ಗಾಲೆ: ಆ.15ರ ಶನಿವಾರದಿಂದ ಆರಂಭಗೊಳ್ಳಲಿರುವ ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಭರ್ಜರಿ ಸಿದ್ಧತೆ ನಡೆಸಿದೆ. ಸರಣಿಯ ಆರಂಭಿಕ ಪಂದ್ಯ ಗಾಲೆಯಲ್ಲಿ ನಡೆಯಲಿರುವುದರಿಂದ ಗಾಲೆಯಲ್ಲಿ ಭಾರತೀಯ ತಂಡದ ಆಟಗಾರರು ನೆಟ್ ಅಭ್ಯಾಸ ನಡೆಸಿದ್ದಾರೆ.
ಮುಖ್ಯವಾಗಿ ಕನ್ನಡಿಗ, ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಕೆ.ಎಲ್.ರಾಹುಲ್, ದೇವದತ್ ಪಡಿಕ್ಕಲ್ ಮತ್ತು ಧ್ರುವ್ ಜುರೆಲ್ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದು ಗಮನ ಸೆಳೆದಿದೆ.
ಲಂಕಾ ವಿರುದ್ಧದ ಟೆಸ್ಟ್ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (ಡಬ್ಲ್ಯುಟಿಸಿ) ಭಾಗವಾಗಿರುವುದರಿಂದ ಡಬ್ಲ್ಯುಟಿಸಿ ಫೈನಲ್‌ಗೇರಲು ಭಾರತ ಈ ಸರಣಿಯಲ್ಲಿ ಗೆಲ್ಲಲೇಬೇಕಿದೆ. ಇಲ್ಲದಿದ್ದರೆ ಅಕ್ಟೋಬರ್-ನವೆಂಬರ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ (2 ಟೆಸ್ಟ್) ಮತ್ತು ಮುಂದಿನ ವರ್ಷ ಜನವರಿಯಲ್ಲಿ ಆಸ್ಟ್ರೇಲಿಯ ವಿರುದ್ಧ (5 ಟೆಸ್ಟ್) ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಭಾರತ ಸಿಲುಕಲಿದೆ. ಏಕೆಂದರೆ ಡಬ್ಲ್ಯುಟಿಸಿ ಫೈನಲ್‌ಗೇರಲು ಭಾರತ ತನ್ನ ಮುಂದಿರುವ 9 ಟೆಸ್ಟ್ ಪಂದ್ಯಗಳಲ್ಲಿ ಕನಿಷ್ಠ 7-8ರಲ್ಲಿ ಗೆಲ್ಲುವ ಅನಿವಾರ್ಯತೆಯಿದೆ.
ಚಿತ್ರ/ವೀಡಿಯೋ ವೈರಲ್
ಆರಂಭಿಕ ಟೆಸ್ಟ್‌ಗಾಗಿ ಭಾರತೀಯ ಆಟಗಾರರು ಗಾಲೆಯಲ್ಲಿ ಅಭ್ಯಾಸ ನಡೆಸಿರುವ ಚಿತ್ರ, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಹುಲ್, ಜುರೆಲ್, ಪಡಿಕ್ಕಲ್ ನೆಟ್ ಅಭ್ಯಾಸ ನಡೆಸಿರುವ ಚಿತ್ರಗಳು ಹೆಚ್ಚು ಓಡಾಡುತ್ತಿವೆ. ಗುರುವಾರ ತಂಡದ ಅಭ್ಯಾಸದಲ್ಲಿ ನಾಯಕ ಶುಭ್ ಮನ್ ಗಿಲ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಸರ್ಫರಾಜ್ ಖಾನ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಸೇರಿದಂತೆ ಬಹುತೇಕ ಎಲ್ಲ ಆಟಗಾರರು ಕಣಕ್ಕಿಳಿದಿದ್ದರು.
ಮೂವರು ಎಡಗೈ ಸ್ಪಿನ್ನರ್‌ಗಳೊಂದಿಗೆ ಭಾರತ ಕಣಕ್ಕೆ?
ಗಾಲೆಯದ್ದು ಸ್ಪಿನ್ ಬೌಲಿಂಗ್‌ಗೆ ನೆರವು ನೀಡುವ ಪಿಚ್ ಆಗಿರುವುದರಿಂದ ಮೂವರು ಎಡಗೈ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲು ಭಾರತ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ. ಲಂಕಾ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಸಲುವಾಗಿ ಚೈನಾಮನ್ ಕುಲದೀಪ್ ಯಾದವ್, ಆಲ್‌ರೌಂಡರ್ ರವೀಂದ್ರ ಜಡೇಜ ಮತ್ತು ಯುವ ಆಟಗಾರ ಮಾನವ್ ಸುತಾರ್‌ರನ್ನು ಅಸ್ತ್ರವಾಗಿ ಬಳಸಲು ಬೌಲಿಂಗ್ ಕೋಚ್ ಮಾರ್ನ್ ಮಾರ್ಕೆಲ್ ಯೋಚಿಸಿದ್ದಾರೆ ಎಂದು ವರದಿ ಹೇಳಿದೆ.
ಸರಣಿ ಗೆದ್ದರೂ ಸೋತರೂ ಕೋಚ್ ಗಂಭೀರ್ ಸೇಫ್?
ಶ್ರೀಲಂಕಾ ಸರಣಿಯಲ್ಲಿ ಭಾರತ ಗೆದ್ದರೂ ಸೋತರೂ ಟೆಸ್ಟ್ ಕೋಚ್ ಆಗಿ ಗೌತಮ್ ಗಂಭೀರ್ ಅವರೇ ಮುಂದುವರಿಯುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. ಟಿ20 ಮತ್ತು ಏಕದಿನ ಮಾದರಿಯಲ್ಲಿ ಗಂಭೀರ್‌ರ ಮುಖ್ಯ ಕೋಚ್ ಸ್ಥಾನಕ್ಕೆ ಕಂಟಕವಿದ್ದರೂ ಟೆಸ್ಟ್ ಮಾದರಿಗೆ ಗಂಭೀರ್ ಅವರನ್ನೇ ಕೋಚ್ ಆಗಿ ಮುಂದುವರಿಸಲು ಬಿಸಿಸಿಐ ಒಲವು ತೋರಿದೆ ಎನ್ನಲಾಗುತ್ತಿದೆ.
ರಾಹುಲ್ ಮೇಲೆ ಹೆಚ್ಚಿನ ನಿರೀಕ್ಷೆ: ಕೋಚ್ ಮಾರ್ಕೆಲ್
ಈ ಬಾರಿ ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಭಾರತ ತಂಡದಲ್ಲಿ, ಲಂಕಾ ನೆಲದಲ್ಲಿ ಆಡಿರುವ ಅನುಭವ ಕೇವಲ ಮೂವರು ಆಟಗಾರರಿಗಿದೆ. ಅವರೆಂದರೆ ಜಡೇಜ, ಕುಲದೀಪ್ ಮತ್ತು ರಾಹುಲ್. ಇವರಲ್ಲಿ 2017ರಲ್ಲಿ ಲಂಕಾಕ್ಕೆ ಭಾರತ ಪ್ರವಾಸ ಕೈಗೊಂಡಿದ್ದಾಗಿನಿಂದಲೂ ಉಳಿದಿರುವ ಏಕಮಾತ್ರ ಬ್ಯಾಟರ್ ಎಂದರೆ ಅದು ಕೆ.ಎಲ್.ರಾಹುಲ್. ಹೀಗಾಗಿ ಅವರ ಅನುಭವ ತಂಡಕ್ಕೆ ಈ ಬಾರಿ ಮಹತ್ವದ್ದಾಗಿದೆ ಎಂದು ಬೌಲಿಂಗ್ ಕೋಚ್ ಮಾರ್ನ್ ಮಾರ್ಕೆಲ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

