ಬ್ರೇಕಿಂಗ್ ಸುದ್ದಿ
ಕೊಂಕಣ ರೈಲ್ವೇ: ಕಿರೀಟ ಕಂಡೇ ಸಮಾಧಾನಪಡಬೇಕಷ್ಟೆ !

ಕೊಂಕಣ ರೈಲ್ವೇ ಬಂದಾಗ ಕರಾವಳಿಗರು ಬೆಟ್ಟದಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡದ್ದು ನಿಜ. ಆದರೆ ಕೊಂಕಣ ರೈಲ್ವೇ ನಿಗಮದ ಆರ್ಥಿಕ ಸಂಪನ್ಮೂಲ ಕ್ರೋಡೀಕರಣದ ಮಿತಿಯೋ ಅಥವಾ ಕಾರ್ಯದ ಒತ್ತಡವೋ; ಕರಾವಳಿಗರ ಎಲ್ಲ ನಿರೀಕ್ಷೆಗಳು ಈಡೇರಿಲ್ಲ ಎಂಬುದು ನಿಜ. ಹೀಗಾಗಿಯೇ ಸೌಲಭ್ಯಗಳಿಗಾಗಿ ಕಷ್ಟ ಹೊತ್ತುಕೊಂಡು ಮೂರು ಬಾಗಿಲುಗಳ ಎದುರು ನಿಲ್ಲುವುದು ಸಾಕೆನ್ನುತ್ತಿದ್ದಾರೆ ಕರಾವಳಿಗರು!
ಮಂಗಳೂರು: ಕರಾವಳಿಯ ಮಣ್ಣಿನ ಮಗ ಜಾರ್ಜ್ ಫೆರ್ನಾಂಡಿಸ್ ಅವರ ಪ್ರಯತ್ನದ ಫಲವಾಗಿ ಕೊಂಕಣ ರೈಲ್ವೇ ಅನುಷ್ಠಾನಕ್ಕೆ ಬಂದಾಗ ಕರ್ನಾಟಕದ ಜನತೆಯಲ್ಲಿ ಬಹಳಷ್ಟು ನಿರೀಕ್ಷೆಗಳು ಗರಿಗೆದರಿದ್ದವು.
ಅದರ ಮೂಲಕ ಕರಾವಳಿಯ ಎಲ್ಲ ರೈಲು ಕೊರತೆ ನೀಗಬಹು ದೆಂದೂ ನಿರೀಕ್ಷಿಸ ಲಾಗಿತ್ತು. ಆದರೆ ಕೊಂಕಣ ರೈಲ್ವೇ ನಿಗಮ ಕರಾವಳಿಗೆ ಹೆಮ್ಮೆಯ ಮುಕುಟದಂತೆ ಕಂಗೊಳಿಸುತ್ತಿದ್ದರೂ ದೀಪದ ಬುಡದಲ್ಲಿ ಕತ್ತಲು ಎಂಬ ಪರಿಸ್ಥಿತಿ ಇದೆ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ.
ಕೊಂಕಣ ರೈಲ್ವೇ ಆರಂಭವಾಗಿ 22 ವರ್ಷಗಳು ಕಳೆದಿವೆ. ರೈಲ್ವೇ ಸಂಚಾರ ಆರಂಭದ ಅವಧಿಯಲ್ಲಿ ಬೆರಳೆಣಿಕೆಯ ರೈಲುಗಳು ಲಭಿಸಿದ್ದು ಬಿಟ್ಟರೆ, ಆ ಬಳಿಕ ಹೆಚ್ಚಿನದೇನೂ ಸಿಕ್ಕಿಲ್ಲ ಎನ್ನುವುದು ಕರಾವಳಿ ಭಾಗದ ಕೆಲವು ರೈಲ್ವೆ ಯಾತ್ರಿಕರ ಪರ ಸಂಘಟನೆಗಳ ವಾದ. ಈ ರೈಲು ಮಾರ್ಗದಲ್ಲಿ ಕಾರವಾರದಿಂದ ಬೆಂಗಳೂರು ಮತ್ತಿತರೆಡೆಗಳಿಗೆ ಇನ್ನಷ್ಟು ರೈಲು ಸಂಪರ್ಕ ಕಲ್ಪಿಸುವ ಅವಕಾಶವಿದೆ. ಆದರೆ ಮನಸ್ಸು ಮಾಡುತ್ತಿಲ್ಲ ಎಂಬ ಅಭಿಪ್ರಾಯ ರೈಲ್ವೇ ಬಳಕೆದಾರರಿಂದ ವ್ಯಕ್ತವಾಗಿದೆ.
ಕೊಂಕಣ ರೈಲ್ವೇ ಮಾರ್ಗ ನಿರ್ಮಾಣ ಸಂದರ್ಭ ಹಳಿ ಪರೀಕ್ಷಾರ್ಥ ಕಾರ್ಯಾಚರಿಸುತ್ತಿದ್ದ ಮಂಗಳೂರು-ಮಡ್ಗಾಂವ್- ಮಂಗಳೂರು ಪ್ಯಾಸೆಂಜರ್ ರೈಲನ್ನು ಬಳಿಕ ಖಾಯಂಗೊಳಿಸಲಾಯಿತು. ಮುಂಬಯಿ ಎಲ್‌ಟಿಟಿ- ಮಂಗಳೂರು ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿಗೆ ಕೊಂಕಣ ರೈಲು ಮಾರ್ಗದ ಉದ್ಘಾಟನೆ ಸಂದರ್ಭ ಆಗಿನ ರೈಲ್ವೇ ಸಚಿವ ನಿತೀಶ್ ಕುಮಾರ್ ಚಾಲನೆ ನೀಡಿದ್ದರು. ಇದಾದ ಬಳಿಕ ಕರಾವಳಿ ಕರ್ನಾಟಕವನ್ನು ದೇಶದ ಇತರ ಭಾಗಗಳಿಗೆ ಸಂಪರ್ಕಿಸುವ ಬೇರಾವುದೇ ರೈಲನ್ನು ಮಂಗಳೂರು ಭಾಗಕ್ಕೆ ಕೊಂಕಣ ರೈಲ್ವೇ ನಿಗಮ ದಿಂದ ಆರಂಭವಾಗಿಲ್ಲ. ಪ್ರಸ್ತುತ ಕೊಂಕಣ ಮಾರ್ಗದಲ್ಲಿ ಸುಮಾರು 40 ರೈಲುಗಳು ಓಡಾಡುತ್ತಿವೆ. ಇವುಗಳಲ್ಲಿ ಏಳು ಮಾತ್ರ ರಾಜ್ಯದ ಅಗತ್ಯಗಳಿಗೆ ಪೂರಕವಾಗಿವೆ. ಉಳಿದವುಗಳು ಉತ್ತರ ಭಾರತ ಮತ್ತು ಕೇರಳವನ್ನು ಸಂಪರ್ಕಿಸುವಂಥವು. ಇದಲ್ಲದೆ ಕರಾವಳಿಯ ರೈಲ್ವೇ ನಿಲ್ದಾಣಗಳ ಸ್ಥಿತಿಯಲ್ಲೂ 30 ವರ್ಷಗಳಲ್ಲಿ ಮಹತ್ತರ ಸುಧಾರಣೆಯಾಗಿಲ್ಲ ಎಂಬುದು ಬಳಕೆದಾರರ ಸಂಘಟನೆಗಳ ವಾದ.
ಇದೇ ಸಂದರ್ಭದಲ್ಲಿ ಕೇಳಿಬರುತ್ತಿರುವ ಮತ್ತೂಂದು ವಾದವೆಂದರೆ, ಕೊಂಕಣ ರೈಲ್ವೇ ಒಂದು ನಿಗಮವಾಗಿದ್ದು, ಸಾರ್ವಜನಿಕ ಸ್ವಾಮ್ಯದ ಸಂಸ್ಥೆ. ಭಾರತೀಯ ರೈಲ್ವೇ ಮಾದರಿಯಲ್ಲಿ ಇದಕ್ಕೆ ಬಜೆಟ್ ಅನುದಾನಗಳು ಇಲ್ಲ. ನಿಗಮವು ತನ್ನ ಆರ್ಥಿಕ ಸಂಪನ್ಮೂಲ ಕ್ರೋಡೀಕರಣದಿಂದಲೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಹಾಗಾಗಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷಿಸುವುದು ಕೊಂಚ ಕಷ್ಟ ಎಂಬುದು.
ಇದೂ ನಿಜವೆನ್ನೋಣ. ಆದರೆ ಒಟ್ಟಿನಲ್ಲಿ ಬಡವಾಗುತ್ತಿರುವುದು ಕರಾವಳಿಯ ರೈಲ್ವೇ ಕ್ಷೇತ್ರ ಮತ್ತು ಕರಾವಳಿಗರು. ಈ ಹಿನ್ನೆಲೆಯಲ್ಲೇ ಕರಾವಳಿ ರೈಲ್ವೇ ಭಾಗವನ್ನು ತ್ರಿಶಂಕು ಸ್ಥಿತಿಯಿಂದ ಬಿಡುಗಡೆಗೊಳಿಸಿ ಎಂದು ಆಗ್ರಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮಂಗಳೂರು ಪ್ರದೇಶವನ್ನು ನೈಋತ್ಯ ರೈಲ್ವೇ ವಿಭಾಗಕ್ಕೆ ಸೇರ್ಪಡೆಗೊಳಿಸಿದರೆ ಸ್ವಲ್ಪ ಅನುಕೂಲವಾಗಬಹುದು ಎಂಬ ಪ್ರತಿಪಾದನೆ ಬಳಕೆದಾರರ ಸಂಘಟನೆಗಳದ್ದು.
ಕೊಂಕಣ ರೈಲ್ವೇ ನಿಗಮ ಆರಂಭವಾಗಿ 30 ವರ್ಷಗಳು ಕಳೆದಿವೆ. 1998ರ ಜನವರಿಯಲ್ಲಿ ಪೂರ್ಣ ಪ್ರಮಾಣದ ರೈಲು ಸಂಚಾರ ಆರಂಭವಾಗಿತ್ತು. ಕೊಂಕಣ ರೈಲ್ವೇ ನಿಗಮದಲ್ಲಿ ಶೇ. 51ರಷ್ಟು ಪಾಲು ರೈಲ್ವೇ ಇಲಾಖೆ, ಮಹಾರಾಷ್ಟ್ರ ಶೇ. 22ರಷ್ಟು, ಕರ್ನಾಟಕ ಶೇ. 15ರಷ್ಟು, ಗೋವಾ ಶೇ. 6ರಷ್ಟು ಮತ್ತು ಕೇರಳ ಶೇ. 6ರಷ್ಟು ಪಾಲು ಹೊಂದಿವೆ. ಮಹಾರಾಷ್ಟ್ರದ ಬಳಿಕ ಅಧಿಕ ಪಾಲು ಬಂಡವಾಳವನ್ನು ಕರ್ನಾಟಕ ಹೊಂದಿದ್ದರೂ ಪ್ರಯೋಜನವಾದದ್ದು ಕಡಿಮೆ. ಹೆಚ್ಚಿನ ರೈಲು ಸೇವೆ ಕಡಿಮೆ ಪಾಲು ಬಂಡವಾಳ ಹೂಡಿರುವ ರಾಜ್ಯಗಳ ಪಾಲಾಗುತ್ತಿದೆ ಎಂಬ ಟೀಕೆ ಇದೆ.