ಮಹಾಲಿಂಗಪುರ: ಸಮೀಪದ ಢವಳೇಶ್ವರ ಗ್ರಾಮ ಪಂಚಾಯತಿಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ನೀಡಲಾಗುವ 2024-25ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ.
ಪ್ರತಿ ತಾಲೂಕಿಗೆ ಒಂದರಂತೆ ನೀಡುವ ತಾಲೂಕು ಮಟ್ಟದ 195 ಗ್ರಾ.ಪಂ.ಗಳಲ್ಲಿ ರಬಕವಿ-ಬನಹಟ್ಟಿ ತಾಲೂಕಿನಿಂದ ಢವಳೇಶ್ವರ ಗ್ರಾಮ ಪಂಚಾಯತ್ ಭಾಜನವಾಗಿದೆ.
ಸರ್ಕಾರದ ಎಲ್ಲಾ ಯೋಜನೆಗಳ ಅನುಷ್ಠಾನ ಮತ್ತು ಸಮರ್ಪಕ ಅನುದಾನ ಬಳಸಿಕೊಂಡು ಗ್ರಾಮಸ್ಥರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಇತರ ಗ್ರಾ.ಪಂ.ಗಳಿಗೆ ಮಾದರಿಯಾಗಿದೆ.
ಪ್ರವಾಹ ಎದುರಿಸುವ ಗ್ರಾ.ಪಂ.:
ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ಗಡಿಭಾಗದ ಘಟಪ್ರಭಾ ನದಿ ತೀರದಲ್ಲಿನ ಐತಿಹಾಸಿಕ ಹಿನ್ನಲೆ, ಕೃಷಿ, ಶಿಕ್ಷಣ, ಹೈನುಗಾರಿಕೆಯಲ್ಲಿ ಹೆಸರುವಾಸಿಯಾದ ರಬಕವಿ-ಬನಹಟ್ಟಿ ತಾಲೂಕಿನ ಸಮೃದ್ಧಿಯ ಗ್ರಾಮವೇ ಢವಳೇಶ್ವರ. ಘಟಪ್ರಭಾ ನದಿಯ ಪ್ರವಾಹದಿಂದ ಪ್ರತಿ ವರ್ಷ ಅಲ್ಪಸ್ವಲ್ಪ ಪ್ರವಾಹಕ್ಕೆ ತುತ್ತಾಗುವ ಗ್ರಾಮ 2009 ಮತ್ತು 2019ರ ಮಹಾಪ್ರವಾಹದಲ್ಲಿ ಶೇ.80ರಷ್ಟು ಪ್ರವಾಹಕ್ಕೆ ತುತ್ತಾಗಿತ್ತು.
ಮಾದರಿ ಅಭಿವೃದ್ದಿ ಕೆಲಸಗಳು:
ಢವಳೇಶ್ವರ 9 ವಾರ್ಡಗಳು, 19 ಸದಸ್ಯರನ್ನು ಒಳಗೊಂಡ ಗ್ರಾ.ಪಂ., ನಂದಗಾಂವ ಗ್ರಾಮ ಮೊದಲು ಈ ಪಂಚಾಯತ್ ವ್ಯಾಪ್ತಿಯಲ್ಲಿತ್ತು. ಕೆಲ ವರ್ಷಗಳ ಹಿಂದೆ ನಂದಗಾಂವ ಪ್ರತ್ಯೇಕ ಪಂಚಾಯತ್ ಆಗಿದೆ. 15ನೇ ಹಣಕಾಸು ಯೋಜನೆ, ನರೇಗಾ ಮತ್ತು ಸ್ಥಳಿಯ ಸಂಪನ್ಮೂಲಗಳು ಗ್ರಾ.ಪಂ. ಅನುದಾನದ ಮೂಲಗಳಾಗಿವೆ.
ಪಾರದರ್ಶಕ ಆಡಳಿತ, ಡಿಜಿಟಲೀಕರಣ, ಸ್ವಚ್ಚತೆ, ಕುಡಿಯುವ ನೀರಿನ ಪೂರೈಕೆ, ತೆರಿಗೆ ಸಂಗ್ರಹ ಸೇರಿದಂತೆ ಹಲವು ಅಭಿವೃದ್ದಿ ಮತ್ತು ಆಡಳಿತದ ಕೆಲಸ ಕಾರ್ಯಗಳಲ್ಲಿ ಇತರ ಗ್ರಾ.ಪಂ.ಗಳಿಗೆ ಮಾದರಿಯಾಗಿದೆ.
ನರೇಗಾ ಕಾರ್ಮಿಕರ ಮಕ್ಕಳ ಅನೂಕೂಲಕ್ಕಾಗಿ ಕೂಸಿನ ಮನೆ, ಗ್ರಾ.ಪಂ. ನಿಂದ ಸುಸಜ್ಜಿತ ಡಿಜಿಟಲ್ ಅರಿವು ಕೇಂದ್ರ (ಗ್ರಂಥಾಲಯ), ಮಾದರಿಯಾದ ಸ್ಮಶಾನ ಅಭಿವೃದ್ದಿ, ಕಸ ವಿಲೇವಾರಿ ಘಟಕ, ಸುಸಜ್ಜಿತ ಗ್ರಾ.ಪಂ. ಕಾರ್ಯಾಲಯ ಕಟ್ಟಡ, ರಾಜೀವ್ ಗಾಂಧಿ ಸೇವಾ ಕೇಂದ್ರ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣದ ಮೂಲಕ ಬಯಲು ಶೌಚಮುಕ್ತ ಗ್ರಾಮವಾಗಿದೆ.
