Dailyhunt Logo
  • Light mode
    Follow system
    Dark mode
    • Play Story
    • App Story
King: ಶಾರುಖ್‌ ವೃತ್ತಿ ಬದುಕಿನಲ್ಲೇ ಅತ್ಯಂತ ದುಬಾರಿ ಸಿನಿಮಾ: ʼಕಿಂಗ್‌ʼ ಬಜೆಟ್‌ ಎಷ್ಟು?

King: ಶಾರುಖ್‌ ವೃತ್ತಿ ಬದುಕಿನಲ್ಲೇ ಅತ್ಯಂತ ದುಬಾರಿ ಸಿನಿಮಾ: ʼಕಿಂಗ್‌ʼ ಬಜೆಟ್‌ ಎಷ್ಟು?

ಮುಂಬಯಿ: ಬಾಲಿವುಡ್‌ ಸ್ಟಾರ್‌ ಶಾರುಖ್‌ ಖಾನ್‌ (Shah Rukh Khan) ಕಳೆದ ಎರಡೂವರೆ ವರ್ಷಗಳಿಂದ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಹಾಗಂತ ಅವರು ಚಿತ್ರರಂಗದಿಂದ ದೂರ ಉಳಿದಿದ್ದಾರೆ ಎನ್ನುವುದು ಅರ್ಥವಲ್ಲ. ʼಕಿಂಗ್‌ ಖಾನ್‌ʼ ಸತತ ಹಿಟ್‌ ಕೊಟ್ಟು ಒಂದಷ್ಟು ಗ್ಯಾಪ್‌ ತೆಗೆದುಕೊಂಡಿದ್ದಾರೆ.

ಬ್ಯಾಕ್‌ ಟು ಬ್ಯಾಕ್‌ ಸೋಲಿನಿಂದ ಕಂಗೆಟ್ಟಿದ್ದ ಶಾರುಖ್‌ಗೆ 2023ರ ವರ್ಷ ಹಿಟ್‌ ಝೋನ್‌ಗೆ ತಂದು ನಿಲ್ಲಿಸಿತ್ತು. ಆ ವರ್ಷ ʼಪಠಾಣ್‌ʼ, ʼಜವಾನ್‌ʼ ಹಾಗೂ ʼಡಂಕಿʼ ಮೂಲಕ ಬಾಲಿವುಡ್‌ ʼಬಾದ್‌ ಷಾʼ ಶಾರುಖ್‌ ದೊಡ್ಡದಾಗಿ ಕಂಬ್ಯಾಕ್‌ ಮಾಡಿದ್ದರು.

ʼಪಠಾಣ್‌ʼ ಬಳಿಕ ಸಿದ್ದಾರ್ಥ್‌ ಆನಂದ್‌ (Siddharth Anand) ಜತೆ ಶಾರುಖ್‌ ಮತ್ತೆ ಕೈಜೋಡಿಸಿದ್ದಾರೆ. ಈ ಸಲ ʼಕಿಂಗ್‌ʼ ಆಗಿ ಅಬ್ಬರಿಸಲಿದ್ದಾರೆ. ʼಕಿಂಗ್‌ʼ ಬಾಲಿವುಡ್‌ನಲ್ಲಿ ರಿಲೀಸ್ ಆಗಲಿರುವ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಈಗಾಗಲೇ ಬಿಟೌನ್‌ನಲ್ಲಿ ಈ ಚಿತ್ರ ಟಾಕ್‌ ಆಫ್‌ ಟೌನ್‌ ಆಗಿದೆ.

ಫಸ್ಟ್‌ ಲುಕ್‌, ರಿಲೀಸ್‌ ಡೇಟ್ ಅನೌನ್ಸ್‌ನಿಂದಲೇ ಭಾರೀ ಹೈಪ್‌ ಹೆಚ್ಚಿಸಿರುವ ʼಕಿಂಗ್‌ʼ ಕುರಿತು ಮತ್ತೊಂದು ಅಪ್ಡೇಟ್‌ ಹೊರಬಿದ್ದಿದೆ.

ʼಕಿಂಗ್‌ʼ ಚಿತ್ರ ಶಾರುಖ್‌ ವೃತ್ತಿ ಬದುಕಿನಲ್ಲೇ ಅತ್ಯಂತ ದುಬಾರಿ ಸಿನಿಮಾವಾಗಿರಲಿದೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ, ʼಕಿಂಗ್‌ʼ 450 ಕೋಟಿ ರೂಪಾಯಿ ಬಜೆಟ್‌ನಲ್ಲಿ ಬರಲಿದೆ. ವಿಶೇಷವೆಂದರೆ 450 ಕೋಟಿ ರೂ., ಮುದ್ರಣ ಮತ್ತು ಪ್ರಚಾರ ವೆಚ್ಚಗಳು ಹಾಗೂ ಶಾರುಖ್ ಖಾನ್ ನಟನಾ ಶುಲ್ಕವನ್ನು ಹೊರತುಪಡಿಸಿ ಆಗಿದೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ʼಕಿಂಗ್‌ʼ ಚಿತ್ರ ಸುಮಾರು 400 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾದ ʼಜವಾನ್ʼ ಮತ್ತು ಅಂದಾಜು 350 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಪಠಾಣ್‌ಗಿಂತ ದೊಡ್ಡದಾಗಿದೆ ಎನ್ನುವುದು ಗಮನಿಸಬೇಕಾದ ಸಂಗತಿ.

2025ಕ್ಕೆ ಚಿತ್ರ ಸೆಟ್ಟೇರಿದ್ದು, 2026ರ ಆಗಸ್ಟ್‌ ತಿಂಗಳಿನಲ್ಲಿ ಶೂಟಿಂಗ್‌ ಮುಗಿಯುವ ಸಾಧ್ಯತೆಯಿದೆ. ಇದುವರೆಗೆ ಸುಮಾರು 150 ದಿನಗಳಿಗೂ ಹೆಚ್ಚಿನ ದಿನಗಳ ಕಾಲ ಶೂಟಿಂಗ್‌ ನಡೆಸಲಾಗಿದೆ. ಇಂಟರ್‌ ನ್ಯಾಷನಲ್‌ ಸೇರಿದಂತೆ ವಿವಿಧ ಕಡೆ ಚಿತ್ರೀಕರಣವನ್ನು ನಡೆಸಲಾಗಿದೆ.

ಚಿತ್ರದ ಸಾಹಸ ಸನ್ನಿವೇಶಗಳನ್ನು ವಿನ್ಯಾಸಗೊಳಿಸಲು ಮತ್ತು ಕಾರ್ಯಗತಗೊಳಿಸಲು ಚಿತ್ರತಂಡ ಪ್ರಪಂಚದಾದ್ಯಂತದ ಕೆಲವು ದೊಡ್ಡ ಸಾಹಸ ತಂಡಗಳನ್ನು ಕರೆತಂದಿದೆ ಎನ್ನಲಾಗಿದೆ.

ಒಟ್ಟಿನಲ್ಲಿ ಆಕ್ಷನ್‌ ಥ್ರಿಲ್ಲರ್‌ ʼಕಿಂಗ್‌ʼ ಮೇಲೆ ಬಹಳ ದೊಡ್ಡಮಟ್ಟದಲ್ಲಿ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಚಿತ್ರದಲ್ಲಿ ಶಾರುಖ್‌ ಜತೆ ಪುತ್ರಿ ಸುಹಾನ್‌ ಹಾಗೂ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್ (ನೆಗಟಿವ್‌ ರೋಲ್), ಅನಿಲ್ ಕಪೂರ್, ಜಾಕಿ ಶ್ರಾಫ್ ಮತ್ತು ಜೈದೀಪ್ ಅಹ್ಲಾವತ್‌ ಮುಂತಾದವರು ನಟಿಸಿದ್ದಾರೆ.

ಇದೇ ವರ್ಷದ ಡಿಸೆಂಬರ್‌ 26ಕ್ಕೆ ಚಿತ್ರ ರಿಲೀಸ್‌ ಆಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani