ಕೆಲವು ಕ್ಷಣಗಳು ಜೀವನದಲ್ಲಿ ಕೇವಲ ನೆನಪುಗಳಾಗಿ ಉಳಿಯುವುದಿಲ್ಲ ಅವು ನಮ್ಮೊಳಗಿನ ಆತ್ಮವಿಶ್ವಾಸಕ್ಕೆ ಹೊಸ ಅರ್ಥ ನೀಡುತ್ತವೆ. ಕೆಲವು ಪ್ರಯಾಣಗಳು ಕೇವಲ ಒಂದು ಸ್ಥಳಕ್ಕೆ ಹೋಗಿ ಬರುವುದಕ್ಕಷ್ಟೇ ಸೀಮಿತವಾಗಿರುವುದಿಲ್ಲ, ಅವು ನಮ್ಮ ಕನಸುಗಳತ್ತ ಇಡುವ ಮೊದಲ ಹೆಜ್ಜೆಯಾಗಿರುತ್ತವೆ.
ಅಂತಹ ಒಂದು ಮರೆಯಲಾಗದ ಅನುಭವವೇ ನಮ್ಮ ʼತುಮಕೂರು ಮೀಡಿಯಾ ಫೆಸ್ಟ್' ಪ್ರಯಾಣ.
ಆ ದಿನ ಬೆಳಗ್ಗೆಯಿಂದಲೇ ಮನಸ್ಸಿನೊಳಗೆ ಒಂದು ವಿಚಿತ್ರವಾದ ಖುಷಿ ಮತ್ತು ಆತಂಕ ಒಟ್ಟೊಟ್ಟಿಗೆ ಓಡಾಡುತ್ತಿತ್ತು. ಆ ದಿನ ಸಾಮಾನ್ಯವಾಗಿ ಕಾಲೇಜಿಗೆ ಹೋಗುವ ದಿನದಂತಿರಲಿಲ್ಲ. ಪ್ರತಿಯೊಬ್ಬರೂ ತಮ್ಮ-ತಮ್ಮ ಬ್ಯಾಗ್ ಸಿದ್ಧಪಡಿಸಿಕೊಂಡು, ಮನಸ್ಸಿನಲ್ಲಿ ನೂರಾರು ಕನಸುಗಳನ್ನು ಹೊತ್ತು ಹೊರಟಿದ್ದೆವು.
ಸಂಜೆ ಬಸ್ ನಿಲ್ದಾಣದಲ್ಲಿ ಎಲ್ಲರೂ ಒಬ್ಬೊಬ್ಬರಾಗಿ ಸೇರುತ್ತಿದ್ದಂತೆ, ಅಲ್ಲಿ ಒಂದು ವಿಶೇಷವಾದ ಉತ್ಸಾಹದ ವಾತಾವರಣ ಮೂಡಿತ್ತು. ಕೆಲವರು ನಗುತ್ತಾ ಮಾತನಾಡುತ್ತಿದ್ದರು, ಕೆಲವರು ಮೌನವಾಗಿದ್ದರು; ಆದರೆ ಪ್ರತಿಯೊಬ್ಬರ ಕಣ್ಣಲ್ಲೂ "ನಾವು ನಮ್ಮ ಪ್ರತಿಭೆಯನ್ನು ತೋರಿಸಬೇಕು' ಎಂಬ ಒಂದೇ ಕನಸು ಎದ್ದು ಕಾಣುತ್ತಿತ್ತು.
ಬಸ್ಸು ಹತ್ತಿದ ಕ್ಷಣದಿಂದಲೇ ನಮ್ಮ ಪ್ರಯಾಣ ಆರಂಭವಾಯಿತು. ಕಿಟಕಿಯ ಹೊರಗೆ ಓಡುತ್ತಿದ್ದ ಬೆಳಕುಗಳು, ರಸ್ತೆ, ಮರಗಳು ಎಲ್ಲವೂ ಸಾಮಾನ್ಯವಾಗಿದ್ದರೂ ನಮ್ಮ ಮನಸ್ಸಿನೊಳಗಿನ ಕನಸುಗಳು ಮಾತ್ರ ಅಸಾಮಾನ್ಯವಾಗಿದ್ದವು. ಒಬ್ಬರು ತಮ್ಮ ಡೈಲಾಗ್‌ಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದರು, ಇನ್ನೊಬ್ಬರು ಆಂಕರಿಂಗ್ ಬಗ್ಗೆ ಚರ್ಚಿಸುತ್ತಿದ್ದರು, ಮತ್ತೆ ಕೆಲವರು ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಳ್ಳುತ್ತಾ ಆ ಕ್ಷಣಗಳನ್ನು ಸೆರೆಹಿಡಿಯುತ್ತಿದ್ದರು.
ಮಧ್ಯೆ-ಮಧ್ಯೆ ನಗುವಿನ ಸದ್ದು, ತಮಾಷೆ, ಹಾಡುಗಳು... ಆ ಪ್ರಯಾಣವೇ ಒಂದು ಹಬ್ಬದಂತಾಗಿತ್ತು. ಆದರೆ ಆ ನಗುವಿನ ಹಿಂದೆ ಒಂದು ಚಿಕ್ಕ ಭಯವೂ ಇತ್ತು. ಆದರೂ ಆ ಭಯಕ್ಕಿಂತ ನಮ್ಮೊಳಗಿನ ಒಗ್ಗಟ್ಟು ದೊಡ್ಡದಾಗಿತ್ತು. ನಾವು ಕೇವಲ ಸ್ಪರ್ಧೆಗೆ ಹೋಗುತ್ತಿದ್ದ ತಂಡವಾಗಿರಲಿಲ್ಲ... ಒಂದೇ ಕನಸಿಗಾಗಿ ಹೊರಟ ಕುಟುಂಬವಾಗಿದ್ದೆವು.
ತುಮಕೂರಿಗೆ ತಲುಪಿದ ಕ್ಷಣ ಈಗಲೂ ಕಣ್ಮುಂದೆ ಕಟ್ಟಿದಂತಿದೆ. ಅಲ್ಲಿ ಕಂಡ ವಾತಾವರಣವೇ ವಿಭಿನ್ನವಾಗಿತ್ತು. ವಿವಿಧ ಕಾಲೇಜುಗಳಿಂದ ಬಂದ ವಿದ್ಯಾರ್ಥಿಗಳು, ಅವರ ಉತ್ಸಾಹ, ಅವರ ಮಾತಿನ ಶೈಲಿ, ಅವರ ತಯಾರಿ ಇವೆಲ್ಲವನ್ನೂ ನೋಡಿದಾಗ ಕ್ಷಣಕ್ಕೊಂದು ಆತಂಕ ಹೆಚ್ಚಾದರೂ, ಅದೇ ಸಮಯದಲ್ಲಿ ನಮ್ಮೊಳಗೆ ಮತ್ತಷ್ಟು ಸ್ಫೂರ್ತಿ ಮೂಡಿತು.
ನಮ್ಮ ಕಾಲೇಜಿನ ವಿಶೇಷತೆ ಏನೆಂದರೆ, ನಮ್ಮ ತಂಡದಲ್ಲಿ ಕೇವಲ ಹುಡುಗಿಯರೇ ಇದ್ದೆವು. ಅದೇ ನಮಗೆ ಇನ್ನಷ್ಟು ಹೆಮ್ಮೆ ತಂದ ವಿಷಯವಾಗಿತ್ತು. ಅಲ್ಲಿನ ವಿದ್ಯಾರ್ಥಿಗಳು ಮಾತನಾಡುವ ರೀತಿ, ಅವರ ಉಚ್ಚಾರಣೆ, ಅವರ ಆತ್ಮವಿಶ್ವಾಸ ಎಲ್ಲವೂ ನಮಗೆ ಹೊಸ ಅನುಭವವಾಗಿತ್ತು.
ಅಲ್ಲಿ ನಮಗೆ ಮಾಡಿದ್ದ ಊಟ, ಉಳಿದುಕೊಳ್ಳಲು ನೀಡಿದ್ದ ಕೊಠಡಿ ವ್ಯವಸ್ಥೆ, ಎಲ್ಲರ ಆತಿಥ್ಯ ಇವೆಲ್ಲವೂ ನಮಗೆ ಮನೆಯಲ್ಲಿಯೇ ಇದ್ದಂತಹ ಅನುಭವ ನೀಡಿತು. ಆ ರಾತ್ರಿ ನಾವು ಹೆಚ್ಚು ನಿದ್ದೆ ಮಾಡಲೇ ಇಲ್ಲ. ಯಾರೋ ತಮ್ಮ ಭಾಗವನ್ನು ಅಭ್ಯಾಸ ಮಾಡುತ್ತಿದ್ದರು, ಇನ್ನೊಬ್ಬರು ನಾಳೆಯ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಿದ್ದರು. ಕೆಲವರು ಮೌನವಾಗಿ ಕುಳಿತಿದ್ದರೂ ಅವರ ಮನಸ್ಸಿನೊಳಗೆ ಸ್ಪರ್ಧೆಯ ಚಿಂತನೆಗಳೇ ಓಡಾಡುತ್ತಿದ್ದವು.
