ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಫಾರ್ಮಕೋಪಿಯಾ ಆಯೋಗ (IPC) ಹಾಗೂ ಫಾರ್ಮಕೋವಿಜಿಲೆನ್ಸ್ ಪ್ರೋಗ್ರಾಂ ಆಫ್ ಇಂಡಿಯಾ (PvPI) ವತಿಯಿಂದ 2026ರ ಸೆಪ್ಟಂಬರ್ 17ರಿಂದ 23ರ ವರೆಗೆ ʼಫಾರ್ಮಕೋವಿಜಿಲೆನ್ಸ್ ಮೂಲಕ ಔಷಧಗಳ ವಿವೇಚನಾಪೂರ್ವಕ ಬಳಕೆಯನ್ನು ಉತ್ತೇಜಿಸುವುದು: ಸುರಕ್ಷಿತ ಆರೋಗ್ಯಸೇವೆಯತ್ತ ಒಂದು ಹೆಜ್ಜೆ' ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಯಿತು.
ಈ 6ನೇ ರಾಷ್ಟ್ರೀಯ ಫಾರ್ಮಕೋವಿಜಿಲೆನ್ಸ್ ವಾರದ ಅಂಗವಾಗಿ ಈ ಸಾರ್ವಜನಿಕ ಜಾಗೃತಿಯ ಉದ್ದೇಶವನ್ನು ಈ ಲೇಖನ ಹೊಂದಿದೆ.
ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಔಷಧಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಇಂದಿನ ದಿನಗಳಲ್ಲಿ ಜ್ವರ, ಮಧುಮೇಹ, ರಕ್ತದೊತ್ತಡ, ಹೃದಯರೋಗ, ಅಲರ್ಜಿ, ಸೋಂಕುಗಳು ಸೇರಿದಂತೆ ಅನೇಕ ಕಾಯಿಲೆಗಳ ಚಿಕಿತ್ಸೆಯಲ್ಲಿ ಔಷಧಗಳು ಜೀವ ಉಳಿಸುವ ಪಾತ್ರ ವಹಿಸುತ್ತಿವೆ. ಆದರೆ ಔಷಧಗಳು ಎಷ್ಟು ಪ್ರಯೋಜನಕಾರಿ ಆಗಿದ್ದರೂ, ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸದೆ ಹೋದರೆ ಅಡ್ಡ ಪರಿಣಾಮಗಳು ಹಾಗೂ ಇತರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ಅನೇಕ ಬಾರಿ ವೈದ್ಯರು ಬರೆದ ಔಷಧಗಳ ಬಗ್ಗೆ ರೋಗಿಗಳು ಪ್ರಶ್ನೆ ಕೇಳಲು ಹಿಂಜರಿಯುತ್ತಾರೆ. ಕೆಲವರು ಔಷಧಯನ್ನು ಏಕೆ ಕೊಡಲಾಗಿದೆ ಎಂಬುದನ್ನೇ ತಿಳಿದುಕೊಳ್ಳುವುದಿಲ್ಲ. ಇನ್ನು ಕೆಲವರು ಸ್ನೇಹಿತರು ಅಥವಾ ನೆರೆಹೊರೆಯವರ ಸಲಹೆಯ ಮೇರೆಗೆ ಔಷಧಗಳನ್ನು ಸೇವಿಸುತ್ತಾರೆ. ಇದು ಆರೋಗ್ಯಕ್ಕೆ ಅಪಾಯವನ್ನುಂಟುಮಾಡಬಹುದು.
ಆದ್ದರಿಂದ ಔಷಧ ಬಳಸುವ ಮೊದಲು ಆರೋಗ್ಯ ವೃತ್ತಿಪರರನ್ನು ಕೇಳಬೇಕಾದ ಐದು ಮುಖ್ಯ ಪ್ರಶ್ನೆಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.
1. ಈ ಔಷಧವನ್ನು ನಾನು ಏಕೆ ತೆಗೆದುಕೊಳ್ಳಬೇಕು?
ಔಷಧವನ್ನು ತೆಗೆದುಕೊಳ್ಳುವ ಮೊದಲು ಅದರ ಉದ್ದೇಶವನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ವೈದ್ಯರು ನೀಡಿರುವ ಪ್ರತಿಯೊಂದು ಔಷಧಕ್ಕೂ ನಿರ್ದಿಷ್ಟ ಕಾರಣವಿರುತ್ತದೆ.
ಉದಾಹರಣೆಗೆ:
ಜ್ವರ ಕಡಿಮೆ ಮಾಡಲು ರಕ್ತದೊತ್ತಡ ನಿಯಂತ್ರಿಸಲು
ಸೋಂಕು ನಿವಾರಿಸಲು ನೋವು ಕಡಿಮೆ ಮಾಡಲು
ಮಧುಮೇಹ ನಿಯಂತ್ರಿಸಲು
ರೋಗಿಯು ಔಷಧದ ಉದ್ದೇಶವನ್ನು ಅರ್ಥಮಾಡಿಕೊಂಡರೆ ಚಿಕಿತ್ಸೆಯ ಬಗ್ಗೆ ವಿಶ್ವಾಸ ಹೆಚ್ಚುತ್ತದೆ. ಜತೆಗೆ ಔಷಧವನ್ನು ನಿಯಮಿತವಾಗಿ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ.
ಕೆಲವೊಮ್ಮೆ ಒಂದೇ ಕಾಯಿಲೆಗೆ ಒಂದಕ್ಕಿಂತ ಹೆಚ್ಚು ಔಷಧ ನೀಡಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಪ್ರತೀ ಔಷಧದ ಕಾರ್ಯವೇನು ಎಂಬುದನ್ನು ತಿಳಿದುಕೊಳ್ಳುವುದು ಔಷಧಗಳನ್ನು ಸರಿಯಾಗಿ ಬಳಸಲು ಸಹಾಯಕವಾಗುತ್ತದೆ.
2. ಈ ಔಷಧವನ್ನು ಹೇಗೆ ಮತ್ತು ಎಷ್ಟು ದಿನ ತೆಗೆದುಕೊಳ್ಳಬೇಕು?
ಇದು ಅತ್ಯಂತ ಪ್ರಮುಖವಾದ ಪ್ರಶ್ನೆಯಾಗಿದೆ. ಔಷಧ ಸರಿಯಾದ ಪ್ರಮಾಣದಲ್ಲಿ ಹಾಗೂ ಸರಿಯಾದ ಸಮಯದಲ್ಲಿ ತೆಗೆದುಕೊಂಡಾಗ ಮಾತ್ರ ಅದರ ಪೂರ್ಣ ಪ್ರಯೋಜನ ದೊರೆಯುತ್ತದೆ.
ತಿಳಿದುಕೊಳ್ಳಬೇಕಾದ ಅಂಶಗಳು:
ದಿನಕ್ಕೆ ಎಷ್ಟು ಬಾರಿ ತೆಗೆದುಕೊಳ್ಳಬೇಕು? ಊಟದ ಮೊದಲು ಅಥವಾ ಅನಂತರವೇ? ಎಷ್ಟು ದಿನಗಳವರೆಗೆ ಮುಂದುವರಿಸಬೇಕು? ಒಂದು ಡೋಸ್ ಮರೆತರೆ ಏನು ಮಾಡಬೇಕು?
ಉದಾಹರಣೆಗೆ, ಕೆಲವು ಆಂಟಿಬಯಾಟಿಕ್‌ಗಳನ್ನು ವೈದ್ಯರು ಸೂಚಿಸಿದ ಪೂರ್ಣ ಅವಧಿಯವರೆಗೆ ತೆಗೆದುಕೊಳ್ಳಬೇಕು. ಆರೋಗ್ಯ ಸುಧಾರಿಸಿದೆ ಎಂಬ ಕಾರಣಕ್ಕೆ ಮಧ್ಯದಲ್ಲೇ ನಿಲ್ಲಿಸಿದರೆ ಸೋಂಕು ಮರುಕಳಿಸುವ ಸಾಧ್ಯತೆ ಇರುತ್ತದೆ.
