Dailyhunt
Kids Story: ಸೋಲಿನ ಸೇಡು

Kids Story: ಸೋಲಿನ ಸೇಡು

ಹೀಗೊಂದು ನೀತಿ ಕಥೆ ಇದೆ ಎಂದು ನಮ್ಮ ಗುರುಗಳು ಹೇಳಿದಾಗ ಕಥೆ ಕೇಳುವ ಆಸೆ ಹುಡುಗರಾದ ನಮಗೆ ಹೆಚ್ಚಾಯಿತು. ಗುರುಗಳ ಬಾಯಿಯಿಂದ ಕಥೆ ಯಾವಾಗ ಹೊರಡುತ್ತದೋ, ಕಥೆ ಹೇಗಿರುತ್ತದೋ ಎಂಬ ಕುತೂಹಲ ನಮ್ಮನ್ನು ಕಾಡುತ್ತಿತ್ತು. ಸಾಮಾನ್ಯವಾಗಿ ನಮಗೆಲ್ಲ ಪ್ರಾಣಿ ಪಕ್ಷಿಗಳ ಮೋಸ, ವಂಚನೆ, ಕ್ರೂರತನದ ಕಥೆಗಳನ್ನು ಕೇಳುವುದೆಂದರೆ ತುಂಬಾ ಇಷ್ಟ.

ಯಾಕೆಂದರೆ, ಮನುಷ್ಯರಂತೆ ಅವುಗಳು ಮಾತನಾಡದಿದ್ದರೂ ಕಥೆಗಳಲ್ಲಿ ಮಾತನಾಡುವ ರೀತಿ ನಮಗೆಲ್ಲ ತುಂಬಾ ಖುಷಿ ಕೊಡುತ್ತಿತ್ತು.

"ಹೇಳಿ ಸಾರ್ ಕಥೆ'' ಹುಡುಗರು ಒಕ್ಕೊರಲಿನಿಂದ ಕೇಳಿದಾಗ ಮಾಸ್ಟರು ಅಯ್ಯಯ್ಯೋ ಎಂದು ಕಿವಿ ಮುಚ್ಚಿಕೊಂಡರು.

"ಏನು ಗಲಾಟೆ. ಇದು ಶಾಲೆಯೋ ದನದ ದೊಡ್ಡಿಯೋ' ಎಂದು ತಮ್ಮ ಕೈಯಲ್ಲಿದ್ದ ಬೆತ್ತದಿಂದ ಟೇಬಲ್ ಮೇಲೆ ಬಲವಾಗಿ ಎರಡು ಏಟು ಹಾಕಿದರು. ಭಯದಿಂದ ನಾವೆಲ್ಲರೂ ಗಪ್ ಚಿಪ್ ಎಂದು ಕುಳಿತುಬಿಟ್ಟೆವು. ಗುರುಗಳ ಮುಖದಲ್ಲಿ ನಗು ಕಾಣಿಸಿತು. ಈಗ ಕಥೆ ಹೇಳುತ್ತಾರೆಂದು ನಮಗೆ ಖಚಿತವಾಯಿತು. ''ನೋಡಿ ಇದು ಕಥೆ ಆದುದರಿಂದ ಯಾರೂ ಪ್ರಶ್ನೆ ಕೇಳಬಾರದು. ನಾನು ಹೇಳುವುದನ್ನು ಕೇಳಿ ಅದರಲ್ಲಿನ ನೀತಿ ಏನೆಂದು ತಿಳಿದುಕೊಂಡರೆ ಸಾಕು. ಗೊತ್ತಾಯಿತೆ ?" ಗುರುಗಳು ಕಥೆ ಆರಂಭಿಸಲು ಪೀಠಿಕೆ ಹಾಕಿದರು.

"ಹೇಳಿ ಸಾರ್'' ಹುಡುಗರ ಉತ್ಸಾಹ ಹೆಚ್ಚಾಯಿತು.

ಬಹಳ ಹಿಂದೆ ಕೊಕ್ಕರೆಯೊಂದು ಕಪ್ಪೆಯೊಂದಿಗೆ ಗೆಳೆತನ ಬೆಳೆಸಿತ್ತು. ಸಾಮಾನ್ಯವಾಗಿ ಆ ಕಾಲದಲ್ಲಿ ಕೊಕ್ಕರೆಗಳಿಗೆ ಕಪ್ಪೆ ಎಂದರೆ ತಾವು ತಿನ್ನುವ ಆಹಾರವಾಗಿರಲಿಲ್ಲ. ಸುಂದರವಾದ ಕೊಕ್ಕರೆ ಮತ್ತು ಹೆಣ್ಣು ಕಪ್ಪೆ ದಿನವೂ ಕೆರೆಯ ಬಳಿ ಒಟ್ಟಿಗೆ ಸೇರಿ ಹರಟೆ ಹೊಡೆಯುವುದು, ತಮ್ಮ ತಮ್ಮ ಸುಖ ದುಃಖಗಳನ್ನು ಹೇಳಿಕೊಳ್ಳುವುದು ವಾಡಿಕೆ. ಹೀಗೆ ಒಂದು ದಿನ ಮಾತಿನ ಮಧ್ಯೆ ಕೊಕ್ಕರೆಗೆ ಒಂದು ಅನುಮಾನ.

