Dailyhunt Logo
  • Light mode
    Follow system
    Dark mode
    • Play Story
    • App Story
ಮರಳಿನೊಳಗೆ ಶಕ್ತಿ ಬಂಧಿಸಿದ ಫಿನ್‌ ಲ್ಯಾಂಡ್‌- ತೈಲ, ಕಟ್ಟಿಗೆ ಬಳಕೆ ಇಳಿಕೆ

ಮರಳಿನೊಳಗೆ ಶಕ್ತಿ ಬಂಧಿಸಿದ ಫಿನ್‌ ಲ್ಯಾಂಡ್‌- ತೈಲ, ಕಟ್ಟಿಗೆ ಬಳಕೆ ಇಳಿಕೆ

ಬ್ಯಾಟರಿ ಎಂದಾಕ್ಷಣ ಲಿಥಿಯಂ, ಲೋಹ, ವಿದ್ಯುತ್‌ ಸಂಗ್ರಹಿಸುವ ಸೆಲ್‌ಗ‌ಳು ನೆನಪಾಗುತ್ತವೆ. ಆದರೆ ಫಿನ್‌ ಲ್ಯಾಂಡ್‌ನ‌ ಪುಟ್ಟ ಪಟ್ಟಣವೊಂದರಲ್ಲಿ ಬ್ಯಾಟರಿಯೊಳಗೆ ವಿದ್ಯುತ್‌ ಇಲ್ಲ; ಬರೋಬ್ಬರಿ 2,000 ಟನ್‌ಗಳಷ್ಟು ಪುಡಿಮಾಡಿದ ಸೋಪ್‌ ಸ್ಟೋನ್‌ ಇದೆ. ಆಶ್ಚರ್ಯವೆಂದರೆ ಇದೇ "ಮರಳು ಬ್ಯಾಟರಿ' ನವೀಕರಿಸಬಹುದಾದ ವಿದ್ಯುತ್‌ ಶಕ್ತಿಯನ್ನು ಶಾಖವಾಗಿ ಸಂಗ್ರಹಿಸಿ, ಅಗತ್ಯವಿದ್ದಾಗ ಪಟ್ಟಣದ ಮನೆಗಳಿಗೆ ಮತ್ತು ಕಟ್ಟಡಗಳಿಗೆ ಬಿಸಿಯನ್ನು ಪೂರೈಸುತ್ತಿದೆ.

ಫಿನ್‌ ಲ್ಯಾಂಡ್‌ನ‌ ಪೋರ್ನೈನನ್‌ನಲ್ಲಿ ಫಿನ್ನಿಷ್‌ ಕಂಪೆನಿ ಪೊಲಾರ್‌ ನೈಟ್‌ ಎನರ್ಜಿ ಅಭಿವೃದ್ಧಿಪಡಿಸಿರುವ ಈ ಕೈಗಾರಿಕ ಪ್ರಮಾಣದ "ಸ್ಯಾಂಡ್‌ ಬ್ಯಾಟರಿ' 2025ರ ಜೂನ್‌ನಲ್ಲಿ ಕಾರ್ಯಾರಂಭ ಮಾಡಿತು. ಸ್ಥಳೀಯ ಜಿಲ್ಲಾ ತಾಪನ ವ್ಯವಸ್ಥೆಯ (District Heating Network) ಪ್ರಮುಖ ಶಾಖ ಉತ್ಪಾದನ ಘಟಕವಾಗಿ ಇದು ಕಾರ್ಯನಿರ್ವಹಿಸುತ್ತಿದೆ.

1 ಮೆಗಾವ್ಯಾಟ್‌ ಉಷ್ಣಶಕ್ತಿ ಉತ್ಪಾದನ ಸಾಮರ್ಥ್ಯ ಮತ್ತು 100 ಮೆಗಾವ್ಯಾಟ್‌-ಗಂಟೆ ಶಕ್ತಿಸಂಗ್ರಹ ಸಾಮರ್ಥ್ಯ ಹೊಂದಿರುವ ಇದು, ಕಾರ್ಯಾರಂಭದ ವೇಳೆಯಲ್ಲಿ ವಿಶ್ವದ ಅತೀ ದೊಡ್ಡ ಸ್ಯಾಂಡ್‌ ಬ್ಯಾಟರಿಯಾಗಿತ್ತು. 2026ರ ಜೂನ್‌ಗೆ ಒಂದು ವರ್ಷ ಪೂರೈಸಿದ ಬಳಿಕವೂ ತಾಪ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಕಂಡುಬಂದಿಲ್ಲ.

ಇದು ಬ್ಯಾಟರಿಯೇ? ವಿದ್ಯುತ್‌ ಎಲ್ಲಿದೆ?

ಇಲ್ಲಿ "ಬ್ಯಾಟರಿ' ಎನ್ನುವುದು ಸ್ವಲ್ಪ ವಿಭಿನ್ನ ಅರ್ಥದಲ್ಲಿ ಬಳಕೆಯಾಗಿದೆ. ಇದು ವಿದ್ಯುತ್‌ನ್ನು ನೇರವಾಗಿ ಸಂಗ್ರಹಿಸಿ ಮತ್ತೆ ವಿದ್ಯುತ್‌ ಆಗಿ ನೀಡುವ ಸಾಂಪ್ರದಾಯಿಕ ಬ್ಯಾಟರಿ ಅಲ್ಲ. ವಿದ್ಯುತ್‌ನ್ನು ಶಾಖವಾಗಿ ಪರಿವರ್ತಿಸಿ ಸಂಗ್ರಹಿಸುವ ಟರ್ಮಿನಲ್‌ ಎನರ್ಜಿ ಸ್ಟೋರೆಜ್‌ ವ್ಯವಸ್ಥೆ.

ಗಾಳಿ ಅಥವಾ ಸೌರಶಕ್ತಿಯಿಂದ ದೊರೆಯುವ ವಿದ್ಯುತ್‌ ಅಗ್ಗವಾಗಿರುವ ಸಮಯದಲ್ಲಿ ಅದನ್ನು ಬಳಸಿ ಬ್ಯಾಟರಿಯೊಳಗಿನ ಗಾಳಿಯನ್ನು ಹೆಚ್ಚಿನ ತಾಪಮಾನಕ್ಕೆ ಬಿಸಿಮಾಡಲಾಗುತ್ತದೆ. ಆ ಬಿಸಿ ಗಾಳಿ ಸುಮಾರು 2,000 ಟನ್‌ಗಳಷ್ಟು ಪುಡಿಮಾಡಿದ ಸೋಪ್‌ಸೊràನ್‌ ಒಳಗೆ ಹರಿಯುತ್ತದೆ. ಕಲ್ಲು ಶಾಖವನ್ನು ಹೀರಿಕೊಂಡು ದೀರ್ಘ‌ಕಾಲ ಸಂಗ್ರಹಿಸಿಟ್ಟುಕೊಳ್ಳುತ್ತದೆ. ಅಗತ್ಯವಿದ್ದಾಗ ಈ ಶಾಖವನ್ನು ಹೊರ ತೆಗೆದು ನೀರನ್ನು ಬಿಸಿಮಾಡಲಾಗುತ್ತದೆ. ಬಳಿಕ ಆ ಬಿಸಿನೀರನ್ನು ತಾಪನ ಜಾಲದ ಮೂಲಕ ಮನೆ, ಶಾಲೆ, ಕಚೇರಿ ಸೇರಿದಂತೆ ವಿವಿಧ ಕಟ್ಟಡಗಳಿಗೆ ಕಳುಹಿಸಲಾಗುತ್ತದೆ. ಅಂದರೆ, ವಿದ್ಯುತ್‌ - ಶಾಖ - ಕಲ್ಲು/ಮರಳು - ಮತ್ತೆ ಶಾಖ ಎಂಬುದು ಇದರ ಸರಳ ಕಾರ್ಯವಿಧಾನ.

ಒಂದು ವಾರದ ಚಳಿಗೆ "ಮರಳಿನ ಉಷ್ಣ'

ಪೋರ್ನೈನನ್‌ನ ಸ್ಯಾಂಡ್‌ ಬ್ಯಾಟರಿ ಸುಮಾರು 13 ಮೀಟರ್‌ ಎತ್ತರ ಮತ್ತು 15 ಮೀಟರ್‌ ಅಗಲವಿದೆ. ಇದರ 100Mಗಜ ಸಂಗ್ರಹ ಸಾಮರ್ಥ್ಯ ಬೇಸಗೆಯಲ್ಲಿ ಪಟ್ಟಣದ ಸುಮಾರು ಒಂದು ತಿಂಗಳ ಶಾಖದ ಬೇಡಿಕೆಯನ್ನು, ಚಳಿಗಾಲದಲ್ಲಿ ಸುಮಾರು ಒಂದು ವಾರದ ಬೇಡಿಕೆಯನ್ನು ಪೂರೈಸುವಷ್ಟು ದೊಡ್ಡದು.

ಫಿನ್‌ ಲ್ಯಾಂಡ್‌ನ‌ಂತಹ ಶೀತ ವಾತಾವರಣದ ದೇಶದಲ್ಲಿ ಮನೆಗಳನ್ನು ಬೆಚ್ಚಗಿಡಲು ನಿರಂತರವಾಗಿ ಶಾಖ ಬೇಕಾಗುತ್ತದೆ. ಹೀಗಾಗಿ ಸೌರ ಅಥವಾ ಗಾಳಿ ವಿದ್ಯುತ್‌ ಉತ್ಪಾದನೆ ಹೆಚ್ಚಾಗಿರುವ ಮತ್ತು ವಿದ್ಯುತ್‌ ಬೆಲೆ ಕಡಿಮೆ ಇರುವ ಸಮಯದಲ್ಲಿ ಶಕ್ತಿಯನ್ನು ಸಂಗ್ರಹಿಸಿ, ಬೇಡಿಕೆ ಹೆಚ್ಚಾದಾಗ ಬಳಸುವುದು ಈ ವ್ಯವಸ್ಥೆಯ ಪ್ರಮುಖ ಪ್ರಯೋಜನ.

ತೈಲ, ಕಟ್ಟಿಗೆ ಬಳಕೆ ಇಳಿಕೆ

ಈ ಯೋಜನೆಯ ಪರಿಸರ ಪರಿಣಾಮವೇ ಹೆಚ್ಚು ಗಮನ ಸೆಳೆಯುವ ಅಂಶ. ಕಾರ್ಯಾರಂಭದ ಬಳಿಕ ಪೋರ್ನೈನನ್‌ನ ಕೇಂದ್ರೀಕೃತ ತಾಪನ ವ್ಯವಸ್ಥೆಯ ಹವಾಮಾನ ಸಂಬಂಧಿತ ಇಂಗಾಲ ಹೊರಸೂಸುವಿಕೆ ಶೇ.70ರಷ್ಟು ಕಡಿಮೆಯಾಗಿದೆ. ವಾರ್ಷಿಕವಾಗಿ ಸುಮಾರು 160 ಟನ್‌ CO₂ ಸಮಾನ ಹೊರಸೂಸುವಿಕೆ ತಪ್ಪಿಸುವ ಗುರಿಯನ್ನು ಯೋಜನೆ ಸಾಧಿಸಿದೆ. ಅಷ್ಟೇ ಅಲ್ಲ, ತಾಪನ ವ್ಯವಸ್ಥೆಯಲ್ಲಿ ತೈಲ ಬಳಕೆ ಸಂಪೂರ್ಣ ಸ್ಥಗಿತಗೊಂಡಿದೆ. ಕಟ್ಟಿಗೆಯ ಬಳಕೆ ಸುಮಾರು ಶೇ.60ರಷ್ಟು ಕಡಿಮೆಯಾಗಿದೆ.

ಒಂದು ವರ್ಷದ ಪರೀಕ್ಷೆಯಲ್ಲಿ "ಯಶಸ್ಸಿನ ಉಷ್ಣ' 2026ರ ಜೂನ್‌ನಲ್ಲಿ ಮೊದಲ ವರ್ಷದ ಕಾರ್ಯಾಚರಣೆಯ ಮಾಹಿತಿಯನ್ನು ಬಿಡುಗಡೆ ಮಾಡಿದ ಪೋಲಾರ್‌ ನೈಟ್‌ ಎನರ್ಜಿ, ಬ್ಯಾಟರಿ ತನ್ನ ಕಾರ್ಯಕ್ಷಮತೆ ಮತ್ತು ವಿನ್ಯಾಸ ಗುರಿಗಳನ್ನು ಸಾಧಿಸಿದೆ ಎಂದು ತಿಳಿಸಿದೆ.

ಮೊದಲ ವರ್ಷದಲ್ಲಿ ಇದರ ದಕ್ಷತೆ ಶೇ.85ಕ್ಕಿಂತ ಹೆಚ್ಚು, ಕೇಂದ್ರೀಕೃತ ತಾಪನ ಪೂರೈಕೆಯ ವಿಶ್ವಾಸಾರ್ಹತೆ ಶೇ.100, ಇಂಗಾಲ ಹೊರಸೂಸುವಿಕೆ ಇಳಿಕೆ ಶೇ.70, ಬಯೋಮಾಸ್‌ ಬಳಕೆ ಇಳಿಕೆ ಶೇ.60 ಮತ್ತು ತೈಲ ಬಳಕೆ ಇಳಿಕೆ ಶೇ.100 ಎಂದು ಕಂಪೆನಿ ದಾಖಲಿಸಿದೆ.

