಷ್ಟಿ ನಡೆಸಿದ್ದರು.ಇದಕ್ಕೂ ಮುನ್ನ ರವಿವಾರ ಸಿಯಾ ಗೋಯಲ್ ಅವರೊಂದಿಗೆ ಇದೇ ರೀತಿಯ ಪ್ರಕ್ರಿಯೆ ನಡೆಸಲಾಗಿದ್ದು, ಈ ವೇಳೆ ಕಂದಕಕ್ಕೆ ಬೀಳುವ ಘಟನೆಯನ್ನು ಮರುಸೃಷ್ಟಿಸಲು ಡಮ್ಮಿಯನ್ನು ಬಳಸಲಾಗಿತ್ತು.ಪ್ರಕರಣದ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

