Dailyhunt Logo
  • Light mode
    Follow system
    Dark mode
    • Play Story
    • App Story
ಮಹಾರಾಷ್ಟ್ರ: ನಿಲ್ಲದ ಭಾರೀ ಮಳೆ:‌ ರೈಲು ಸಂಚಾರ ಅಸ್ತವ್ಯಸ್ತ- ರತ್ನಗಿರಿಯಲ್ಲಿ ಭೂಕುಸಿತ

ಮಹಾರಾಷ್ಟ್ರ: ನಿಲ್ಲದ ಭಾರೀ ಮಳೆ:‌ ರೈಲು ಸಂಚಾರ ಅಸ್ತವ್ಯಸ್ತ- ರತ್ನಗಿರಿಯಲ್ಲಿ ಭೂಕುಸಿತ

ಮುಂಬಯಿ: ಕಳೆದ ಒಂದು ವಾರದಿಂದ ಮುಂಬಯಿ ಸೇರಿದಂತೆ ರಾಜ್ಯದಾದ್ಯಂತ ವರುಣನ ಆರ್ಭಟ ಮುಂದುವರಿದಿದ್ದು, ಅನೇಕ ಜಿಲ್ಲೆಗಳು ಪ್ರವಾಹದ ಭೀತಿಯಲ್ಲಿ ಮುಳುಗಿವೆ. ಫಾಲ್ಘರ್‌ ಜಿಲ್ಲೆಯಲ್ಲಿ ಸುರಿದ ಸತತ ಮಳೆಯಿಂದಾಗಿ ವಿರಾರ್‌- ಡಹಾಣು ನಡುವಿನ ರೈಲು ಹಳಿಗಳು ಸಂಪೂರ್ಣ ಜಲಾವೃತಗೊಂಡಿದ್ದು, ಲೋಕಲ್‌ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.

ಇದರಿಂದಾಗಿ ಲಕ್ಷಾಂತರ ಪ್ರಯಾಣಿಕರು ಪರದಾಡುವಂತಾಗಿದ್ದು, ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಭಾರೀ ಮಳೆಗೆ ಭಿವಂಡಿ ನಗರ ಮತ್ತು ಗ್ರಾಮೀಣ ಭಾಗಗಳು ಅಕ್ಷರಶಃ ತತ್ತರಿಸಿವೆ. ನಗರದ ತಗ್ಗು ಪ್ರದೇಶಗಳು, ಪ್ರಮುಖ ಮಾರುಕಟ್ಟೆ, ತೀನ್‌ ಬತ್ತಿ ನಾಕಾ ಹಾಗೂ ತರಕಾರಿ ಮಾರುಕಟ್ಟೆ ಪ್ರದೇಶಗಳಲ್ಲಿ ಎರಡರಿಂದ ಮೂರು ಅಡಿಗಳಷ್ಟು ನೀರು ನಿಂತಿದೆ.

ಫಾಲ್ಘರ್‌ನಲ್ಲಿ ದಾಖಲೆ ಮಳೆ

ಫಾಲ್ಘರ್‌ನ ಪಶ್ಚಿಮ ಕರಾವಳಿ ಭಾಗದಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದ್ದು, ಸಹಲೇ-ಸಖ್ರೆ ಮುಖ್ಯ ರಸ್ತೆಯು ನದಿಯಂತಾಗಿದೆ. ಇಲ್ಲಿ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಖಾಸಗಿ ಕಾರೊಂದು ಪ್ರವಾಹದ ನೀರಿನ ಮಧ್ಯೆ ಸಿಲುಕಿಕೊಂಡಿತ್ತು. ತತ್‌ಕ್ಷಣವೇ ಕಾರ್ಯಪ್ರವೃತ್ತರಾದ ಸಹಲೇ ಮತ್ತು ನವಜೆಯ ಯುವಕರು, ಹಗ್ಗದ ಸಹಾಯದಿಂದ ಪ್ರವಾಹದ ನೀರಿನಲ್ಲಿದ್ದ ಕಾರನ್ನು ಸುರಕ್ಷಿತವಾಗಿ ಹೊರಗೆಳೆದಿದ್ದಾರೆ. ಬಳಿಕ ರೋಗಿಯನ್ನು ಪರ್ಯಾಯ ಮಾರ್ಗ ಮೂಲಕ ಆಸ್ಪತ್ರೆಗೆ ರವಾನಿಸಲಾಯಿತು.

ಮತ್ತೊಂದೆಡೆ, ತನ್ಸಾ ನದಿಯ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಅಕ್ಲೋಲಿ, ವಜ್ರೇಶ್ವರಿ, ಗಣೇಶಪುರಿ ಮತ್ತು ಉಸ್ಗಾಂವ್ ಪ್ರದೇಶಗಳು ದ್ವೀಪದಂತಾಗಿವೆ. ಮನೆಗಳು ಮುಳುಗಡೆಯಾಗಿದ್ದರಿಂದ ನಾಗರಿಕರು ರಕ್ಷಣೆಗಾಗಿ ಮೇಲ್ಛಾವಣಿ ಏರಿ ನಿಲ್ಲುವಂತಾಗಿದೆ. ವೃದ್ಧರು ಸೇರಿದಂತೆ ಸುಮಾರು 50 ರಿಂದ 60 ಗ್ರಾಮಸ್ಥರನ್ನು ಬೋಟ್‌ಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ.

