Dailyhunt Logo
  • Light mode
    Follow system
    Dark mode
    • Play Story
    • App Story
ಕುಂದಾಪುರ, ಬೈಂದೂರು: 4 ಆಯುಷ್ಮಾನ್‌ ಆರೋಗ್ಯ ಕೇಂದ್ರಗಳು ಉದ್ಘಾಟನೆಗೆ ಸಜ್ಜು

ಕುಂದಾಪುರ, ಬೈಂದೂರು: 4 ಆಯುಷ್ಮಾನ್‌ ಆರೋಗ್ಯ ಕೇಂದ್ರಗಳು ಉದ್ಘಾಟನೆಗೆ ಸಜ್ಜು

ಕುಂದಾಪುರ: ಬೈಂದೂರು ಹಾಗೂ ಕುಂದಾಪುರ ತಾಲೂಕಿನಲ್ಲಿ ನಾಲ್ಕು ನೂತನ ಸುಸಜ್ಜಿತ ಆಯುಷ್ಮಾನ್‌ ಆರೋಗ್ಯ ಕೇಂದ್ರಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿವೆ.

ಬೈಂದೂರು ತಾಲೂಕಿನ ಹೇರೂರು ಹಾಗೂ ನಾಡ ಮತ್ತು ಕುಂದಾಪುರ ತಾಲೂಕಿನ ಬಸ್ರೂರು ಹಾಗೂ ಬಿದ್ಕಲ್‌ಕಟ್ಟೆ ಭಾಗದಲ್ಲಿ ನೂತನ ಆರೋಗ್ಯ ಕೇಂದ್ರಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ.

ಕಟ್ಟಡಗಳನ್ನು ಈಗಾಗಲೇ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ವೈದ್ಯಕೀಯ ಸೇವೆ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಗ್ರಾಮೀಣ, ನಗರ ಪ್ರದೇಶಗಳ ಜನರಿಗೆ ಮನೆ ಸಮೀಪದಲ್ಲೇ ಗುಣ ಮಟ್ಟದ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವುದು ಆಯುಷ್ಮಾನ್‌ ಆರೋಗ್ಯ ಕೇಂದ್ರ ಗಳ ಪ್ರಮುಖ ಉದ್ದೇಶ.

ರೋಗಗಳ ತಡೆಗಟ್ಟುವಿಕೆ, ಆರಂಭಿಕ ಹಂತದಲ್ಲೇ ರೋಗ ಪತ್ತೆ, ತಾಯಿ, ಮಕ್ಕಳ ಆರೋಗ್ಯ, ಆರೋಗ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ವಿವಿಧ ಆರೋಗ್ಯ ಸೇವೆಗಳನ್ನು ಇಲ್ಲಿ ಒದಗಿಸಲಾಗುತ್ತದೆ.

ಆಯುಷ್ಮಾನ್‌ ಆರೋಗ್ಯ ಕೇಂದ್ರಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದ್ದು, ಕೇಂದ್ರ ಸರಕಾರದ ಆಯುಷ್ಮಾನ್‌ ಭಾರತ್‌ ಯೋಜನೆಯ ಸಹಯೋಗ ದೊಂದಿಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದೆ.

4 ಕೇಂದ್ರಗಳ ಉದ್ಘಾಟನೆ ಇನ್ನು ಕೆಲವೇ ದಿನಗಳಲ್ಲಿ ದಿನಾಂಕ ಅಂತಿಮಗೊಳ್ಳುವ ನಿರೀಕ್ಷೆಯಿದೆ. ಹೊಸಂಗಡಿ, ಸೇನಾಪುರ ಭಾಗದಲ್ಲಿ ಸೇರಿದಂತೆ ಇನ್ನೂ ನಾಲ್ಕು ಕಡೆ ನೂತನ ಆರೋಗ್ಯ ಕೇಂದ್ರಗಳ ಕಟ್ಟಡ ಕಾಮ ಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ಪೂರ್ಣ ಗೊಂಡ ಬಳಿಕ ಸ್ಥಳೀಯರಿಗೆ ಸಮೀಪದಲ್ಲೇ ಆರೋಗ್ಯ ಸೇವೆ ಲಭ್ಯವಾಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಆಯುಷ್ಮಾನ್‌ ಕೇಂದ್ರ?

ಇದು ಅಲೋಪತಿ ಚಿಕಿತ್ಸೆ ಸೇರಿದಂತೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ನೀಡುವ ಕೇಂದ್ರ. ಇದು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೌಲ್ಯವರ್ಧಿತ ರೂಪ. ಅದನ್ನೇ ಮೇಲ್ದರ್ಜೆಗೇರಿಸಿ ರೂಪಿಸಿದ ವ್ಯವಸ್ಥೆ. ಪ್ರಾಥಮಿಕ ಆರೋಗ್ಯದಲ್ಲಿ ರೋಗ ಬಂದಾಗ ಚಿಕಿತ್ಸೆ ನೀಡುವ ವ್ಯವಸ್ಥೆ ಇತ್ತು. ಅಲ್ಲಿ ವೈದ್ಯಾಧಿಕಾರಿಗಳಿದ್ದರು. ಆಯುಷ್ಮಾನ್‌ ಕೇಂದ್ರದಲ್ಲಿ ರೋಗ ಬರದಂತೆ ತಡೆಯುವ ಕ್ರಮಗಳಿಗೆ ಹೆಚ್ಚು ಒತ್ತು. ಇಲ್ಲಿ ಕಮ್ಯುನಿಟಿ ಹೆಲ್ತ್ ಆಫೀಸರ್‌(CHO), ನರ್ಸ್‌ ಅಥವಾ ಎಂ.ಬಿ.ಬಿ.ಎಸ್‌. ವೈದ್ಯರು ಇರುತ್ತಾರೆ. ಉಡುಪಿ ಜಿಲ್ಲೆಯಲ್ಲಿ 249 ಕೇಂದ್ರಗಳಿವೆ, ಕುಂದಾಪುರ ಮತ್ತು ಬೈಂದೂರಿನಲ್ಲಿ ಈಗಾಗಲೇ 87 ಕೇಂದ್ರಗಳಿವೆ.

ಏನೇನು ಸೌಲಭ್ಯ?

ಅಸಾಂಕ್ರಾಮಿಕ ರೋಗಗಳ ತಪಾಸಣೆ, ಮಧುಮೇಹ, ರಕ್ತದೊತ್ತಡ, ಮಹಿಳೆಯರಲ್ಲಿ ವಿವಿಧ ಮಾದರಿಯ ಕ್ಯಾನ್ಸರ್‌ ಆರಂಭದಲ್ಲೇ ಪತ್ತೆಗೆ ತಪಾಸಣೆ. ಗರ್ಭಿಣಿಯರ ತಪಾಸಣೆ, ಹೆರಿಗೆ ಪೂರ್ವ ಮತ್ತು ನಂತರದ ಆರೈಕೆ, ಹಾಗೂ ಮಕ್ಕಳಿಗೆ ಲಸಿಕೆ ನೀಡುವ ಸೇವೆಗಳು ಲಭ್ಯ. ಇಲ್ಲಿನ ಸಿಬಂದಿ ವೀಡಿಯೊ ಕರೆ ಮೂಲಕ ಜಿಲ್ಲಾ ಅಥವಾ ದೊಡ್ಡ ಆಸ್ಪತ್ರೆಯ ತಜ್ಞ ವೈದ್ಯರೊಂದಿಗೆ ರೋಗಿಗಳನ್ನು ಸಂಪರ್ಕಿಸಿ ಉಚಿತ ಸಲಹೆ ಕೊಡಿಸುತ್ತಾರೆ. ಕೇವಲ ರೋಗ ಬಂದಾಗ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ, ಆರೋಗ್ಯವಾಗಿರಲು ಯೋಗ ತರಬೇತಿ ಮತ್ತು ಉತ್ತಮ ಆಹಾರ ಪದ್ಧತಿಯ ಬಗ್ಗೆ ಜಾಗೃತಿ.

ಉದ್ಘಾಟನೆಗೆ ಕೇಂದ್ರಗಳು ಸಜ್ಜು

ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಒಟ್ಟು ನಾಲ್ಕು ಆಯುಷ್ಮಾನ್‌ ಆರೋಗ್ಯ ಕೇಂದ್ರಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಕಟ್ಟಡಗಳನ್ನು ಇಲಾಖೆಗೆ ಹಸ್ತಾಂತರಿಸಲಾಗಿದೆ. ಸದ್ಯವೇ ನಾಲ್ಕೂ ಕೇಂದ್ರಗಳ ಉದ್ಘಾಟನೆ ನಡೆಯಲಿದೆ.

-ಡಾ| ಬಸವರಾಜ ಹುಬ್ಬಳ್ಳಿ, ಜಿಲ್ಲಾ ಆರೋಗ್ಯಾಧಿಕಾರಿಗಳು, ಉಡುಪಿ

ಆದಷ್ಟು ಶೀಘ್ರ ಸೇವೆ ಲಭ್ಯವಾಗಲಿ

ಹೇರೂರು ಆಯುಷ್ಮಾನ್‌ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಸಂಬಂಧಪಟ್ಟ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಶೀಘ್ರ ಕಟ್ಟಡವನ್ನು ಉದ್ಘಾಟಿಸಿ, ಆರೋಗ್ಯ ಸೇವೆಗಳ ಲಭ್ಯತೆಗೆ ಅನುಕೂಲ ಮಾಡಿಕೊಡಬೇಕು. ಇದರಿಂದ ಹೇರೂರು ಸೇರಿದಂತೆ ಸುತ್ತಮುತ್ತಲಿನ ಜನರಿಗೆ ಸ್ಥಳೀಯವಾಗಿಯೇ ಆರೋಗ್ಯ ಸೇವೆ ಪಡೆಯಲು ಅನುಕೂಲವಾಗಲಿದೆ. *ಶ್ರೀನಿವಾಸ ಪೂಜಾರಿ, ಮಾಜಿ ಅಧ್ಯಕ್ಷರು, ಹೇರೂರು ಗ್ರಾ.ಪಂ.

Dailyhunt
Disclaimer: This content has not been generated, created or edited by Dailyhunt. Publisher: Udayavani