ಗಂಗೊಳ್ಳಿ: ವಾಣಿಜ್ಯ ಉದ್ದೇಶಕ್ಕಾಗಿ ನಿರ್ಮಿಸಿದ ಪ್ರಸ್ತುತ ಬಂದರು ಇಲಾಖೆ ಅಧೀನದಲ್ಲಿರುವ ಗಂಗೊಳ್ಳಿಯ ಮ್ಯಾಂಗನೀಸ್ ವಾರ್ಫ್‌ನಲ್ಲಿರುವ 700 ಮೀಟರ್ ಉದ್ದದ ಜೆಟ್ಟಿಯನ್ನು ಮೀನುಗಾರಿಕಾ ಇಲಾಖೆಗೆ ಹಸ್ತಾಂತರಿಸಬೇಕು ಎನ್ನುವ ಬೇಡಿಕೆ ಹಲವಾರು ವರ್ಷಗಳಿಂದ ಇದೆ. ಈಗ ಇಲ್ಲಿನ ಬಂದರಿನಲ್ಲಿ ಬೋಟುಗಳನ್ನು ನಿಲ್ಲಿಸಲು, ಮೀನು ಇಳಿಸಲು ಜಾಗದ ಕೊರತೆಯಿದ್ದು, ಈ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.
ಹೊಸ ಮೀನುಗಾರಿಕಾ ಋತು ಆರಂಭಗೊಂಡಿದೆ. ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿ ಬಂದರಿನಲ್ಲಿ ಮಾತ್ರ ಮೀನುಗಾರರಿಗೆ ಬೋಟು ನಿಲ್ಲಿಸಲು, ಮೀನುಗಳನ್ನು ಇಳಿಸಲು ಜಾಗವೇ ಇಲ್ಲದ ಪರಿಸ್ಥಿತಿಯಿದೆ. ಅದಕ್ಕಾಗಿ ಈಗ ಯಾವುದೇ ಪ್ರಯೋಜನವಿಲ್ಲದಂತಿರುವ ಮ್ಯಾಂಗನೀಸ್ ವಾರ್ಫ್‌ನಲ್ಲಿರುವ ಜೆಟ್ಟಿಯನ್ನು ಬಳಸಲು ಅನುಕೂಲ ಮಾಡಿಕೊಡಬೇಕು ಅನ್ನುವ ಕೂಗು ಮೀನುಗಾರರದ್ದಾಗಿದೆ.
ಅದಿರು ರಫ್ತಿಗೆ ನಿರ್ಮಾಣ
ಬಂದರು ಇಲಾಖೆ ಅಧೀನದಲ್ಲಿರುವ ಈ ಮ್ಯಾಂಗನೀಸ್ ವಾರ್ಫ್‌ನಲ್ಲಿರುವ ಈ 700 ಮೀ. ಉದ್ದದ ಜೆಟ್ಟಿಯನ್ನು ಹಿಂದೆ ಅದಿರು ರಫ್ತು ಮಾಡುವ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಈಗ ಕೆಲವು ಬೋಟ್ ಬಿಲ್ಡಿಂಗ್ ಯಾರ್ಡ್, ದುರಸ್ತಿಗೆ ಬೋಟುಗಳನ್ನು ಮೇಲೆ ಎಳೆಯುವ ಉದ್ದೇಶಕ್ಕೆ ಬಳಸಲಾಗುತ್ತಿದೆ. ಮಳೆಗಾಲದಲ್ಲಿ, ರಜಾ ದಿನಗಳಲ್ಲಿ ಬೋಟುಗಳನ್ನು ಇಲ್ಲಿಯೇ ನಿಲ್ಲಿಸಲಾಗುತ್ತಿದೆ. ಅದು ಬಿಟ್ಟರೆ ಇಲ್ಲಿ ಯಾವುದೇ ಮೀನುಗಾರಿಕಾ ಚಟುವಟಿಕೆ ನಡೆಯುತ್ತಿಲ್ಲ.
