Dailyhunt Logo
  • Light mode
    Follow system
    Dark mode
    • Play Story
    • App Story
Mangaluru: ʼಸೆಂಟ್ರಲ್‌', 'ಜಂಕ್ಷನ್‌' ಹೆಸರಷ್ಟೇ ಸಾಕೆ?

Mangaluru: ʼಸೆಂಟ್ರಲ್‌', 'ಜಂಕ್ಷನ್‌' ಹೆಸರಷ್ಟೇ ಸಾಕೆ?

ಮಂಗಳೂರು ʼಸೆಂಟ್ರಲ್‌' ಮತ್ತು ʼಜಂಕ್ಷನ್‌' ಹೆಸರೇ ಹೇಳುವ ಹಾಗೆ ಹಲವು ರೈಲುಗಳಿಗೆ ಕೇಂದ್ರ ಮತ್ತು ಕೂಡು ಸ್ಥಾನ. ಎರಡೂ ನಿಲ್ದಾಣಗಳು ಹಲವು ದಶಕಗಳಿಂದ ನಿರ್ಲಕ್ಷ್ಯಕ್ಕೆ ಈಡಾಗಿವೆ. ಈಗ ಮಂಗಳೂರು ಭಾಗ ನೈಋತ್ಯ ವಲಯವನ್ನು ಸೇರಿಕೊಂಡಿರುವುದರ ಜತೆಗೆ ದೀರ್ಘ‌ಕಾಲದಿಂದ ಆಗಬೇಕಾಗಿದ್ದ ಮೂಲಸೌಕರ್ಯಗಳ ಅಭಿವೃದ್ಧಿ ಆಗಬೇಕಾಗಿದೆ.

ಮಂಗಳೂರು: ಹಲವು ರೈಲುಗಳು ಏಕಕಾಲದಲ್ಲಿ ಬಂದು ನಿಲ್ಲುವ, ಹೊರಡುವ ಪ್ರಮುಖ ನಿಲ್ದಾಣಗಳಲ್ಲಿ ಒಂದು ಮಂಗಳೂರು ಸೆಂಟ್ರಲ್‌. ʼಸೆಂಟ್ರಲ್‌'- ಹೆಸರೇ ಸೂಚಿಸುವಂತೆ ಹಲವು ರೈಲುಗಳಿಗೆ ಇದು ಒಂದು ಕೇಂದ್ರ. ಇಲ್ಲಿ ಪ್ರಯಾಣಿಕರ ದಟ್ಟಣೆ ಸಾಮಾನ್ಯ. ಆದರೆ ಇಷ್ಟು ದೊಡ್ಡ ನಿಲುದಾಣ ಆಗಿದ್ದರೂ ಇಲ್ಲಿ ರೈಲ್ವೇ ಮೂಲಸೌಕರ್ಯಗಳೇನಿವೆ ಎಂಬುದನ್ನು ಗಮನಿಸಿದರೆ ದಶಕಗಳಿಂದ ಅನುಭವಿಸುತ್ತಿರುವ ನಿರ್ಲಕ್ಷ್ಯ ಸ್ಪಷ್ಟವಾಗುತ್ತದೆ.

ಒಂದು ಶತಮಾನ ದಾಟಿರುವ ದೇಶದ ಪ್ರಮುಖ ನಿಲ್ದಾಣವಾದ ಮಂಗಳೂರು ಸೆಂಟ್ರಲ್‌ ಈಗ ಒಂದು ದಶಕದ ಹಿಂದಿನ ವರೆಗೂ ಕೇವಲ ಮೂರು ಪ್ಲಾಟ್‌ಫಾರಂಗಳೊಂದಿಗೆ ಕಾರ್ಯಾಚರಿಸುತ್ತಿತ್ತು. ಇದರಿಂದ ಮುಖ್ಯವಾಗಿ ಬೆಂಗಳೂರು, ಮುಂಬಯಿ ಕಡೆಗೆ ಹೋಗುವಂತಹ ರೈಲುಗಳ ಆಗಮನ- ನಿರ್ಗಮನಕ್ಕೆ ದೊಡ್ಡ ಅಡಚಣೆಯಾಗುತ್ತಿತ್ತು.

