Dailyhunt Logo
  • Light mode
    Follow system
    Dark mode
    • Play Story
    • App Story
ಮಣ್ಣಿನ ಹಣತೆಗಳಿಗೂ ಬೇಕು ಬೆಳಕು!

ಮಣ್ಣಿನ ಹಣತೆಗಳಿಗೂ ಬೇಕು ಬೆಳಕು!

ಕುಂದಾಪುರ: ಹಿಂದೆಲ್ಲ ದೀಪಾವಳಿಗೆ 4-5 ತಿಂಗಳು ಮೊದಲು ಕುಂದಾಪುರ, ಬೈಂದೂರು ತಾಲೂಕಿನ ಹಲವೆಡೆಗಳಲ್ಲಿ ಕುಂಬಾರ ಕುಟುಂಬಗಳು ಮಣ್ಣಿನ ಹಣತೆ ತಯಾರಿಕೆಯಲ್ಲಿ ನಿರತರಾಗಿದ್ದರು. ಆದರೆ ಈಗ ಅವುಗಳ ಸಂಖ್ಯೆ ತೀರಾ ಕಡಿಮೆಯಾಗಿದೆ.

ಮಣ್ಣಿನ ಹಣತೆಗಳಿಗೆ ಬೇಡಿಕೆಯಿದ್ದರೂ, ಕಚ್ಚಾ ವಸ್ತು, ಖರ್ಚು ವೆಚ್ಚಗಳನ್ನು ಪೂರೈಸಿ ಉತ್ತಮ ಬೆಲೆಗೆ ಮಾರಾಟ ಮಾಡುವುದು ಸಾಧ್ಯವಾಗುತ್ತಿಲ್ಲ.

ಹಾಕಿದ ಬಂಡವಾಳವೇ ಬರುವುದಿಲ್ಲ. ಮನೆಯವರೆಲ್ಲ ಸೇರಿ ಬೆಳಗ್ಗಿನಿಂದ ಸಂಜೆಯವರೆಗೆ ದುಡಿದರೂ ವೆಚ್ಚ ಬಾರದೆ ಇದ್ದರೆ ಹೊಟ್ಟೆ ತುಂಬುವುದಾದರೂ ಹೇಗೆ ಎಂದು ಕುಟುಂಬಗಳು ಪ್ರಶ್ನಿಸುತ್ತಿವೆ.

ಕೆಲವು ಕಡೆ ಮಾತ್ರ
ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ 10 ವರ್ಷದ ಹಿಂದೆ ಮಣ್ಣಿನ ಹಣತೆ ಸಹಿತ ಮಣ್ಣಿನ ಪಾತ್ರೆಗಳು, ಇನ್ನಿತರ ವಸ್ತುಗಳನ್ನು ತಯಾರಿ ಮಾಡುವಂತಹ ಹತ್ತಾರು ಕುಟುಂಬಗಳಿದ್ದವು. ಕಾಲೋಡು, ಮೆಟ್ಟಿನಹೊಳೆ, ಹುಣ್ಸೆಮಕ್ಕಿ, ಬೈಂದೂರು, ಆಲೂರು, ಕಾವ್ರಾಡಿ, ಹೀಗೆ ಅನೇಕ ಕಡೆಗಳಲ್ಲಿ ಕುಂಬಾರಿಕೆ ಮಾಡುವ ಕುಟುಂಬಗಳಿದ್ದವು. ಅದರಲ್ಲೂ ಆಲೂರಿನ ಗ್ರಾಮವೊಂದರಲ್ಲಿಯೇ 20ಕ್ಕೂ ಹೆಚ್ಚು ಕುಟುಂಬಗಳು ಈ ಕುಂಬಾರಿಕೆಯನ್ನು ನೆಚ್ಚಿಕೊಂಡಿದ್ದವು. ಆದರೆ ಈಗ ಕೇವಲ 2 ಕುಟುಂಬಗಳಷ್ಟೇ ಈ ಕುಲಕಸುಬನ್ನು ಮಾಡುತ್ತಿವೆ ಎನ್ನುತ್ತಾರೆ ಅನೇಕ ವರ್ಷಗಳಿಂದ ಕುಂಬಾರಿಕೆ ಮಾಡುತ್ತಿರುವ ಆಲೂರಿನ ರಘುರಾಮ ಕುಲಾಲರು.

ಆಧುನಿಕತೆ, ಯಾಂತ್ರೀಕರಣ ಭರಾಟೆ, ಅನಿವಾರ್ಯತೆಯ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಂಪ್ರದಾಯಿಕ ಗುಡಿಕೈಗಾರಿಕೆ ಹಾಗೂ ಕುಲಕಸುಬುಗಳು ಮರೆಯಾಗುತ್ತಿವೆ.

ಮಣ್ಣಿನ ಹಣತೆ ತಯಾರಿ ದುಬಾರಿ
3 ಯೂನಿಟ್‌ (1 ಲೋಡು) ಮಣ್ಣಿಗೆ 10 ಸಾವಿರ ರೂ. ಆಗಿದೆ. ಇಷ್ಟು ದುಬಾರಿ ಹಣ ಕೊಟ್ಟು ಮಣ್ಣು ತಂದರೂ ಅದನ್ನು ಹದ ಮಾಡಿ, ಮಣ್ಣಿನ ಪರಿಕರ ತಯಾರಿಸುವುದು ಮತ್ತೂ ದುಬಾರಿ. ಈಗಿನ ಹೆಚ್ಚಿನವರಿಗೆ ಈ ಕೆಲಸ ಗೊತ್ತಿಲ್ಲ. ಅವರಿಗೆ ಕಲಿಸಲು ಹೋದರೆ ನಮ್ಮ ಕೆಲಸವೂ ಆಗುವುದಿಲ್ಲ. 2 ರೂ. ವೆಚ್ಚದ ಒಂದು ಮಣ್ಣಿನ ಹಣತೆ ಸಿದ್ಧಪಡಿಸಲು ಈಗ ಕನಿಷ್ಠ 1 ರೂ.ಗೂ ಜಾಸ್ತಿ ಖರ್ಚಾಗುತ್ತದೆ. ಹಾಗಾದರೆ ಅದರಲ್ಲಿ ಲಾಭ ಆದರೂ ಏನು ಸಿಗುತ್ತದೆ ಎನ್ನುವುದು ಈ ಕಾರ್ಯ ಮಾಡುತ್ತಿರುವವರೊಬ್ಬರ ಪ್ರಶ್ನೆ.

ಸಾಕಷ್ಟು ಬೇಡಿಕೆಯಿದೆ
ಮಣ್ಣಿನ ಹಣತೆಗೆ ಬೇಡಿಕೆಯಿದೆ. ಕಳೆದ ಬಾರಿ ತಯಾರಿಸಿದ 8ರಿಂದ 10 ಸಾವಿರ ಹಣತೆಗಳು ಖಾಲಿಯಾಗಿವೆ. ಈ ಬಾರಿ 10 ರಿಂದ 12 ಸಾವಿರದಷ್ಟು ಸಿದ್ಧಪಡಿಸಿದ್ದೇವೆ. ಅದಕ್ಕೂ ಬೇಡಿಕೆಯಿದೆ. ಆದರೆ ತಯಾರಿಸುವುದೇ ದುಬಾರಿ. ಕೈಯಿಂದ ಮಾಡಿದರೆ ಲಾಭ ಕಷ್ಟ, ಯಂತ್ರದ ಸಹಾಯದಿಂದ ಮಾಡಿದರೆ ತುಸು ಲಾಭ. ಮೊದಲಿನ ಕುಂಬಾರಿಕೆ ನಂಟು ತಪ್ಪಿದೆ. ಹೆಚ್ಚಿನವರಿಗೆ ತರಬೇತಿಯಿಲ್ಲ. ಈ ಗುಡಿಕೈಗಾರಿಕೆ ಉಳಿಯಬೇಕಾದರೆ ಸರ್ಕಾರದ ಪ್ರೋತ್ಸಾಹ, ಸಹಾಯಧನ ಬೇಕು. ಇಲ್ಲದಿದ್ದರೆ ಯಾವ ಗುಡಿಕೈಗಾರಿಕೆಯೂ ಉಳಿಯುವುದಿಲ್ಲ. - ರಘುರಾಮ ಕುಲಾಲ್ ಆಲೂರು, ಮಣ್ಣಿನ ಹಣತೆ ತಯಾರಕರು

- ಪ್ರಶಾಂತ್ ಪಾದೆ

Dailyhunt
Disclaimer: This content has not been generated, created or edited by Dailyhunt. Publisher: Udayavani