Friday, 26 May, 6.15 am ಉದಯವಾಣಿ

ಕಲಾವಿಹಾರ
ಮಹಾಭಾಗವತನಿಗೆ ಯಕ್ಷಧ್ರುವ ಗೌರವ

ಇಂದಿನ ಯಕ್ಷಗಾನ ರಂಗದಲ್ಲಿ ಸರ್ವಾನುಮತ ಮತ್ತು ಶ್ರೇಷ್ಠತೆ ಎರಡನ್ನೂ ಹೊಂದಿದ ಬೆರಳೆಣಿಕೆಯ ಸಾಧಕರಲ್ಲಿ ಪ್ರಾಯಃ ಬಲಿಪ ನಾರಾಯಣ ಭಾಗವತರು ಮೂರ್ಧನ್ಯರು. ದೇಶದ ಪ್ರಾಚೀನ ರಂಗಭೂಮಿಯ ಅಗ್ರಪಂಕ್ತಿಯಲ್ಲಿ ಬಲಿಪರು ಸ್ಥಾನ ಪಡೆದವರು. ಇವರ ಭಾಗವತಿಕೆಯನ್ನು ಕೇಳಿದ ಹಿರಿಯ ರಂಗತಜ್ಞ ರತನ್‌ ಥಿಯ್ನಾಂ ಅವರು ಹೇಳಿದ ಮಾತು, ""ಇಷ್ಟು ಕಾಲ ಇವರನ್ನು ನೋಡದೆ ಎಷ್ಟೊಂದು ಕಳಕೊಂಡೆ! ಪುಣ್ಯವಶದಿಂದ ಇವರ ಭಾಗವತಿಕೆ ಕೇಳಿದೆ... ಇಂತಹ ಅಜ್ಞಾತ ನಿಧಿಗಳು ದೇಶಕ್ಕೆ ಭೂಷಣ.''

ಕಾಸರಗೋಡಿನ ಪಡ್ರೆ ಗ್ರಾಮದ ದಟ್ಟ ಯಕ್ಷಗಾನ ಆಸಕ್ತಿಯ ಮಧ್ಯೆ ಹುಟ್ಟಿ ಬೆಳೆದ ಬಲಿಪರು ಯಕ್ಷಗಾನ ಇತಿಹಾಸದ ದಂತಕತೆ, ಉನ್ನತೋನ್ನತ ಸಾಧನಾ ಸಂಕೇತ ಹಿರಿಯ ಬಲಿಪ ನಾರಾಯಣ ಭಾಗವತರ ಮೊಮ್ಮಗ; ಭಾಗವತ, ವೇಷಧಾರಿ, ಸಂಘಟಕ ಬಲಿಪ ಮಾಧವ ಭಟ್ಟರ ಪುತ್ರ. ಇದೀಗ ಅವರ ಮಕ್ಕಳೂ ಭಾಗವತರು. ಏಳು ಬೀಳುಗಳ, ಬಡತನ, ಪ್ರತಿಕೂಲಗಳ, ಸಾಧನೆ ಸಂಕಷ್ಟಗಳ, ದೈವಕೃಪೆ ತಪಸ್ಸುಗಳ ನಡುವೆ ಬೆಳೆದು ಈಗ 80ರ ಹರೆಯದಲ್ಲಿರುವ ಈ ಕಿರಿಯ ಬಲಿಪರು ಈಗ ಕಿರಿಯರಲ್ಲ; ಅವರು ಭಾಗವತಿಕೆಯ ದೊಡ್ಡ ದನಿ, ದೊಡ್ಡ ಬಲಿಪ.

ಪಡ್ರೆ ಜಟಾಧಾರಿ ಮೇಳ, ಕೂಡ್ಲು, ಕುಂಡಾವು (ಇರಾ) ಮೇಳಗಳಲ್ಲಿ; ಆ ಬಳಿಕ ಮೂರು ದಶಕಗಳ ಕಾಲ ತಿರುಗಾಟ ನಡೆಸಿದ ಭಾಗವತರು - ಕಳೆದ ಎಪ್ಪತ್ತು ವರ್ಷಗಳಿಂದ ಹಾಡುತ್ತಿದ್ದಾರೆ. ಈಗಲೂ ಭಾಗವತಿಕೆ ಮಾಡುತ್ತಾರೆ. ಏರುಪದ್ಯಗಳ ಹಾಡಿಗೆ ಈಗಲೂ ಬಲಿಪ ಸ್ವರ. ಶೈಲಿ, ರಂಗಮಾಹಿತಿ, ನಿರ್ವಹಣೆ, ಮಾರ್ಗದರ್ಶನ, ರಾಗತಾಳ, ಛಂದಸ್ಸುಗಳ ಖಚಿತತೆ, ವ್ಯಕ್ತಿತ್ವ, ಬದ್ಧತೆ, ಸೇವಾ ಮನೋಧರ್ಮ - ಈ ನವವಿಧ "ಭಕ್ತಿ'ಗಳ ನೆಲೆಯಲ್ಲಿ ಇಂದಿನ ಪ್ರಾಯಃ ಸರ್ವಶ್ರೇಷ್ಠ ಕಲಾಕಾರ ಬಲಿಪರು. ಸುಮಾರು ಎಂಬತ್ತು ಪ್ರಸಂಗಗಳು ಬಾಯಿಪಾಠ, ರಂಗನಡೆ ಓತಪ್ರೋತ, ಮೂವತ್ತಕ್ಕೂ ಮಿಕ್ಕಿ ಪ್ರಸಂಗಗಳ ರಚನೆ, ಭಾಗವತಿಕೆಯ ಯಾವುದೇ ಅಂಗದ ಮೇಲೆ ನಿಶ್ಚಿತ ಅಭಿಮತದ ಅಧಿಕಾರವಾಣಿ.

