Dailyhunt Logo
  • Light mode
    Follow system
    Dark mode
    • Play Story
    • App Story
ಮಂಜನಾಡಿ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ!

ಮಂಜನಾಡಿ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ!

ಮಂಗಳೂರು: ಬಹುತೇಕ ವರ್ಷದ ಹಿಂದೆ ಎಂದರೆ 2025ರ ಮೇ 30ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಕರಾಳ ದಿನವಾಗಿತ್ತು.

ದಿನವಿಡೀ ಸುರಿದ ಭಾರೀ ಮಳೆಗೆ ಉಳ್ಳಾಲ-ಮಂಜನಾಡಿ ಗ್ರಾಮದ ಉರುಮನೆ ಮಡಪಾಡಿಯಲ್ಲಿ ಗುಡ್ಡ ಕುಸಿದು ಮನೆಯ ಮೇಲೆ ಬಿದ್ದ ಪರಿಣಾಮ ಇಬ್ಬರು ಮಕ್ಕಳ ಸಹಿತ ಮೂವರು ಮೃತಪಟ್ಟಿದ್ದರು.

ಮುಂಜಾನೆ ಸುಮಾರು 3.30ಕ್ಕೆ ಮನೆಯ ಮೇಲೆ ಹಿಂಭಾಗದ ಸುಮಾರು 30 ಅಡಿ ಎತ್ತರದ ಗುಡ್ಡ ಮೂರು ಬೃಹತ್‌ ಮರಗಳ ಸಹಿತ ಮನೆಯ ಮೇಲೆ ಕುಸಿದಿತ್ತು. ಅದೇ ದಿನ ದೇರಳಕಟ್ಟೆ ಕಾನೆಕೆರೆಯಲ್ಲಿ ಗುಡ್ಡ ಕುಸಿದು ಬಾಲಕಿಯೋರ್ವಳು ಮೃತಪಟ್ಟ ದಾರುಣ ಘಟನೆಯೂ ನಡೆದಿತ್ತು. ಇದಾದ ಒಂದು ವರ್ಷ ಕಳೆಯುವಾಗಲೇ ಇದೀಗ ನಾಗುರಿಯಲ್ಲಿ ಇನ್ನೊಂದು ಅಂಥದ್ದೇ ಘಟನೆ ನಡೆದಿದೆ.

ಗುಡ್ಡ ಕುಸಿತ, ತಡೆಗೋಡೆ ಕುಸಿತದಿಂದಾಗಿ ಜಿಲ್ಲೆಯಲ್ಲಿ ದುರಂತಗಳು ಸಂಭವಿಸುತ್ತಲೇ ಇವೆ. ದಿಢೀರ್‌ಸುರಿಯುವ ಮಳೆ ಆಪತ್ತು ಸೃಷ್ಟಿಸುತ್ತಿದೆ.
ಮಂಗಳೂರಿನಲ್ಲಿ ಜು. 1ರಂದು ಮುಂಜಾನೆ ಸುರಿದ ಭಾರೀ ಮಳೆಗೆ ಕಂಕನಾಡಿ ಪೊಲೀಸ್‌ ಠಾಣೆ ಬಳಿಯ ನಾಗುರಿಯಲ್ಲಿ ಮನೆ ಮೇಲೆ ತಡೆಗೋಡೆ ಕುಸಿದು ಬಿದ್ದು, ಹೆಂಚಿನ ಛಾವಣಿಯ ಮನೆ ಕುಸಿದಿದೆ. ಪರಿಣಾಮ ಮಹಿಳೆ ಹಾಗೂ ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ. ಮುಂಜಾನೆ ಸುಮಾರು 4.30ಕ್ಕೆ ಈ ಘಟನೆ ನಡೆದಿದೆ. ಇದೇ ವಠಾರದ ನಾಲ್ಕು ಮನೆಯ ಪೈಕಿ ಎರಡು ಮನೆಯಲ್ಲಿದ್ದ ಕುಟುಂಬ ಅಪಾಯದಿಂದ ಪಾರಾಗಿದೆ.

ಹಿಂದೆ ಸಂಭವಿಸಿದ್ದ ಗುಡ್ಡ ಕುಸಿತ ಪ್ರಕರಣಗಳು

- 2020ರಲ್ಲಿ ಗುರುಪುರ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಗುಡ್ಡ ಕುಸಿದು ಇಬ್ಬರು ಮಕ್ಕಳು ಮೃತಪಟ್ಟಿದ್ದರು.

