ಬೆಂಗಳೂರು: ವಿಶೇಷ ಅಭಿಯಾನದ ಮೂಲಕ ಗೈರು, ಸ್ಥಳಾಂತರ, ಮೃತ ಹಾಗೂ ನಕಲಿ (ASDD) ಮತದಾರರ ಪಟ್ಟಿಯನ್ನು ಮರುಪರಿಶೀಲಿಸಲು ಮತ್ತು ಬಿಟ್ಟುಹೋಗಿರುವ ಅರ್ಹ ಮತದಾರರ ಹೆಸರುಗಳನ್ನು ಮರುಸೇರ್ಪಡೆ ಮಾಡಲು ಎಲ್ಲ ರಾಜ್ಯಗಳ ಚುನಾವಣಾಧಿಕಾರಿಗಳಿಗೆ ಭಾರತ ಚುನಾವಣಾ ಆಯೋಗ (ECI) ಆದೇಶಿಸಿದೆ.
ಈ ನಿರ್ಧಾರವನ್ನು ಸ್ವಾಗತಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ಇದು ಇಡೀ ದೇಶದ ಮತದಾರರ ಹಕ್ಕಿಗೆ ಸಂದ ಜಯ" ಎಂದು ಬಣ್ಣಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಮುಖಂಡರು ರಾಜ್ಯ ಚುನಾವಣಾ ಆಯೋಗದ ಎದುರು ನಡೆಸಿದ ಧರಣಿ ಹಾಗೂ ಸತತ ಹೋರಾಟದ ಪರಿಣಾಮವಾಗಿ ಕೇಂದ್ರ ಚುನಾವಣಾ ಆಯೋಗವು ರಾತ್ರೋರಾತ್ರಿ ಈ ಮಹತ್ವದ ನಿರ್ದೇಶನ ಹೊರಡಿಸಿದೆ ಎಂದರು.
ಯಾವುದೇ ಅರ್ಹ ಮತದಾರರ ಹೆಸರನ್ನು ದುರುದ್ದೇಶಪೂರಿತವಾಗಿ (ಫಾರ್ಮ್ 7 ಮೂಲಕ) ಡಿಲೀಟ್ ಮಾಡಬಾರದು ಎಂದು ಆಯೋಗ ಸ್ಪಷ್ಟಪಡಿಸಿದೆ. ಸಾಮೂಹಿಕ ಹೆಸರು ತೆಗೆದುಹಾಕಿರುವ ದೂರುಗಳನ್ನು ಗಂಭೀರವಾಗಿ ಪರಿಶೀಲಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಹೊಸ ಯುವ ಮತದಾರರು, ಕಾರ್ಮಿಕರು, ರಾತ್ರಿ ಆಶ್ರಯ ತಾಣಗಳಲ್ಲಿ ವಾಸಿಸುವವರು ಹಾಗೂ ನಿರಾಶ್ರಿತರಿಗಾಗಿ ಬೂತ್ ಮಟ್ಟದಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ ಹೆಸರು ಸೇರ್ಪಡೆಗೊಳಿಸಲು ಬಿಎಲ್‌ಒ (BLO) ಮತ್ತು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದರು.
ಬಿಜೆಪಿ ವಿರುದ್ಧ ವಾಗ್ದಾಳಿ: ದಲಿತರು ಹಾಗೂ ಅಲ್ಪಸಂಖ್ಯಾತರು ಸೇರಿದಂತೆ ಸಮಾಜದ ದುರ್ಬಲ ವರ್ಗಗಳ ಸುಮಾರು 25,000 ಮತಗಳನ್ನು ಡಿಲೀಟ್ ಮಾಡಲು ಬಿಜೆಪಿ ಅರ್ಜಿ ನೀಡಿದೆ ಎಂದು ಆರೋಪಿಸಿದ ಡಿ.ಕೆ. ಶಿವಕುಮಾರ್, "ಇದು ಜನವಿರೋಧಿ ಹಾಗೂ ಸಂವಿಧಾನವಿರೋಧಿ ಕೃತ್ಯ" ಎಂದು ಕಿಡಿಕಾರಿದರು.
ಸಿಟಿಜನ್ಸ್ ಫೋರಂ ಸರ್ವೇ: ರಾಜ್ಯಾದ್ಯಂತ ಮತಗಳ್ಳತನ ಹಾಗೂ ಅಕ್ರಮಗಳ ಕುರಿತು 'ಸಿಟಿಜನ್ಸ್ ಫೋರಂ' ಮತ್ತು ವಿಶೇಷ ತಂಡಗಳ ಮೂಲಕ ಮಾಹಿತಿ ಕಲೆಹಾಕಿ ದತ್ತಾಂಶ ಸಂಗ್ರಹಿಸಲಾಗಿದೆ.
ಮತದಾನದ ಹಕ್ಕು ರಕ್ಷಣೆ ಕರ್ತವ್ಯ: "ಜನರ ಮತದಾನದ ಹಕ್ಕನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ. ಕಾನೂನು ಪ್ರಕಾರ ನಾವು ಯಾವುದೇ ತಪ್ಪು ಮಾಡಿದ್ದರೆ ಕೇಸ್ ದಾಖಲಿಸಲಿ, ನಾವು ಯಾವುದಕ್ಕೂ ಅಂಜುವುದಿಲ್ಲ" ಎಂದು ಸವಾಲೆಸೆದರು.