ಮರುದಿನ ಸ್ಪರ್ಧೆ ಆರಂಭವಾಗುವ ಮುನ್ನದ ಆ ಕ್ಷಣಗಳು ಇಂದಿಗೂ ಮರೆಯಲಾಗದವು. ಕೈಗಳಲ್ಲಿ ಸ್ವಲ್ಪ ನಡುಕು, ಹೃದಯದ ಬಡಿತ ಹೆಚ್ಚಾಗಿತ್ತು. ಆದರೆ ಮುಖದಲ್ಲಿ ಮಾತ್ರ ಧೈರ್ಯದ ನಗು ಇತ್ತು. ನಮ್ಮ ಶಿಕ್ಷಕರು ಹೇಳಿದ್ದ ʼಭಯಪಡಬೇಡಿ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ' ಎಂಬ ಮಾತು ಮಾತ್ರ ಆಗಾಗ ನೆನಪಾಗುತ್ತಿತ್ತು. ಆ ಮಾತು ನಮಗೆ ಅಂದು ದೊಡ್ಡ ಶಕ್ತಿಯಾಯಿತು.
ವೇದಿಕೆಯ ಮೇಲೆ ಕಾಲಿಟ್ಟ ಕ್ಷಣ ಕೆಲ ಸೆಕೆಂಡುಗಳ ಕಾಲ ಎಲ್ಲವೂ ಮೌನವಾದಂತಾಯಿತು. ಪ್ರೇಕ್ಷಕರ ಮುಂದೆ ನಿಂತಾಗ ಮೊದಲಿಗೆ ಭಯವಾಗಿತ್ತು; ಆದರೆ ಕಾರ್ಯಕ್ರಮ ಆರಂಭವಾದ ಅನಂತರ ನಮ್ಮೊಳಗಿನ ಎಲ್ಲ ಭಯವೂ ಕರಗಿ ಹೋಯಿತು. ನಾವು ಕಲಿತದ್ದು, ಅಭ್ಯಾಸ ಮಾಡಿದ್ದು, ನಮ್ಮ ಪರಿಶ್ರಮ ಇವೆಲ್ಲವೂ ಆ ವೇದಿಕೆಯ ಮೇಲೆ ಜೀವಂತವಾಗಿತ್ತು.
ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಮನಸಾರೆ ನಿರ್ವಹಿಸಿದರು. ಪ್ರೇಕ್ಷಕರ ಚಪ್ಪಾಳೆಗಳು ಕೇಳುತ್ತಿದ್ದಂತೆ ನಮ್ಮೊಳಗೆ ಹೊಸ ಉತ್ಸಾಹ ಮೂಡಿತು. ಆ ಕ್ಷಣದಲ್ಲಿ ನಮಗೆ ಸ್ಪರ್ಧೆ ಮುಖ್ಯವಾಗಿರಲಿಲ್ಲ ನಾವು ನಮ್ಮನ್ನೇ ಮೀರಿಸಿದ್ದೇವೆ ಅನ್ನುವ ಸಂತೋಷವೇ ಮುಖ್ಯವಾಗಿತ್ತು.
