Dailyhunt Logo
  • Light mode
    Follow system
    Dark mode
    • Play Story
    • App Story
ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಇಂಡಿಗೋ ವಿಮಾನಕ್ಕೆ ಸಿಡಿಲು ಬಡಿತ; ಇಬ್ಬರಿಗೆ ಗಾಯ

ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಇಂಡಿಗೋ ವಿಮಾನಕ್ಕೆ ಸಿಡಿಲು ಬಡಿತ; ಇಬ್ಬರಿಗೆ ಗಾಯ

ಕೋಲ್ಕತ್ತಾ: ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಭಾರಿ ಗುಡುಗು ಸಹಿತ ಮಳೆಯಾಗುತ್ತಿದ್ದ ವೇಳೆ, ಅಗರ್ತಲಾಕ್ಕೆ ಹೊರಡಲು ನಿಂತಿದ್ದ ಇಂಡಿಗೋ ಸಂಸ್ಥೆಯ ವಿಮಾನವೊಂದಕ್ಕೆ ಸಿಡಿಲು ಬಡಿದಿದೆ ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (AAI) ಅಧಿಕಾರಿ ತಿಳಿಸಿದ್ದಾರೆ.

ವಿಮಾನ ನಿಲ್ದಾಣದ ಕಾರ್ಯಾಚರಣೆ ನಿಯಂತ್ರಣ ಕೇಂದ್ರವು (AOCC) ಹವಾಮಾನ ಮುನ್ನೆಚ್ಚರಿಕೆ ನೀಡಿದ್ದ ಸಮಯದಲ್ಲೇ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ಇಂಡಿಗೋ ಸಂಸ್ಥೆ ಸ್ಪಷ್ಟಪಡಿಸಿದೆ.

ಬದಲಿ ವಿಮಾನದ ವ್ಯವಸ್ಥೆ: ಇಂಡಿಗೋ ಸಂಸ್ಥೆಯ '6E6068' (VT-IPW) ವಿಮಾನವು ಏರೋಬ್ರಿಡ್ಜ್ 56L ಬಳಿ ನಿಂತಿದ್ದಾಗ ಈ ಸಿಡಿಲು ಬಡಿದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ತಕ್ಷಣವೇ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಬಳಿಕ ಅವರನ್ನು ಮತ್ತೊಂದು ಪರ್ಯಾಯ ವಿಮಾನದ (VT-ICD) ಮೂಲಕ ಅಗರ್ತಲಾಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಡಲಾಯಿತು.

ಸಿಬ್ಬಂದಿಗೆ ಸಣ್ಣಪುಟ್ಟ ಗಾಯ
ಸಿಡಿಲು ಬಡಿದ ತೀವ್ರತೆಗೆ ವಿಮಾನದ ರೆಕ್ಕೆ ಮತ್ತು ಲಗೇಜ್ ವಿಭಾಗದ ಬಳಿ ಕೆಲಸ ಮಾಡುತ್ತಿದ್ದ ಇಬ್ಬರು ಗ್ರೌಂಡ್ ಸ್ಟಾಫ್ ಸಣ್ಣಪುಟ್ಟ ಗಾಯಗಳೊಂದಿಗೆ ಆಘಾತಕ್ಕೊಳಗಾಗಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಇಂಡಿಗೋ ಸಂಸ್ಥೆ ಸ್ಪಷ್ಟಪಡಿಸಿದೆ.

ಕೋಲ್ಕತ್ತಾದಲ್ಲಿ ಮಳೆ ಆರ್ಭಟ
ಕೋಲ್ಕತ್ತಾ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಶುಕ್ರವಾರ ಮುಂಜಾನೆಯಿಂದಲೇ ಭಾರಿ ಗುಡುಗು ಸಹಿತ ಮಳೆಯಾಗುತ್ತಿದ್ದು, ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿವೆ. ಹಲವೆಡೆ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ವಿಮಾನ ನಿಲ್ದಾಣದಲ್ಲೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani