ಪ್ರತೀದಿನ ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಶಾಲಾ ಸಮಯದಲ್ಲಿ ರಸ್ತೆಯಲ್ಲಿ ಕಾಣಿಸುವ ಒಂದು ದೃಶ್ಯ ನನ್ನ ಗಮನಸೆಳೆಯುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಕಾರು, ಬೈಕುಗಳಲ್ಲಿ ಶಾಲೆಗೆ ಬಿಟ್ಟು ಹೋಗುತ್ತಿರುವುದನ್ನು ನೋಡಿದಾಗಲೆಲ್ಲ ನನ್ನ ಮನಸ್ಸು ನನ್ನ ಶಾಲಾ ದಿನಗಳತ್ತ ಹಿಂದಿರುಗುತ್ತದೆ.
ನಮ್ಮ ಶಾಲಾ ದಿನಗಳಲ್ಲಿ ಶಾಲೆ ಸ್ವಲ್ಪ ದೂರದಲ್ಲಿದ್ದರೂ ಸ್ನೇಹಿತರ ಜತೆ ನಡೆದುಕೊಂಡು ಹೋಗುವುದೇ ಒಂದು ಸಂತಸ. ಶಾಲೆಗೆ ತೆರಳುವಾಗ ಮತ್ತು ಮರಳುವಾಗ ದಾರಿ ಉದ್ದಕ್ಕೂ ಹರಟೆ ಹೊಡೆಯುತ್ತಾ, ನಗುತ್ತಾ, ಕೆಲವೊಮ್ಮೆ ಜಗಳವಾಡುತ್ತಾ, ಮತ್ತೆ ಒಂದಾಗುತ್ತ, ದಾರಿಯಲ್ಲಿ ಸಿಕ್ಕಸಿಕ್ಕ ಸ್ನೇಹಿತರ ಜತೆ ಮಾತು, ಮಳೆ ಬಂದರೆ ಮಳೆಯಲ್ಲಿ ಓಟ, ದಾರಿಯಲ್ಲಿ ಮರ, ಅಂಗಡಿ, ಆಟದ ಮೈದಾನ ನೋಡುತ್ತಾ, ಶಾಲೆಯಲ್ಲಿ ನಡೆದ ವಿಚಾರಗಳನ್ನು ಮೆಲುಕು ಹಾಕುತ್ತಾ ಮನೆಗೆ ಸಾಗುತ್ತಿದ್ದ ಆ ದಿನಗಳು ಕಣ್ಣ ಮುಂದೆ ಬರುತ್ತವೆ. ಆದರೆ ಇಂದು ಅದೇ ದೃಶ್ಯವನ್ನು ನೋಡಿದರೆ ಸ್ವಲ್ಪ ಬದಲಾವಣೆ ಕಾಣಿಸುತ್ತದೆ. ಶಾಲೆ ಮನೆಯ ಸಮೀಪದಲ್ಲಿದ್ದರೂ ಮಗು ಕಾರಿನಲ್ಲಿ ಶಾಲೆಗೆ ಹೋಗುತ್ತದೆ.
ಶಾಲೆಯಿಂದ ಬಂದ ತತ್‌ಕ್ಷಣ ಹೊರಗೆ ಆಟವಾಡುವ ಬದಲು ಮೊಬೈಲ್ ಅಥವಾ ಟ್ಯಾಬ್ ಕೈಗೆ ಬರುತ್ತದೆ. ಊಟ ಮಾಡುವಾಗ ಸ್ಕ್ರೀನ್, ಓದುತ್ತಿರುವಾಗಲು ಸ್ಕ್ರೀನ್, ಬಿಡುವಿನ ಸಮಯದಲ್ಲಿ ಸ್ಕ್ರೀನ್. ಈ ಬಗ್ಗೆ ಮಕ್ಕಳನ್ನು ದೂಷಿಸಿ ಪ್ರಯೋಜನವಿಲ್ಲ. ನಾವು ಮಕ್ಕಳಿಗೆ ಕೊಡುತ್ತಿರುವ ಸೌಲಭ್ಯಗಳು ಅವರ ಬದುಕನ್ನು ಸುಲಭಗೊಳಿಸುತ್ತವೆಯೇ ಅಥವಾ ನಿಧಾನವಾಗಿ ಅವರ ಸಾಮರ್ಥ್ಯಗಳನ್ನು ಕಡಿಮೆ ಮಾಡುತ್ತವೆಯೇ ಎಂಬುದೇ ಇಲ್ಲಿರುವ ಪ್ರಶ್ನೆ. ಇತ್ತೀಚೆಗೆ ಒಬ್ಬರು ಪೋಷಕರು ಮಗನ ಜತೆ ನನ್ನ ಬಳಿ ಬಂದರು. ಹೀಗೆ ಅವನ ಆರೋಗ್ಯದ ಬಗ್ಗೆ ಮಾತನಾಡುತ್ತಿರುವಾಗ ಅವರು ನನ್ನ ಮಗ ಹೇಳಿದ್ದು ಒಂದು ಮಾತು ಕೇಳುವುದಿಲ್ಲ, ಯಾವಾಗಲೂ ಮೊಬೈಲ್ ನೋಡುತ್ತಿರುತ್ತಾನೆ, ಎಲ್ಲದಕ್ಕೂ ಹಠ ಹಿಡಿ ಯುತ್ತಾನೆ, ಎಷ್ಟೇ ಪ್ರೀತಿಯಿಂದ ಹೇಳಿದರೂ ಅರ್ಥ ಮಾಡಿಕೊಳ್ಳುವುದಿಲ್ಲ, ಮೊಬೈಲ್ ಕೊಡುವುದಿಲ್ಲ ಎಂದರೆ ಜಗಳ ಮಾಡುತ್ತಾನೆ, ಸಮಯಕ್ಕೆ ಸರಿಯಾಗಿ ಊಟ ಮಾಡುವುದಿಲ್ಲ, ಓದಲು ಹೇಳಿದರೆ ಕೋಪ ಮಾಡಿಕೊಳ್ಳುತ್ತಾನೆ. ನಾವು ಹೇಳಿದ ಒಂದು ಮಾತನ್ನು ಕೇಳುವುದೇ ಕಷ್ಟವಾಗಿದೆ ಡಾಕ್ಟ್ರೇ.. ನಾವು ಅವನಿಗೆ ಯಾವುದಕ್ಕೂ ಕಡಿಮೆ ಮಾಡಿಲ್ಲ. ನಾವು ಅವನಿಗೆ ಮೊಬೈಲ್ , ಲ್ಯಾಪ್‌ಟಾಪ್, ಆಟಿಕೆಗಳು ಯಾವುದಕ್ಕೂ ಇಲ್ಲ ಎಂದಿಲ್ಲ. ಆದರೂ ಅವನು ನಮ್ಮ ಮಾತು ಕೇಳುವುದಿಲ್ಲ. ಇಂದು ಇದು ಅನೇಕ ಪೋಷಕರ ಅಳಲು ಎಂದು ಹೇಳಿದರೆ ತಪ್ಪಾಗದು.
ಆದರೆ ಪೋಷಕರು ತಮ್ಮಲ್ಲೇ ಒಂದು ಪ್ರಶ್ನೆಯನ್ನು ತಾವು ಕೇಳಿಕೊಳ್ಳಬೇಕು. ಮಗು ಹಠ ಮಾಡುತ್ತಿದೆ ಸರಿ. ಆದರೆ ನಾವು ಅದರ ಪ್ರತಿಯೊಂದು ಹಠಕ್ಕೆ ಹೇಗೆ ಪ್ರತಿಕ್ರಿಯಿಸುತ್ತಿದ್ದೇವೆ ಎಂಬ ವಿಷಯವು ಮುಖ್ಯ. ಮಕ್ಕಳು ಚಿಕ್ಕವರಿದ್ದಾಗ ಅವರು ಊಟ ಮಾಡುವುದಿಲ್ಲ ಎಂದು ಮೊಬೈಲ್‌ನಲ್ಲಿ ಕಾಟೂìನ್ ಹಾಕುತ್ತೇವೆ. ಮಗು ಹೊರಗೆ ಹೋಗಲು ಹಠ ಮಾಡುತ್ತದೆ ಎಂದಾಗ ಅದಕ್ಕೆ ಇಷ್ಟವಾದ ಆಟಿಕೆ ತಂದು ಕೊಡುತ್ತೇವೆ. ಇದು ಪೋಷಕರ ತಪ್ಪು ಎಂದು ಹೇಳುವುದು ಸರಿಯಲ್ಲ. ಏಕೆಂದರೆ ಬಹುತೇಕ ಪೋಷಕರು ಇದನ್ನು ಪ್ರೀತಿಯಿಂದಲೇ ಮಾಡುತ್ತಾರೆ. ನಮ್ಮ ಬಾಲ್ಯದಲ್ಲಿ ನಾವು ತುಂಬಾ ಕಷ್ಟಪಟ್ಟಿದ್ದೇವೆ. ನಮಗೆ ಇಂತಹ ಸೌಲಭ್ಯಗಳು ಇರಲಿಲ್ಲ. ನಾವು ಅನುಭವಿಸಿದ ಕಷ್ಟವನ್ನು ನಮ್ಮ ಮಕ್ಕಳು ಅನುಭವಿಸಬಾರದು ಎಂದು ಅವರು ಈ ರೀತಿಯಾಗಿ ಮಾತನಾಡುತ್ತಾರೆ.