4 ವರ್ಷಗಳ ಹಿಂದೆಯಷ್ಟೇ ಪ್ಲಾಟ್‌ಫಾರಂ ನಂ. 4 ಹಾಗೂ 5ನ್ನು ಅಭಿವೃದ್ಧಿಪಡಿಸಲಾಯಿತು. ಅದೂ ಇನ್ನು ನಿರ್ವಾಹವಿಲ್ಲ ಎಂದಾದ ಮೇಲೆ ಅಷ್ಟೇ. ಆದರೂ ಇವುಗಳಿಗೆ ಪೂರ್ತಿಯಾಗಿ ಛಾವಣಿ ನಿರ್ಮಿಸುವ ಕೆಲಸ ಆಗಿಲ್ಲ. ಇದರಿಂದಾಗಿ ನಾಲ್ಕು ತಿಂಗಳುಗಳ ಮಳೆಗಾಲದ ಅವಧಿಯಲ್ಲಿ ಪ್ರಯಾಣಿಕರು ಅರೆಬರೆ ಒದ್ದೆಯಾಗಿಕೊಂಡು ರೈಲುಗಳನ್ನು ಏರುವ, ರೈಲುಗಳಿಂದ ಇಳಿದು ಓಡುವ ಪರಿಸ್ಥಿತಿ ಇಂದಿಗೂ ಇದೆ.

ಮಂಗಳೂರು ಸೆಂಟ್ರಲ್‌ ಎನ್ನುವುದು ಟರ್ಮಿನಲ್‌ ಸ್ಟೇಷನ್‌ ಅಥವಾ ಹಂಪನಕಟ್ಟೆಯಲ್ಲೇ ಟರ್ಮಿನೇಟ್‌ ಆಗುವ ಸ್ಟೇಷನ್‌. ಇಲ್ಲಿ ಹೆಚ್ಚಿನ ಮೂಲಸೌಕರ್ಯವನ್ನು ನೀಡದಿರಲು ಅಥವಾ ಅಭಿವೃದ್ಧಿಪಡಿಸದಿರಲು ಇದನ್ನೇ ನೆಪ ಮಾಡಿಕೊಳ್ಳಲಾಯಿತು.

ಶೌಚಾಲಯ, ಎಸ್ಕಲೇಟರ್‌: ʼಇಲ್ಲ'ಗಳೇ ಎಲ್ಲ

4, 5ನೇ ಪ್ಲಾಟ್‌ಫಾರಂಗಳು ಕಾರ್ಯಾರಂಭಿಸಿ 2 ವರ್ಷ ಕಳೆದರೂ ಇದುವರೆಗೆ ಅವುಗಳಲ್ಲಿ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲ. ಮಕ್ಕಳು, ವೃದ್ಧರು, ಮಹಿಳೆಯರು ಎನ್ನದೆ ಪ್ರಯಾಣಿಕರು ಅಗತ್ಯಬಿದ್ದರೆ ಮೇಲ್ಸೇತುವೆ ಮೂಲಕ ಹಾದು ಒಂದನೇ ಪ್ಲಾಟ್‌ ಫಾರಂಗೇ ಬರಬೇಕು. ಆದರೆ ರೈಲ್ವೇ ನಿಯಮ ಏನು ಹೇಳುತ್ತದೆ

ಗೊತ್ತೇ: ಪ್ರತೀ ಪ್ಲಾಟ್‌ಫಾರಂ ಆರಂಭ, ಮಧ್ಯ ಹಾಗೂ ಕೊನೆಯಲ್ಲಿ ಶೌಚಾಲಯಗಳು ಇರಬೇಕು!

ದಿನಂಪ್ರತಿ ಸಾವಿರಾರು ಮಂದಿ ಬಂದು-ಹೋಗುವ ನಿಲ್ದಾಣ ಆಗಿರುವ ಮಂಗಳೂರು ಸೆಂಟ್ರಲ್‌ನಲ್ಲಿ ಪ್ರಯಾಣಿಕರು 4, 5ನೇ ಪ್ಲಾಟ್‌ಫಾರಂಗೆ ಹೋಗಬೇಕಾದರೆ ಮೇಲ್ಸೇತುವೆ ಮೂಲಕ ಕಾಲ್ನಡಿಗೆಯಲ್ಲೇ ಹೋಗಬೇಕೇ ವಿನಾ ಈವರೆಗೂ ಎಸ್ಕಲೇಟರ್‌ ಒದಗಿಸಿಲ್ಲ. ಎಸ್ಕಲೇಟರ್‌ಇದೆ, ಒಂದು ಮೂಲೆಯಲ್ಲಿ ಇದೆ. ಅದು ನಿಲ್ದಾಣದಿಂದ ಹೊರಬರುವುದಕ್ಕೆ ಮಾತ್ರ. ಅದೂ ಕೆಟ್ಟು ಹೋಗಿ ಮೂಲೆಗುಂಪಾಗಿದೆ. ಈಗ ಭಾರವಾದ ಲಗೇಜ್‌ ಹೊತ್ತು ಬರುವ ಹಿರಿಯ ನಾಗರಿಕರು, ಮಹಿಳೆಯರಿಗೆ ಸುಲಭವಾಗಿ 2, 3, 4, 5ನೇ ಪ್ಲಾಟ್‌ಫಾರಂಗೆ ಹೋಗುವುದಕ್ಕೆ ಉಳಿದಿರುವುದು ಒಂದೇ ಒಂದು ಲಿಫ್ಟ್‌ ಮಾತ್ರ!

ಮಂಗಳೂರು ಜಂಕ್ಷನ್‌ ಕೂಡ ಹಿಂದೆ

ಈ ಅವಗಣನೆ ಮಂಗಳೂರು ಸೆಂಟ್ರಲ್‌ಗೆ ಮಾತ್ರ ಎಂದುಕೊಳ್ಳಬೇಡಿ, ಜಂಕ್ಷನ್‌ ಕೂಡ ದಶಕಗಳಿಂದ "ಮಲತಾಯಿ ಮಗು'ವೇ ಆಗಿದೆ! ಬಹುತೇಕ ರೈಲುಗಳು ಉತ್ತರ, ದಕ್ಷಿಣಕ್ಕೆ ಸಂಚರಿಸುವುದು ಮಂಗಳೂರು ಜಂಕ್ಷನ್‌ ಮೂಲಕ. ಈ ಪೈಕಿ ಬಹಳಷ್ಟು ರೈಲುಗಳು ಮಂಗಳೂರು ಸೆಂಟ್ರಲ್‌ ಪ್ರವೇಶಿಸುವುದು ಕೂಡ ಇಲ್ಲ. ಅಂತಹ ʼಜಂಕ್ಷನ್‌' ಆದರೂ ಅಭಿವೃದ್ಧಿಯಾಗಲಿ ಎಂದು ಆಶಿಸಿದರೆ ಅದು ಕೂಡ ಆಗಿಲ್ಲ. ಇಲ್ಲಿಗೆ ಅನುದಾನ ಕೊಟ್ಟರೂ ಕೂಡ ಪ್ಲಾಟ್‌ಫಾರಂ ನಂ.4, 5 ಬಂದೇ ಇಲ್ಲ!

ಹೆಸರಿಗೆ ʼವಿಶ್ವದರ್ಜೆ ನಿಲ್ದಾಣ', ಕಡತಕ್ಕೆ ಸೀಮಿತ

ಶತಮಾನಕ್ಕೂ ಹಳೆಯದಾದ ಮಂಗಳೂರು ಸೆಂಟ್ರಲ್‌ ನಿಲ್ದಾಣವನ್ನು ʼವಿಶ್ವದರ್ಜೆ ಸ್ಟೇಷನ್‌' ಆಗಿ ಘೋಷಿಸಿದ್ದು 2009ರ ವೇಳೆಗೆ. ಆಗ ಈ ನಿಲ್ದಾಣವನ್ನು ವಿಮಾನ ನಿಲ್ದಾಣದ ಮಾದರಿಯಲ್ಲೇ ಅಭಿವೃದ್ಧಿ ಪಡಿಸುವುದಕ್ಕೆ ಯೋಜಿಸಲಾಗಿತ್ತು. ಅದಕ್ಕಾಗಿ ಅಧ್ಯಯನಗಳು ನಡೆದವು, ಬಹುಮಹಡಿ ವಾಣಿಜ್ಯ ಸಂಕೀರ್ಣ, ಸ್ವಯಂಚಾಲಿತ ಪಾರ್ಕಿಂಗ್‌, ಅತ್ಯಾಧುನಿಕ ಪ್ಯಾಸೆಂಜರ್‌ಪ್ಲಾಝಾ ಇತ್ಯಾದಿ ನಿರ್ಮಿಸುವುದು ಇದರ ಭಾಗವಾಗಿತ್ತು. ಆದರೆ ದಕ್ಷಿಣ-ನೈಋತ್ಯ ವಲಯದ ನಡುವಿನ ಗೊಂದಲಗಳು, ಮಂಗಳೂರು ಸೆಂಟ್ರಲ್‌ಗೆ ಇರುವ ಜಾಗದ ಮಿತಿ ಇತ್ಯಾದಿ ಕಾರಣದಿಂದಾಗಿ ಇದು ಕನಸಾಗಿಯೇ ಉಳಿಯಿತು.

ಅದರ ಬದಲಿಗೆ 95 ಕೋಟಿ ರೂ. ವೆಚ್ಚದಲ್ಲಿ ಸೀಮಿತ ಅಭಿವೃದ್ಧಿ ಕೈಗೊಳ್ಳುವ ಯೋಜನೆ ಜಾರಿಗೆ ಬಂದಿದ್ದು, ಅದರ ಭಾಗವಾಗಿ ಹೆಚ್ಚುವರಿ ಪ್ಲಾಟ್‌ಫಾರಂ ಮತ್ತಿತರ 'ಮೇಕಪ್‌' ಅಭಿವೃದ್ಧಿಗಳಷ್ಟೇ ನಡೆದವು.

ವರ್ಷಕ್ಕೊಮ್ಮೆ ಪ್ರತೀ ರೈಲ್ವೇ ವಲಯದಲ್ಲೂ ವಿಭಾಗೀಯ ಕಚೇರಿಗಳಿಂದ ಅಧಿಕಾರಿಗಳನ್ನು ಕರೆದು ವೇಳಾಪಟ್ಟಿ ಸಮ್ಮೇಳನ ನಡೆಸಲಾಗುತ್ತದೆ. ಅದರಲ್ಲಿ ಬಂದ ಹೊಸ ರೈಲುಗಳ ಸಲಹೆಯನ್ನು ಅಂತರ್‌ವಲಯ ವೇಳಾಪಟ್ಟಿ ಸಮ್ಮೇಳನದಲ್ಲಿ ಮಂಡಿಸಲಾಗುತ್ತದೆ. ಬಳಿಕ ಅದರಲ್ಲಿ ಸಮಾಲೋಚನೆ ನಡೆದು, ಬೇಡಿಕೆಗಳನ್ನು ಪರಿಶೀಲಿಸಿ, ಕಾರ್ಯಯೋಗ್ಯ ಎನಿಸಿದರೆ ಹೊಸ ರೈಲುಗಳಿಗೆ ಶಿಫಾರಸು ಮಾಡಲಾಗುತ್ತದೆ. ಅಂತಿಮ ತೀರ್ಮಾನವನ್ನು ರೈಲ್ವೇ ಮಂಡಳಿ ಕೈಗೊಳ್ಳುತ್ತದೆ. ಆದರೆ ಕಳೆದ 10 ವರ್ಷಗಳಿಂದ ಪಾಲಕ್ಕಾಡ್‌ ವಿಭಾಗದ ಅಧಿಕಾರಿಗಳು ಮಂಗಳೂರಿನಿಂದ ಕರ್ನಾಟಕದ ಇತರ ಭಾಗಗಳಿಗೆ, ಉತ್ತರ ಭಾರತಕ್ಕೆ ರೈಲಿನ ಶಿಫಾರಸು ಮಾಡಿಯೇ ಇಲ್ಲ. -ಅನಿಲ್‌ ಹೆಗ್ಡೆ, ಪಶ್ಚಿಮ ರೈಲ್ವೇ ಅಭಿವೃದ್ಧಿ ಯಾತ್ರಿ ಸಂಘ

Dailyhunt
Disclaimer: This content has not been generated, created or edited by Dailyhunt. Publisher: Udayavani