ಬೆಳ್ಮಣ್: ಶಿಕ್ಷಣವು ಕೇವಲ ಪಠ್ಯಪುಸ್ತಕಗಳ ಜ್ಞಾನಕ್ಕೆ ಸೀಮಿತವಾಗದೆ, ಸಮಾಜ ಮತ್ತು ಪರಿಸರದ ಬಗ್ಗೆ ಜವಾಬ್ದಾರಿಯನ್ನು ಬೆಳೆಸುವ ಪ್ರಬಲ ಮಾಧ್ಯಮವಾಗಿದೆ. ಈ ಮಾತಿಗೆ ಸಾಕ್ಷಿಯಾಗಿ ಬೆಳ್ಮಣ್ ಸಮೀಪದ ಕಲ್ಯಾ ಗ್ರಾಮದ ಕೈರಬೆಟ್ಟು ಸ. ಪ್ರಾಥಮಿಕ ಶಾಲೆ. "ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಅಭಿಯಾನ'ವನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಮನೆಮನೆಗೆ ಪರಿಸರ ಜಾಗೃತಿ
ಚಿಕ್ಕ ವಯಸ್ಸಿನಲ್ಲೇ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಶಾಲೆಯ ಶಿಕ್ಷಕರು ಈ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಇದರಡಿ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಶಾಲೆಗೆ ತರುವಂತೆ ಪ್ರೋತ್ಸಾಹಿ ಸಲಾಗುತ್ತಿದೆ. ಈ ಮೂಲಕ ಶಾಲೆಯಷ್ಟೇ ಅಲ್ಲದೆ ವಿದ್ಯಾರ್ಥಿಗಳ ಮನೆಗಳಲ್ಲಿಯೂ ಪ್ಲಾಸ್ಟಿಕ್ ತ್ಯಾಜ್ಯದ ಸಮರ್ಪಕ ನಿರ್ವಹಣೆ ಬಗ್ಗೆ ಜಾಗೃತಿ ಮೂಡುತ್ತಿದೆ.
ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಆದ್ಯತೆ
ವಿದ್ಯಾರ್ಥಿಗಳು ಸಂಗ್ರಹಿಸಿ ತರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಶಾಲೆಯಲ್ಲಿ ಎಲ್ಲೆಂ ದರಲ್ಲಿ ಬಿಸಾಡದೆ, ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ವಾರಕ್ಕೊಮ್ಮೆ ಸಂಗ್ರಹವಾದ ತ್ಯಾಜ್ಯವನ್ನು ಸ್ಥಳೀಯ ಗ್ರಾಮ ಪಂಚಾಯತ್‌ನ ತ್ಯಾಜ್ಯ ಸಂಗ್ರಹ ವಾಹನಕ್ಕೆ ಹಸ್ತಾಂತರಿಸುವ ಮೂಲಕ, ಶಾಲೆ ಪಂಚಾಯತ್‌ನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗೆ ಸಹಕಾರ ನೀಡುತ್ತಿದೆ.
ಶಿಕ್ಷಕರ ಪರಿಕಲ್ಪನೆಗೆ ಪೋಷಕರ ಬೆಂಬಲ
ಈ ಅಭಿಯಾನದ ರೂವಾರಿ ಶಾಲೆಯ ಮುಖ್ಯ ಶಿಕ್ಷಕರಾದ ನಂದಳಿಕೆ ಚಂದ್ರಶೇಖರ್ ಭಟ್. ಮಕ್ಕಳಲ್ಲಿ ಬಾಲ್ಯದಿಂದಲೇ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಅರಿವು ಬೆಳೆಸಬೇಕು ಎಂಬ ಉದ್ದೇಶದಿಂದ ಅವರು ಈ ಕಾರ್ಯಕ್ರಮ ರೂಪಿಸಿದ್ದಾರೆ. ವಿದ್ಯಾರ್ಥಿಗಳು ಉತ್ಸಾಹದಿಂದ ಮನೆಯಲ್ಲಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಶಾಲೆಗೆ ತರುತ್ತಿದ್ದು, ಈ ಪ್ರಯತ್ನಕ್ಕೆ ಪೋಷಕರು ಹಾಗೂ ಗ್ರಾಮಸ್ಥರೂ ಸಾಥ್ ನೀಡಿದ್ದಾರೆ.
ಮಾದರಿಯಾದ ಯೋಜನೆ
ಕೈರಬೆಟ್ಟು ಶಾಲೆಯ ಈ ಪುಟ್ಟ ಪ್ರಯತ್ನವು ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣದತ್ತ ಮಹತ್ವದ ಹೆಜ್ಜೆಯಾಗಿದೆ. ಪರಿಸರ ಸಂರಕ್ಷಣೆಯ ಸಂದೇಶವನ್ನು ಮಕ್ಕಳ ಮೂಲಕ ಮನೆಮನೆಗೆ ತಲುಪಿ ಸುತ್ತಿರುವ ಈ ಕಾರ್ಯಕ್ರಮ ಇಂತಹ ಕಾರ್ಯಕ್ರಮಗಳು ರಾಜ್ಯದ ಇತರ ಶಾಲೆಗಳಿಗೂ ಮಾದರಿಯಾಗಲಿ ಎಂಬುದು ಪರಿಸರ ಪ್ರೇಮಿಗಳ ಹಾರೈಕೆ.
ಬಹುಮಾನದ ಮೂಲಕ ಮಕ್ಕಳಲ್ಲಿ ಉತ್ಸಾಹ
ವಿದ್ಯಾರ್ಥಿಗಳ ಆಸಕ್ತಿಯನ್ನು ಹೆಚ್ಚಿಸಲು ಶಾಲೆ ವಿಶೇಷ ಪ್ರೋತ್ಸಾಹದ ಕ್ರಮ ಕೈಗೊಂಡಿದೆ. ಪ್ರತೀ ವಾರ ಅತಿ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ತರುವ ವಿದ್ಯಾರ್ಥಿಯನ್ನು ಗುರುತಿಸಿ ಬಹುಮಾನ ನೀಡಿ ಗೌರವಿಸಲಾಗುತ್ತದೆ.
ಈ ಸ್ಪರ್ಧಾತ್ಮಕ ಚಟುವಟಿಕೆಯಿಂದ ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ, ಸ್ವಚ್ಛತೆ ಹಾಗೂ ಸಾಮಾಜಿಕ ಜವಾಬ್ದಾರಿ ಹೆಚ್ಚುತ್ತಿದೆ.
ಪ್ಲಾಸ್ಟಿಕ್‌ನಿಂದಾಗುವ ಅಪಾಯಗಳ ಅರಿವು
ಶಾಲೆಯ ಈ ಅಭಿಯಾನದಿಂದ ಮಕ್ಕಳು ಪರಿಸರದ ಮಹತ್ವವನ್ನು ಅರಿತುಕೊಳ್ಳುತ್ತಿದ್ದಾರೆ. ಪ್ಲಾಸ್ಟಿಕ್‌ನಿಂದಾಗುವ ಅಪಾಯಗಳ ಬಗ್ಗೆ ಮಕ್ಕಳು ಮನೆಯಲ್ಲಿ ಪೋಷಕರಿಗೂ ತಿಳಿ ಹೇಳುತ್ತಿರುವುದು ನಮ್ಮ ಯೋಜನೆಯ ಯಶಸ್ಸು. -ಚಂದ್ರಶೇಖರ್ ಭಟ್,ಶಾಲಾ ಮುಖ್ಯ ಶಿಕ್ಷಕರು
- ಶರತ್ ಶೆಟ್ಟಿ ಬೆಳ್ಮಣ್