-2024ರಲ್ಲಿ ಉಳ್ಳಾಲ ತಾಲೂಕಿನ ಕುತ್ತಾರು ಮದನಿ ನಗರದಲ್ಲಿ ಮೇಲ್ಭಾಗದ ಅವರಣಗೋಡೆ ಮನೆಯೊಂದರ ಮೇಲೆ ಕುಸಿದು ಒಂದೇ ಕುಟುಂಬದ ನಾಲ್ಕು ಮಂದಿ ಸಾವನ್ನಪ್ಪಿದ್ದರು.

-2024ರ ಮೇ 20: ಹರೇಕಳ ನ್ಯೂಡ್ಪುವಿನಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಆವರಣ ಗೋಡೆ ಕುಸಿದು ಮೂರನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದರು.

-2025ರ ಮೇ 30ರಂದು ಉಳ್ಳಾಲ - ಮಂಜನಾಡಿ ಗ್ರಾಮದ ಉರುಮನೆ ಮಡಪಾಡಿಯಲ್ಲಿ ಗುಡ್ಡ ಕುಸಿದು ಮೂವರು ಮೃತಪಟ್ಟಿದ್ದರು.

- 2025ರ ಮೇ 30ರಂದು ದೇರಳಕಟ್ಟೆ ಕಾನೆಕೆರೆಯಲ್ಲಿ ಗುಡ್ಡ ಕುಸಿದು ಬಾಲಕಿಯೋರ್ವಳು ಮೃತಪಟ್ಟಿದ್ದರು.

-ಪಾಲಿಕೆ ವ್ಯಾಪ್ತಿಯ ಕಣ್ಣೂರಿನ ಬಳ್ಳೂರು ಗುಡ್ಡೆ ಪ್ರದೇಶದಲ್ಲಿ 2022ರಿಂದ ನಿರಂತರವಾಗಿ ಪ್ರತೀ ಮಳೆಗಾಲದಲ್ಲಿ ಗುಡ್ಡ ಜರಿದು ಮೇಲ್ಭಾಗದ ಮತ್ತು ಕೆಳಭಾಗದ ಮನೆಗಳು ಅಪಾಯಕ್ಕೆ ಸಿಲುಕುತ್ತಿವೆ.

-ರಾಷ್ಟ್ರೀಯ ಹೆದ್ದಾರಿ 169ರ ವಿಸ್ತರಣೆ ಕಾಮಗಾರಿಯಿಂದಾಗಿ ವಾಮಂಜೂರು ಬಳಿಯ ಕೆತ್ತಿಕಲ್‌ನಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ಗುಡ್ಡ ಕುಸಿತದಿಂದಾಗಿ ಮೇಲ್ಭಾಗದ ಮನೆಗಳಿಗೆ ಅಪಾಯ ಉಂಟಾಗಿತ್ತು. ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.

-ಮಂಗಳೂರಿನ ಸರ್ಕೀಟ್ ಹೌಸ್‌ನಿಂದ ಬಿಜೈ ಕಡೆಗೆ ಸಾಗುವ ರಸ್ತೆಯಲ್ಲಿ ಎರಡು ವರ್ಷದ ಹಿಂದೆ ಗುಡ್ಡ ಕುಸಿತ ಉಂಟಾಗಿತ್ತು. ಬಳಿಕ ದುರಸ್ತಿ ಮಾಡುವ ಕೆಲಸ ಇದುವರೆಗೂ ನಡೆದಿಲ್ಲ.

-ನಂತೂರು ಬಳಿಯಲ್ಲೂ ಮಲ್ಲಿಕಟ್ಟೆ ತೆರಳುವ ಬಸ್ಸು ತಂಗುದಾಣದ ಹಿಂಭಾಗದಲ್ಲಿರುವ ಗುಡ್ಡ ಪ್ರತೀವರ್ಷ ಸ್ವಲ್ಪ ಸ್ವಲ್ಪವೇ ಕುಸಿಯುತ್ತಿದೆ.ಗಂಭೀರ ದುರಂತ ಘಟಿಸುವ ಮುನ್ನ ಎಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani