Dailyhunt Logo
  • Light mode
    Follow system
    Dark mode
    • Play Story
    • App Story
Menstruation: ಪಿಎಂಒಎಸ್‌ (ಪಿಸಿಒಎಸ್‌) ನಲ್ಲಿ ಋತುಸ್ರಾವವಾಗುವುದು ಏಕೆ ಮುಖ್ಯ

Menstruation: ಪಿಎಂಒಎಸ್‌ (ಪಿಸಿಒಎಸ್‌) ನಲ್ಲಿ ಋತುಸ್ರಾವವಾಗುವುದು ಏಕೆ ಮುಖ್ಯ

ಪಾಲಿಎಂಡೊಕ್ರೈನ್‌ ಮೆಟಬಾಲಿಕ್‌ ಒವೇರಿಯನ್‌ ಸಿಂಡ್ರೋಮ್‌ ಅಥವಾ ಪಿಎಂಒಎಸ್‌ ಅನೇಕ ಮಹಿಳೆಯರನ್ನು ಬಾಧಿಸುವ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಹಿಂದೆ ಪಾಲಿಸಿಸ್ಟಿಕ್‌ ಒವೇರಿಯನ್‌ ಸಿಂಡ್ರೋಮ್‌ ಅಥವಾ ಪಿಸಿಒಎಸ್‌ ಎಂದು ಇದನ್ನು ಕರೆಯಲಾಗುತ್ತಿತ್ತು. ಸೆಪ್ಟಂಬರ್‌ ತಿಂಗಳನ್ನು ಪಿಎಂಒಎಸ್‌ ಜಾಗೃತಿ ಮಾಸವನ್ನಾಗಿ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಅನಾರೋಗ್ಯದ ಬಗ್ಗೆ ಸಮಗ್ರವಾಗಿ ಬೆಳಕು ಚೆಲ್ಲುವ ಲೇಖನ ಸರಣಿಯ ನಾಲ್ಕನೇ ಭಾಗ ಇಲ್ಲಿದೆ.

ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್‌ (ಪಿಸಿಒಎಸ್‌) ಎಂಬುದು ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯವಾದ ಎಂಡೋಕ್ರೈನ್‌ (ಹಾರ್ಮೋನ್‌ ಸಂಬಂಧಿತ) ಸಮಸ್ಯೆಗಳಲ್ಲಿ ಒಂದಾಗಿದೆ. ಆದರೆ, ಪಾಲಿಸಿಸ್ಟಿಕ್‌ ಓವರೀಸ್‌ ಎಂಬ ಹೆಸರು ಈ ಕಾಯಿಲೆಯ ಮೂಲ ಸ್ವರೂಪವನ್ನು ನಿಖರವಾಗಿ ಪ್ರತಿಬಿಂಬಿಸುವುದಿಲ್ಲ ಹಾಗೂ ಈ ಸಮಸ್ಯೆ ಇರುವ ಪ್ರತಿಯೊಬ್ಬರಲ್ಲಿಯೂ ಪಾಲಿಸಿಸ್ಟಿಕ್‌ ಅಂಡಾಶಯಗಳು ಕಂಡುಬರುವುದಿಲ್ಲ.

ಆದ್ದರಿಂದ, ಈ ಹೆಸರಿನ ಕುರಿತು ಬಹುಕಾಲದಿಂದ ಚರ್ಚೆ ನಡೆಯುತ್ತಿದೆ. PCOS ಒಂದು ಸಂಕೀರ್ಣವಾದ ಚಯಾಪಚಯ, ಹಾರ್ಮೋನ್‌ ಮತ್ತು ಸಂತಾನೋತ್ಪತ್ತಿಗೆ ಸಂಬಂಧಿಸಿದ ಸ್ಥಿತಿ ಎಂಬ ಅರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇದಕ್ಕೆ ಹೆಚ್ಚು ಸೂಕ್ತವಾದ ಹೆಸರನ್ನು ನೀಡುವ ಕುರಿತು ಚರ್ಚೆಗಳು ನಡೆಯುತ್ತಿವೆ. ಅವುಗಳಲ್ಲಿ ಪಾಲಿಎಂಡೋಕ್ರೈನ್‌ ಮೆಟಬಾಲಿಕ್‌ ಓವರಿಯನ್‌ ಸಿಂಡ್ರೋಮ್‌ (Polyendocrine Metabolic Ovarian Syndrome-PMOS) ಎಂಬ ಹೆಸರು ಪ್ರಸ್ತಾವಿಸಲಾಗಿದೆ. PCOS ಎಂಬ ಹೆಸರನ್ನು PMOS ಎಂದು ಬದಲಾಯಿಸುವುದರಿಂದ ಅಂಡಾಶಯಗಳ ರಚನೆಯ ಮೇಲಿನ ಗಮನವನ್ನು ಮೀರಿ, ಜೀವನಪರ್ಯಂತ ಇರುವ ಈ ಸ್ಥಿತಿಯ ಪ್ರಮುಖ ಚಯಾಪಚಯ ಸಂಬಂಧಿತ ಅಂಶಗಳಿಗೂ ಸೂಕ್ತ ಮಹತ್ವ ನೀಡಲು ಸಾಧ್ಯವಾಗುತ್ತದೆ.