ರಕ್ತದೊತ್ತಡ ಅಥವಾ ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳಲ್ಲಿ ಔಷಧಗಳನ್ನು ವೈದ್ಯರ ಸಲಹೆ ಇಲ್ಲದೆ ನಿಲ್ಲಿಸುವುದರಿಂದ ಗಂಭೀರ ಪರಿಣಾಮಗಳು ಉಂಟಾಗಬಹುದು.
3. ಈ ಔಷಧದಿಂದ ಅಡ್ಡ ಪರಿಣಾಮಗಳು ಉಂಟಾಗಬಹುದೇ?
ಯಾವುದೇ ಔಷಧ ಪ್ರಯೋಜನದ ಜತೆಗೆ ಕೆಲವು ಅಡ್ಡ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಯನ್ನು ಹೊಂದಿರುತ್ತದೆ. ಆದರೆ ಎಲ್ಲರಲ್ಲೂ ಅವು ಕಂಡುಬರಬೇಕೆಂದೇನೂ ಇಲ್ಲ.
ಸಾಮಾನ್ಯವಾಗಿ ಕಂಡುಬರುವ ಕೆಲವು ಅಡ್ಡ ಪರಿಣಾಮಗಳು:
ತಲೆಸುತ್ತು ವಾಂತಿ ಹೊಟ್ಟೆನೋವು ನಿದ್ರೆ ಬರುವುದು ಚರ್ಮದ ದದ್ದು ಹಸಿವಿನ ಬದಲಾವಣೆ ಅಪರೂಪವಾಗಿ ಗಂಭೀರ ಅಡ್ಡ ಪರಿಣಾಮಗಳೂ ಕಂಡುಬರಬಹುದು.
ಆದ್ದರಿಂದ ರೋಗಿಗಳು ವೈದ್ಯರು ಅಥವಾ ಔಷಧಾಧಿಕಾರಿಗಳನ್ನು ಕೇಳಬೇಕು:
ಯಾವ ಅಡ್ಡ ಪರಿಣಾಮಗಳು ಸಂಭವಿಸಬಹುದು?
ಯಾವ ಲಕ್ಷಣಗಳು ಕಂಡುಬಂದರೆ ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸಬೇಕು?
ಅಡ್ಡ ಪರಿಣಾಮ ಉಂಟಾದರೆ ಔಷಧವನ್ನು ನಿಲ್ಲಿಸಬೇಕೇ ಅಥವಾ ಮುಂದುವರಿಸಬಹುದೇ?
ಅಡ್ಡ ಪರಿಣಾಮಗಳನ್ನು ಗುರುತಿಸಿ ವರದಿ ಮಾಡುವುದರಿಂದ ಇದೇ ಔಷಧವನ್ನು ಬಳಸುತ್ತಿರುವ ಇತರ ರೋಗಿಗಳ ಸುರಕ್ಷೆಯೂ ಹೆಚ್ಚುತ್ತದೆ. ಇದು ಫಾರ್ಮಕೋವಿಜಿಲೆನ್ಸ್ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
-ಮುಂದಿನ ವಾರಕ್ಕೆ
-ಡಾ| ಅಶೋಕ್ ಕೆ. ಶೆಣೈ
ಪ್ರೊಫೆಸರ್, ಫಾರ್ಮಕಾಲಜಿ ವಿಭಾಗ, ಕೆಎಂಸಿ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಫಾರ್ಮಕಾಲಜಿ ವಿಭಾಗ, ಕೆಎಂಸಿ, ಮಂಗಳೂರು)

