ಶಿರ್ವ: ಬೆಳ್ಳೆ ಮತ್ತು ಶಿರ್ವ ಗ್ರಾ.ಪಂ. ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರ ಆದೇಶದಂತೆ ಗ್ರಾ.ಪಂ. ವ್ಯಾಪ್ತಿಯಲ್ಲಿ 5 ದಿನಗಳ ಕಾಲ ಲಾಕ್‌ಡೌನ್ ವಿಧಿಸಲಾಗಿದ್ದು ಬುಧವಾರ ವ್ಯಾಪಾರ,ವ್ಯವಹಾರ ಸಂಪೂರ್ಣ ಬಂದ್ ಆಗಿತ್ತು.
ಮೆಡಿಕಲ್,ಆಸ್ಪತ್ರೆ, ಪೆಟ್ರೋಲ್ ಪಂಪ್ ಹೊರತುಪಡಿಸಿ ಬ್ಯಾಂಕ್,ಪಡಿತರ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಕಚೇರಿ,ವ್ಯಾಪಾರ ವಹಿವಾಟುಗಳಿಗೆ ನಿಷೇಧ ಹೇರಲಾಗಿತ್ತು. ನಿಗದಿತ ವೇಳೆಯಲ್ಲಿ ಹಾಲು ವಿತರಣೆ ಮತ್ತು ಹಾಲು ಡೈರಿಗೆ ಹಾಕುವುದು ಹಾಗೂ ಮಲ್ಲಿಗೆ ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿತ್ತು.
ಬುಧವಾರ ಮುಂಜಾನೆಯಿಂದಲೇ ಆಯಕಟ್ಟಿನ ಪ್ರದೇಶದಲ್ಲಿ ಪೊಲೀಸರು ಬಿಗು ತಪಾಸಣೆ ನಡೆಸುತ್ತಿದ್ದು, ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ತಡೆದು ಕೇಸು ದಾಖಲಿಸುತ್ತಿದ್ದರು.