ಪಿಎಂಒಎಸ್‌ ಇರುವ ಮಹಿಳೆಯರು, ತಿಂಗಳುಗಟ್ಟಲೆ ಮುಟ್ಟಾಗದಿರುವುದನ್ನು ಕೇವಲ ಮಾಸಿಕ ಮುಟ್ಟಿನ ಕಿರಿಕಿರಿಯಿಂದ ಸಿಕ್ಕಿದ ಮುಕ್ತಿ ಎಂದು ಸಂಭ್ರಮಿಸಬಾರದು. ಅನಿಯಮಿತ ಅಥವಾ ಮುಟ್ಟು ಆಗದಿರುವುದು ಗರ್ಭಾಶಯದ ಒಳಗೆ ಏನಾಗುತ್ತಿದೆ ಎಂಬುದರ ಕುರಿತು ಸೂಚನೆ ನೀಡುವ ಒಂದು ಪ್ರಮುಖ ಲಕ್ಷಣವಾಗಿರಬಹುದು.

ಪಿಎಂಒಎಸ್‌ನೊಂದಿಗೆ ಜೀವಿಸುತ್ತಿರುವ ಅನೇಕ ಮಹಿಳೆಯರಿಗೆ ಅತ್ಯಂತ ಪರಿಚಿತವಿರುವ ರೋಗಲಕ್ಷಣವೆಂದರೆ ಅನಿಯಮಿತ ಋತುಚಕ್ರ. ಮುಟ್ಟು 40 ಅಥವಾ 50 ದಿನಗಳ ಅನಂತರ ಬರಬಹುದು- ಅಥವಾ ಕೆಲವು ತಿಂಗಳುಗಳ ಕಾಲ ಸಂಪೂರ್ಣವಾಗಿ ನಿಂತುಹೋಗಬಹುದು.

ಇಂತಹ ಸಂದರ್ಭದಲ್ಲಿ, 'ನಾನು ಗರ್ಭ ಧರಿಸಲು ಪ್ರಯತ್ನಿಸುತ್ತಿಲ್ಲ ಎಂದಾದರೆ, ನನಗೆ ಮುಟ್ಟಾಗುತ್ತದೆಯೋ ಇಲ್ಲವೋ ಎಂಬುದು ಏಕೆ ಮುಖ್ಯ' ಎಂದು ಅನೇಕರು ಯೋಚಿಸುವುದು ಸಹಜ.

ಆದರೆ ಇದು ಮುಖ್ಯ. ಏಕೆಂದರೆ ಋತುಸ್ರಾವ ಎಂಬುದು ಕೇವಲ ಗರ್ಭ ಧರಿಸುವುದಕ್ಕೆ ಮಾತ್ರ ಸಂಬಂಧಿಸಿದ್ದಲ್ಲ.

ಅಂಡೋತ್ಪತ್ತಿ ಆಗದಿದ್ದಾಗ ಏನಾಗುತ್ತದೆ?

