ಉತ್ತರಾಖಂಡ: ಇಲ್ಲಿನ ಕುಮಾವ್ ಪ್ರದೇಶದಲ್ಲಿ ಸಂಭವಿಸಿದ ಬೃಹತ್ ಭೂಕುಸಿತದ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಬೆಟ್ಟದ ಒಂದು ಬದಿ ಹಠಾತ್ತಾಗಿ ಕುಸಿದುಬಿದ್ದು, ಬಂಡೆಕಲ್ಲುಗಳು ಹಾಗೂ ಅಪಾರ ಪ್ರಮಾಣದ ಮಣ್ಣು ರಭಸದಿಂದ ಕೆಳಕ್ಕೆ ಧುಮುಕುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ ಈ ದುರಂತದಲ್ಲಿ ಆಗಿರುವ ಆಸ್ತಿಪಾಸ್ತಿ ನಷ್ಟ ಅಥವಾ ಜಾನುವಾರು, ಮಾನವ ಜೀವಹಾನಿಯ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಭೂಕುಸಿತ ಸಂಭವಿಸಿದ ನಿಖರ ಸ್ಥಳ ಮತ್ತು ಘಟನೆಯಿಂದ ಆದ ಹಾನಿಯ ಪ್ರಮಾಣವನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಹವಾಮಾನ ಏರುಪೇರಾಗಿದ್ದು, ತಗ್ಗು ಪ್ರದೇಶಗಳಲ್ಲಿ ಭಾರೀ ಮಳೆ ಹಾಗೂ ಎತ್ತರದ ಪ್ರದೇಶಗಳಲ್ಲಿ ಹಿಮಪಾತ ದಾಖಲಾಗಿತ್ತು. ಸೆಪ್ಟೆಂಬರ್ ತಿಂಗಳಿನಲ್ಲೂ ಸುರಿದ ಧಾರಾಕಾರ ಮಳೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡು, ಯಾತ್ರೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಇತ್ತೀಚೆಗೆ ಪಿಥೋರಗಢ-ತನಕಪುರ ಹೆದ್ದಾರಿಯಲ್ಲೂ ಕಲ್ಲು ಮತ್ತು ಮಣ್ಣು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಭಾರತೀಯ ಹವಾಮಾನ ಇಲಾಖೆ (IMD) ಉತ್ತರಕಾಶಿ, ರುದ್ರಪ್ರಯಾಗ, ಚಮೋಲಿ, ಬಾಗೇಶ್ವರ, ನೈನಿತಾಲ್, ಅಲ್ಮೋರಾ ಮತ್ತು ಪಿಥೋರಗಢ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನ ಹಾಗೂ ಸಮತಲ ಪ್ರದೇಶಗಳಲ್ಲಿ ಸಾಧಾರಣ ಮಂಜು ಇರಲಿದೆ. ಹವಾಮಾನ ಇಲಾಖೆಯು ಅಕ್ಟೋಬರ್ 1 ರಂದು ರಾಜ್ಯಕ್ಕೆ ಯಾವುದೇ ರೆಡ್ ಅಥವಾ ಆರೆಂಜ್ ಅಲರ್ಟ್ ನೀಡದಿದ್ದರೂ, ಮಳೆಯ ಕಾರಣದಿಂದ ಹಿಮಾಲಯದ ಕಡಿದಾದ ಬೆಟ್ಟ ಗುಡ್ಡಗಳಲ್ಲಿ ಭೂಕುಸಿತದ ಅಪಾಯ ಹೆಚ್ಚಾಗಿದೆ.

