Dailyhunt
LSG vs RCB: ನಿರ್ಗಮನ ಬಾಗಿಲಲ್ಲಿ ಲಕ್ನೋ; ಆರ್ ಸಿಬಿಗೆ ಬೇಕಿದೆ ತುರ್ತು ಗೆಲುವು

LSG vs RCB: ನಿರ್ಗಮನ ಬಾಗಿಲಲ್ಲಿ ಲಕ್ನೋ; ಆರ್ ಸಿಬಿಗೆ ಬೇಕಿದೆ ತುರ್ತು ಗೆಲುವು

ಕ್ನೋ: ಪ್ಲೇ ಆಫ್ ಪ್ರವೇಶದ ಸಾಧ್ಯತೆಯನ್ನು ತೆರೆದಿರಿಸಿರುವ ಹಾಲಿ ಚಾಂಪಿಯನ್ ಆರ್ ಸಿಬಿ, ಇದನ್ನು ಸುಗಮಗೊಳಿಸಿಕೊಳ್ಳಲು ಒಂದು ತುರ್ತು ಗೆಲುವಿನ ನಿರೀಕ್ಷೆಯಲ್ಲಿದೆ. ಗುರುವಾರ, ಅಂಕಪಟ್ಟಿಯ ಕೊನೆಯ ಸ್ಥಾನಿಯಾಗಿರುವ ಲಕ್ನೋ ತಂಡವನ್ನು ಅವರದೇ ಅಂಗಳದಲ್ಲಿ ಎದುರಿಸಲಿದ್ದು, ಮರಳಿ ಬ್ಯಾಟಿಂಗ್ ಸರದಿಯನ್ನು ಗಟ್ಟಿಗೊಳಿಸಿ ಹೋರಾಟವನ್ನು ಸಂಘಟಿಸಬೇಕಿದೆ.

ಆದರೆ ಒತ್ತಡ ಇರುವುದು ಲಕ್ನೋ ಮೇಲೆ. ಅದು ಈಗಾಗಲೇ 9ರಲ್ಲಿ 7 ಪಂದ್ಯಗಳನ್ನು ಸೋತಿದೆ. ಇದರಲ್ಲಿ 6 ಸತತ ಸೋಲು. ಎ. 9ರಂದು ಕೆಕೆಆರ್ ವಿರುದ್ಧ ಗೆದ್ದ ಬಳಿಕ ಮತ್ತೆ ಸಂಭ್ರಮ ಆಚರಿಸಿಲ್ಲ. ಆರ್ ಸಿಭೀ ವಿರುದ್ಧವೂ ಮುಗ್ಗರಿಸಿದರೆ ಲಕ್ನೋ ನಿರ್ಗಮನ ಖಚಿತ.

ಇಲ್ಲಿ ಮೇಲುಗೈ ಸಾಧಿಸಿದರೆ ಪಾಟಿದಾರ್ ಪಡೆ 10ರಲ್ಲಿ 7 ಜಯ ಸಾಧಿಸಿದಂತಾಗುತ್ತದೆ. ಮುಂದಿನ ಸುತ್ತಿನ ಪ್ರವೇಶಕ್ಕೆ 8 ಗೆಲುವು ಅಗತ್ಯವಿರುವುದರಿಂದ ಆರ್ ಸಿಬಿ ಮಾರ್ಗ ಸುಗಮವಾಗಿಯೇ ಗೋಚರಿಸುತ್ತಿದೆ. ಆದರೆ ಅಗ್ರ 4 ಸ್ಥಾನಕ್ಕಾಗಿ 5ರಿಂದ 6 ತಂಡಗಳ ತೀವ್ರ ಸ್ಪರ್ಧೆ ಇರುವುದರಿಂದ ಬೇಗ ಬೇಗ ಜಯ ಒಲಿಸಿಕೊಳ್ಳುವುದು ಕ್ಷೇಮ.

ಇದು ಆರ್ ಸಿಬಿ - ಲಕ್ನೋ ನಡುವಿನ 2ನೇ ಸುತ್ತಿನ ಪಂದ್ಯ. ಚಿನ್ನಸ್ವಾಮಿಯಲ್ಲಿ ನಡೆದ ಮೊದಲ ಸುತ್ತಿನ ಮುಖಾಮುಖಿಯಲ್ಲಿ ಬೆಂಗಳೂರು ಟೀಮ್ 5 ವಿಕೆಟ್ ಅಂತರದಿಂದ ಜಯಿಸಿತ್ತು. ಲಕ್ನೋ ತನ್ನ ತವರಲ್ಲಿ ಸೇಡು ತೀರಿಸಿಕೊಂಡೀತೇ? ಕುತೂಹಲವಂತೂ ಇದ್ದೇ ಇದೆ.

ಅಪರೂಪದ ಬ್ಯಾಟಿಂಗ್ ವೈಫಲ್ಯ:

ಸರಿಯಾಗಿ ಒಂದು ವಾರ ಹಿಂದೆ ನಡೆದ ಗುಜರಾತ್ ಎದುರಿನ ಅಹ್ಮದಾಬಾದ್ ಪಂದ್ಯವನ್ನು ಆರ್ ಸಿಬಿ ಬ್ಯಾಟಿಂಗ್ ವೈಫಲ್ಯದಿಂದಾಗಿ 4 ವಿಕೆಟ್ ಗಳಿಂದ ಕಳೆದುಕೊಂಡಿತ್ತು. 2ಕ್ಕೆ 79ರಲ್ಲಿದ್ದ ಪಾಟಿದಾರ್ ಬಳಗ, 96ಕ್ಕೆ ತಲುಪುವಷ್ಟರಲ್ಲಿ 6 ವಿಕೆಟ್ ಉದುರಿಸಿಕೊಂಡು ಬಳಿಕ 155ಕ್ಕೆ ಆಲೌಟ್ ಆಗಿತ್ತು. ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ಬೆಂಗಳೂರು ತಂಡದ ಪಾಲಿಗೆ ಇದು ದೊಡ್ಡ ಹಿನ್ನಡೆಯೇ ಸರಿ.

ಫಿಲ್ ಸಾಲ್ಟ್ ಗೈರಲ್ಲಿ ಇನ್ನಿಂಗ್ಸ್ ಆರಂಭಿಸಲಿರುವ ಜೇಕಬ್ ಬೆಥೆಲ್ ಸಿಡಿದು ನಿಲ್ಲಬೇಕಾದ ಅಗತ್ಯವಿದೆ. ಕಳೆದ ಟಿ20 ವಿಶ್ವಕಪ್ ಕೂಟದಲ್ಲಿ ಬೆಥೆಲ್ ಪ್ರದರ್ಶಿಸಿದ ಅಮೋಘ ಆಟ ಇಲ್ಲಿ ಪುನರಾವರ್ತನೆಗೊಂಡರೆ ತಂಡಕ್ಕೆ ಲಾಭ ಅಪಾರ.

ಲಕ್ನೋ ಬ್ಯಾಟಿಂಗ್ ಪರದಾಟ:

ಲಕ್ನೋ ಬ್ಯಾಟಿಂಗ್ ಸರದಿ ಕಾಗದದಲ್ಲೇನೋ ಬಲಿಷ್ಠವಾಗಿದೆ. ಆದರೆ ಅಂಗಳಕ್ಕೆ ಬಂದಾಗ ಠುಸ್ ಆಗುತ್ತಿದೆ. ನಾಯಕ ರಿಷಭ್ ಪಂತ್ ಸೇರಿದಂತೆ ಮಿಚೆಲ್ ಮಾರ್ಷ್, ಐಡನ್ ಮಾರ್ಕರಮ್, ನಿಕೋಲಸ್ ಪೂರಣ್ ಅವರೆಲ್ಲ ಇನ್ನೂ ಪರದಾಡುತ್ತಲೇ ಇದ್ದಾರೆ. ಲಕ್ನೋ ಹಿನ್ನಡೆಗೆ ಇದು ಪ್ರಮುಖ ಕಾರಣ.

ಸಂಭಾವ್ಯ ತಂಡಗಳು

ಲಕ್ನೋ: ಮಿಚೆಲ್ ಮಾರ್ಷ್, ಏಡನ್ ಮಾರ್ಕ್‌ರಮ್‌, ರಿಷಭ್ ಪಂತ್ (ನಾಯಕ, ವಿ.ಕೀ.), ಜೋಶ್ ಇಂಗ್ಲಿಸ್, ನಿಕೋಲಸ್ ಪೂರನ್, ಅಕ್ಷತ್ ರಘುವಂಶಿ, ಹಿಮ್ಮತ್ ಸಿಂಗ್, ಮೊಹಮ್ಮದ್ ಶಮಿ, ಮೊಹ್ಸಿನ್ ಖಾನ್, ಅವೇಶ್ ಖಾನ್, ಪ್ರಿನ್ಸ್ ಯಾದವ್.

ಆರ್‌ಸಿಬಿ: ವಿರಾಟ್ ಕೊಹ್ಲಿ, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸುಯಶ್ ಶರ್ಮಾ, ಜೋಶ್ ಹೇಜಲ್‌ವುಡ್‌.

ಆರಂಭ ರಾತ್ರಿ: 7:30

ಸ್ಥಳ: ಲಕ್ನೋ

Dailyhunt
Disclaimer: This content has not been generated, created or edited by Dailyhunt. Publisher: Udayavani