ಪಟ್ಟಣದಿಂದ ಕೈಗಾರಿಕೆಗೆ

ಸ್ಯಾಂಡ್‌ ಬ್ಯಾಟರಿಯ ಭವಿಷ್ಯ ಕೇವಲ ಮನೆಗಳ ತಾಪಕ್ಕೆ ಸೀಮಿತವಾಗಿಲ್ಲ. ಉಕ್ಕು, ಆಹಾರ ಸಂಸ್ಕರಣೆ, ರಾಸಾಯನಿಕ, ಕಾಗದ ಸೇರಿದಂತೆ ಹಲವು ಕೈಗಾರಿಕೆಗಳಲ್ಲಿ ಹೆಚ್ಚಿನ ತಾಪಮಾನದ ಶಾಖದ ಅಗತ್ಯವಿದೆ. ಇಂಥ ಕೈಗಾರಿಕಾ ಪ್ರಕ್ರಿಯೆಗಳಲ್ಲಿ ಇಂದು ನೈಸರ್ಗಿಕ ಅನಿಲ ಅಥವಾ ತೈಲದಂತಹ ಇಂಧನಗಳನ್ನು ಬಳಸಲಾಗುತ್ತದೆ.

ಜಾಗತಿಕ ಕೈಗಾರಿಕ ಪ್ರಕ್ರಿಯೆ ಶಾಖದ ಬೇಡಿಕೆಯ ಸುಮಾರು ಶೇ.36ರಷ್ಟು ಭಾಗ 80, 400 ಡಿಗ್ರಿ ಸೆಲ್ಸಿಯಸ್‌ ವ್ಯಾಪ್ತಿಯಲ್ಲಿದೆ. ಈ ವ್ಯಾಪ್ತಿಯ ಶಾಖವನ್ನು ಸ್ಯಾಂಡ್‌ ಬ್ಯಾಟರಿ ತಂತ್ರಜ್ಞಾನದಿಂದ ಒದಗಿಸುವ ಸಾಧ್ಯತೆ ಇರುವುದರಿಂದ ಕೈಗಾರಿಕಾ ವಲಯದಲ್ಲಿ ಇದರ ಬಳಕೆಗೆ ದೊಡ್ಡ ಅವಕಾಶವಿದೆ. ಬಿಸಿಗಾಳಿ, ಬಿಸಿನೀರು ಅಥವಾ ಅತಿ ಬಿಸಿಯಾದ ಆವಿಯ ರೂಪದಲ್ಲಿ ಶಾಖವನ್ನು ನೀಡಬಹುದು. ಸಂಗ್ರಹಿಸಿದ ಶಾಖವನ್ನು ಮತ್ತೆ ವಿದ್ಯುತ್‌ ಆಗಿ ಪರಿವರ್ತಿಸುವ ತಂತ್ರಜ್ಞಾನವೂ ಪರೀಕ್ಷೆಯ ಹಂತದಲ್ಲಿದೆ.

ಒಂದು ವರ್ಷದ ಫಲಿತಾಂಶ

*85%+ ಶಕ್ತಿ ದಕ್ಷತೆ

*70% ಇಂಗಾಲ ಹೊರಸೂಸುವಿಕೆ ಇಳಿಕೆ

*60% ಬಯೋಮಾಸ್‌ ಬಳಕೆ ಇಳಿಕೆ

*100% ತೈಲ ಬಳಕೆ ಇಳಿಕೆ

*100% ಕೇಂದ್ರೀಕೃತ ತಾಪ ಪೂರೈಕೆ ವಿಶ್ವಾಸಾರ್ಹತೆ

*100MWH ಶಕ್ತಿ ಸಂಗ್ರಹ ಸಾಮರ್ಥ್ಯ

*1MW ಉಷ್ಣಶಕ್ತಿ ಉತ್ಪಾದನ ಸಾಮರ್ಥ್ಯ

*ಕುಮಾರ ಸುಬ್ರಹ್ಮಣ್ಯ, ಕಂಬಿನಹರ

Dailyhunt
Disclaimer: This content has not been generated, created or edited by Dailyhunt. Publisher: Udayavani