Dailyhunt Logo
  • Light mode
    Follow system
    Dark mode
    • Play Story
    • App Story
Mangaluru: ಆನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಿ

Mangaluru: ಆನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಿ

ಮಂಗಳೂರು: ಸುಳ್ಯ ಮತ್ತು ಕಡಬ ತಾಲೂಕಿನಲ್ಲಿ ಆನೆ ದಾಳಿಯಿಂದ ರೈತರು, ಸಾರ್ವಜನಿಕರು ಕಂಗಾಲಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು. ಆನೆಗಳಿಂದ ರಕ್ಷಣೆಗೆ ಸೋಲಾರ್‌ ಬೇಲಿ ಹಾಕಲು ಸರಕಾರದಿಂದ ಬೆಳೆಗಾರರಿಗೆ ಶೇ. 100 ಅನುದಾನ ನೀಡಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಆಗ್ರಹಿಸಿದ್ದಾರೆ.

ಶನಿವಾರ ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರ ಅಧ್ಯಕ್ಷತೆಯಲ್ಲಿ ಜಿ. ಪಂ. ನೇತ್ರಾವತಿ ಸಭಾಂಗಣದಲ್ಲಿ ನಡೆದ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿಯ ಸಭೆಯಲ್ಲಿ ಅವರು ವಿಷಯ ಪ್ರಸ್ತಾವಿಸಿದರು.

ಜಿಲ್ಲಾಧಿಕಾರಿ ದರ್ಶನ್‌ ಎಚ್‌. ವಿ. ಪ್ರತಿಕ್ರಿಯಿಸಿ, ಗುಂಡ್ಯದಲ್ಲಿ ಆನೆ ಕ್ಯಾಂಪ್‌ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಸಹಾಯಕ ಅರಣ್ಯ ಅಧಿಕಾರಿ ಪ್ರತಿಕ್ರಿಯಿಸಿ, ಪುತ್ತೂರು, ಸುಳ್ಯ ಭಾಗದಲ್ಲಿ 80 ಆನೆಗಳನ್ನು ಗುರುತಿಸಲಾಗಿದೆ. ಇಲಾಖೆಯ ಸಿಬಂದಿ ದಿನದ 24 ತಾಸು ಕೂಡ ಸಿದ್ದರಿದ್ದು, ಆನೆಗಳನ್ನು ಕಾಡಿಗೆ ಓಡಿಸುತ್ತಿದ್ದಾರೆ. 2026-27ರಲ್ಲಿ 19 ಮಂದಿಗೆ 3.33 ಲ. ರೂ. ಪರಿಹಾರ ನೀಡಲಾಗಿದೆ. ಇನ್ನೂ 381 ಮಂದಿಗೆ 73 ಲ. ರೂ. ಪರಿಹಾರ ನೀಡಲು ಅನುದಾನ ಬರಲು ಬಾಕಿ ಇದೆ ಎಂದರು.

ಶಾಶ್ವತ ಕ್ರಮ ಕೈಗೊಳ್ಳಿ

ಸಂಸದ ಕ್ಯಾ| ಬ್ರಿಜೇಶ್‌ ಚೌಟ ಮಾತನಾಡಿ, ಆನೆಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಓಡಿಸು ವುದು ಶಾಶ್ವತ ಪರಿಹಾರವಲ್ಲ. ಮೇಲಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇದುವರೆಗೆ ತೆಗೆದುಕೊಂಡಿರುವ ಕ್ರಮಗಳು, ಮುಂದಿನ ಯೋಜನೆ ಏನೆಂಬುದರ ಮಾಹಿತಿಯನ್ನು ಕೂಡಲೇ ನೀಡಬೇಕು ಎಂದರು.

ಅಕ್ಟೋಬರ್‌ಗೆ ಪ್ಲಾಸ್ಟಿಕ್‌ ಪಾರ್ಕ್‌ ಸಿದ್ದ

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ಮೂಲಕ ಮಂಗಳೂರಿನ ಗಂಜಿಮಠದಲ್ಲಿ ನಿರ್ಮಾಣ ಹಂತದಲ್ಲಿರುವ ಪ್ಲಾಸ್ಟಿಕ್‌ ಪಾರ್ಕ್‌ನ ಬಾಕಿ ಕಾಮಗಾರಿ ಪೂರ್ಣ ಗೊಳಿಸಿ ಅಕ್ಟೋಬರ್‌ ಅಂತ್ಯದೊಳಗೆ ಉದ್ಘಾಟನೆ ಸಿದ್ದಗೊಳಿಸು ವಂತೆ ಸಂಸದರು ಸೂಚನೆ ನೀಡಿದರು.

ಪಿಎಂ ಜನಮನ್‌ ಯೋಜನೆಯಡಿ ಜಿಲ್ಲೆಯ ಪ್ರತಿ ಕೊರಗ ಕುಟುಂಬಗಳಿಗೂ ಮನೆ ನಿರ್ಮಿಸಿಕೊಡಬೇಕಾಗಿದೆ. ಯೋಜನೆ ಸಮರ್ಪಕ ಜಾರಿಗೆ ಎನ್‌ಜಿಒಗಳನ್ನು ಸೇರಿಸಿಕೊಳ್ಳಲು ಯೋಜನೆ ರೂಪಿಸುವುದು ಸೂಕ್ತ ಎಂದು ಸಂಸದರು ಸಲಹೆ ನೀಡಿದರು.

ಹೆದ್ದಾರಿ ನಿರ್ವಹಣೆ

ರಾ.ಹೆ. 66ರಲ್ಲಿ ಕಣ್ಣೂರು-ಸುರತ್ಕಲ್‌ ವರೆಗೆ ದಾರಿದೀಪ ನಿರ್ವಹಣೆ ಸಮ ರ್ಪಕವಾಗಿ ನಡೆಸಬೇಕು. ಸವೀರ್ಸ್‌ ರಸ್ತೆ ಕಾಮಗಾರಿಗೆ ವೇಗ ನೀಡಬೇಕು ಎಂದು ಸಂಸದರು ಸೂಚಿಸಿದರು.

ಪ್ರತ್ಯೇಕ ಸಭೆ

ಪಾಂಡೇಶ್ವರ ರೈಲ್ವೇ ಲೆವೆಲ್‌ ಕ್ರಾಸಿಂಗ್‌ ಸಮಸ್ಯೆ, ಮಲ್ಟಿಲೆವೆಲ್‌ ಕಾರ್‌ ಪಾರ್ಕಿಂಗ್‌ ಯೋಜನೆ, ದಾರಿದೀಪ ನಿರ್ವಹಣೆ ಹಾಗೂ ರಿವರ್‌ ಫ್ರಂಟ್‌ ಯೋಜನೆಯ ಕುರಿತು ಪ್ರತ್ಯೇಕ ಸಭೆ ಕರೆಯುವಂತೆ ಶಾಸಕ ವೇದವ್ಯಾಸ ಕಾಮತ್‌ ಆಗ್ರಹಿಸಿದರು.

ಸಭೆಯಲ್ಲಿ ಶಾಸಕರಾದ ಶಾಸಕ ರಾಜೇಶ್‌ ನಾಯ್ಕ, ಉಮಾನಾಥ್‌ ಕೋಟ್ಯಾನ್‌, ಜಿ. ಪಂ. ಸಿಇಒ ನರ್ವಡೆ, ಎಸ್‌ಪಿ ಡಾ| ಅರುಣ್‌ ಕುಮಾರ್‌, ಡಿಸಿಪಿ ಮಿಥುನ್‌, ಮನಪಾ ಆಯುಕ್ತ ರಾಹುಲ್‌ ರತ್ನಂ ಪಾಂಡೆ ಉಪಸ್ಥಿತರಿದ್ದರು.

ಉತ್ತರಕ್ಕೆ ಹೊಸ ರೈಲು ನಿಲ್ದಾಣ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿ ಹೊಸ ರೈಲು ನಿಲ್ದಾಣ ಸ್ಥಾಪಿಸುವ ಬಗ್ಗೆ ಕೇಂದ್ರ ರೈಲ್ವೇ ಸಚಿವರಲ್ಲಿ ಪ್ರಸ್ತಾವಿಸಲಾಗಿದ್ದು, ಅವರು ಒಪ್ಪಿಗೆ ಸೂಚಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದ ಆಸುಪಾಸು ಸ್ಥಳಾವಕಾಶವಿದ್ದರೆ ಅಲ್ಲಿ ರೈಲು ನಿಲ್ದಾಣ (ಹೊಸ ಮಂಗಳೂರು ನಾರ್ತ್‌ ರೈಲು ನಿಲ್ದಾಣ) ಆರಂಭಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜೋಕಟ್ಟೆ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು. ಅಮೃತ್‌ ಭಾರತ್‌ ಯೋಜನೆಯಡಿ ಮಂಗಳೂರು ಜಂಕ್ಷನ್‌ ಮತ್ತು ಸುಬ್ರಹ್ಮಣ್ಯ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸಂಸದ ಕ್ಯಾ| ಬ್ರಿಜೇಶ್‌ ಚೌಟ ಸೂಚಿಸಿದರು.

ಬೆಳೆ ನಾಶಕ್ಕೆ ಅಧಿಕ ಪರಿಹಾರಕ್ಕೆ ಒತ್ತು ನೀಡಿ

ಪ್ರಸಕ್ತ ಸಾಲಿನ ಮುಂಗಾರಿನಿಂದಾಗಿ ದ.ಕ. ಜಿಲ್ಲೆಯಲ್ಲಿ 18.92 ಎಕ್ರೆ ಅಡಿಕೆ ಬೆಳೆಗೆ ಹಾನಿಯಾಗಿದೆ. 137 ರೈತರಿಗೆ ಸುಮಾರು 5.6 ಲಕ್ಷ ರೂ. ಪರಿಹಾರಕ್ಕೆ ವರದಿ ತಯಾರಿಸಲಾಗಿದೆ ಎಂದು ತೋಟಗಾರಿಕ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು. ಬೆಳೆ ಹಾನಿಗೊಳಗಾದವರಿಗೆ ಹೆಚ್ಚಿನ ಪರಿಹಾರ ದೊರೆಯುವಂತೆ ಮಾಡಬೇಕು ಎಂದು ಜಿಲ್ಲಾಧಿಕಾರಿ ದರ್ಶನ್‌ ಎಚ್‌. ವಿ. ಸೂಚಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Udayavani