ಶಾಲಾ ಕಾಂಪೌಂಡ್ ಗಳ ನಿರ್ಮಾಣ, ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಕೆ, ಅಂಗನವಾಡಿ ಕೇಂದ್ರಗಳ ಅಭಿವೃದ್ದಿ, ನಮ್ಮ ಹೊಲ ನಮ್ಮ ರಸ್ತೆಗಳ ಸುಧಾರಣೆ, ಸರ್ಕಾರಿ ಪ್ರೌಢಶಾಲೆಗೆ ವಿಜ್ಞಾನ ಪ್ರಯೋಗಾಯಲ, ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, ಕಲಿಕಾ ಸಾಮಗ್ರಿಗಳ ವಿತರಣೆ ಸೇರಿದಂತೆ ಗ್ರಾಪಂನಿಂದ ಹತ್ತಾರು ಅಭಿವೃದ್ದಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ.
ಘೋಷಣೆಯಲ್ಲೇ ಮೊಟಕುಗೊಂಡಿತ್ತು:
2019ರ ಮಹಾಪ್ರವಾಹವನ್ನು ಸಮರ್ಥವಾಗಿ ಎದುರಿಸಿದ ಕೀರ್ತಿ ಹಾಗೂ ನಿರಂತರ ಅಭಿವೃದ್ದಿ ಕಾರ್ಯಗಳು, ಸಮರ್ಪಕ ಅನುದಾನ ಬಳಕೆಯಿಂದಾಗಿ 2019-2020ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿತ್ತು. ಆದರೆ ಕೋವಿಡ್ ಕಾರಣ ಮತ್ತು ನೂತನ ರಬಕವಿ-ಬನಹಟ್ಟಿ ತಾಲೂಕಿನ ಗ್ರಾಮವೆಂಬ ಕಾರಣಕ್ಕೆ ಆಯ್ಕೆ ಪಟ್ಟಿಯಿಂದ ಢವಳೇಶ್ವರ ಗ್ರಾ.ಪಂ. ಹೆಸರನ್ನು ಮೊಟಕುಗೊಳಿಸಿ, 2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಮೂಧೋಳ ತಾಲೂಕಿನ ಮಂಟೂರ ಗ್ರಾ.ಪಂ. ಪಾಲಾಗಿತ್ತು.
ಗಾಂಧಿಗ್ರಾಮ ಪುರಸ್ಕಾರ ಗ್ರಾಮಸ್ಥರ ಸಹಕಾರ, ಹಿಂದಿನ ಆಡಳಿತ ಮಂಡಳಿ ಸರ್ವ ಸದಸ್ಯರು, ನಮ್ಮ ಕ್ರೀಯಾಶೀಲ ಸಿಬ್ಬಂದಿಯ ಪರಿಶ್ರಮಕ್ಕೆ ಸಂದ ಗೌರವವಾಗಿದೆ. ಪಾರದರ್ಶಕ ಆಡಳಿತ, ಸ್ವಚ್ಚತೆ, ಶಿಸ್ತಿನ ಕಾರ್ಯನಿರ್ವಹಣೆಗಾಗಿ ನಮ್ಮ ಢವಳೇಶ್ವರ ಗ್ರಾ.ಪಂ. ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದ್ದು ಹೆಮ್ಮೆಯ ಸಂಗತಿ. - ಸಿದ್ರಾಮೇಶ ಕುಂದರಗಿಮಠ, ಪಿಡಿಒ, ಢವಳೇಶ್ವರ ಗ್ರಾಪಂ.
ಪಾರದರ್ಶಕ ಆಡಳಿತ, ಸರ್ಕಾರದ ಪ್ರತಿಯೊಂದು ಯೋಜನಗಳ ಅನುದಾನಗಳ ಸಮರ್ಪಕ ಬಳಕೆ ಮತ್ತು ಅನುಷ್ಠಾನ, ಗ್ರಾ.ಪಂ.ನಲ್ಲಿ ಆಗಿರುವ ಅಭಿವೃದ್ದಿ ಕೆಲಸಗಳ ಮಾನದಂಡ ಆಧಾರದಲ್ಲಿ ಢವಳೇಶ್ವರ ಗ್ರಾ.ಪಂ. ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. - ಸಿದ್ದಪ್ಪ ಪಟ್ಟಿಹಾಳ, ಇಒ, ತಾ.ಪಂ. ರಬಕವಿ-ಬನಹಟ್ಟಿ
-ಚಂದ್ರಶೇಖರ ಮೋರೆ, ಮಹಾಲಿಂಗಪುರ