ವ್ಯಕ್ತಿತ್ವವೂ ಹಾಗೆ -ಸರಳ, ನೇರ, ಸ್ನೇಹಮಯ. ಅವರ ಮುಗ್ಧತೆ, ನೇರ ನಡೆನುಡಿಗಳ ಬಗೆಗೆ ಯಕ್ಷಗಾನ ವಲಯದಲ್ಲಿ ನೂರಾರು ದಂತಕತೆ, ಜೋಕುಗಳಿವೆ. ಇವೆಲ್ಲ ಮಾನಪತ್ರಗಳೇ. ಸಾಂಪ್ರದಾಯಿಕ ಯಕ್ಷಗಾನ ಶೈಲಿಯ ಪ್ರಾತಿನಿಕರೆನಿಸಿರುವ ಬಲಿಪ ಭಾಗವತರ ಶೈಲಿಯ ಪ್ರಭುತ್ವ - ಮಾದರಿ ಚೊಕ್ಕ, ಸ್ಪಷ್ಟ, ಸುಂದರ, ರಂಗಸಂಪದದ ನಿಧಿರೂಪ.

ರಂಗಜ್ಞಾನ, ಹಾಡುವಿಕೆ, ಮಾಹಿತಿಗಳನ್ನು ತನ್ನ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡಿರುವ ಬಲಿಪರು ಜ್ಞಾನ- ಕರ್ಮ ಸಮುಚ್ಚಯದ ಗಾನಾದ್ವೆ„ತ. ಕಮ್ಮಟ, ಪ್ರಾತ್ಯಕ್ಷಿಕೆ, ಪಾರಂಪರಿಕ ಹಾಡುವಿಕೆಗಳಿಗೆ ಭಾಗವತರು ಮುಖ್ಯ ಸಂಪನ್ಮೂಲ.

ರಾಜ್ಯೋತ್ಸವ, ಆಳ್ವಾಸ್‌ ನುಡಿಸಿರಿ ಮನ್ನಣೆ ಸಹಿತ ನೂರೈವತ್ತಕ್ಕೂ ಹೆಚ್ಚು ಮಾನ -ಸಮ್ಮಾನಗಳನ್ನು; 75ರ ಹರೆಯದಲ್ಲಿ ಬಲಿಪ ಅಮೃತ ಭವನ, ಚಾವಡಿ ನಿರ್ಮಾಣದ ವಿಶಿಷ್ಟ ಗೌರವವನ್ನೂ ಪಡೆದ ಇವರಿಗೆ ಈಗ ಯಕ್ಷಧ್ರುವ ಪಟ್ಲ ಪ್ರಶಸ್ತಿ.

ಬಲಿಪ, ನಾರಾಯಣ, ಭಾಗವತ - ಈ ಮೂರೂ ಶಬ್ದಗಳ ಸಾಕಾರರು ಭಾಗವತರು; ಸ್ವರ ಶಕ್ತಿ ಪ್ರಭುತ್ವ ಪರಿಣಾಮದ "ಬಲಿಪ', ಕಲಾ ವಿವೇಕದ "ನಾರಾಯಣ', ಸಮಗ್ರ ಭಾಗವತಿಕೆಯ ತಜ್ಞ; ಜತೆಗೆ ಯಕ್ಷ - ಧ್ರುವ - ಎಲ್ಲವೂ ಹೌದು. ಅವರಿಗೂ ಪ್ರತಿಷ್ಠಾನಕ್ಕೂ ಕಲಾಕ್ಷೇತ್ರಕ್ಕೂ ಇದು ಕಲಶ.

ತನ್ನ ಅಸಾಧಾರಣ ಜನಪ್ರಿಯತೆಯನ್ನು ಯಕ್ಷಗಾನ ರಂಗದ ಉನ್ನತಿಗಾಗಿ ಬಳಸುವ ಒಂದು ಐತಿಹಾಸಿಕ ಸಂಕಲ್ಪಗೈದಿರುವ ಯುವ ಭಾಗವತ ಪಟ್ಲ ಸತೀಶ ಶೆಟ್ಟಿಯವರು ಸ್ಥಾಪಿಸಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಯಕ್ಷಧ್ರುವ ಪ್ರಶಸ್ತಿ ಈ ಬಾರಿ ಬಲಿಪ ನಾರಾಯಣ ಭಾಗವತರಿಗೆ ಸಲ್ಲುತ್ತಿದೆ. ಜತೆಗೆ ಅವರ ಹದಿನಾಲ್ಕು ಪ್ರಸಂಗಗಳು ಪ್ರಕಾಶನಗೊಳ್ಳುತ್ತಿವೆ. ಭಾಗವತ ಪಟ್ಲ ಸತೀಶ ಶೆಟ್ಟಿಯವರು ತನ್ನ ಗುರು ಬಲಿಪ ನಾರಾಯಣ ಭಾಗವತರಿಗೆ ನೀಡುತ್ತಿರುವ ಈ ಗೌರವ ಒಂದು ದಾಖಲೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ, ಸಮ್ಮಾನಗಳನ್ನು ಒಳಗೊಂಡಿದೆ. ಮೇ 28, 2017ರಂದು ಮಂಗಳೂರು ಸಮೀಪದ ಅಡ್ಯಾರಿನ ಅಡ್ಯಾರ್‌ ಗಾರ್ಡನ್‌ನಲ್ಲಿ ಇಡಿಯ ದಿನ ನಡೆಯುವ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಡಾ| ಎಂ. ಪ್ರಭಾಕರ ಜೋಶಿ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top