ಕಿನ್ನಿಗೋಳಿ: ಕಿನ್ನಿಗೋಳಿ - ಮೂಲ್ಕಿ ರಾಜ್ಯ ಹೆದ್ದಾರಿಯಲ್ಲಿ ಡಾಮರು ಸಂಪೂರ್ಣ ಕಿತ್ತು ಹೋಗಿ, ಹೊಂಡಗಳೇ ರಾರಾಜಿಸುತ್ತಿವೆ. ಯಾವ ಕಡೆಯಿಂದ ಹೋದರೂ ಹೊಂಡಕ್ಕೆ ಬೀಳದೆ ಮುಂದೆ ಹೋಗಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಇದೆ. ಈ ಭಾಗದಲ್ಲಿ ನಿತ್ಯವೂ ಹಲವರು ಹೊಂಡಗಳಿಗೆ ವಾಹನ ಬಿದ್ದು ಗಾಯಗೊಳ್ಳುತ್ತಿದ್ದಾರೆ.
ಇಷ್ಟೆಲ್ಲ ಆದರೂ ಸದ್ಯಕ್ಕೆ ಈ ರಸ್ತೆಗೆ ದುರಸ್ತಿ ಭಾಗ್ಯ ಸಿಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.
ಮಳೆಗಾಲಕ್ಕೆ ಮೊದಲೇ ಈ ರಸ್ತೆ ಸಾಕಷ್ಟು ಹಾಳಾಗಿ ಹೋಗಿತ್ತು. ಅಮೃತ್-2 ನೀರಿನ ಪೈಪ್‌ಲೈನ್ ಹಲವು ಕಡೆಗಳಲ್ಲಿ ರಸ್ತೆ ಕಡಿದು ಹಾಕಿ ಸರಿಯಾಗಿ ಮತ್ತೆ ತುಂಬಿಸದಿದ್ದರಿಂದ ಸಂಚಾರಕ್ಕೆ ತೊಡಕಾಗಿತ್ತು. ಮಳೆ ಬಂದ ಬಳಿಕ ಅವುಗಳು ಹೊಂಡಗಳಾಗಿ ದ್ವಿಚಕ್ರ ವಾಹನ ಚಾಲಕರಿಗೆ ಸಂಚಕಾರವಾಗಿ ಪರಿಣಮಿಸಿತ್ತು. ಅದರ ಜತೆಗೆ ಉದ್ದಕ್ಕೂ ರಸ್ತೆ ಹಾಳಾಗಿ ಹೊಂಡಮಯವಾಗಿದೆ.
ಎಲ್ಲೆಲ್ಲಿ ಹೊಂಡಮಯ?
ಎಸ್. ಕೋಡಿಯ ಬಳಿಯಲ್ಲಿ ಅಗಲ ಕಿರಿದಾದ ರಸ್ತೆಯಲ್ಲಿ ಎಷ್ಟು ಹೊಂಡ ಗುಂಡಿಗಳಿವೆ ಎಂದರೆ ಎಲ್ಲಾ ಹೊಂಡದಲ್ಲಿ ಸರ್ಕಸ್ ಮಾಡಿಯೇ ಸಂಚರಿಸಬೇಕು. ಕಿನ್ನಿಗೋಳಿ ಪೇಟೆಯ ಸುಖಾನಂದ ಶೆಟ್ಟಿ ಸರ್ಕಲ್ ಬಳಿ ದೊಡ್ಡ ದೊಡ್ಡ ಹೊಂಡಗಳಾಗಿವೆ. ಬಸ್ ನಿಲ್ದಾಣ ತಿರುವಿನಲ್ಲಿ, ಕಿನ್ನಿಗೋಳಿ ರಾಜಾಂಗಣದ ಬಳಿಯ ದೊಡ್ಡ ಹೊಂಡ, ಹೊಸಕಾವೇರಿಯ ಕಟ್ಟೆಯ ಬಳಿ, ಮೂರುಕಾವೇರಿ, ಪದ್ಮನೂರು, ಕೆರೆಕಾಡು ರಸ್ತೆಯಲ್ಲಿ ಡಾಮರು ಕಿತ್ತು ಹೋಗಿದೆ. ಕೆಲವು ಕಡೆಗಳಲ್ಲಿ ಕೆರೆಯಂತೆ ನೀರು ನಿಂತು ಸಂಚಾರಕ್ಕೆ ತೊಂದರೆ ಆಗಿದೆ.
