Dailyhunt Logo
  • Light mode
    Follow system
    Dark mode
    • Play Story
    • App Story
ಕಿಚ್ಚ ಸುದೀಪ್‌ ಬರ್ತ್‌ಡೇ ಸ್ಪೆಷಲ್‌: 'ದೇವರಾಯ' ಟೀಸರ್‌ ಬಿಡುಗಡೆ

ಕಿಚ್ಚ ಸುದೀಪ್‌ ಬರ್ತ್‌ಡೇ ಸ್ಪೆಷಲ್‌: 'ದೇವರಾಯ' ಟೀಸರ್‌ ಬಿಡುಗಡೆ

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರ ಜನ್ಮದಿನದ ಸಂಭ್ರಮದ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ ಐತಿಹಾಸಿಕ ಚಿತ್ರ 'ದೇವರಾಯ' ಚಿತ್ರದ ಟೀಸರ್‌ ಬುಧವಾರ(ಸೆ.2) ಬಿಡುಗಡೆಯಾಗಿದೆ. ವಿಜಯನಗರ ಸಾಮ್ರಾಜ್ಯದ ಖ್ಯಾತ ಅರಸ ಶ್ರೀಕೃಷ್ಣದೇವರಾಯ ಅವರ ಜೀವನ ಹಾಗೂ ಪರಂಪರೆಯನ್ನು ಆಧರಿಸಿರುವ ಈ ಚಿತ್ರ ಇದೀಗ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಟೀಸರ್‌ ಜತೆಗೆ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಕೂಡ ಬಿಡುಗಡೆಯಾಗಿದೆ. ಪೋಸ್ಟರ್‌ನಲ್ಲಿ ಕಿಚ್ಚ ಸುದೀಪ್‌ ರಾಜನ ಭವ್ಯ ಉಡುಪು, ಆಭರಣಗಳು ಹಾಗೂ ರಾಜಮುದ್ರೆಯೊಂದಿಗೆ ಶಕ್ತಿಶಾಲಿ ಲುಕ್‌ನಲ್ಲಿ ಮಿಂಚಿದ್ದಾರೆ. ಐತಿಹಾಸಿಕ ಹಿನ್ನೆಲೆಯಲ್ಲಿನ ಸುದೀಪ್‌ ಅವರ ಪಾತ್ರದ ಝಲಕ್‌ ಅಭಿಮಾನಿಗಳ ಗಮನ ಸೆಳೆದಿದೆ.

ಚಿತ್ರತಂಡದ ಮಾಹಿತಿ ಪ್ರಕಾರ, 'ದೇವರಾಯ' ಚಿತ್ರವನ್ನು 2027ರಲ್ಲಿ ತೆರೆಗೆ ತರಲು ಸಿದ್ಧತೆ ನಡೆಸಲಾಗುತ್ತಿದೆ. ಚಿತ್ರವು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದ್ದು, ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲೂ ತೆರೆಕಾಣಲಿದೆ.

'ಇತಿಹಾಸದಲ್ಲಿ ಬೇರೂರಿರುವ ಪಾತ್ರ'
ಟೀಸರ್‌ ಬಿಡುಗಡೆ ಕುರಿತು ಸುದೀಪ್‌ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ."ಪ್ರೀತಿಯಿಂದ ತುಂಬಿದ ಈ ದಿನದಂದು ಬಹಳ ವಿಶೇಷವಾದ ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇತಿಹಾಸದಲ್ಲಿ ಬೇರೂರಿರುವ ಪಾತ್ರ. ಕಾಲವನ್ನು ದಾಟಿಯೂ ತನ್ನ ಪರಂಪರೆಯ ಪ್ರತಿಧ್ವನಿಯನ್ನು ಉಳಿಸಿಕೊಂಡಿರುವ ಒಬ್ಬ ರಾಜ. ಇಂತಹ ಪಾತ್ರದ ಭಾಗವಾಗಿರುವುದು ನನಗೆ ನಿಜಕ್ಕೂ ಗೌರವದ ಸಂಗತಿ" ಎಂದು ಸುದೀಪ್‌ ಹೇಳಿದ್ದಾರೆ.

'ಶ್ರೀಕೃಷ್ಣದೇವರಾಯ'ಎಂಬ ಪಾತ್ರದ ಪಯಣವೇ 'ದೇವರಾಯ' ಚಿತ್ರದ ಮೂಲಕ ಆರಂಭವಾಗಲಿದೆ ಎಂಬ ಸುಳಿವನ್ನು ಅವರು ನೀಡಿದ್ದಾರೆ.

ನಿರ್ಮಾಣ, ಸಂಗೀತ

ಚಿತ್ರವನ್ನು ವಿಶ್ವ ಪ್ರಸಾದ್‌ ಮತ್ತು ಕೃತಿ ಪ್ರಸಾದ್‌ ನಿರ್ಮಿಸುತ್ತಿದ್ದು, ಗೌರಹರಿ ಸಂಗೀತ ಸಂಯೋಜಿಸುತ್ತಿದ್ದಾರೆ. ಐತಿಹಾಸಿಕ ಕಥಾಹಂದರ, ಭವ್ಯ ಮೇಕಿಂಗ್‌ ಹಾಗೂ ಸುದೀಪ್‌ ಅವರ ವಿಭಿನ್ನ ಪಾತ್ರದ ಹಿನ್ನೆಲೆಯಲ್ಲಿ 'ದೇವರಾಯ' ಚಿತ್ರವು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

2027ರಲ್ಲಿ ಚಿತ್ರ ತೆರೆಗೆ ಬರಲಿರುವುದರಿಂದ, ಚಿತ್ರದ ಸಂಪೂರ್ಣ ಕಥಾಹಂದರ, ನಿರ್ದೇಶನ ಹಾಗೂ ಇತರ ತಾರಾಗಣದ ಕುರಿತು ಚಿತ್ರತಂಡ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಹಂಚಿಕೊಳ್ಳುವ ನಿರೀಕ್ಷೆಯಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani