'ಸಮಾಜ ಕಟ್ಟೋದಿಕ್ಕೆ ತಣಿದ ಹೊಟ್ಟೆ, ತಲೆಮೇಲೊಂದು ಸೂರು ಬೇಕಮ್ಮಾ' ಮಾತಿನ ಮಧ್ಯೆ ಹಿರಿಯರೊಬ್ಬರು ಅಂದರು. ಅದು ಅಪ್ಪಟ ಸತ್ಯ. ಇದನ್ನು ಹಿಂಬಾಲಿಸಿ ಬಂದ ಆಲೋಚನಾ ಲಹರಿ ಬದುಕಿನ ಬಗೆಗಿನ ಸಾರ್ವಕಾಲಿಕ ವ್ಯಾಖ್ಯಾನವನ್ನೇ ಪ್ರಶ್ನಿಸತೊಡಗಿತ್ತು. ಒಂದೊಂದು ಸಲ ನಾವು ಇಷ್ಟೆಲ್ಲಾ ಮಾಡುವುದು ನಿಜವಾಗಲೂ ಮೂರು ಹೊತ್ತು ಊಟ ಮತ್ತು ಗೇಣುದ್ದ ಬಟ್ಟೆಗಾಗಿಯಾ?
ಅನಿಸಿ ಬಿಡುತ್ತದೆ. ಗುರಿ ಅಷ್ಟು ಸರಳವಾಗಿದ್ದದ್ದೇ ಆದರೆ ಹಲವು ಬದುಕು ಅರ್ಥಹೀನವಾಗಿ ಬಿಡುವುದಿಲ್ಲವೇ?
ಆರೋಗ್ಯವಂತರು ಹಣವನ್ನು ಹಿಂಬಾಲಿಸುತ್ತಾರೆ, ಹಣ ಇದ್ದವರು ಆರೋಗ್ಯವೇ ಭಾಗ್ಯ ಅನ್ನುತ್ತಾರೆ. ಖ್ಯಾತ ನಾಮರು ಶಾಂತಿ, ಏಕಾಂತ ಬಯಸಿದರೆ, ಹಳ್ಳಿಯ ಮೂಲೆಯಲ್ಲೊಬ್ಬ ಖ್ಯಾತಿಗೆ ಚಡಪಡಿಸುತ್ತಾನೆ. ಅದೇ ಮನೆಯ ಅಡುಗೆ ಕೋಣೆಯಿಂದ "ಸ್ವಾತಂತ್ರ್ಯ ಇಲ್ಲದ ಮೇಲೆ ಅದೆಂಥ ಬದುಕು?' ಅಂತ ತಾಯಿ ಪ್ರಶ್ನಿಸುತ್ತಾಳೆ.
ಹಾಗಾದರೆ ಇಲ್ಲದಿರುವುದನ್ನು ಪಡೆಯುವ ತುಡಿತವೇ ಬದುಕೇ? ಪಡೆದುಕೊಂಡ ನೂರಕ್ಕಿಂತ ಜಾಸ್ತಿ ಕಳೆದುಕೊಂಡ ಮೂರರ ನೆನಪಾಗುತ್ತದೆ. ಇಂದಿನ ಸೌಕರ್ಯಗಳ ನಡುವೆ ನಾಳಿನ ಅಭಧ್ರತೆ ಕಾಡುತ್ತದೆ. ಬಯಸಿದ್ದು ಕೈ ಹಿಡಿದಾಗ ಕಳೆದುಕೊಳ್ಳುವ ಆತಂಕ ಕಾಡುತ್ತದೆ. ಬದುಕನ್ನು ಸವಿಯಲಾರಂಭಿಸಿದಾಗ ಸಾವಿನ ಭಯ ಹಿಂಬಾಲಿಸುತ್ತದೆ. ಈ ಅವ್ಯವಸ್ಥೆಗಳ ನಡುವೆ ಬದುಕಿನ ಆಳ ಅರಿಯುವುದಾದರೂ ಹೇಗೆ?
"ದೇವರು ಇನ್ನೊಂದು ಜನ್ಮ ಅಂತ ಕೊಟ್ಟರೆ ಲತಾ ಮಂಗೇಶ್ಕರ್ ಆಗಿ ಹುಟ್ಟಲು ಬಯಸುವುದಿಲ್ಲ' ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಸಂದರ್ಶನವೊಂದರಲ್ಲಿ ಆಡಿದ ಮಾತು. "ನನ್ನ ಮೆದುಳು ವಿಚಾರಗಳ ಸಾಗರ. ನಾನು ದೂರುವಂತಿಲ್ಲ, ಆದರೆ ಜನರಿಗೆ ನನ್ನನ್ನು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಎಲ್ಲ ಇದ್ದರೂ ನಾನು ಒಬ್ಬಂಟಿ' ಜಗತ್ತಿನಲ್ಲೇ ಶ್ರೀಮಂತ, ಮೇಧಾವಿ ಅನಿಸಿಕೊಳ್ಳುವ ಇಲಾನ್ ಮಸ್ಕ್ ಅವರ ನುಡಿ.
ʼಪ್ರಧಾನಿಯಾದ ಮೇಲೆ ನನ್ನನ್ನು ಆತ್ಮೀಯವಾಗಿ ಏಕವಚನದಲ್ಲಿ ಕರೆಯುತ್ತಿದ್ದ ಗೆಳೆಯರನ್ನು ಕಳೆದುಕೊಂಡೆ' ಪ್ರಧಾನಿ ನರೇಂದ್ರ ಮೋದಿ ಅವರು ತೊಡಿಕೊಂಡ ದುಃಖ. ಹಾಗಾದರೆ ಖ್ಯಾತಿ, ಸಂಪತ್ತು, ಅಧಿಕಾರ ಎಲ್ಲವೂ ಬದುಕಿನ ಕೊಂಡಿಗಳೇ ಹೊರತು ವ್ಯಾಖ್ಯೆ ಅಲ್ಲ ?
ಬದುಕಲ್ಲಿ ಗುರಿಯೊಂದನ್ನು ಇಟ್ಟುಕೊಂಡು, ಸಂಪೂರ್ಣ ಶಕ್ತಿಯಿಂದ ಅದನ್ನು ತಲುಪಲು ಪ್ರಯತ್ನ ಪಟ್ಟು, ಒಂದಿಷ್ಟು ಸಮಯದ ಬಳಿಕ ಅ ಗುರಿಯನ್ನು ತಲುಪಿಯೇ ಬಿಟ್ಟೆ ಅಂದುಕೊಳ್ಳಿ ಅದರ ಬಳಿಕ ಮುಂದೇನು? ಸ್ವಲ್ಪ ಸಮಯ ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ. ಒಂದು ಹೊಸ ಗುರಿ ಹುಡುಕುವ ಚಡಪಡಿಕೆ, ಅದನ್ನು ತಲುಪಲು ಹೋರಾಟ. ಇದು ಎಂದೂ ಅಂತ್ಯ ಕಾಣದ ಚಕ್ರ. ಅದರಿಂದ ಹೊರ ಬಂದದ್ದೇ ಆದರೆ ಮತ್ತದೇ ಕಾಡುವ ಪ್ರಶ್ನೆ- ಮುಂದೇನು?
ಭವಿಷ್ಯ- ಇದು ಯಾರೂ ಕಂಡಿಲ್ಲದ, ಎಲ್ಲರೂ ಕಾಣಬಯಸುವ ಸತ್ಯ. ಭವಿಷ್ಯ ಕಂಡರೂ ನಿಯಂತ್ರಣಕ್ಕೆ ಸಿಗುವಂತಹದ್ದಲ್ಲ. ಆದರೂ ನಾಳೆಯ ಬಗ್ಗೆ ತಿಳಿಯುವ ಕುತೂಹಲ ಯಾರನ್ನೂ ಬಿಟ್ಟಿಲ್ಲ. ಒಂದೊಂದು ಬಾರಿ ನಾಳೆಯ ಬಗೆಗಿನ ಈ ಕುತೂಹಲ, ಭರವಸೆ, ನಂಬಿಕೆಗಳೇ ಜೀವನ ಅನಿಸುತ್ತದೆ. ನಾಳಿನ ಬದುಕು ಬರಡು ಅಂತ ತಿಳಿದವನಿಗೆ ಆ ಬದುಕು ಬೇಕೇ? ಅದೇ ವ್ಯಕ್ತಿ ಜೀವನ ಪೂರ್ತಿ ಬೆಳಕೇ ಕಂಡಿಲ್ಲದಿದ್ದರೂ ಕಿರಣವೊಂದನ್ನು ಕಾಣುವ ಭರವಸೆ. ಇದ್ದರೆ ನಾಲ್ಕು ಹೆಜ್ಜೆ ಜಾಸ್ತಿ ನಡೆದಾನು ಅಲ್ಲವೇ?
ಪೈಲೆಟ್ ಆಗಬೇಕೆಂದುಕೊಂಡಿದ್ದ ಅಬ್ದುಲ್ ಕಲಾಂ ಅವರ ಕನಸು ನುಚ್ಚುನೂರಾದಾಗ ಶಿವಾನಂದ ಸ್ವಾಮಿಯವರು ಬಂದು ʼನಿನಗೇನು ಸಿಗಬೇಕೆಂದು ಬರೆದಿತ್ತೋ ಅದು ನಿನ್ನ ದಾರಿ ಕಾಯುತ್ತಿದೆ, ಕಳೆದುಕೊಂಡಿದ್ದು ಎಂದೂ ನಿನ್ನದಾಗಿರಲೇ' ಇಲ್ಲ ಎಂದು ಸ್ಪೂರ್ತಿ ತುಂಬಿರದೇ ಇದ್ದಿದ್ದರೆ, ಕಲಾಂ ಅವರು ಹೊಸ ದಾರಿ ಹಿಡಿದು ಮುನ್ನುಗ್ಗದೇ ಇದ್ದಿದ್ದರೆ ಇಂದು ಅವರ ಹೆಸರು ಯಾರೂ ಗುರುತಿಸುತ್ತಿರಲಿಲ್ಲ.
ಕರ್ಮಣ್ಯೇವಾಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂರ್ಮಾ ತೇ ಸ ಸ್ತ್ವಕರ್ಮಣಿ ||
ಪರಿಶ್ರಮ ನಮ್ಮ ಕೈಯಲ್ಲಿದೆ. ಯಾವುದೋ ಕನಸು ಅಪೂರ್ಣವಾಗಿದೆ ಅಂದಾಕ್ಷಣ ಸೊಲೊಪ್ಪಿಕೊಳ್ಳುವುದರ ಬದಲು ತಪ್ಪನ್ನು ಹುಡುಕಿ ಇನ್ನೊಮ್ಮೆ ಪ್ರಯತ್ನಿಸಬಹುದಲ್ವೇ? ಯಾವ ಕ್ಷಣ ಯಾವ ದಾರಿಯಲ್ಲಿ ಯಾವ ಪ್ರತಿಫಲ ಎದುರು ನೋಡುತ್ತಿದೆಯೋ ತಿಳಿದವರು ಯಾರು?
ಬದುಕಲ್ಲಿ ಎಲ್ಲರ ಗುರಿಯೂ ಒಂದೇ - ಸಂತೋಷ. ಸಂತೋಷದ ಮೂಲ: ಪ್ರೀತಿ, ಸ್ವಾತಂತ್ರ್ಯ ಮತ್ತು ಸ್ಥಿರತೆ. ಅಂತಿಮವಾಗಿ ಎಲ್ಲರ ಹೋರಾಟ ಇದಕ್ಕಾಗಿಯೇ.
ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುವುದು ಕಷ್ಟ. ಮನುಷ್ಯ ನಿಸ್ವಾರ್ಥ ಕರ್ಮ ಮಾಡಬಲ್ಲವನಾಗಿದ್ದರೆ ಸ್ವರ್ಗ, ನರಕಗಳ ಪರಿಕಲ್ಪನೆಯೇ ಹುಟ್ಟುತ್ತಿರಲಿಲ್ಲ. ಮನುಷ್ಯ ಕೆಲಸ ಮಾಡುವುದು ಕೇವಲ ಮೂರು ಕಾರಣಗಳಿಂದ: ಭಯ, ಪ್ರೀತಿ ಅಥವಾ ಮಹತ್ವಾಕಾಂಕ್ಷೆ. ಇದೇ ಪ್ರಕೃತಿ.
ಹಾಗಂತ ಬದುಕನ್ನು ಯೋಚಿಸಿ ಬದುಕುವುದು, ನಿಯಂತ್ರಿಸುವುದು ಸಾದ್ಯವಿಲ್ಲ. ಬದುಕನ್ನು ಬದುಕಿಬಿಡಬೇಕು ಅಷ್ಟೆ. ಬದುಕೇ ಬದುಕುವುದನ್ನು ಕಲಿಸುತ್ತದೆ. ತಪ್ಪುಗಳನ್ನು ತಿದ್ದಿಕೊಂಡು, ಅದರಿಂದ ಕಲಿತು ಬೆಳೆಯುವುದು - ಬಾಳುವುದೇ ಬದುಕು.
ಗೆದ್ದಾಗ ನಕ್ಕು, ಸೋತಾಗ ಅತ್ತು ಹಗುರಾಗಿ ಮತ್ತೆ ಮುನ್ನುಗ್ಗುವುದೇ ಬದುಕು. ಎಲ್ಲರನ್ನು ಪ್ರೀತಿಸಿ ನಿಮ್ಮನ್ನು ಪ್ರೀತಿಸುವವರನ್ನು ಸಂತೋಷವಾಗಿಡುವುದೇ ಬದುಕು. ಬದುಕಿನ ವ್ಯಾಖ್ಯಾನಗಳನ್ನು ಹುಡುಕುವುದ ಬಿಟ್ಟು ಹೊಸ ವ್ಯಾಖ್ಯೆಯನ್ನು ಬರೆಯೋಣ. ನಮ್ಮ ಬದುಕನ್ನು ನಮ್ಮದೆ ಪರಿಭಾಷೆಯಲ್ಲಿ.
-ಅನನ್ಯಾ ಕನ್ನಡಗುಳಿ