ಸಾಮಾನ್ಯವಾಗಿ ಅಂಡೋತ್ಪತ್ತಿಯಾಗುವ ಋತುಚಕ್ರದಲ್ಲಿ, ಈಸ್ಟ್ರೊಜೆನ್‌ ಹಾರ್ಮೋನ್‌ ಗರ್ಭಾಶಯದ ಒಳಗಿನ ಪದರವಾದ ʼಎಂಡೊಮೆಟ್ರಿಯಂ' ಬೆಳೆಯಲು ಸಹಾಯ ಮಾಡುತ್ತದೆ. ಅಂಡೋತ್ಪತ್ತಿಯ ಅನಂತರ, ಪ್ರೊಜೆಸ್ಟರಾನ್‌ ಹಾರ್ಮೋನ್‌ ಈ ಪದರವನ್ನು ನಿಯಂತ್ರಿಸಲು ಮತ್ತು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಗರ್ಭಧಾರಣೆಯಾಗದಿದ್ದರೆ, ಹಾರ್ಮೋನ್‌ ಮಟ್ಟಗಳು ಕುಸಿದು, ಆ ಪದರವು ಮುಟ್ಟಿನ ರಕ್ತಸ್ರಾವವಾಗಿ ಹೊರಹೋಗುತ್ತದೆ.

ಪಿಎಂಒಎಸ್‌ ಸಾಮಾನ್ಯವಾಗಿ ಅಂಡೋತ್ಪತ್ತಿಗೆ ಅಡ್ಡಿಪಡಿಸುತ್ತದೆ. ಅಂಡೋತ್ಪತ್ತಿ ಅಪರೂಪವಾಗಿ ಸಂಭವಿಸಿದಾಗ ಅಥವಾ ಆಗದೆಯೇ ಇದ್ದಾಗ, ಪ್ರೊಜೆಸ್ಟರಾನ್‌ ಹಾರ್ಮೋನ್‌ನ ಸಹಜ ಲಭ್ಯತೆ ಗರ್ಭಾಶಯಕ್ಕೆ ಸಿಗುವುದಿಲ್ಲ. ಇದರಿಂದಾಗಿ ಎಂಡೊಮೆಟ್ರಿಯಂ ಅಗತ್ಯ ಪ್ರಮಾಣದ ಪ್ರೊಜೆಸ್ಟರಾನ್‌ ಇಲ್ಲದೆಯೇ ಕೇವಲ ಈಸ್ಟ್ರೊಜೆನ್‌ಗೆ ಒಡ್ಡಿಕೊಳ್ಳುತ್ತದೆ ಮತ್ತು ಕೆಲವು ಮಹಿಳೆಯರಲ್ಲಿ ಈ ಪದರವು ಅತಿಯಾಗಿ ದಪ್ಪಗಾಗಬಹುದು. ಇದೇ ಕಾರಣಕ್ಕೆ, ಸುದೀರ್ಘ‌ ಕಾಲ ಮುಟ್ಟಾಗದೆ ಇದ್ದರೆ ವೈದ್ಯಕೀಯ ಗಮನ ಹರಿಸುವುದು ಅಗತ್ಯ.

ಗರ್ಭಾಶಯದ ಒಳಪದರವನ್ನು ನಿರ್ಲಕ್ಷಿಸುವಂತಿಲ್ಲ

ಸಮಯ ಕಳೆದಂತೆ, ದೀರ್ಘ‌ಕಾಲದ ಅನಿಯಮಿತವಾಗಿ ಮುಟ್ಟಾಗುವುದು ಅಥವಾ ಮುಟ್ಟು ಆಗದಿರುವುದು ʼಎಂಡೊಮೆಟ್ರಿಯಲ್‌ ಹೈಪರ್‌ಪ್ಲಾಸಿಯಾ' ಎಂಬ ಸ್ಥಿತಿಗೆ ಕಾರಣವಾಗಬಹುದು. ಇದರಲ್ಲಿ ಗರ್ಭಾಶಯದ ಒಳಗಿನ ಪದರವು ಅಸಜವಾಗಿ ದಪ್ಪಗಾಗುತ್ತದೆ. ಅತ್ಯಂತ ಮುಖ್ಯ ವಿಷಯವೆಂದರೆ, ಎಂಡೊಮೆಟ್ರಿಯಲ್‌ ಹೈಪರ್‌ಪ್ಲಾಸಿಯಾದ ಕೆಲವು ಪ್ರಕಾರಗಳು ಮುಂದೆ ʼಎಂಡೊಮೆಟ್ರಿಯಲ್‌ ಕ್ಯಾನ್ಸರ್‌' (ಗರ್ಭಾಶಯದ ಕ್ಯಾನ್ಸರ್‌) ಆಗಿ ಬದಲಾಗಬಹುದು.

ವ್ಯಕ್ತಿಯ ವೈಯಕ್ತಿಕ ಅಪಾಯದ ಮಟ್ಟವು ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿದ್ದರೂ, ಪಿಎಂಒಎಸ್‌ ಅನ್ನು ಎಂಡೊಮೆಟ್ರಿಯಲ್‌ ಹೈಪರ್‌ಪ್ಲಾಸಿಯಾ ಮತ್ತು ಎಂಡೊಮೆಟ್ರಿಯಲ್‌ ಕ್ಯಾನ್ಸರ್‌ಗೆ ಒಂದು ಅಪಾಯಕಾರಿ ಅಂಶ ಎಂದು ಗುರುತಿಸಲಾಗಿದೆ (ಎಸಿಒಜಿ).

2023ರ ಪಿಎಂಒಎಸ್‌ ಅಂತಾರಾಷ್ಟ್ರೀಯ ಸಾಕ್ಷ್ಯಾಧಾರಿತ ಮಾರ್ಗದರ್ಶಿಯು ಕೂಡ ಎಂಡೊಮೆಟ್ರಿಯಲ್‌ ಹೈಪರ್‌ಪ್ಲಾಸಿಯಾ ಮತ್ತು ಕ್ಯಾನ್ಸರ್‌ ತಡೆಗಟ್ಟುವಿಕೆಯನ್ನು ಪಿಎಂಒಎಸ್‌ ಆರೈಕೆಯ ಪ್ರಮುಖ ಭಾಗವೆಂದು ಗುರುತಿಸುತ್ತದೆ ಮತ್ತು ಅಂಡೋತ್ಪತ್ತಿಯಾಗದಿದ್ದಾಗ ಪ್ರೊಜೆಸ್ಟರಾನ್‌ ಬೆಂಬಲವಿಲ್ಲದ ಈಸ್ಟ್ರೊಜೆನ್‌ ಹೆಚ್ಚಾಗುವುದೇ ಇದರ ಮೂಲ ಸಮಸ್ಯೆ ಎಂದು ಸಂಬಂಧ ಕಲ್ಪಿಸುತ್ತದೆ (ಮೊನಾಶ್‌ ಯೂನಿವರ್ಸಿಟಿ).

ಇದರರ್ಥ ಮುಟ್ಟು ತಪ್ಪುವ, ಪಿಎಂಒಎಸ್‌ ಇರುವ ಪ್ರತಿಯೊಬ್ಬ ಮಹಿಳೆಗೂ ಕ್ಯಾನ್ಸರ್‌ ಬರುತ್ತದೆ ಎಂದಲ್ಲ. ಪಿಎಂಒಎಸ್‌ನಲ್ಲಿ ಮುಟ್ಟು ಅನಿಯಮಿತವಾಗುವುದು ಸಾಮಾನ್ಯ ಎಂಬ ಒಂದೇ ಕಾರಣಕ್ಕೆ ಅದನ್ನು ನಿರ್ಲಕ್ಷಿಸಬಾರದು.

ಪ್ರತೀ ತಿಂಗಳು ಋತುಸ್ರಾವ ಆಗುವುದು ಅಗತ್ಯವೇ?

ಇಲ್ಲಿ ಒಂದು ಪ್ರಮುಖ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು.

ಪಿಎಂಒಎಸ್‌ ಇರುವ ಪ್ರತಿಯೊಬ್ಬ ಮಹಿಳೆಯೂ ಪ್ರತೀ ಕ್ಯಾಲೆಂಡರ್‌ ತಿಂಗಳಿನಲ್ಲಿ ಸ್ವಾಭಾವಿಕವಾಗಿ ಮುಟ್ಟಾಗುವಂತೆ ಮಾಡುವುದು ವೈದ್ಯಕೀಯ ಗುರಿಯಲ್ಲ.

ದೀರ್ಘ‌ಕಾಲದ ಅಂಡೋತ್ಪತ್ತಿ ಕೊರತೆಯನ್ನು ಸೂಕ್ತವಾಗಿ ಮೌಲ್ಯಮಾಪನ ಮಾಡುವುದು ಮತ್ತು ಅಗತ್ಯವಿದ್ದಾಗ ಗರ್ಭಾಶಯದ ಒಳಪದರವನ್ನು (ಎಂಡೊಮೆಟ್ರಿಯಂ) ರಕ್ಷಿಸುವುದು ಇಲ್ಲಿ ಮುಖ್ಯವಾದ ವಿಷಯ.

ಮಹಿಳೆಯ ರೋಗಲಕ್ಷಣಗಳು, ವೈದ್ಯಕೀಯ ಇತಿಹಾಸ, ಗರ್ಭಧಾರಣೆಯ ಯೋಜನೆಗಳು ಮತ್ತು ಇತರ ಅಪಾಯಕಾರಿ ಅಂಶಗಳನ್ನು ಆಧರಿಸಿ, ವೈದ್ಯರು ಮುಟ್ಟನ್ನು ನಿಯಂತ್ರಿಸಲು ಅಥವಾ ಗರ್ಭಾಶಯದ ಪದರವನ್ನು ರಕ್ಷಿಸಲು ಕಂಬೈನ್ಡ್ ಹಾರ್ಮೋನಲ್‌ ಗರ್ಭನಿರೋಧಕಗಳು ಅಥವಾ ಪ್ರೊಜೆಸ್ಟರಾನ್‌/ ಪ್ರೊಜೆಸ್ಟಿನ್‌ ಆಧಾರಿತ ಚಿಕಿತ್ಸೆಗಳಂತಹ ವಿಧಾನಗಳನ್ನು ಬಳಸಬಹುದು. ಆದ್ದರಿಂದ, ಪ್ರತಿಯೊಬ್ಬ ಮಹಿಳೆಯೂ ಪ್ರತೀ ತಿಂಗಳು ಮುಟ್ಟಾಗಲೇಬೇಕು ಎಂಬುದು ಸಂದೇಶವಾಗಬಾರದು. ನಿಮ್ಮ ಮುಟ್ಟು ಪದೇ ಪದೆ ನಿಂತುಹೋಗುತ್ತಿದ್ದರೆ ಅಥವಾ ತುಂಬಾ ಅಪರೂಪವಾಗಿ ಆಗುತ್ತಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ ಎಂಬುದೇ ಸರಿಯಾದ ಸಂದೇಶ.

ಋತುಸ್ರಾವವಾಗದಿದ್ದಾಗ ವೈದ್ಯರೊಂದಿಗೆ ಯಾವಾಗ ಸಮಾಲೋಚಿಸಬೇಕು?

ಪಿಎಂಒಎಸ್‌ ಇರುವ ಮಹಿಳೆಯರು ಮುಟ್ಟು ತಪ್ಪುವುದನ್ನು ಈ ಸ್ಥಿತಿಯ ಅನಿವಾರ್ಯ ಭಾಗ ಎಂದುಕೊಳ್ಳುವ ಬದಲು ತಮ್ಮ ಋತುಚಕ್ರವನ್ನು ಗಮನಿಸುತ್ತಿರಬೇಕು.

ಅಮೆರಿಕನ್‌ ಸೊಸೈಟಿ ಆಫ್ ಒಬ್‌ಸ್ಟ್ರೆಟಿಕ್ಸ್‌ ಆಯಂಡ್‌ ಗೈನೆಕಾಲಜಿಯು ಮೂರರಿಂದ ಆರು ತಿಂಗಳ ಕಾಲ ಮುಟ್ಟಾಗದಿರುವುದನ್ನು ʼಅಸಹಜ ಗರ್ಭಾಶಯದ ರಕ್ತಸ್ರಾವ' ಎಂದು ವರ್ಗೀಕರಿಸುತ್ತದೆ ಮತ್ತು ವಯಸ್ಕರಲ್ಲಿ 35 ದಿನಗಳಿಗಿಂತ ಹೆಚ್ಚಿನ ಋತುಚಕ್ರವನ್ನು ಅಸಹಜವೆಂದು ಪರಿಗಣಿಸುತ್ತದೆ. ಅತ್ಯಂತ ಅತಿಯಾದ ಅಥವಾ ಸುದೀರ್ಘ‌ ಅವಧಿಯ ರಕ್ತಸ್ರಾವವನ್ನೂ ನಿರ್ಲಕ್ಷಿಸಬಾರದು. ಅನಿಯಮಿತ ಅಂಡೋತ್ಪತ್ತಿಯು ಕೆಲವೊಮ್ಮೆ ಅತಿಯಾದ ರಕ್ತಸ್ರಾವವನ್ನು ಉಂಟುಮಾಡಬಹುದು ಮತ್ತು ಹೆಚ್ಚಿನ ರಕ್ತಸ್ರಾವವು ಕಬ್ಬಿಣಾಂಶದ ಕೊರತೆಯ ರಕ್ತಹೀನತೆಗೆ ಕಾರಣವಾಗಬಹುದು.

ಇದಕ್ಕೆ ಸೂಕ್ತವಾದ ಚಿಕಿತ್ಸೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ವಯಸ್ಸು, ಗರ್ಭಧಾರಣೆಯ ಸಾಧ್ಯತೆ, ಗರ್ಭನಿರೋಧಕ ಅಗತ್ಯಗಳು, ತೂಕ, ಮೆಟಬಾಲಿಕ್‌ ಆರೋಗ್ಯ, ಬಳಸುವ ಔಷಧಗಳು, ಸಂತಾನೋತ್ಪತ್ತಿ ಯೋಜನೆಗಳು ಮತ್ತು ರಕ್ತಸ್ರಾವದ ಮಾದರಿ- ಇವೆಲ್ಲವೂ ಮುಖ್ಯವಾಗುತ್ತವೆ. ಸುದೀರ್ಘ‌ ಅಥವಾ ಅಸಾಮಾನ್ಯ ರಕ್ತಸ್ರಾವಕ್ಕೆಪಿಎಂಒಎಸ್‌ ಹೊರತಾಗಿ ಬೇರೆ ಕಾರಣಗಳೂ ಇರಬಹುದು. ಆದ್ದರಿಂದ ಸರಿಯಾದ ವೈದ್ಯಕೀಯ ತಪಾಸಣೆ ಅಗತ್ಯ.

ಋತುಸ್ರಾವವು ಆರೋಗ್ಯದ ಕುರಿತು ಮಾಹಿತಿ ನೀಡುತ್ತದೆ

ಪಿಎಂಒಎಸ್‌ ಕುರಿತಾದ ಚರ್ಚೆಗಳಲ್ಲಿ ಆಗಬೇಕಾದ ಅತೀ ದೊಡ್ಡ ಬದಲಾವಣೆಯೆಂದರೆ, ಋತುಸ್ರಾವವನ್ನು ಕೇವಲ ಒಂದು ಕಿರಿಕಿರಿ ಎಂದು ಭಾವಿಸುವುದನ್ನು ನಿಲ್ಲಿಸುವುದು.

ಋತುಚಕ್ರವು ಸಂತಾನೋತ್ಪತ್ತಿ ಹಾರ್ಮೋನುಗಳು, ಅಂಡೋತ್ಪತ್ತಿ ಮತ್ತು ಗರ್ಭಾಶಯದ ಒಳಪದರದ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

ಪಿಎಂಒಎಸ್‌ ಇರುವ ಮಹಿಳೆಗೆ, ಋತುರಕ್ತಸ್ರಾವವಾಗದಿದ್ದ ತತ್‌ಕ್ಷಣವೇ ಏನೋ ಅಪಾಯ ಸಂಭವಿಸುತ್ತಿದೆ ಎಂದರ್ಥವಲ್ಲ. ಆದರೆ ಪದೇ ಪದೆ ತಿಂಗಳುಗಟ್ಟಲೆ ಮುಟ್ಟಾಗದಿರುವುದನ್ನು ವೈದ್ಯರೊಂದಿಗೆ ಚರ್ಚಿಸದೆ, ಅದನ್ನೇ ತನ್ನ ಸಾಮಾನ್ಯ ಸ್ಥಿತಿ ಎಂದು ಭಾವಿಸಿ ನಿರ್ಲಕ್ಷಿಸಬಾರದು.

-ಡಾ| ಅಂಜಲಿ ಸುನೀಲ್‌ ಮುಂಡ್ಕೂರು

ಅಡಿಷನಲ್‌ ಪ್ರೊಫೆಸರ್‌

ರಿಪ್ರೊಡಕ್ಟಿವ್‌ ಮೆಡಿಸಿನ್‌ ಮತ್ತು ಸರ್ಜರಿ ವಿಭಾಗ,

ಕಸ್ತೂರ್ಬಾ ಮೆಡಿಕಲ್‌ ಕಾಲೇಜು ಮತ್ತು ಕಸ್ತೂರ್ಬಾ ಆಸ್ಪತ್ರೆ,

ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ರಿಪ್ರೊಡಕ್ಟಿವ್‌ ಮೆಡಿಸಿನ್‌ ಮತ್ತು ಸರ್ಜರಿ ವಿಭಾಗ, ಕಸ್ತೂರ್ಬಾ ಆಸ್ಪತ್ರೆ, ಮಂಗಳೂರು)

Dailyhunt
Disclaimer: This content has not been generated, created or edited by Dailyhunt. Publisher: Udayavani