ಅನಂತರ ಬಂದದ್ದು ಫಲಿತಾಂಶದ ಕ್ಷಣ. ಆ ಕೆಲ ನಿಮಿಷಗಳ ನಿರೀಕ್ಷೆ ತುಂಬ ಸುದೀರ್ಘವಾದಂತಿತ್ತು. ಹೃದಯ ಜೋರಾಗಿ ಬಡಿದುಕೊಳ್ಳುತ್ತಿತ್ತು. ನಮ್ಮ ಕಾಲೇಜಿನ ಹೆಸರನ್ನು ಘೋಷಿಸಿದ ಕ್ಷಣ ಎಲ್ಲರೂ ಒಬ್ಬರನ್ನೊಬ್ಬರು ನೋಡಿಕೊಂಡು ಖುಷಿಯಿಂದ ಕಿರುಚಿದೆವು. "ರನ್ನರ್-ಅಪ್" ಎಂಬ ಆ ಒಂದು ಪದ ನಮ್ಮ ಎಲ್ಲ ಪರಿಶ್ರಮಕ್ಕೆ ಸಿಕ್ಕ ಅತ್ಯಂತ ಅಮೂಲ್ಯ ಬಹುಮಾನವಾಗಿತ್ತು.
ಟ್ರೋಫಿಯನ್ನು ಕೈಯಲ್ಲಿ ಹಿಡಿದಾಗ ಏನೋ ಒಂದು ರೋಮಾಂಚನ, ಅತೀವ ಉತ್ಸಾಹ. ಆ ಕ್ಷಣದಲ್ಲಿ ನಾವು ಅನುಭವಿಸಿದ ಸಂತೋಷವನ್ನು ಪದಗಳಲ್ಲಿ ಹೇಳುವುದು ಕಷ್ಟ. ಆ ಪ್ರಮಾಣಪತ್ರಗಳು, ಆ ಟ್ರೋಫಿ, ಆ ಫೋಟೋಗಳು ಇವೆಲ್ಲವೂ ಕೇವಲ ನೆನಪುಗಳಲ್ಲ; ಅವು ನಮ್ಮ ಶ್ರಮದ ಗುರುತುಗಳು, ನಮ್ಮ ಸ್ನೇಹದ ಸಂಕೇತಗಳು. ಒಟ್ಟಾಗಿ ನಕ್ಕ ಕ್ಷಣಗಳು, ಒಬ್ಬರಿಗೊಬ್ಬರು ಧೈರ್ಯ ಹೇಳಿಕೊಂಡ ಕ್ಷಣಗಳು, ವೇದಿಕೆಯ ಹಿಂದೆ ಅನುಭವಿಸಿದ ಆತಂಕ, ಫಲಿತಾಂಶದ ಅನಂತರ ಹಂಚಿಕೊಂಡ ಸಂತೋಷ ಇವೆಲ್ಲವೂ ಜೀವನಪೂರ್ತಿ ಮನಸ್ಸಿನಲ್ಲಿ ಉಳಿಯುವ ಅಮೂಲ್ಯ ನೆನಪುಗಳಾಗಿವೆ.
ಈ "ತುಮಕೂರು ಮೀಡಿಯಾ ಫೆಸ್ಟ್" ನಮಗೆ ಕೇವಲ ಒಂದು ಪ್ರಶಸ್ತಿ ನೀಡಲಿಲ್ಲ, ಅದು ನಮ್ಮೊಳಗೆ ಹೊಸ ಆತ್ಮವಿಶ್ವಾಸವನ್ನು ಹುಟ್ಟುಹಾಕಿತು. "ನಾವು ಕೂಡ ಸಾಧಿಸಬಹುದು' ಎಂಬ ನಂಬಿಕೆಯನ್ನು ಕೊಟ್ಟಿತು. ಕನಸು ಕಾಣುವುದು ಮುಖ್ಯ. ಆದರೆ ಆ ಕನಸನ್ನು ನಿಜವಾಗಿಸಲು ಒಟ್ಟಾಗಿ ಶ್ರಮಿಸುವುದು ಅದಕ್ಕಿಂತ ಮುಖ್ಯ ಎಂಬ ಪಾಠವನ್ನು ಕಲಿಸಿತು. ಇಂದು ಆ ಕ್ಷಣಗಳನ್ನು ನೆನಪಿಸಿಕೊಂಡಾಗ ಮನಸ್ಸಿನಲ್ಲಿ ಮೂಡುವುದು ಒಂದೇ ಭಾವನೆ ಕೆಲವು ಪ್ರಯಾಣಗಳು ಮುಗಿದರೂ, ಅವು ಕೊಟ್ಟ ನೆನಪುಗಳು ಎಂದಿಗೂ ಮುಗಿಯುವುದಿಲ್ಲ.
-ಪ್ರಮೀಳಾ ಚಲವಾದಿ
ವಿವಿ, ವಿಜಯಪುರ

