ಹರಿವರಾಸನಂ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ ಚಿತ್ರ ಮಗ್ಗಿ ಪುಸ್ತಕ ಇದೀಗ 50 ದಿನಗಳನ್ನು ಪೂರೈಸಿ ಮುನ್ನಡೆದಿದೆ. ಬಡ ಕುಟುಂಬದ ಅವನಿ ಎಂಬ ಹೆಣ್ಣು ಮಗಳ ಸುತ್ತ ನಡೆಯುವ ಘಟನೆಗಳನ್ನು ಇಟ್ಟುಕೊಂಡು ಹರಿವರಾಸನಂ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಮಗ್ಗಿಪುಸ್ತಕ ಚಿತ್ರದ ಐವತ್ತರ ಸಂಭ್ರಮದ ಸಮಾರಂಭ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಚಿತ್ರದಲ್ಲಿ ಕೆಲಸ ಮಾಡಿ ಗೆಲುವಿಗೆ ಕಾರಣರಾದ ಕಲಾವಿದರು ಹಾಗೂ ತಂತ್ರಜ್ಞರಿಗೆ ಸ್ಮರಣಫಲಕ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮಾತನಾಡಿದ ಹರಿವರಾಸನಂ, ಇಡೀ ಚಿತ್ರತಂಡದ ಪರಿಶ್ರಮವೇ ಈ ಯಶಸ್ಸಿಗೆ ಕಾರಣ. ನಮ್ಮ ಚಿತ್ರ 100 ದಿನಗಳನ್ನೂ ಪೂರೈಸಬೇಕೆಂಬ ಆಸೆಯಿದೆ, ಚಿತ್ರವೀಗ 13 ಥೇಟರ್‌ಗಳಲ್ಲಿ ಪ್ರದರ್ಶನ ಆಗುತ್ತಿದೆ. ಮುಂದಿನ ವಾರದಿಂದ ರಜೆ ಪ್ರಾರಂಭವಾಗುತ್ತಿದ್ದು, ಮತ್ತಷ್ಟುಚಿತ್ರಮಂದಿರಗಳು ಸೇರ್ಪಡೆಯಾಗುತ್ತಿವೆ ಎಂದು ಹೇಳಿದರು.
ನಿರ್ಮಾಪಕ ಎತಿರಾಜ್ ಮಾತನಾಡುತ್ತ ನಮ್ಮ ಚಿತ್ರ 50 ದಿನ ಓಡಿದ್ದೇ ಖುಷಿಯ ವಿಚಾರ, ಈ ಯಶಸ್ಸಿಗೆ ಸಹಕರಿಸಿದ ಎಲ್ಲ ತಂತ್ರಜ್ಞರು, ಕಲಾವಿದರಿಗೆ ನನ್ನ ಕೃತಜ್ಞತೆಗಳು ಎಂದು ಹೇಳಿದರು. ಎಂಪಿ ಫಿಲಂಸ್ ಈ ಚಿತ್ರವನ್ನು ವಿತರಣೆ ಮಾಡಿದೆ.
ಸಂಗೀತ ನಿರ್ದೇಶಕ ಯಶಸ್ ನಾಚಪ್ಪ, ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ರಂಜನ್ ಕಾಸರಗೋಡು, ರಾನ್ವಿ ಶೇಖರ್, ಮಹೇಶ್, ಮೋಹಿತ್, ಮೈಸೂರು ರಮಾನಂದ್, ಮೂಗು ಸುರೇಶ್, ಪಂಕಜ, ಅಗಸ್ತ್ಯ ಅಲ್ಲದೆ ಸಂಗೀತ ನಿರ್ದೇಶಕರು, ಸಂಕಲನಕಾರರು ಹಾಗೂ ಛಾಯಾಗ್ರಾಹಕರಿಗೂ ಸಹ ಈ ವೇದಿಕೆಯಲ್ಲಿ ಸ್ಮರಣಫಲಕ ವಿತರಿಸಿ ಗೌರವಿಸಲಾಯಿತು.