ಈ ಭಾವನೆ ತುಂಬಾ ಸಹಜ. ಆದರೆ ಒಂದು ಸಣ್ಣ ವ್ಯತ್ಯಾಸ ನಾವು ಅರ್ಥ ಮಾಡಿಕೊಳ್ಳಬೇಕು. ಏನೆಂದರೆ ಪೋಷಕರ ಕಷ್ಟಗಳನ್ನು ಮಕ್ಕಳು ಅನುಭವಿಸಬೇಕಾಗಿಲ್ಲ. ಆದರೆ ನೀವು ಕಲಿತ ಜೀವನದ ಪಾಠಗಳನ್ನು ಅವರಿಗೆ ತಿಳಿಸಿಕೊಡಬೇಕು.
ನಮ್ಮ ಬಾಲ್ಯದಲ್ಲಿ ನಮಗೆ ಮೊಬೈಲ್ ಇರಲಿಲ್ಲ. ಹಾಗಾಗಿ ನಾವು ಸ್ನೇಹಿತರ ಜತೆ ಮಾತನಾಡುತ್ತಿದ್ದೆವು. ಆಟಿಕೆಗಳ ಕೊರತೆ ಇದ್ದಾಗ ನಮ್ಮದೇ ಆಟಗಳನ್ನು ಕಂಡುಕೊಳ್ಳುತ್ತಿದ್ದೆವು. ಶಾಲೆಗೆ ನಡೆದುಕೊಂಡು ಹೋಗುತ್ತಿದ್ದೆವು. ಹಾಗಾಗಿ ದಾರಿಯಲ್ಲಿ ಸ್ವತಂತ್ರವಾಗಿ ನಡೆಯುವ ಅನುಭವ ಸಿಗುತ್ತಿತ್ತು. ನಮಗೆ ಪ್ರತಿ ಯೊಂದು ವಸ್ತು ಸಿಗುತ್ತಿರಲಿಲ್ಲ, ಹಾಗಾಗಿ ಕಾಯು ವುದನ್ನು ಕಲಿತಿದ್ದೆವು. ಕೆಲವೊಮ್ಮೆ ಇಲ್ಲ ಎಂಬ ಉತ್ತರ ಸಿಗುತ್ತಿತ್ತು. ಹಾಗಾಗಿ ನಿರಾಕರಣೆಯನ್ನು ಸ್ವೀಕರಿಸುವ ಮನೋಭಾವ ನಮ್ಮಲ್ಲಿತ್ತು.
ಮಕ್ಕಳಿಗೆ ಸೌಲಭ್ಯಗಳನ್ನು ಕೊಡಬಾರದು ಎಂದಲ್ಲ. ಆದರೆ ಸೌಲಭ್ಯಗಳ ಜತೆಗೆ ಮಿತಿಯನ್ನು, ಸ್ವಾತಂತ್ರದ ಜತೆಗೆ ಜವಾಬ್ದಾರಿಯನ್ನು, ಆರಾಮದ ಜತೆಗೆ ಸಹನೆಯನ್ನು ಕಲಿಸುವುದು ಪೋಷಕರ ಜವಾಬ್ದಾರಿ. ಸ್ನೇಹಿತರ ಜತೆ ಮಾತನಾಡಲು, ಅವರೊಂದಿಗೆ ಆಟವಾಡಲು, ಜಗತ್ತನ್ನು ಅನುಭವಿಸಲು ಸಮಯ ವನ್ನು ನೀಡಿ, ಎಲ್ಲ ಕೆಲಸವನ್ನು ಮಾಡಿಕೊಡಬೇಡಿ. ವಯಸ್ಸಿಗೆ ತಕ್ಕ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಅವಕಾಶ ನೀಡಿ. ಮಕ್ಕಳಿಗೆ ಎಲ್ಲವನ್ನು ಸುಲಭವಾಗಿ ದೊರಕುವಂತೆ ಮಾಡುವುದಕ್ಕಿಂತ ಜೀವನ ಯಾವಾಗಲೂ ನಮ್ಮ ಇಷ್ಟದಂತೆ ನಡೆಯುವುದಿಲ್ಲ ಎಂಬುದನ್ನು ನಿಧಾನವಾಗಿ ಕಲಿಸುವುದು ಹೆಚ್ಚು ಮುಖ್ಯ.
ಮಕ್ಕಳ ಮೇಲಿನ ಪರಿಣಾಮಗಳು
ಇಲ್ಲ ಎಂಬುದು ಸ್ವೀಕರಿಸಲು ಕಷ್ಟ: ಇಲ್ಲ ಎಂಬುದನ್ನು ಸ್ವೀಕರಿಸಲು ಕಷ್ಟವಾಗಬಹುದು. ನಾವು ಕೇಳಿದ್ದೆಲ್ಲವೂ ಸಿಗುತ್ತಾ ಹೋದರೆ ಒಂದು ಹಂತದಲ್ಲಿ ಸಿಗದಿರುವುದನ್ನು ಮಕ್ಕಳು ಸಹಿಸಿಕೊಳ್ಳಲು ಕಷ್ಟಪಡಬಹುದು. ಇದರಿಂದ ಸಣ್ಣ ನಿರಾಕರಣೆಯು ಕೋಪ ಅಳು ಅಥವಾ ಹಠಕ್ಕೆ ಕಾರಣವಾಗಬಹುದು.
ಸಹನೆಯ ಕೊರತೆ: ಮೊಬೈಲ್‌ನಲ್ಲಿ ಒಂದು ವೀಡಿಯೋ ಮುಗಿಯುವ ಮೊದಲೇ ಮತ್ತೂಂದು ವೀಡಿಯೋ ಸಿಗುತ್ತದೆ. ಆದರೆ ನೈಜ ಜೀವನದಲ್ಲಿ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ. ಈ ವ್ಯತ್ಯಾಸದಿಂದ ಮಕ್ಕಳಿಗೆ ಕಾಯುವುದು, ತಾಳ್ಮೆಯಿಂದ ಕೆಲಸ ಮಾಡುವುದು ಕಷ್ಟವಾಗುವುದು.
ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಕುಗ್ಗಬಹುದು: ಪ್ರತಿಯೊಂದು ಸಮಸ್ಯೆಗಳಿಗೂ ಪೋಷಕರ ಮೇಲೆ ಅವಲಂಬಿತವಾಗಬಹುದು. ಹಾಗಾಗಿ ಬದುಕಿನ ಸಣ್ಣ ಸಣ್ಣ ಕಷ್ಟಗಳು ಸಹ ದೊಡ್ಡ ಸಮಸ್ಯೆಯಂತೆ ಕಾಡುವ ಸಾಧ್ಯತೆ ಇರುತ್ತದೆ.
ಹೊರಗಿನ ಜಗತ್ತಿನ ಅನುಭವ ಕಡಿಮೆಯಾಗ ಬಹುದು: ಹೊರಗೆ ಆಟವಾಡು ವುದು, ಸ್ನೇಹಿತರ ಜತೆ ಬೆರೆಯುವುದು, ಪ್ರಕೃತಿ ಯನ್ನು ಅನುಭವಿ ಸುವುದು, ಸೋಲು-ಗೆಲುವನ್ನು ಎದುರಿಸುವುದು- ಇವೆಲ್ಲವು ಮಕ್ಕಳ ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಯ ಭಾಗ. ಇವು ಗಳ ಬದಲು ಹೆಚ್ಚಿನ ಸಮಯ ಸ್ಕ್ರೀನ್ ನಲ್ಲಿ ಕಳೆದರೆ ನೈಜ ಜಗತ್ತಿನ ಅನುಭವಕ್ಕೆ ಅವಕಾಶ ಕಡಿಮೆ ಆಗಬಹುದು.
ಪೋಷಕರೊಂದಿಗೆ ಸಂಘರ್ಷ ಹೆಚ್ಚಾಗಬಹುದು: ಪೋಷಕರು ಮೊಬೈಲ್ ಬದಿಗಿರಿಸಿ ಓದು ಎಂದಾಗ ಮಗು ವಿರೋಧಿಸುವುದು, ಕೋಪಗೊಳ್ಳುವುದು, ಮಿತಿಗಳನ್ನು ಒಪ್ಪಿಕೊಳ್ಳದಿರುವುದು - ಇವು ನಿಧಾನ ವಾಗಿ ಮನೆಯಲ್ಲಿ ಪ್ರತಿದಿನದ ಸಂಘರ್ಷಕ್ಕೆ ಕಾರಣ ವಾಗಬಹುದು.
ಪೋಷಕರ ಮೇಲೆ ಅವಲಂಬನೆ ಹೆಚ್ಚಾಗಬಹುದು
ಸೌಲಭ್ಯಗಳು ಸ್ವತಃ ಕೆಟ್ಟದಲ್ಲ. ಮೊಬೈಲ್, ಲ್ಯಾಪ್‌ಟಾಪ್, ಕಾರು, ಉತ್ತಮ ಶಿಕ್ಷಣ ಇವೆಲ್ಲವೂ ಮಕ್ಕಳ ಜೀವನವನ್ನು ಉತ್ತಮಗೊಳಿಸಬಲ್ಲವು. ಸಮಸ್ಯೆ ಇರುವುದು ಸೌಲಭ್ಯಗಳಲ್ಲಲ್ಲ, ಅವುಗಳ ಮೇಲಿನ ಅತಿಯಾದ ಅವಲಂಬನೆಯಲ್ಲಿ. ಮಕ್ಕಳಿಗೆ ಆರಾಮವನ್ನು ನೀಡಿ, ಜತೆಗೆ ಸಣ್ಣಪುಟ್ಟ ಜವಾಬ್ದಾರಿಗಳನ್ನು ನೀಡುವುದು ಪೋಷಕರ ಕರ್ತವ್ಯ. ಅವರಿಗೆ ಬೇಕಾದ ವಸ್ತುಗಳನ್ನು ನೀಡಿ ಆದರೆ ಪ್ರತಿಯೊಂದು ಬೇಡಿಕೆಯು ತತ್‌ಕ್ಷಣ ಈಡೇರಬೇಕೆಂಬ ಅಭ್ಯಾಸವನ್ನು ಬೆಳೆಸಬೇಡಿ. ಅವರನ್ನು ರಕ್ಷಿಸಿ ಆದರೆ ಜೀವನದ ಪ್ರತಿಯೊಂದು ಸವಾಲಿನಿಂದ ದೂರವಿಡಬೇಡಿ.
ಪೋಷಕರಾಗಿ ಮಕ್ಕಳ ಕೈಗೆ ಪ್ರತಿಯೊಂದು ಸೌಲಭ್ಯವನ್ನು ಕೊಡುವ ಮುನ್ನ ಅವರ ಕೈ ಹಿಡಿದು ಸ್ವಲ್ಪ ದೂರ ನಡೆಯಿರಿ, ಅವರ ಜತೆ ಮನಸ್ಸು ಬಿಚ್ಚಿ ಮಾತನಾಡಿ, ಅವರ ಮಾತುಗಳನ್ನು ಆಲಿಸಿ, ಅವರಿಗೆ ಹೊರಗಿನ ಜಗತ್ತು ಅನುಭವಿಸಲು ಅವಕಾಶ ವನ್ನು ನೀಡಿ. ಏಕೆಂದರೆ ಮಕ್ಕಳಿಗೆ ಪೋಷಕ ರು ನೀಡುವ ದುಬಾರಿ ವಸ್ತುಗಳು ಒಂದು ದಿನ ಹಳೆಯದಾಗ ಬಹುದು. ಆದರೆ ಬಾಲ್ಯದಲ್ಲಿ ಪೋಷಕರ ಜತೆ ಕಳೆದ ಸಮಯ, ಪಡೆದ ಪ್ರೀತಿ ಮತ್ತು ಕಲಿತ ಜೀವನದ ಪಾಠಗಳು ಅವರ ವ್ಯಕ್ತಿತ್ವವನ್ನು ರೂಪಿಸಿ ಜೀವನದ ಮಹತ್ವಪೂರ್ಣ ಭಾಗವಾಗಿ ಉಳಿಯುತ್ತದೆ. ಮಕ್ಕಳಿಗೆ ಕೇವಲ ಸುಖಕರವಾದ ಜೀವನವನ್ನು ಅಥವಾ ಬಾಲ್ಯವನ್ನು ನೀಡುವುದಲ್ಲ ಬದಲಾಗಿ ಅರ್ಥಪೂರ್ಣವಾದ ಬಾಲ್ಯವನ್ನು ನೀಡುವುದು ಅಗತ್ಯ. ಇದರಿಂದಾಗಿ ಮಕ್ಕಳಿಗೆ ನೀವು ನೀಡ ಬಹುದಾದ ಅತ್ಯಂತ ಅಮೂಲ್ಯ ಉಡುಗೊರೆ ದುಬಾರಿ ವಸ್ತುವಲ್ಲ ಬದಲಾಗಿ ನಿಮ್ಮ ಸಮಯ.
-ಡಾ| ವಿದ್ಯಾಲಕ್ಷ್ಮೀ ವಿ. ಶೆಟ್ಟಿ ,
ಬಂಟ್ವಾಳ

