ಗುವಾಹಟಿ: ಇರಾನ್ ಯುದ್ಧದ ಪರಿಣಾಮವಾಗಿ ಎಲ್‌ಪಿಜಿ ಬಿಕ್ಕಟ್ಟು ಎದುರಾಗಿರುವ ಬೆನ್ನಲ್ಲೇ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮತದಾರರಿಗೆ ಬಂಪರ್ ಕೊಡುಗೆಯೊಂದನ್ನು ಘೋಷಿಸಿದ್ದಾರೆ. ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ, ಪ್ರತಿ ಬಡ ಕುಟುಂಬಕ್ಕೆ ವರ್ಷಕ್ಕೆ ಎರಡು ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.
ಶನಿವಾರ ನಡೆದ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಶರ್ಮಾ, "ನಮ್ಮ ಸರ್ಕಾರವು ಜನರಿಗೆ ಎರಡು ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಿದೆ. ಒಂದು ಬಿಹೂ ಹಬ್ಬದ ಮೊದಲು ಮತ್ತು ಇನ್ನೊಂದು ದುರ್ಗಾ ಪೂಜೆಯ ಸಂದರ್ಭದಲ್ಲಿ ನಿಮಗೆ ಸಿಗಲಿದೆ. ಇದಕ್ಕಾಗಿ ನೀವು ಹಣ ಪಾವತಿಸುವ ಅಗತ್ಯವಿಲ್ಲ, ನಿಮ್ಮ 'ಮಾಮಾ' (ಮುಖ್ಯಮಂತ್ರಿಗಳ ಜನಪ್ರಿಯ ಹೆಸರು) ಹಣ ಪಾವತಿಸುತ್ತಾರೆ. ಇದು ಒಳ್ಳೆಯದಲ್ಲವೇ?" ಎಂದು ಪ್ರಶ್ನಿಸಿದರು.
ಕೇವಲ ಉಚಿತ ಕೊಡುಗೆಗಳಲ್ಲದೆ, ಮೂಲಸೌಕರ್ಯ ಮತ್ತು ಯುವಜನತೆಗೆ ಉದ್ಯೋಗಾವಕಾಶ ನೀಡುವ ಬಗ್ಗೆಯೂ ಸರ್ಕಾರ ಬದ್ಧವಾಗಿದೆ ಎಂದು ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಸ್ಸಾಂನಲ್ಲಿ ಏಪ್ರಿಲ್ 9 ರಂದು ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.
ಎಲ್‌ಪಿಜಿ ವಿತರಕರ ಅಮಾನತು:
ಕೇಂದ್ರ ಸರ್ಕಾರದ ಹೊಸ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು (SOP) ಪಾಲಿಸದ ಕಾರಣ ಅಸ್ಸಾಂನ ಐವರು ಎಲ್‌ಪಿಜಿ ವಿತರಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಪಶ್ಚಿಮ ಏಷ್ಯಾದ ಅಸ್ಥಿರತೆಯ ಹಿನ್ನೆಲೆಯಲ್ಲಿ, ತೈಲ ಸಚಿವಾಲಯದ ಸೂಚನೆಯಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಎಲ್‌ಪಿಜಿ ಪೂರೈಕೆಯ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗುತ್ತಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
"ರಾಜ್ಯದಲ್ಲಿ ಎಲ್‌ಪಿಜಿ ದಾಸ್ತಾನು ಸಮರ್ಪಕವಾಗಿದೆ ಮತ್ತು ದೇಶೀಯ ಗ್ರಾಹಕರಿಗೆ ಶೇ. 100 ರಷ್ಟು ಪೂರೈಕೆಯನ್ನು ಮುಂದುವರಿಸಲಾಗುವುದು" ಎಂದು ಸರ್ಕಾರವು ಜನರಿಗೆ ಭರವಸೆ ನೀಡಿದೆ.