"ನೋಡು ಕಪ್ಪೆ ಹುಡುಗಿ... ನಾವಿಬ್ಬರೂ ಗೆಳೆಯರು ತಾನೆ ? ಆದರೆ ನಮ್ಮಲ್ಲಿ ಹೆಚ್ಚು ರೂಪವಂತೆ ಯಾರು ನೀನು ಹೇಳುತ್ತೀಯಾ ?'' ಎಂದು ಕೇಳಿತು.

"ನನಗೆ ಗೊತ್ತಿಲ್ಲಪ್ಪ" - ಕಪ್ಪೆ ಹುಡುಗಿ ಕೈ ಚೆಲ್ಲಿತು. ಆಮೇಲೆ ಒಂದು ಕ್ಷಣ ಸುಂದರಿ ಕೊಕ್ಕರೆಯನ್ನು ಸೂಕ್ಷ್ಮವಾಗಿ ನೋಡಿದ ಬಳಿಕ ಹೇಳಿತು, "ನಿನ್ನ ಕಣ್ಣುಗಳಿಗೆ ಸೌಂದರ್ಯವೇ ಇಲ್ಲ. ತುಂಬಾ ಚಿಕ್ಕ ಕಣ್ಣುಗಳು. ನನ್ನ ಕಣ್ಣುಗಳನ್ನು ನೋಡು ಹೇಗಿವೆ ? ದೊಡ್ಡದಾಗಿವೆ. ಇದೇ ಅಲ್ವೆ ಸೌಂದರ್ಯ'' ಎಂದಾಗ ಕೊಕ್ಕರೆ ಮುಗುಳು ನಕ್ಕು, "ಅದು ಸರಿ. ಆದರೆ ನಿನ್ನ ಕಣ್ಣುಗಳಿಗೆ ಸೌಂದರ್ಯ ಇರಬಹುದು, ಆದರೆ ನನ್ನ ರೆಕ್ಕೆ ನೋಡು. ಎಷ್ಟು ಸುಂದರವಾಗಿದೆ. ಇದರಿಂದ ಹಾರಬಲ್ಲೆ. ಗಾಳಿಯಲ್ಲಿ ತೇಲಾಡಬಲ್ಲೆ. ನಿನ್ನಿಂದ ಅದು ಸಾಧ್ಯವೇ ?" ಎಂದು ಪ್ರಶ್ನೆ ಹಾಕಿತು. ಆಮೇಲೆ ಒಂದು ಕ್ಷಣ ಮೇಲಕ್ಕೆ ಹಾರಿ ಕೆರೆಯನ್ನು ಒಂದು ಸಲ ಪ್ರದಕ್ಷಿಣೆ ಹಾಕಿ ವಾಪಸು ಬಂದಿತು.

''ನನ್ನಿಂದ ಹಾರಾಡಲು ಸಾಧ್ಯವಿಲ್ಲ ಎಂಬುದು ನಿಜ. ಆದರೆ ನನ್ನ ಹಾಗೆ ನಿನ್ನಿಂದ ಕುಪ್ಪಳಿಸಲು ಸಾಧ್ಯವಿಲ್ಲವಲ್ಲ. ನೋಡು ಹೀಗೆ ಎತ್ತರಕ್ಕೆ ಜಿಗಿಯಲು ನಿನ್ನಿಂದ ಸಾಧ್ಯವೇ ?'' ಎಂದು ಕಪ್ಪೆ ಅಡ್ಡಾದಿಡ್ಡಿಯಾಗಿ ಜಿಗಿದು ನಾಲಿಗೆ ಉದ್ದಮಾಡಿ ಒಂದು ಸೊಳ್ಳೆಯನ್ನು ಹಿಡಿದು ನುಂಗಿತು.

"ನೀನೇನು ಜಂಭ ಕೊಚ್ಚಿಕೊಳ್ಳಬೇಡ" ಕೊಕ್ಕರೆಗೆ ಕೋಪ ಬಂತು. ಆಮೇಲೆ ತನ್ನ ಕಾಲುಗಳನ್ನು ನೋಡಿ ಹೇಳಿತು, "ನನ್ನ ಕಾಲುಗಳು ನಿನ್ನ ಕಾಲುಗಳಿಗಿಂತಲೂ ಉದ್ದವಾಗಿವೆ. ನೋಡಲು ಚೆಂದ. ನಿನ್ನದು ನೋಡು ಡೊಂಕಾದ ಕುರೂಪದ ಕಾಲು'' ಎಂದು ಮುಖ ಸೊಟ್ಟಗೆ ಮಾಡಿತು.

"ನಿನಗೆ ಹಾಡಲು ತಿಳಿಯದು. ನಾನು ಮಧುರವಾಗಿ ಹಾಡುವುದನ್ನು ನೀನು ಕೇಳಿದ್ದೀಯಾ... ನಿನ್ನಿಂದ ಹಾಗೆ ಹಾಡಲು ಸಾಧ್ಯವೆ'' ಎಂದು ಕಪ್ಪೆ ಕ್ರಾಂ ಕ್ರಾಂ ಎಂದು ಧ್ವನಿ ಮಾಡಿತು.

ಸೋಲೊಪ್ಪಿಕೊಳ್ಳಲು ಕೊಕ್ಕರೆಗೆ ಮನಸ್ಸಾಗಲಿಲ್ಲ. ಈಗ ತನ್ನ ದೊಡ್ಡಸ್ತಿಕೆ ಹೇಗೆ ತೋರಿಸುವುದೆಂದು ಒಂದು ಕ್ಷಣ ಯೋಚಿಸಿತು. ಆಮೇಲೆ ಮುಖ ಸೊಟ್ಟಗೆ ಮಾಡಿ, "ಅದೇನು ಹಾಡು, ನಿನ್ನ ಹಾಡು ಕೇಳಿದರೆ ಕತ್ತೆ ಕಿರಿಚಿದಂತಿದೆ. ಆದರೆ ನನ್ನ ಈ ಕೊಕ್ಕು ನೋಡು. ಇದರಿಂದ ಏನು ಮಾಡುತ್ತೇನೆ ಎಂದು ನಿನಗಿನ್ನು ತಿಳಿಯದು, ಉದ್ದವಾಗಿ ಸುಂದರವಾಗಿರುವ ಈ ಕೊಕ್ಕು ಅಲಂಕಾರಕ್ಕಲ್ಲ, ನಿನ್ನ ಹಾಗೆ ಹಾಡು ಹೇಳಲಿಕ್ಕೂ ಅಲ್ಲ.''

"ಮತ್ತೆ ಯಾಕೆ ?'' - ಕಪ್ಪೆ ಕೇಳಿತು.

'ಇದು ನಿನ್ನಂಥವರನ್ನು ಹಿಡಿದು ನುಂಗಲು ಇರುವ ಒಂದು ಬಾಯಿ. ಹೇಗೆಂದು ತೋರಿಸಲೇ ?'' ಎನ್ನುತ್ತಾ ಕೊಕ್ಕರೆ ಥಟ್ಟನೆ ಸುಂದರಿ ಕಪ್ಪೆಯನ್ನು ಕುಕ್ಕಿ ನುಂಗಿತು. ಅಂದಿನಿಂದ, ಮಿತ್ರರಾಗಿದ್ದ ಕಪ್ಪೆಗಳು ಕೊಕ್ಕರೆಗಳ ವೈರಿಗಳಾದುವು. ಕ್ರೂರಿಗಳ ಮುಖ ನೋಡುವುದೇ ಮಹಾಪಾಪವೆಂದು ಕಪ್ಪೆಗಳು ಕೊಕ್ಕರೆಗಳ ನೆರಳು ಕಂಡಕೂಡಲೇ ನೀರಿನಲ್ಲಿ ಮುಳುಗಿ ಅಡಗಿಕೊಳ್ಳುತ್ತವೆ. ಅಹಂಕಾರಿಗಳ ಸೊಕ್ಕು ಮುರಿಯಲೇಬೇಕು ಎಂದುಕೊಂಡು ಕೊಕ್ಕರೆಗಳು ಕಪ್ಪೆಗಳನ್ನು ಹುಡುಕುತ್ತಾ ಕೊಕ್ಕು ಅಗಲಿಸಿ ಕೊರಳು ತಿರುಗಿಸಿ ಕೆರೆಗಳ ಬಳಿ ಕಾಯುತ್ತಿರುತ್ತವೆ.

"ಇದರಿಂದ ತಿಳಿಯುವ ನೀತಿ ಏನೆಂದು ನಿಮಗೆ ಗೊತ್ತೆ ?'"

"ಗೊತ್ತು ಸಾರ್."

"ಹೇಳಿ ನೋಡೋಣ.''

"ಯಾವಾಗಲೂ ಗೆಳೆತನ ಮಾಡುವಾಗ ಇಲ್ಲವೆ ವಾದ ಮಾಡುವಾಗ ಸಮವಾದವರೊಂದಿಗೆ ಮಾತ್ರ ಮಾಡಬೇಕು. ಇಲ್ಲದಿದ್ದರೆ ತೊಂದರೆಯಾಗುತ್ತದೆ.''

ಬೇಬಿ ಎಮ್. ಮಾಣಿಯಾಟ್

Dailyhunt
Disclaimer: This content has not been generated, created or edited by Dailyhunt. Publisher: Udayavani