ನರ್ಮದಾ (ಗುಜರಾತ್): ಕ್ಷುಲ್ಲಕ ಕಾರಣಕ್ಕೆ ಮನುಷ್ಯ ಪ್ರಾಣ ತೆಗೆಯಲು ಹಿಂಜರಿಯುವುದಿಲ್ಲ ಎಂಬುದಕ್ಕೆ ಗುಜರಾತ್‌ನ ನರ್ಮದಾ ಜಿಲ್ಲೆಯ ಭದರ್ವಾ ಗ್ರಾಮದಲ್ಲಿ ನಡೆದ ಈ ಕೃತ್ಯವೇ ಸಾಕ್ಷಿ. ಕೇವಲ 10 ರೂಪಾಯಿ ಹಣ ನೀಡಲು ನಿರಾಕರಿಸಿದ ಕಾರಣಕ್ಕೆ 41 ವರ್ಷದ ಅಂಗವಿಕಲ ವ್ಯಕ್ತಿಯೊಬ್ಬನನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಗಿದೆ.
ರಾಜೇಶ್ ಭಾಯ್ ಧಂಜಿಭಾಯಿ ತದ್ವಿ ಕೊಲೆಯಾದ ದುರ್ದೈವಿ. ಇವರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ದೈಹಿಕವಾಗಿ ಅಶಕ್ತರಾಗಿದ್ದರು. ಶುಕ್ರವಾರ ಬೆಳಿಗ್ಗೆ ಗ್ರಾಮದ ಬಸ್ ನಿಲ್ದಾಣದಿಂದ ದಿನಸಿ ಪದಾರ್ಥಗಳನ್ನು ಖರೀದಿಸಿ ಮನೆಗೆ ಮರಳುತ್ತಿದ್ದಾಗ, ಅದೇ ಗ್ರಾಮದ ಧರ್ಮೇಂದ್ರಭಾಯಿ ಎಂಬಾತ ಇವರನ್ನು ಅಡ್ಡಗಟ್ಟಿದ್ದಾನೆ. ತನ್ನ ವೈಯಕ್ತಿಕ ಖರ್ಚಿಗಾಗಿ 10 ರೂಪಾಯಿ ಹಣ ನೀಡುವಂತೆ ಧರ್ಮೇಂದ್ರ ಪಟ್ಟು ಹಿಡಿದಿದ್ದಾನೆ. ಆದರೆ ರಾಜೇಶ್ ಭಾಯ್ ಹಣ ನೀಡಲು ನಿರಾಕರಿಸಿದಾಗ, ಕ್ಷಣಾರ್ಧದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿಯ ಪ್ರಕಾರ, ಆರೋಪಿ ಧರ್ಮೇಂದ್ರ ಅಸಹಾಯಕ ರಾಜೇಶ್ ಭಾಯ್ ಅವರನ್ನು ರಸ್ತೆಯ ಮೇಲೆ ತಳ್ಳಿ ಅವರ ಎದೆಯ ಮೇಲೆ ಬಲವಾಗಿ ಒದ್ದಿದ್ದಾನೆ. ಅಷ್ಟಕ್ಕೇ ನಿಲ್ಲದ ಈತ, ಕೆಳಗೆ ಬಿದ್ದಿದ್ದ ರಾಜೇಶ್ ಅವರ ಕುತ್ತಿಗೆಯ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಸಾಯಿಸಿದ್ದಾನೆ. ದೈಹಿಕವಾಗಿ ಅಶಕ್ತರಾಗಿದ್ದ ರಾಜೇಶ್ ಭಾಯ್ ಅವರಿಗೆ ಪ್ರತಿಕ್ರಿಯಿಸಲು ಸಾಧ್ಯವಾಗದೆ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಅವರ ದೇಹದ ಮೇಲೆ ಮತ್ತು ಕುತ್ತಿಗೆಯ ಭಾಗದಲ್ಲಿ ತೀವ್ರವಾದ ಗಾಯದ ಗುರುತುಗಳು ಕಂಡುಬಂದಿವೆ.
ಘಟನೆ ನಡೆದ ತಕ್ಷಣ ಗ್ರಾಮದ ಸರಪಂಚರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ಸ್‌ಪೆಕ್ಟರ್ ಎಪಿ ಸೋಲಂಕಿ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಶವವನ್ನು ವಶಕ್ಕೆ ಪಡೆದಿದೆ. ಆರೋಪಿ ಧರ್ಮೇಂದ್ರ ತದ್ವಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

