Dailyhunt Logo
  • Light mode
    Follow system
    Dark mode
    • Play Story
    • App Story
'ಮಹಾ' ಮಳೆಗೆ ಬೆಳಗಾವಿ ನದಿಗಳಿಗೆ ಜೀವಕಳೆ

'ಮಹಾ' ಮಳೆಗೆ ಬೆಳಗಾವಿ ನದಿಗಳಿಗೆ ಜೀವಕಳೆ

ಬೆಳಗಾವಿ: ಜೂನ್‌ನಲ್ಲಿ ಮಳೆಯ ಕೊರತೆಯಿಂದ ತೀವ್ರ ಆತಂಕದಲ್ಲಿದ್ದ ಗಡಿ ಜಿಲ್ಲೆ ಬೆಳಗಾವಿ ಜನರಿಗೆ ಜುಲೈ ಮೊದಲ ವಾರದಲ್ಲಿ ಸತತವಾಗಿ ಸುರಿಯುತ್ತಿರುವ ಮುಂಗಾರು ಮಳೆ ಹೊಸ ಭರವಸೆ ಹುಟ್ಟಿಸಿದೆ. ಮಳೆಯಿಲ್ಲದೆ ಒಡಲು ಖಾಲಿ ಮಾಡಿಕೊಂಡಿದ್ದ 7 ನದಿಗಳು ಮೊದಲಿನ ವೈಭವಕ್ಕೆ ಮರಳುತ್ತಿವೆ.

ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಕಾರಣ ಕೃಷ್ಣಾ, ದೂದಗಂಗಾ, ವೇದಗಂಗಾ, ಘಟಪ್ರಭಾ, ಹಿರಣ್ಯಕೇಶಿ ನದಿಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ. ಲಭ್ಯ ಮಾಹಿತಿ ಪ್ರಕಾರ ಕೃಷ್ಣಾ ನದಿಗೆ ಸುಮಾರು 15 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದುಬರುತ್ತಿದೆ. ರಾಜಾಪುರ ಬ್ಯಾರೇಜ್ ನ ಎಲ್ಲ ಗೇಟುಗಳನ್ನು ತೆರೆಯಲಾಗಿದ್ದು, ಕೃಷ್ಣಾ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬರುತ್ತಿದೆ. ನದಿ ಪಾತ್ರದ ಗ್ರಾಮಗಳಲ್ಲಿ ಕುಡಿಯುವ ನೀರಿನ ಆತಂಕ ದೂರವಾಗಿದೆ.

ಅಂಬೋಲಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಘಟಪ್ರಭಾ ನದಿಯ ಒಳಹರಿವಿನಲ್ಲಿ ಏರಿಕೆಯಾಗುತ್ತಿದೆ. ಇದರಿಂದ ಹಿಡಕಲ್ ಜಲಾಶಯದ ಮಟ್ಟದಲ್ಲಿ ಒಂದೇ ದಿನ ಒಂದು ಅಡಿ ಹೆಚ್ಚಳವಾಗಿದೆ. ಜಲಾಶಯಕ್ಕೆ ಈಗ 1665 ಕ್ಯೂಸೆಕ್‌ ನೀರು ಬರುತ್ತಿದ್ದು ಜಲಾಶಯದ ಮಟ್ಟ 2092 ಅಡಿ (ಗರಿಷ್ಠ ಮಟ್ಟ 2175ಅಡಿ) ತಲುಪಿದೆ. ಶುಕ್ರವಾರ ಜಲಾಶಯದ ಒಳಹರಿವು 558 ಕ್ಯೂಸೆಕ್ ದಷ್ಟಿತ್ತು. ಆದರೆ ಮಲಪ್ರಭಾ ಜಲಾಶಯಕ್ಕೆ ಇದುವರೆಗೆ ಒಳಹರಿವು ಆರಂಭವಾಗಿಲ್ಲ. ಇನ್ನು ಹಿರಣ್ಯಕೇಶಿ ನದಿಗೆ ಸಾಕಷ್ಟು ನೀರು ಬರುತ್ತಿದ್ದು, ಇದರಿಂದ ಘಟಪ್ರಭಾ ಬಳಿಯ ಧೂಪದಾಳ ಜಲಾಶಯ ತುಂಬಿ ಹರಿಯುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani