Dailyhunt
ಮಣ್ಣಿನ ಫಲವತ್ತತೆ ವೃದ್ಧಿ: ಕೃಷಿ ಇಲಾಖೆ ಸಲಹೆ

ಮಣ್ಣಿನ ಫಲವತ್ತತೆ ವೃದ್ಧಿ: ಕೃಷಿ ಇಲಾಖೆ ಸಲಹೆ

ಡುಪಿ: ಮುಂಗಾರು ಹಂಗಾಮು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ವೈಜ್ಞಾನಿಕವಾಗಿ ರಸಗೊಬ್ಬರ ಬಳಸಿ ಮಣ್ಣಿನ ಫಲವತ್ತತೆ ಹಾಗೂ ಬೆಳೆ ಇಳುವರಿ ಹೆಚ್ಚಿಸಿಕೊಳ್ಳುವಂತೆ ಕೃಷಿ ಇಲಾಖೆ ಜಿಲ್ಲೆಯ ರೈತರಿಗೆ ಮಹತ್ವದ ಸಲಹೆಗಳನ್ನು ನೀಡಿದೆ.

ಸಾಮಾನ್ಯವಾಗಿ ರೈತರು ಸಾರಜನಕ ಮತ್ತು ರಂಜಕದ ಅಂಶವಿರುವ ಯೂರಿಯಾ ಹಾಗೂ ಡಿ.ಎ.ಪಿ.

ಗೊಬ್ಬರಗಳನ್ನೇ ಹೆಚ್ಚಾಗಿ ಅವಲಂಬಿಸುತ್ತಾರೆ. ಆದರೆ ಇವುಗಳಲ್ಲಿ ಪೊಟ್ಯಾಷ್‌ ಇರುವುದಿಲ್ಲ. ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ನೀಡಲು ಮತ್ತು ಇಳುವರಿ ಹೆಚ್ಚಿಸಲು ಪೊಟ್ಯಾಷ್‌ ಅತ್ಯಗತ್ಯ. ಆದ್ದರಿಂದ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾರಜನಕ, ರಂಜಕ ಮತ್ತು ಪೊಟ್ಯಾಷ್‌ಯುಕ್ತ ರಸಗೊಬ್ಬರಗಳನ್ನು ಶಿಫಾರಸಿನಂತೆ ಬಳಸಬೇಕು. ಕೇವಲ ಒಂದು ಸಂಸ್ಥೆಯ ಅಥವಾ ಒಂದೇ ಬಗೆಯ ಗೊಬ್ಬರಕ್ಕೆ ಅಂಟಿಕೊಳ್ಳದೆ ಪರ್ಯಾಯಗಳತ್ತ ಗಮನಹರಿಸಬೇಕು.

ನ್ಯಾನೋ ಗೊಬ್ಬರದತ್ತ ಒಲವು ತೋರಿ
ಸಾಂಪ್ರದಾಯಿಕ ಗೊಬ್ಬರಗಳಿಗೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿ.ಎ.ಪಿ. ದ್ರವ ರೂಪದ ಗೊಬ್ಬರಗಳನ್ನು ಬಳಸಬಹುದು. ಇವು ಪರಿಸರ ಸ್ನೇಹಿಯಾಗಿದ್ದು, ಎಲೆಗಳ ಮೇಲೆ ಸಿಂಪಡಿಸುವುದರಿಂದ ಪೋಷಕಾಂಶಗಳು ನೇರವಾಗಿ ಬೆಳೆಗೆ ತಲುಪುತ್ತವೆ. ಇದರಿಂದ ಪೋಲಾಗುವಿಕೆ ತಡೆಗಟ್ಟಬಹುದು ಹಾಗೂ ಮಣ್ಣು ಮತ್ತು ನೀರಿನ ಮೇಲಾಗುವ ದುಷ್ಪರಿಣಾಮಗಳನ್ನು ತಗ್ಗಿಸಬಹುದು.

ಮಣ್ಣು ಪರೀಕ್ಷೆಯ ಮಹತ್ವ
ವೈಜ್ಞಾನಿಕ ಕೃಷಿಗೆ ಮಣ್ಣು ಪರೀಕ್ಷೆ ಮೊದಲ ಮೆಟ್ಟಿಲು. ಮಣ್ಣಿನಲ್ಲಿರುವ ಪೋಷಕಾಂಶಗಳ ಪ್ರಮಾಣ ಅರಿತು ಗೊಬ್ಬರ ಬಳಸುವುದರಿಂದ ಅನಗತ್ಯ ಖರ್ಚು ಉಳಿಯುತ್ತದೆ. ಮಣ್ಣಿನ ಆಮ್ಲಿಯತೆ ಅಥವಾ ಕ್ಷಾರೀಯತೆ ತಿಳಿದು ಸೂಕ್ತ ಬೆಳೆ ಆಯ್ಕೆ ಮಾಡಬಹುದು.

ಅತಿಯಾದ ಯೂರಿಯಾ ಬಳಕೆಯಿಂದ ಹಾನಿ
ನಿರಂತರ ಯೂರಿಯಾ ಬಳಕೆಯಿಂದ ಮಣ್ಣು ಆಮ್ಲಿàಯ ವಾಗಿ ಫಲವತ್ತತೆ ಕಳೆದುಕೊಳ್ಳುತ್ತದೆ. ಇದು ಉಪಯುಕ್ತ ಸೂಕ್ಷ್ಮಜೀವಿಗಳ ನಾಶಕ್ಕೆ ಕಾರಣವಾಗುವುದಲ್ಲದೆ, ಸಸ್ಯಗಳು ಕೀಟಬಾಧೆಗೆ ತುತ್ತಾಗುವಂತೆಮಾಡುತ್ತದೆ. ಅಲ್ಲದೆ, ಇದು ಹಸಿರುಮನೆ ಅನಿಲವಾಗಿ ಪರಿವರ್ತನೆಯಾಗಿ ಹವಾಮಾನಬದಲಾವಣೆಗೂ ಕಾರಣವಾಗ ಬಹುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರ ಪ್ರಕಟನೆ ತಿಳಿಸಿದೆ.

ಖರೀದಿಸುವಾಗ ಎಚ್ಚರವಿರಲಿ
ರಸಗೊಬ್ಬರ ಖರೀದಿ

-ಅಧಿಕೃತ ಪರವಾನಿಗೆ ಹೊಂದಿದ ಮಾರಾಟಗಾರರಿಂದಲೇ ಖರೀದಿಸಿ.

-ಚೀಲದ ಮೇಲಿರುವ ಗರಿಷ್ಠ ಮಾರಾಟ ಬೆಲೆಗಿಂತ (ಎಂಆರ್‌ಪಿ) ಹೆಚ್ಚು ಹಣ ನೀಡಬೇಡಿ.

-ಮಾರಾಟಗಾರರ ಸಹಿಯಿರುವ ಅಧಿಕೃತ ರಶೀದಿಯನ್ನು ತಪ್ಪದೇ ಪಡೆಯಿರಿ.

ಬಿತ್ತನೆ ಬೀಜ ಖರೀದಿ

-ರಶೀದಿಯಲ್ಲಿ "ಲಾಟ್‌ ನಂಬರ್‌'ನಮೂದಿಸಿರುವುದನ್ನು ಖಚಿತ ಪಡಿಸಿಕೊಳ್ಳಿ.

-ಉತ್ಪಾದನ ದಿನಾಂಕ, ಅವಧಿ ಮುಕ್ತಾಯದ ದಿನಾಂಕ ಮತ್ತು ಮಾರಾಟಗಾರರ ವಿಳಾಸ ಗಮನಿಸಿ.

-ಕೀಟನಾಶಕಗಳಿಂದ ಉಪಚರಿಸ ಲಾಗಿದೆಯೇ ಎಂಬುದನ್ನು ಗಮನಿಸಿ.

-ಬಿತ್ತನೆ ಬೀಜದ ಚೀಲದ ಮೇಲಿರುವ ಟ್ಯಾಗ್‌ಗಳನ್ನು ಬೆಳೆ ಕಟಾವಾಗುವವರೆಗೆ ಜಾಗರೂಕತೆ ಯಿಂದ ಇಟ್ಟುಕೊಳ್ಳಿ.

Dailyhunt
Disclaimer: This content has not been generated, created or edited by Dailyhunt. Publisher: Udayavani