Dailyhunt
Manipal Anatomy Pathology Museum; ಮಣಿಪಾಲ ಅನಾಟಮಿ ಪೆಥಾಲಜಿ ಮ್ಯೂಸಿಯಂ: ಒಂದು ಅವಲೋಕನ

Manipal Anatomy Pathology Museum; ಮಣಿಪಾಲ ಅನಾಟಮಿ ಪೆಥಾಲಜಿ ಮ್ಯೂಸಿಯಂ: ಒಂದು ಅವಲೋಕನ

ಣಿಪಾಲದಲ್ಲಿರುವ ಮಣಿಪಾಲ ಅಂಗರಚನಾಶಾಸ್ತ್ರ ಮತ್ತು ರೋಗಶಾಸ್ತ್ರ ವಸ್ತುಸಂಗ್ರಹಾಲಯ (ಅನಾಟಮಿ ಮತ್ತು ಪೆಥಾಲಜಿ ಮ್ಯೂಸಿಯಂ) ವೈದ್ಯಕೀಯ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಮತ್ತು ಸಾರ್ವಜನಿಕರಿಗೆ ಒಂದು ಪ್ರಮುಖ ಶೈಕ್ಷಣಿಕ ಸಂಪನ್ಮೂಲ ಕೇಂದ್ರವಾಗಿದೆ. ಇದು ಮಣಿಪಾಲ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ (ಮಾಹೆ) ಅಡಿಯಲ್ಲಿರುವ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಒಂದು ಭಾಗವಾಗಿದೆ.

ಇತಿಹಾಸ ಮತ್ತು ಸ್ಥಾಪನೆ

ಈ ವಸ್ತುಸಂಗ್ರಹಾಲಯವನ್ನು ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಅಂಗರಚನಾಶಾಸ್ತ್ರದ ಮೊದಲ ಪ್ರಾಧ್ಯಾಪಕರಾದ ಡಾ| ಎಸ್‌.ಎಸ್‌. ಗೋಡಬೋಲೆ ಅವರು ಸ್ಥಾಪಿಸಿದರು. ಅಂಗರಚನಾ ಮಾದರಿಗಳ ವಿಭಜನೆ, ಸಂರಕ್ಷಣೆ ಮತ್ತು ಪ್ರದರ್ಶನದ ಬಗ್ಗೆ ಅವರಿಗೆ ಅಪಾರವಾದ ಆಸಕ್ತಿಯಿತ್ತು. ಅವರ ಮಾರ್ಗದರ್ಶನದಲ್ಲಿ, 1954ರಲ್ಲಿ 1 ಸಾವಿರಕ್ಕೂ ಹೆಚ್ಚು ಮಾದರಿಗಳೊಂದಿಗೆ ಈ ವಸ್ತುಸಂಗ್ರಹಾಲಯವು ಸಾರ್ವಜನಿಕರಿಗೆ ಮುಕ್ತವಾಯಿತು. ಆನೆಯ ತಲೆಬುರುಡೆ, ತಿಮಿಂಗಿಲದ ಅಸ್ಥಿಪಂಜರ ಮತ್ತು ಉದ್ದನೆಯ ಕಾಳಿಂಗ ಸರ್ಪದ ಅಸ್ಥಿಪಂಜರಗಳು ಇಲ್ಲಿನ ಕೆಲವು ವಿಶಿಷ್ಟ ಆಕರ್ಷಣೆಗಳಾಗಿದ್ದವು.

ಪ್ರದರ್ಶನಗಳು ಮತ್ತು ವೈಶಿಷ್ಟ್ಯಗಳು

ಇಂದು ಈ ಮ್ಯೂಸಿಯಂ ಮಾನವ ಅಸ್ಥಿಪಂಜರಗಳು, ಅಂಗಾಂಗಗಳು ಮತ್ತು ದೇಹದ ವಿವಿಧ ಭಾಗಗಳ ಬೃಹತ್‌ ಸಂಗ್ರಹವನ್ನು ಹೊಂದಿದೆ. ಈ ಮಾದರಿಗಳನ್ನು ಫಾರ್ಮಲಿನ್‌ ದ್ರಾವಣದಲ್ಲಿ ಎಚ್ಚರಿಕೆಯಿಂದ ಸಂರಕ್ಷಿಸಿಡಲಾಗಿದೆ ಮತ್ತು ಮಾನವ ದೇಹದ ವಿವಿಧ ವ್ಯವಸ್ಥೆಗಳಿಗೆ ಅನುಗುಣವಾಗಿ ಜೋಡಿಸಿಡಲಾಗಿದೆ. ಪ್ರತೀ ಮಾದರಿಯನ್ನು ಸಂದರ್ಶಕರಿಗೆ ಸುಲಭ ಮತ್ತು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವಂತೆ ಲೇಬಲ್‌ ಮಾಡಲಾಗಿದೆ. ಸ್ಥಳೀಯ ಸಂದರ್ಶಕರಿಗೆ ಅನುಕೂಲವಾಗುವಂತೆ ಪ್ರದರ್ಶಿತ ವಸ್ತುಗಳ ವಿವರಣೆಯನ್ನು ಇಂಗ್ಲಿಷ್‌ ಜತೆಗೆ ಕನ್ನಡದಲ್ಲಿಯೂ ನೀಡಲಾಗಿದೆ.

ನಿರ್ವಹಣೆ

ಮಾದರಿಗಳು ಸ್ಪಷ್ಟವಾಗಿ ಮತ್ತು ಉತ್ತಮವಾಗಿ ಕಾಣುವಂತೆ ಪ್ರತೀ ಆರು ತಿಂಗಳಿಗೊಮ್ಮೆ ಸಂರಕ್ಷಕ ದ್ರಾವಣಗಳನ್ನು ಬದಲಾಯಿಸಲಾಗುತ್ತದೆ. ದೇಹದ ವಿವಿಧ ಭಾಗಗಳ ಅಡ್ಡ ಕೊಯ್ತದ ಮಾದರಿಗಳು ಕೂಡ ಇಲ್ಲಿದ್ದು, ಇದರ ಮೂಲಕ ವಿದ್ಯಾರ್ಥಿಗಳಿಗೆ ದೇಹದ ಒಳ ಅಂಗಾಂಗಗಳ ಸಂರಚನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಜನ್ಮಜಾತ ವೈಕಲ್ಯಗಳು ಮತ್ತು ಅಪರೂಪದ ಕಾಯಿಲೆಗಳನ್ನು ಹೊಂದಿದ್ದವರ ದೇಹ ಮಾದರಿಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು, ಇವು ಜೀವಶಾಸ್ತ್ರೀಯ ಬೆಳವಣಿಗೆ ಮತ್ತು ರೋಗಶಾಸ್ತ್ರದ ಬಗ್ಗೆ ಅಮೂಲ್ಯ ಒಳನೋಟಗಳನ್ನು ಒದಗಿಸುತ್ತವೆ.

ಶೈಕ್ಷಣಿಕ ಪ್ರಾಮುಖ್ಯ ಮತ್ತು ಆಧುನಿಕತೆ

ಈ ಮ್ಯೂಸಿಯಂ ಕಲಿಕೆಗೆ ಒಂದು ಅಪೂರ್ವ ಅವಕಾಶ ಮತ್ತು ಸಂಪನ್ಮೂಲವಾಗಿದೆ. ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು ನಿಯಮಿತವಾಗಿ ಇಲ್ಲಿ ಅಭ್ಯಾಸ ಮಾಡುತ್ತಾರೆ. ಇದರ ಜತೆಗೆ ಇತರ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಮಾನವ ಅಂಗರಚನಾ ಶಾಸ್ತ್ರ ಮತ್ತು ವೈದ್ಯಕೀಯ ವಿಜ್ಞಾನದ ಬಗ್ಗೆ ಆಸಕ್ತಿಯುಳ್ಳ ಸಾರ್ವಜನಿಕರಿಗೆ ಇದು ಕಲಿಕೆ ಮತ್ತು ಆಸಕ್ತಿಯ ಕೇಂದ್ರಬಿಂದುವಾಗಿದೆ.

ಮ್ಯೂಸಿಯಂನಲ್ಲಿ ಕಲಿಕೆಯನ್ನು ಇನ್ನಷ್ಟು ಆಸಕ್ತಿದಾಯಕ ಮತ್ತು ವಿಸ್ತೃತವಾಗಿಸಲು ಅತ್ಯಾಧುನಿಕ ತಂತ್ರಜ್ಞಾನ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಸಂದರ್ಶಕರು ಮಾದರಿಗಳ ಬಳಿ ಇರಿಸಲಾಗಿರುವ ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಕಿರು ವಿವರಣೆಯನ್ನು ಪಡೆಯಬಹುದಾಗಿದೆ. ಪ್ರದರ್ಶಿತ ಮಾದರಿಗಳ ಬಗ್ಗೆ ವಿವರವಾದ ಮಾಹಿತಿ ನೀಡುವುದಕ್ಕಾಗಿ ಪರಿಣತ ಮಾರ್ಗದರ್ಶಕರು ಕೂಡ ಇಲ್ಲಿ ಲಭ್ಯರಿದ್ದಾರೆ.

ಶಾಲಾ ರಜೆಯ ಅವಧಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 4 ಸಾವಿರಕ್ಕೂ ಅಧಿಕ ಶಾಲಾ ಮಕ್ಕಳು ಇಲ್ಲಿಗೆ ಭೇಟಿ ನೀಡಿ ಮಾನವ ದೇಹ ಮತ್ತು ವೈದ್ಯಕೀಯ ವಿಜ್ಞಾನದ ಬಗ್ಗೆ ತಿಳಿದುಕೊಳ್ಳುತ್ತಾರೆ.

ಮಣಿಪಾಲ ಅನಾಟಮಿ ಮ್ಯೂಸಿಯಂ ವೈದ್ಯಕೀಯ ಶಿಕ್ಷಣದಲ್ಲಿ ಅಂಗರಚನಾ ಶಾಸ್ತ್ರದ ಪ್ರಾಮುಖ್ಯವನ್ನು ಸಾಬೀತುಪಡಿಸುವ ಉತ್ಕೃಷ್ಟ ಮಾದರಿಯಾಗಿದೆ. ಮಾದರಿಗಳ ವ್ಯಾಪಕ ಮತ್ತು ವಿಸ್ತಾರವಾದ ಸಂಗ್ರಹ, ಆಧುನಿಕ ತಂತ್ರಜ್ಞಾನದ ಅಳವಡಿಕೆ ಹಾಗೂ ಶಿಕ್ಷಣ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಉಂಟುಮಾಡುವ ವಿಷಯದಲ್ಲಿ ಆಳವಾದ ಬದ್ಧತೆಯೊಂದಿಗೆ ಈ ಮ್ಯೂಸಿಯಂ ವಿದ್ಯಾರ್ಥಿಗಳು, ವೈದ್ಯಕೀಯ ವೃತ್ತಿನಿರತರು, ಸಂಶೋಧಕರು ಮತ್ತು ಒಟ್ಟಾರೆಯಾಗಿ ಸಮುದಾಯಕ್ಕೆ ಒಂದು ಅಮೂಲ್ಯ ಸಂಪನ್ಮೂಲವಾಗಿದೆ.

ಸಂದರ್ಶಕರಿಗೆ ಮಾಹಿತಿ

 ಸಮಯ: ಮ್ಯೂಸಿಯಂ ಪ್ರತಿದಿನ ಬೆಳಗ್ಗೆ 9:00ರಿಂದ ಸಂಜೆ 5:30ರ ವರೆಗೆ ತೆರೆದಿರುತ್ತದೆ (ಟಿಕೆಟ್‌ ಕೌಂಟರ್‌ ಸಂಜೆ 5:00ಕ್ಕೆ ಮುಚ್ಚುತ್ತದೆ).

 ರಜೆ: ಪ್ರತೀ ಮಂಗಳವಾರ ರಜೆ ಇರುತ್ತದೆ.

ಆದರೆ ನವೆಂಬರ್‌ನಿಂದ ಜನವರಿವರೆಗೆ ಎಲ್ಲ ದಿನಗಳಲ್ಲಿಯೂ ಸಂದರ್ಶನದ ಸಮಯದಲ್ಲಿ ತೆರೆದಿರುತ್ತದೆ.

 ಪ್ರವೇಶ ಶುಲ್ಕ: ಅಂದಾಜು 10 ರೂ. ಟಿಕೆಟ್‌ಗಳನ್ನು ಮ್ಯೂಸಿಯಂ ಕೌಂಟರ್‌ನಲ್ಲಿ ಖರೀದಿಸಬಹುದು.

 ಸಾರ್ವಜನಿಕ ರಜೆ: ಸ್ವಾತಂತ್ರ್ಯ ದಿನಾಚರಣೆ, ಗಣೇಶ ಚತುರ್ಥಿ ಮತ್ತು ದೀಪಾವಳಿಯಂದು ಮ್ಯೂಸಿಯಂ ಮುಚ್ಚಿರುತ್ತದೆ.

-ಡಾ| ಮಮತಾ ಎಚ್‌.

ಅಡಿಶನಲ್‌ ಪ್ರೊಫೆಸರ್‌

-ಡಾ| ಚಾಂದಿನಿ ಗುಪ್ತಾ

ಪ್ರೊಫೆಸರ್‌ ಮತ್ತು ಮುಖ್ಯಸ್ಥರು

ಅನಾಟಮಿ ವಿಭಾಗ,

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಅನಾಟಮಿ ವಿಭಾಗ, ಕೆಎಂಸಿ, ಮಂಗಳೂರು)

Dailyhunt
Disclaimer: This content has not been generated, created or edited by Dailyhunt. Publisher: Udayavani