ಹೆದ್ದಾರಿ ನಿರ್ವಹಣೆ ಆಗಲೇ ಇಲ್ಲ
ರಾಜ್ಯ ಹೆದ್ದಾರಿಯಲ್ಲಿ ಮಳೆಗಾಲಕ್ಕೆ ಮುನ್ನ ರಸ್ತೆ ರಿಪೇರಿ ಮಾಡಿದ್ದರೆ ಇಷ್ಟು ಸಮಸ್ಯೆ ಆಗುತ್ತಿರಲಿಲ್ಲ. ಆದರೆ, ಈ ರಸ್ತೆಯನ್ನು ಕಳೆದ 5 ವರ್ಷಗಳಲ್ಲಿ ಒಮ್ಮೆಯೂ ಪೂರ್ಣ ಪ್ರಮಾಣದಲ್ಲಿ ದುರಸ್ತಿ ಮಾಡಿಲ್ಲ. ಪ್ರತೀ ಬಾರಿಯೂ ಮಳೆಗಾಲದ ಬಳಿಕ ಅಲ್ಲಲ್ಲಿ ತೇಪೆ ಹಾಕಿ ಬಿಡುವುದು ಬಿಟ್ಟರೆ ಪೇವರ್ ಫಿನಿಶ್ ಕೂಡ ಇಲ್ಲ. ಕನಿಷ್ಠ ರಸ್ತೆಯಲ್ಲಿ ನೀರು ನಿಲ್ಲದಂತೆ ನೋಡಿಕೊಂಡಿದ್ದರೂ ಸ್ವಲ್ಪ ಮಟ್ಟಿಗೆ ರಸ್ತೆಯನ್ನು ರಕ್ಷಿಸಬಹುದಿತ್ತು.
ಇನ್ನು ಸದ್ಯಕ್ಕೆ ರಿಪೇರಿಯ ಲಕ್ಷಣವೂ ಇಲ್ಲ. ಈಗ ಸೆಪ್ಟೆಂಬರ್ ಬಳಿಕ ಮಳೆ ಸ್ವಲ್ಪ ಕಡಿಮೆಯಾಗುತ್ತದೆಯಾದರೂ ನವೆಂಬರ್‌ನಲ್ಲಿ ಹಿಂಗಾರು ಮಳೆ ಬರಲಿದೆ ಎಂಬ ನೆಪ ಒಡ್ಡಿ ರಸ್ತೆ ರಿಪೇರಿ ಮಾಡುವುದಿಲ್ಲ. ಹೀಗಾಗಿ ಇನ್ನೇನಿದ್ದರೂ ಡಿಸೆಂಬರ್ ಬಳಿಕವೇ ರಸ್ತೆ ರಿಪೇರಿ ಆದೀತು ಎನ್ನುವುದು ಸ್ಥಳೀಯರ ಅನುಭವದ ಮಾತು ಎನ್ನುತ್ತಾರೆ ರವೀಂದ್ರ ಕೆರೆಕಾಡು.
ಮಂಜೂರಾಗದ ಹಣ
ಮೂಲ್ಕಿ - ಕಿನ್ನಿಗೋಳಿ ರಸ್ತೆ ಅಭಿವೃದ್ಧಿಗೆ 2 ಕೋಟಿ ಮಂಜೂರು ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಆಗಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಸರಕಾರಕ್ಕೆ ಸಾಕಷ್ಟು ರಸ್ತೆ ತೆರಿಗೆ ಕಟ್ಟಿ ವಾಹನಗಳು ರಸ್ತೆಗಿಳಿದರೂ ಸರಕಾರ ರಸ್ತೆ ದುರಸ್ತಿಗೆ ನಿರ್ಲಕ್ಷ್ಯ ತೋರುತ್ತಿದೆ. ವಾಹನಗಳು ಗುಂಡಿಗೆ ಬಿದ್ದು ನಷ್ಟಕ್ಕೆ ಕಾರಣವಾಗುತ್ತಿವೆ. ಹೀಗೇ ಮುಂದುವರಿದರೆ ಪ್ರತಿಭಟನೆಗೆ ಜನರು ಸಜ್ಜಾಗುವ ಸಾಧ್ಯತೆ ಇದೆ.
ವಾಹನದಿಂದ ಬಿದ್ದು ಗಾಯ
ಅಮೃತ್-2 ಪೈಪ್‌ಲೈನ್ ಮಳೆಗಾಲದ ಮುನ್ನ ರಸ್ತೆ ಕಡಿದು ಸರಿಯಾಗಿ ಮುಚ್ಚದೆ ಇರುವುದರಿಂದ ಕೆಲವು ಕಡೆಗಳಲ್ಲಿ ತುಂಬಾ ಅಪಾಯಕಾರಿಯಾಗಿದೆ. ಮನವಿ ಮಾಡಿದ್ದರೂ ಅಷ್ಟು ಸ್ವಲ್ಪ ಮಟ್ಟಿನ ಹೊಂಡ ಮುಚ್ಚಿದ್ದರೂ ಸಮರ್ಪಕವಾಗಿ ಮಾಡಿಲ್ಲ. ಕಳೆದ 2 ದಿನಗಳಲ್ಲಿ 4 ಜನರು ದ್ವಿಚಕ್ರ ವಾಹನದಿಂದ ಬಿದ್ದು ಗಾಯಗೊಂಡಿದ್ದಾರೆ. ಎಸ್. ಕೋಡಿಯ ಹೊಂಡ ಅರಿವಿಗೆ ಬಾರದೆ ಚಿಕ್ಕ ಮಗು ಮತ್ತು ತಾಯಿ ಬಿದ್ದು ಗಾಯಗೊಂಡಿದ್ದಾರೆ. -ಮೆಲ್ವಿನ್, ಪದ್ಮನೂರು
- ರಘುನಾಥ್ ಕಾಮತ್ ಕೆಂಚನಕೆರೆ