ರಾಯಗಢ: 70 ಜನರ ಸ್ಥಳಾಂತರ

ರಾಯಗಢ ಜಿಲ್ಲೆಯ ಪೋಲಾದ್‌ ಪುರ ತಾಲೂಕಿನ ನಾನೇಘೋಲ್‌ ಪರ್ವತ ಪ್ರದೇಶದಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿದೆ. ಭೂಕುಸಿತದ ಭೀತಿ ಎದುರಾಗಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಪರ್ವತದ ಬುಡದಲ್ಲಿದ್ದ 60 ರಿಂದ 70 ಜನರನ್ನು ಸ್ಥಳಾಂತರಿಸಲಾಗಿದೆ.

ರತ್ನಗಿರಿಯಲ್ಲಿ ಭಾರೀ ಭೂಕುಸಿತ:ಮಣ್ಣಿನಡಿ ಹೂತುಹೋದ 5 ಮನೆ

ರತ್ನಗಿರಿಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಭೂಕುಸಿತ ಸಂಭವಿಸಿದ್ದು, ಐದು ಮನೆಗಳು ಸಂಪೂರ್ಣವಾಗಿ ಮಣ್ಣಿನಡಿ ಹೂತುಹೋಗಿವೆ. ದುರಂತದಲ್ಲಿ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ರತ್ನಗಿರಿ ಜಿಲ್ಲೆಯ ಖೇಡ್‌ ತಹಸಿಲ್‌ ವ್ಯಾಪ್ತಿಯ ದಹಿವಲಿ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಮಣ್ಣಿನ ರಾಶಿಯಡಿ ಸಿಲುಕಿದ್ದ ಕಲ್ಪನಾ ಶೇಲಾರ್‌(75) ಎಂಬ ವೃದ್ಧೆಯನ್ನು ರಕ್ಷಣ ಸಿಬಂದಿ ರಕ್ಷಸಿದ್ದಾರೆ. ಘಟನೆ ವೇಳೆ ಮನೆಗಳಲ್ಲಿದ್ದ ಶಾಂತಾರಾಮ್‌ ಶೇಲಾರ್‌ಮತ್ತು ಸತೀಶ್‌ ಶೇಲಾರ್‌ಎಂಬ ಇಬ್ಬರು ವ್ಯಕ್ತಿಗಳು ಮಣ್ಣಿನಡಿ ಸಿಲುಕಿದ್ದು, ಅವರ ಪತ್ತೆಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ.

ವಸಾಯಿ -ವಿರಾರ್‌: ಮುಂದುವರಿದ ಪ್ರವಾಹ ಸ್ಥಿತಿ

ಕಳೆದ ಒಂದು ವಾರದಿಂದ ಮುಂಬಯಿ ಉಪನಗರ ವ್ಯಾಪ್ತಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ವರುಣನ ಆರ್ಭಟ ಬುಧವಾರವೂ ಮುಂದುವರಿದಿದೆ. ಮುಂಬಯಿಗೆ ಹೊಂದಿಕೊಂಡಿರುವ ವಸಾಯಿ, ನಲಸೋಪಾರ ಮತ್ತು ವಿರಾರ್‌ನಗರಗಳಲ್ಲಿ ಮಳೆರಾಯ ಭಾರೀ ಅವಾಂತರ ಸೃಷ್ಟಿಸಿದ್ದು, ಪರಿಸ್ಥಿತಿ ತೀರಾ ಗಂಭೀರವಾಗಿದೆ.

ಕಳೆದ 24 ಗಂಟೆಗಳಿಗೂ ಹೆಚ್ಚು ಸಮಯದಿಂದ ಅನೇಕ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜು ಸಂಪೂರ್ಣ ಕಡಿತಗೊಂಡಿದೆ. ಕರೆಂಟ್‌ ಇಲ್ಲದ ಕಾರಣ ಸೊಸೈಟಿಗಳ ನೀರಿನ ಪಂಪ್‌ಗ್ಳು ಸ್ಥಗಿತಗೊಂಡಿದ್ದು, ನಾಗರಿಕರು ಕುಡಿಯುವ ನೀರು ಮತ್ತು ಶೌಚಾಲಯಕ್ಕೂ ನೀರಿಲ್ಲದೆ ತೀವ್ರ ತತ್ವಾರ ಎದುರಿಸುತ್ತಿದ್ದಾರೆ.

ಮುಂಬಯಿ ಸಹಜ ಸ್ಥಿತಿಗೆ

ಕಳೆದ ಎರಡು ಮೂರು ದಿನಗಳಿಂದ ಮುಂಬಯಿಯನ್ನು ಜರ್ಜರಿತಗೊಳಿಸಿದ್ದ ಮಹಾಮಳೆ ಮಂಗಳವಾರ ಕೊಂಚ ಬಿಡುವು ನೀಡಿದೆ. ಇದರೊಂದಿಗೆ ಲೋಕಲ್‌ ರೈಲು ಸೇವೆ ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ ಮರಳಿದೆ. ಆದರೆ ನೆರೆಯ ಫಾಲ್ಘರ್‌ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಪ್ರವಾಹ ಸದೃಶ ಮಳೆಗೆ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani