| ಹೆಚ್ಚುತ್ತಿರುವ ವಾಹನ ಸಂಚಾರ | ಆದರೆ, ಇನ್ನೂ ಅಗಲಗೊಳ್ಳದ ರಸ್ತೆಗಳಿಂದ ಸಮಸ್ಯೆ
| ಪ್ರಮುಖ ಪೇಟೆಗಳೂ ಇಕ್ಕಟ್ಟು | ಸೇತುವೆ ಸಹಿತ ಕೆಲವು ಯೋಜನೆಗೆ ಹಣ ಮಂಜೂರು
ಕೋಟ: ಅತೀ ಹೆಚ್ಚಿನ ವಾಹನ ದಟ್ಟಣೆ ಹೊಂದಿರುವ ರಾಜ್ಯ ಹೆದ್ದಾರಿಗಳಲ್ಲಿ ಬ್ರಹ್ಮಾವರ-ಜನ್ನಾಡಿ ರಾಜ್ಯ ಹೆದ್ದಾರಿಯೂ ಒಂದು.
ಆದರೆ ಅದಕ್ಕೆ ಪೂರಕವಾದ ರಸ್ತೆ ಸೌಲಭ್ಯ ಇಲ್ಲಿಲ್ಲ. ಹೀಗಾಗಿ ಈ ರಸ್ತೆ ಸಮಗ್ರ ಅಭಿವೃದ್ಧಿಯಾಗಬೇಕು, ಇಕ್ಕಟ್ಟಿನ ಪ್ರದೇಶಗಳಾದ ಬ್ರಹ್ಮಾವರದಿಂದ ಬಾರ್ಕೂರು ತನಕ ಪ್ರದೇಶ ಹಾಗೂ ಬಾರ್ಕೂರು ಪೇಟೆ, ಸಾಹೇಬ್ರಕಟ್ಟೆ ಮುಖ್ಯ ವೃತ್ತ ಈ ಎಲ್ಲ ಪ್ರದೇಶಗಳು ಅಭಿವೃದ್ಧಿಯಾಗಬೇಕು ಎನ್ನುವ ಬೇಡಿಕೆ ವಾಹನ ಸಂಚಾರಿಗಳಲ್ಲಿ ಹಲವು ದಶಕಗಳಿಂದ ಇವೆ. ಆದರೆ ಇದುವರೆಗೆ ಕೈಗೂಡಿಲ್ಲ.
ರಸ್ತೆಯ ಅಭಿವೃದ್ಧಿಯ ತುಂಡು ಅನುದಾನಗಳು ಮಾತ್ರ ಬಳಕೆಯಾಗುತ್ತಿದೆ. ಈ ಹಿಂದೆ ಶಿರಿಯಾರ ಸೇತುವೆ, ಮುಖ್ಯ ವೃತ್ತದ ಪ್ರದೇಶ, ಬಿದ್ಕಲ್‌ಕಟ್ಟೆ ಪ್ರದೇಶ ಅಭಿವೃದ್ಧಿಯಾಗಿತ್ತು. ಅದೇ ರೀತಿ ಇದೀಗ ಯಡ್ತಾಡಿಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ 5 ಕೋಟಿ ರೂ ಹಣ ಬಿಡುಗಡೆಯಾಗಿದೆ. ಜತೆಗೆ ಸಂಸದರ ಶಿಫಾರಸ್ಸಿನ ಮೇರೆಗೆ ಕೇಂದ್ರ ಸಿ.ಆರ್.ಐ.ಎಫ್. ನಿಧಿಯಿಂದ 10 ಹಾಗೂ 5 ಕೋಟಿ ರೂ. ಹಣ ಬ್ರಹ್ಮಾವರ-ಜನ್ನಾಡಿ ರಸ್ತೆ ಅಭಿವೃದ್ಧಿಗೆ ಬಿಡುಗಡೆಯಾಗಿದೆ. ಇದರ ಜತೆಗೆ ರಸ್ತೆಯ ಸಮಗ್ರ ಅಭಿವೃದ್ಧಿಗೂ ಆದ್ಯತೆ ನೀಡಬೇಕು ಎನ್ನುವ ಬೇಡಿಕೆ ಇದೆ.
ಭೂ ಸ್ವಾಧೀನ ಸವಾಲು - ಪರಿಹಾರ
ಇಲಾಖೆ ಈ ಹಿಂದೆ ನಡೆಸಿದ ಸಮೀಕ್ಷೆಯೊಂದರಲ್ಲಿ ಬ್ರಹ್ಮಾವರದಿಂದ ಶಿರಿಯಾರ ತನಕ ಭೂ ಸ್ವಾಧೀನ ಪ್ರಕ್ರಿಯೆಗೆ 196 ಕೋಟಿ ರೂ. ಬೇಕಾಗಬಹುದು ಎಂದು ವರದಿ ನೀಡಿತ್ತು. ಇದೀಗ ಭೂಮಿಯ ದರ ದುಪ್ಪಟ್ಟಾಗಿದ್ದುಈಗ 300 ಕೋಟಿ ರೂ. ತನಕ ಬೇಕಾಗಬಹುದು. ಇದು ದೊಡ್ಡ ಮೊತ್ತವಾಗಿರುವುದರಿಂದ ರಸ್ತೆ ಅಭಿವೃದ್ಧಿಗೆ ತೊಡಕಾಗಿದೆ ಎನ್ನುವ ಅಭಿಪ್ರಾಯ ಇಲಾಖೆಯಲ್ಲಿದೆ. ಆದರೆ ಒಂದೇ ಹಂತದಲ್ಲಿ ಸಂಪೂರ್ಣ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳದಿದ್ದರೂ ತುಂಬಾ ಇಕ್ಕಟ್ಟಿನ ಪ್ರದೇಶಗಳಾದ ಹಂದಾಡಿ, ಬಾರ್ಕೂರು ಮೊದಲಾದ ಪ್ರದೇಶಗಳ ಸ್ವಾಧೀನಕ್ಕೆ ಒತ್ತುಕೊಟ್ಟು ಅಭಿವೃದ್ಧಿಪಡಿಸಲು ಅವಕಾಶವಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಮನವಿ ಸಲ್ಲಿಸಲಾಗಿತ್ತು
ರಸ್ತೆಯ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಈ ಹಿಂದೆ ಸರ್ವೆà ನಡೆಸಿ ಭೂ ಸ್ವಾಧೀನಕ್ಕೆ ಬೇಕಾಗುವ ಮೊತ್ತದ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಲಾಗಿತ್ತು. ಆದರೆ ಅನುದಾನ ಬಿಡುಗಡೆಯಾಗಿಲ್ಲ. ಇದೀಗ ಶಿಥಿಲಗೊಂಡ ಯಡ್ತಾಡಿ ಸೇತುವೆಯನ್ನು ತೆರವುಗೊಳಿಸಿ ಹೊಸ ಸೇತುವೆ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಸಾಹೇಬ್ರಕಟ್ಟೆಮುಖ್ಯ ವೃತ್ತ, ಬಾರ್ಕೂರು ಪೇಟೆ ಅಭಿವೃದ್ಧಿಯ ಪ್ರಸ್ತಾವಣೆ ಇಲಾಖೆಯ ಮುಂದಿದೆ. -ಮಂಜುನಾಥ, ಲೋಕೋಪಯೋಗಿ ಇಲಾಖೆ ಎಂಜಿನಿಯರ್, ಉಡುಪಿ
ಶಾಲಾವಧಿ ಸಂಚಾರ ಕಷ್ಟ
ಶಾಲಾವಧಿಯಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಶಾಲಾ ಬಸ್‌ಗಳು ಹಾಗೂ ವಿದ್ಯಾರ್ಥಿಗಳು ಸಂಚರಿಸುವ ಖಾಸಗಿ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ರಸ್ತೆ ಕಿರಿದಾಗಿರುವುದರಿಂದ ಈ ಸಮಯದಲ್ಲಿ ಇತರ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗುತ್ತದೆ. ಜಿಲ್ಲಾ ಮುಖ್ಯ ರಸ್ತೆಯಾಗಿದ್ದ ಈ ಮಾರ್ಗ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದಾಗ ಒಂದಷ್ಟುಹೆಚ್ಚಿನ ಅನುದಾನ ಕೈ ಸೇರಿ ರಸ್ತೆ ಅಭಿವೃದ್ಧಿಯಾಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ರಸ್ತೆ ಮೇಲ್ದರ್ಜೆಗೇರಿದರೂ ಹೆಚ್ಚಿನ ಅನುದಾನ ಕೈ ಸೇರಿಲ್ಲ.
ಮೂಲ ಸಮಸ್ಯೆ ಪರಿಹಾರಕ್ಕೆ ಒತ್ತು
ಇದೀಗ ಸಂಸದರ ಶಿಫಾರಸಿನ ಮೇರೆಗೆ ಕೇಂದ್ರ ಸಿಆರ್‌ಐಎಫ್ ನಿಧಿಯಿಂದ ಮಂಜೂರಾಗಿರುವ 15 ಕೋಟಿ ರೂ. ಅನುದಾನ ಬ್ರಹ್ಮಾವರದಿಂದ ಬಾಕೂìರು ಸೇತುವೆ ತನಕ ಹಾಗೂ ಬಾರ್ಕೂರು ಪೇಟೆಯಲ್ಲಿ ರಸ್ತೆ ಅಭಿವೃದ್ಧಿ, ರಸ್ತೆ ವಿಸ್ತರಣೆಗೆ ಬಳಕೆಯಾಗುವ ಮೂಲಕ ಮೂಲ ಸಮಸ್ಯೆಗೆ ಪರಿಹಾರ ಸಿಗಲಿ ಎನ್ನುವ ಬೇಡಿಕೆ ಇದೆ. ಇಲ್ಲಿನ ಯಾವ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎನ್ನುವ ಕುರಿತು ಮುಂದಿನ ದಿನದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಎನ್.ಎಚ್. ಇಂಜಿನಿಯರ್ ನವೀನ್‌ರಾಜ್ ತಿಳಿಸಿದ್ದಾರೆ.
ಮುಖ್ಯ ಪ್ರದೇಶಗಳು ಅಭಿವೃದ್ಧಿಯಾಗಲಿ
ಬ್ರಹ್ಮಾವರದಿಂದ ಬಾರ್ಕೂರು ಹಾಗೂ ಬಾರ್ಕೂರು ಪೇಟೆ, ಸಾಹೇಬ್ರಕಟ್ಟೆ ಮುಖ್ಯ ವೃತ್ತ ಮೊದಲಾದ ಪ್ರದೇಶಗಳು ಅಭಿವೃದ್ಧಿಯಾಗಬೇಕು. ಇದರಿಂದ ವಾಹನದಟ್ಟಣೆಯನ್ನು ಎದುರಿಸುವ ಮಟ್ಟಿನ ರಸ್ತೆ ಸೌಲಭ್ಯ ದೊರೆಯುತ್ತದೆ ಎನ್ನುವ ಅಭಿಪ್ರಾಯವಿದೆ.
-ರಾಜೇಶ್ ಗಾಣಿಗ ಅಚ್ಲಾಡಿ

