ಮಂಗಳೂರು: ಎಸ್ ಐಆರ್ ಗೆ ಸಂಬಂಧಿಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪೋಸ್ಟರನ್ನು ಉಳ್ಳಾಲ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಫೀಕ್ ಅಂಬ್ಲಮೊಗರು ಅವರು ದುರುಪಯೋಗ ಪಡಿಸಿದ್ದಾರೆ ಎಂದು ಆರೋಪಿಸಿ ದ.ಕ ಜಿಲ್ಲಾ ಬಿಜೆಪಿಯಿಂದ ಜಿಲ್ಲಾ ಚುನಾವಣಾಧಿಕಾರಿ ಮತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ.
ಮಂಗಳೂರು ವಿಧಾನಸಭಾ ಕ್ಷೇತ್ರದ ಅಂಬ್ಲಮೊಗರು ಗ್ರಾಮದ 5 ಬೂತ್ ಗಳಿಗೆ ಐದು ಬಿಎಲ್‌ಎ ಹಾಗೂ ಪ್ರತಿ ಬೂತ್ ಗೆ ಇಬ್ಬರು ಸಹಾಯಕರನ್ನುಕ್ಷೇತ್ರದ ಶಾಸಕ ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಆದೇಶದಂತೆ ನೇಮಕ ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ, ಕರ್ನಾಟಕ ಎಂಬ ಹೆಸರಿನ ಪೋಸ್ಟರ್ ಗಳನ್ನು ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ರಫೀಕ್ ಹರಿಯಬಿಟ್ಟಿದ್ದಾರೆ.
ಚುನಾವಣ ಆಯೋಗದ ಹೆಸರನ್ನು ದುರುಪಯೋಗ ಪಡಿಸಿದ ರಫೀಕ್ ಅವರನ್ನು ಕೂಡಲೇ ಸಮಿತಿಯ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು. ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ದೂರಿನಲ್ಲಿ ಆಗ್ರಹಿಸಿದ್ದಾರೆ.