ಗಂಗೊಳ್ಳಿ ಬಂದರಿನಲ್ಲಿ ವಾರ್ಷಿಕ ಸರಾಸರಿ 50-60 ಸಾವಿರ ಮೆಟ್ರಿಕ್ ಟನ್ ಸಂಗ್ರಹವಾಗುತ್ತಿದ್ದು, ಅಂದಾಜು 76,834.13 ಲಕ್ಷ ರೂ. ಆದಾಯ ಬರುತ್ತಿದೆ. ಕುಂದಾಪುರ ತಾಲೂಕಿನಲ್ಲಿ 45 ಪರ್ಸಿನ್ ಬೋಟುಗಳು, 235 ಟ್ರಾಲ್ ಬೋಟುಗಳು, 3,057 ಯಾಂತ್ರಿಕೃತ ದೋಣಿಗಳು ಹಾಗೂ 1,180 ಸಾಂಪ್ರದಾಯಿಕ ನಾಡದೋಣಿಗಳು ಸೇರಿದಂತೆ ಒಟ್ಟಾರೆ 4,517 ಬೋಟು-ದೋಣಿಗಳಿವೆ. ಇದರಲ್ಲಿ ಬಹುತೇಕ ಬೋಟುಗಳು ಗಂಗೊಳ್ಳಿ ಬಂದರನ್ನು ಆಶ್ರಯಿಸಿದ್ದವು. ಆದರೆ ಈ ಭಾಗದಲ್ಲೇ ಮೀನುಗಾರಿಕೆ ಮುಗಿಸಿ ಬಂದರೂ, ಇಲ್ಲಿನ ಬಂದರಿನಲ್ಲಿ ಜಾಗವೇ ಇಲ್ಲದ ಕಾರಣ, ಮೀನು ಇಳಿಸಲು ಗಂಟೆಗಟ್ಟಲೆ ಕಾಯಬೇಕಾಗಿದೆ. ಅದಕ್ಕಾಗಿ ಇಲ್ಲಿಯೇ ಮೀನುಗಾರಿಕೆ ನಡೆಸಿದರೂ, ಮೀನು ಇಳಿಸಲು ಮಾತ್ರ ಈಗ ಭಟ್ಕಳ, ಅಳ್ವೆಗದ್ದೆ, ಮಲ್ಪೆಯಂತಹ ಬಂದರುಗಳಿಗೆ ತೆರಳುತ್ತಿದ್ದಾರೆ.
ಹಸ್ತಾಂತರವಾದರೆ ಏನು ಅನುಕೂಲ?
ಅತ್ಯಂತ ನಿರ್ಲಕ್ಷಿತ ಬಂದರು ಎಂದೇ ಕುಖ್ಯಾತಿಗೆ ಒಳಗಾದ ಗಂಗೊಳ್ಳಿ ಬಂದರಿನಲ್ಲಿ ಮಾತ್ರ ಮೀನುಗಾರರಿಗೆ ಜಾಗದ ಕೊರತೆಯೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಒಂದೆಡೆ ಬಿದ್ದು ಹೋದ ಜೆಟ್ಟಿಯ ದುರಸ್ತಿಯೂ ಆಗಿಲ್ಲ, ಇನ್ನೊಂದೆಡೆ ಹೊಸ ಜೆಟ್ಟಿಯ ಬೇಡಿಕೆಯೂ ಈಡೇರಿಲ್ಲ. ಬಂದರಿನಲ್ಲಿ 2-3 ಜೆಟ್ಟಿಗಳಿದ್ದರೂ, ಅದರಲ್ಲಿ ಸರಿಯಾದ ಬಳಕೆ ಆಗುತ್ತಿರುವುದು ಒಂದೇ ಜೆಟ್ಟಿ. ಬಾಕಿ ಎಲ್ಲವೂ ಹೆಸರಿಗೆ ಮಾತ್ರ ಜೆಟ್ಟಿಯಂತಿದೆ. ಅದಕ್ಕಾಗಿ ಈ ವಾಣಿಜ್ಯ ಉದ್ದೇಶಕ್ಕಾಗಿ ಮ್ಯಾಂಗನೀಸ್ ವಾರ್ಫ್ ಬಳಿ ನಿರ್ಮಿಸಿರುವ ಹಳೆಯ ಜೆಟ್ಟಿಯನ್ನು ಮೀನುಗಾರಿಕೆ ಇಲಾಖೆಗೆ ಹಸ್ತಾಂತರಿಸಿದರೆ, ಅಲ್ಲಿ ಮೀನುಗಾರಿಕೆ ಮುಗಿಸಿ ಬರುವ ಬೋಟು, ದೋಣಿಗಳನ್ನು ನಿಲ್ಲಿಸಲು, ಮೀನು ಇಳಿಸಲು ಅನುಕೂಲ ಆಗಲಿದೆ. ಇದರಿಂದ ಏಕ ಕಾಲದಲ್ಲಿ 50 ರಿಂದ 60 ಬೋಟು, ದೋಣಿಗಳಿಂದ ಮೀನು ಇಳಿಸಲು ಸಹಾಯ ಆಗಲಿದೆ. ಜಾಗದ ಕೊರತೆಯ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿಯಲಿದೆ ಎನ್ನುವುದು ಮೀನುಗಾರರ ಬೇಡಿಕೆ.
ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
ವಾಣಿಜ್ಯ ಉದ್ದೇಶಕ್ಕಾಗಿ ನಿರ್ಮಿಸಿದ ಮ್ಯಾಂಗನೀಸ್ ವಾರ್ಫ್‌ನಲ್ಲಿರುವ ಜೆಟ್ಟಿಯನ್ನು ಬಂದರು ಇಲಾಖೆಯಿಂದ ಮೀನುಗಾರಿಕಾ ಇಲಾಖೆಗೆ ಹಸ್ತಾಂತರಿಸುವಂತೆ ಈಗಾಗಲೇ ನಮ್ಮಿಂದ ಮಲ್ಪೆಯ ಅಪರ ಉಪನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಅವರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅದಾದರೆ ಇಲ್ಲಿನ ಬೋಟುಗಳನ್ನು ನಿಲ್ಲಿಸಲು, ಇನ್ನಿತರ ಮೀನುಗಾರಿಕಾ ಚಟುವಟಿಕೆಗಳಿಗೂ ಅನುಕೂಲ ಆಗಲಿದೆ. ಇಲ್ಲಿನ ಬೋಟುಗಳಲ್ಲದೆ, ಬೇರೆ ಕಡೆಗಳಿಂದಲೂ ಬರುವ ಬೋಟುಗಳಿಗೂ ಪ್ರಯೋಜನ ಆಗಲಿದೆ.
- ಸಂಜೀವ ಅರಕೇರಿ, ಉಪನಿರ್ದೇಶಕರು, ಗಂಗೊಳ್ಳಿ ಬಂದರು
ಹೂಳೆತ್ತಿ, ಅನುಕೂಲ ಮಾಡಲಿ
ಮ್ಯಾಂಗನೀಸ್ ವಾರ್ಫ್ ಜೆಟ್ಟಿಯನ್ನು ಮೀನುಗಾರರಿಗೆ ಅನುಕೂಲ ಮಾಡಿಕೊಡುವಂತೆ ಹಲವು ವರ್ಷಗಳಿಂದ ಬೇಡಿಕೆಯಿದೆ. ಇದರಿಂದ ಇಲ್ಲಿನ ಮೀನು ಇಳಿಸಲು ಆಗುತ್ತಿರುವ ಸಮಸ್ಯೆಯೂ ಇದರಿಂದ ಬಗೆಹರಿಯಬಹುದು. ಈ ಬಗ್ಗೆ ನಾವು ಶಾಸಕರಿಗೂ ಈ ಹಿಂದೆ ಮನವಿ ಮಾಡಿದ್ದೇವು. ಆದರೆ ಅದಕ್ಕೂ ಮೊದಲು ಈ ಮ್ಯಾಂಗನೀಸ್ ವಾರ್ಫ್ ಪ್ರದೇಶದಲ್ಲಿ ಬೋಟುಗಳ ಸಂಚಾರ ಸುಲಭ ಆಗಲು ಹೂಳೆತ್ತಬೇಕಾಗಿದೆ. ಡ್ರೆಜ್ಜಿಂಗ್ ಮಾಡಿದರೆ ಅನುಕೂಲ ಆಗಲಿದೆ.
- ಲಕ್ಷ್ಮೀನಾರಾಯಣ ಮಡಿವಾಳ, ಅಧ್ಯಕ್ಷರು, ಪರ್ಸಿನ್ ಮೀನುಗಾರರ ಸ್ವಸಹಾಯ ಸಂಘ
- ಪ್ರಶಾಂತ್ ಪಾದೆ

