Dailyhunt Logo
  • Light mode
    Follow system
    Dark mode
    • Play Story
    • App Story
Mithi River Scam: ಪೊಲೀಸರಿಂದ ಬಾಲಿವುಡ್ ನಟ ಡಿನೋ ಮೋರಿಯಾ ವಿಚಾರಣೆ

Mithi River Scam: ಪೊಲೀಸರಿಂದ ಬಾಲಿವುಡ್ ನಟ ಡಿನೋ ಮೋರಿಯಾ ವಿಚಾರಣೆ

ಮುಂಬೈ: ಮಿಥಿ ನದಿಯ ಹೂಳೆತ್ತುವ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ 65 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಡಿನೋ ಮೋರಿಯಾ ಶುಕ್ರವಾರ (ಅ.2) ಮುಂಬೈ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಿಥಿ ನದಿ ಸ್ವಚ್ಛತೆ ಹಾಗೂ ಹೂಳೆತ್ತುವಿಕೆಗಾಗಿ ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ನೀಡಿದ್ದ ಗುತ್ತಿಗೆಯಲ್ಲಿ ಹಣಕಾಸು ಅಕ್ರಮ ನಡೆದಿದೆ ಎಂಬ ಆರೋಪದ ಕುರಿತು ತನಿಖೆ ನಡೆಯುತ್ತಿದೆ.

ಮಿಥಿ ನದಿಯಲ್ಲಿನ ಹೂಳು ತೆರವುಗೊಳಿಸಲು ವಿಶೇಷ ಉಪಕರಣಗಳಾದ 'ಸ್ಲಡ್ಜ್ ಪುಷರ್‌'ಗಳು ಮತ್ತು ಡ್ರೆಜಿಂಗ್ ಯಂತ್ರಗಳನ್ನು ಬಳಸುವ ಯೋಜನೆಯನ್ನು ಬಿಎಂಸಿ ಕೈಗೊಂಡಿತ್ತು. ಈ ಉಪಕರಣಗಳನ್ನು ಕೊಚ್ಚಿ ಮೂಲದ ಮ್ಯಾಟ್ರಾಪ್ ಟೆಕ್ನಿಕಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ಖರೀದಿಸಲಾಗಿತ್ತು.

ತನಿಖೆಯ ವೇಳೆ ಪ್ರಮುಖ ಆರೋಪಿಗಳಾದ ಕೇತನ್ ಕದಂ ಮತ್ತು ಜಯ್ ಜೋಶಿ, ಮ್ಯಾಟ್ರಾಪ್ ಸಂಸ್ಥೆ ಹಾಗೂ ಬಿಎಂಸಿಯ ಸ್ಟಾರ್ಮ್ ವಾಟರ್ ಡ್ರೈನ್ಸ್ (SWD) ಇಲಾಖೆಯ ಕೆಲ ಅಧಿಕಾರಿಗಳೊಂದಿಗೆ ಶಾಮೀಲಾಗಿ, ನಕಲಿ ಬಿಲ್‌ಗಳು ಮತ್ತು ಹೆಚ್ಚಿಸಿದ ವೆಚ್ಚಗಳ ಮೂಲಕ ₹65 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾರೆ ಎಂಬ ಆರೋಪಗಳು ಬೆಳಕಿಗೆ ಬಂದಿವೆ.

ಪ್ರಮುಖ ಆರೋಪಿ ಕೇತನ್ ಕದಂ ಅವರ ಕಾಲ್ ಡೀಟೈಲ್ ರೆಕಾರ್ಡ್‌ (CDR) ಪರಿಶೀಲನೆ ವೇಳೆ ಡಿನೋ ಮೊರಿಯಾ ಹಾಗೂ ಅವರ ಸಹೋದರನೊಂದಿಗೆ ಹಲವು ಬಾರಿ ಸಂಪರ್ಕ ನಡೆದಿರುವುದು ತನಿಖಾಧಿಕಾರಿಗಳ ಗಮನಕ್ಕೆ ಬಂದಿದೆ.

ಮೊರಿಯಾ ಮತ್ತು ಕದಂ ನಡುವೆ ವೈಯಕ್ತಿಕ ಪರಿಚಯದ ಜೊತೆಗೆ ಹಣಕಾಸಿನ ವ್ಯವಹಾರಗಳೂ ನಡೆದಿವೆಯೇ ಎಂಬ ಅನುಮಾನ ತನಿಖಾಧಿಕಾರಿಗಳಿಗೆ ಇದ್ದು, ಪ್ರಕರಣದೊಂದಿಗೆ ನಟನಿಗಿರುವ ಸಂಭಾವ್ಯ ಸಂಪರ್ಕದ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮುಂಬೈ ಪೊಲೀಸರ ತನಿಖೆಯ ಜೊತೆಗೆ, ಹಣ ಅಕ್ರಮ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯ (ED) ಕೂಡ ಈ ಪ್ರಕರಣವನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ತನಿಖೆ ನಡೆಸುತ್ತಿದೆ.

ಪ್ರಮುಖ ಆರೋಪಿಗಳೊಂದಿಗೆ ಮೊರಿಯಾ ನಡೆಸಿರುವ ವ್ಯವಹಾರಗಳ ಸ್ವರೂಪವೇನು ಹಾಗೂ ಪ್ರಕರಣದಲ್ಲಿ ಅವರ ಪಾತ್ರ ಏನು ಎಂಬುದನ್ನು ಸ್ಪಷ್ಟಪಡಿಸಲು ವಿಚಾರಣೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani