ಕುಂದಾಪುರ: ಕಳೆದ ಕೆಲವು ದಿನಗಳಿಂದ ಮಲ್ಪೆಯಿಂದ ಗಂಗೊಳ್ಳಿ, ಮರವಂತೆಯ ಅರಬ್ಬಿ ಸಮುದ್ರದಲ್ಲಿ ಬೋಟುಗಳ ಅವಘಡ ಪ್ರಕರಣ ಹೆಚ್ಚುತ್ತಿದ್ದು, ಮೀನುಗಾರ ವಲಯದಲ್ಲಿ ಆತಂಕ ಮೂಡಿಸಿದೆ. ಕಳೆದ 15 ದಿನಗಳಲ್ಲಿ ಮಲ್ಪೆ, ಗಂಗೊಳ್ಳಿ, ಮರವಂತೆ ಭಾಗದಲ್ಲಿ 7 ಬೋಟು - ದೋಣಿಗಳ ಅವಘಡ ಸಂಭವಿಸಿದೆ.
ಮೂವರು ಮೀನುಗಾರರು ಪ್ರಾಣ ಕಳೆದುಕೊಂಡಿದ್ದಾರೆ. ಸಮುದ್ರದಲ್ಲಿ ನೀರಿನ ವೇಗ, ತೀವ್ರತೆ ಜಾಸ್ತಿಯಿದ್ದು, ಇದು ಎಲ್ಲ ಕಡೆಗಳಲ್ಲಿ ಬೋಟು, ದೋಣಿಗಳಿಗೆ ಸಂಕಷ್ಟ ಉಂಟು ಮಾಡುತ್ತಿದೆ.
ಮೀನುಗಾರಿಕೆಗೆ ತೆರಳುವಾಗ ಪ್ರತಿಯೊಬ್ಬ ಮೀನುಗಾರ ಕೂಡ ಸುರಕ್ಷತಾ ದೃಷ್ಟಿಯಿಂದ ಲೈಫ್ ಜಾಕೆಟ್ ಧರಿಸಬೇಕು ಅನ್ನುವ ನಿಯಮವಿದ್ದರೂ, ಅದು ಸರಿಯಾಗಿ ಪಾಲನೆಯಾಗುತ್ತಿಲ್ಲ. ಈಗ ಈ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಬೇಕು ಅನ್ನುವ ಕೂಗು ಬಲವಾಗಿ ಕೇಳಿ ಬರುತ್ತಿದೆ.
ಯಾಕೆ ಅವಘಡ ಹೆಚ್ಚಳ?
ಅಲೆಗಳ ಅಬ್ಬರ ಈಗ ಎಂದಿಗಿಂತ ಜಾಸ್ತಿಯಿದೆ. ಸಮುದ್ರದ ನೀರಿನ ವೇಗ, ತೀವ್ರತೆಯೂ ಜಾಸ್ತಿಯಿದೆ. ಗಾಳಿಯಬ್ಬರವೂ ಜೋರಿದೆ. ಇದರಿಂದ ಬೋಟುಗಳು, ದೋಣಿಗಳು ಮೀನುಗಾರಿಕೆಗೆ ತೆರಳಿದಾಗ ಅಲೆಗಳು ಬೋಟುಗಳ ಮೇಲೆ ಬರುತ್ತವೆ. ಆ ವೇಳೆ ಬೋಟಿನ ಫೈಬರ್ ಗಟ್ಟಿಯಾಗಿದ್ದರೆ ಸಮಸ್ಯೆ ಆಗುವುದಿಲ್ಲ. ಆದರೆ ಫೈಬರ್ ವೀಕ್ ಆಗಿ, ಮುರಿದರೆ, ನೀರು ಒಳಗೆ ಬರುತ್ತದೆ. ಅದು ಎಂಜಿನ್ ಒಳಗೆ ಬಂದರೆ ಸ್ತಬ್ಧಗೊಳ್ಳುತ್ತದೆ. ಆ ಬಳಿಕ ಏನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಗಂಗೊಳ್ಳಿಯ ಮೀನುಗಾರ ಮುಖಂಡರಾದ ರಮೇಶ್ ಕುಂದರ್.
ಹೂಳು, ಅಳಿವೆ ಬಾಗಿಲು ಅಪಾಯ
ಅಲೆಗಳ ಅಬ್ಬರ, ಏಕಾಏಕಿ ಹವಾಮಾನದಲ್ಲಿ ಏರುಪೇರು, ಬೋಟುಗಳಲ್ಲಿ ತಾಂತ್ರಿಕ ವೈಫಲ್ಯ, ಮೀನುಗಾರಿಕೆ ಬಂದರು ಪ್ರದೇಶಗಳಲ್ಲಿ ತುಂಬಿರುವ ಹೂಳು ಹಾಗೂ ಮೀನುಗಾರಿಕೆ ಬಂದರು ಪ್ರವೇಶಿಸುವ ಅಳಿವೆ ಬಾಗಿಲುಗಳು, ಬ್ರೇಕ್ ವಾಟರ್ ವಿಸ್ತರಣೆಯಾಗದೆ ಇರುವ ಕಾರಣದಿಂದಲೂ ಅನೇಕ ಬೋಟು, ದೋಣಿಗಳ ಅವಘಡ ಸಂಭವಿಸಿವೆ. ಕರಾವಳಿಯ ಮಂಗಳೂರು, ಮಲ್ಪೆ, ಗಂಗೊಳ್ಳಿ, ಹೆಜಮಾಡಿ, ಕೊಡೇರಿ, ಅಳ್ವೆಗದ್ದೆ, ಕಾರವಾರ, ಭಟ್ಕಳ, ಹೊನ್ನಾವರ ಸಹಿತ ಬಹುತೇಕ ಎಲ್ಲ ಮೀನುಗಾರಿಕೆ ಬಂದರುಗಳಲ್ಲಿಯೂ ಕೆಲವು ವರ್ಷಗಳಿಂದ ಸರಿಯಾಗಿ ಡ್ರೆಜ್ಜಿಂಗ್ ನಡೆದಿಲ್ಲ. ಈಗಲಾದರೂ ಡ್ರೆಜ್ಜಿಂಗ್‌ಗೆ ಸರಕಾರ ಮುಂದಾಗಲಿ ಎನ್ನುವುದಾಗಿ ಮೀನುಗಾರರು ಆಗ್ರಹಿಸಿದ್ದಾರೆ.
ಮೀನುಗಾರರು ಲೈಫ್ ಜಾಕೆಟ್ ಧರಿಸಲಿ
ಬಂದರು ಅಥವಾ ಮೀನು ಇಳಿಸುವ ತಂಗುದಾಣಗಳಿಗೆ ಬರುವ ಅಳಿವೆ ಬಾಗಿಲು ಪ್ರದೇಶಗಳಲ್ಲಿ ನೀರಿನ ಸೆಳೆತ ಜಾಸ್ತಿ ಇರುತ್ತದೆ. ನೀರಿನ ಒತ್ತಡಕ್ಕೆ ಬೋಟು, ದೋಣಿಗಳು ಮಗುಚಿ ಬಿದ್ದು, ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇದೆ. ಅದಕ್ಕೆ ಮುಂಜಾಗ್ರತಾ ಕ್ರಮವಾಗಿ ಲೈಫ್ ಜಾಕೆಟ್ ಧರಿಸಿ, ಬೋಟು ಅಥವಾ ದೋಣಿಗಳಲ್ಲಿ ಇನ್ನಿತರ ಜೀವ ರಕ್ಷಕ ಸಾಧನಗಳಿದ್ದರೆ ಆಪತ್ತು ಎದುರಾದಾಗ ಪಾರಾಗಬಹುದು. ಆದರೆ ಈಗ ಕೊಡುವ ಲೈಫ್ ಜಾಕೆಟ್ ಬಿಗಿಯಾಗಿ ಹಾಕುವುದರಿಂದ ಕೆಲಸ ಮಾಡಲು ಕಷ್ಟ. ಉಸಿರಾಟದ ಸಮಸ್ಯೆಯೂ ಆಗುತ್ತದೆ. ಅದಕ್ಕೆ ಸರಿಯಾದಂತಹ ಜಾಕೆಟ್ ವಿನ್ಯಾಸ ಮಾಡಿದರೆ ಅನುಕೂಲ ಅನ್ನುವುದು ಮೀನುಗಾರರ ಅಭಿಪ್ರಾಯ.
ಏಳು ಅವಘಡಗಳು
ಆ. 27: ಮರವಂತೆ ಕಡಲಿನಲ್ಲಿ ಜೋರಾಗಿ ಗಾಳಿ ಬೀಸಿ ದೋಣಿಯು ನೀರಿನಲ್ಲಿ ತೇಲಾಡಿದ ಪರಿಣಾಮ ಮೀನುಗಾರರೊಬ್ಬರು ಆಯತಪ್ಪಿ ದೋಣಿಯಿಂದ ಸಮುದ್ರಕ್ಕೆ ಬಿದ್ದು, ಸಾವನ್ನಪ್ಪಿದ್ದಾರೆ.
ಆ. 19: ಮರವಂತೆಯ ಬಂದರು ಸಮೀಪದ ಅರಬ್ಬಿ ಸಮುದ್ರದಲ್ಲಿ ದೋಣಿಯು ನೀರಿನಲ್ಲಿ ತೇಲಾಡಿ, ದೋಣಿಯಲ್ಲಿದ್ದ ಮೀನುಗಾರ ಸಾವನ್ನಪ್ಪಿದ್ದರು.
ಆ. 14: ಮಲ್ಪೆ ಸಮೀಪದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮೀನುಗಾರ ಕಾರ್ಮಿಕ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದರು.
ಆ. 26: ಗಂಗೊಳ್ಳಿಯ ಬಂದರಿನಿಂದ 3 ನಾಟಿಕಲ್ ಮೈಲ್ ದೂರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ನೀರು ಒಳಬಂದು ಬೋಟು ಸಂಪೂರ್ಣ ಮುಳುಗಡೆಯಾಗಿ, 27 ಮೀನುಗಾರರ ರಕ್ಷಣೆ.
ಆ. 21: ಗಂಗೊಳ್ಳಿ ಬಂದರು ಸಮೀಪ ದೋಣಿಯ ಎಂಜಿನ್ ಕೆಟ್ಟು ಹೋಗಿ ಅತಂತ್ರರಾಗಿದ್ದ ನಾಲ್ವರು ಮೀನುಗಾರರನ್ನು ರಕ್ಷಿಸಲಾಗಿತ್ತು.
ಆ. 16: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಆಳಸಮುದ್ರ ಬೋಟ್ ಹಂಗಾರಕಟ್ಟೆ ಸಮೀಪ ಅರಬ್ಬಿ ಸಮುದ್ರದಲ್ಲಿ ಮುಳುಗಿ ಅದರಲ್ಲಿದ್ದ 7 ಮಂದಿಯ ರಕ್ಷಣೆ.
ಆ. 14: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟ ಬೋಟಿನ ಒಳಗೆ ನೀರು ನುಗ್ಗಿ ಮುಳುಗಿದೆ. ಬೋಟಿನಲ್ಲಿದ್ದ 6 ಮಂದಿ ಮೀನುಗಾರರ ರಕ್ಷಣೆ.
ಸುರಕ್ಷತೆಗೆ ಆದ್ಯತೆ ನೀಡಿ
ಮೀನುಗಾರಿಕೆ ಮೀನುಗಾರರ ಬದುಕು ಆದರೂ, ಜೀವ ಮುಖ್ಯ. ಆದಷ್ಟು ಮೀನುಗಾರರು ಸುರಕ್ಷತೆಗೆ ಆದ್ಯತೆ ನೀಡಬೇಕು. ಲೈಫ್ ಜಾಕೆಟ್ ಎಲ್ಲರೂ ಧರಿಸಿದರೆ ಉತ್ತಮ. ಮೀನುಗಾರಿಕೆ ಇಲಾಖೆಯಿಂದಲೂ ಕೊಡಲಾಗುತ್ತಿದೆ. ಕೊಡದಿದ್ದರೂ, ಬೋಟುಗಳ ಮಾಲೀಕರು ಎಲ್ಲರಿಗೂ ಜಾಕೆಟ್ ಕೊಡಿಸಲಿ. ಸುರಕ್ಷತೆ ಮುಖ್ಯ. ಈ ಬಗ್ಗೆ ಕರಾವಳಿ ಕಾವಲು ಪಡೆಯಿಂದ ನಿರಂತರ ಅರಿವು ಮೂಡಿಸುವ ಕಾರ್ಯ ಆಗುತ್ತಿದೆ. ಈ ಬಾರಿ ಮಳೆ ವಿಳಂಬದಿಂದ ಜೂನ್‌ನಲ್ಲಿ ಆಗಬೇಕಾದ ಕಡಲ ಅಲೆಗಳ ಏರುಪೇರು ಈಗ ಆಗುತ್ತಿರಬಹುದು. ಜುಲೈ-ಆಗಸ್ಟ್‌ನಲ್ಲಿ ಒಳ್ಳೆಯ ಮಳೆಯಾಗಿದೆ. -ಹರಿರಾಮ್ ಶಂಕರ್, ಕರಾವಳಿ ಕಾವಲು ಪಡೆ ಎಸ್ಪಿ, ಉಡುಪಿ

