"ಸರ್ವಾಂತರ್ಯಾಮಿ' ಸಿನಿಮಾ ಜು.17ರಂದು ತೆರೆಕಾಣುತ್ತಿದೆ. ರಂಗಸ್ವಾಮಿ ಕಪನಿಪಾಳ್ಯ ನಿರ್ದೇಶನದ ಈ ಚಿತ್ರವನ್ನು ಹಿತ ಆರ್‌ಗೌಡ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು.
ನಿರ್ದೇಶಕ ಹಾಗೂ ನಟ ರಂಗಸ್ವಾಮಿ ಕಪನಿಪಾಳ್ಯ ಕಪನಿಪಾಳ್ಯ ಮಾತನಾಡಿ, "ಸರ್ವಾಂತರ್ಯಾಮಿ", ಸಾಮಾಜಿಕ ಕಳಕಳಿಯುಳ್ಳ ಚಿತ್ರ.
ಮೊಬೈಲ್ ನಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ಜನರ ಮುಂದೆ ತಂದಿಡುವ ಚಿತ್ರವೂ ಹೌದು.
ಸಿನಿಮಾಗಳಿಗಾದರೆ ಸೆನ್ಸಾರ್ ಇದೆ. ಈ ಚಿತ್ರ ಮಕ್ಕಳು ನೋಡಬಹುದು. ನೋಡಬಾರದು ಅಂತ ಸೆನ್ಸಾರ್ ಮಂಡಳಿಯವರು ತೀರ್ಮಾನ ಮಾಡುತ್ತಾರೆ. ಆದರೆ ಈ ನಿರ್ಬಂಧ ಮೊಬೈಲ್ ಗಿಲ್ಲ. ಅದರಿಂದ ಹೆಚ್ಚಿನ ಮಕ್ಕಳ ಜೀವನ ಹಾಳಾಗುತ್ತಿದೆ. ಮಕ್ಕಳು ಮಾತ್ರವಲ್ಲದೆ, ದೊಡ್ಡವರ ಮೇಲೂ ಇದರ ಪರಿಣಾಮ ಸಾಕಷ್ಟಿದೆ. ಹಾಗಾಗಿ ಕೆಲವು ಕಡೆ ಸ್ಮಾರ್ಟ್ ಫೋನ್ ಬಳಸದೆ, ಕೀ ಪ್ಯಾಡ್ ಮೊಬೈಲ್ ಬಳಸಲು ನಿರ್ಧಾರ ಮಾಡಿದ್ದಾರೆ. ಇನ್ನೂ, ಕೆಲವು ಕಡೆ ಮೊಬೈಲ್ ನೋಡಲು ಸಮಯ ನಿಗದಿ ಮಾಡಿಕೊಂಡಿದ್ದಾರೆ. ಇಂತಹ ನಿರ್ಧಾರಗಳು ಎಲ್ಲಾ ಕಡೆ ಜಾರಿಯಾಗಲಿ. ಇದೇ ನಮ್ಮ ಚಿತ್ರದ ಮುಖ್ಯ ಕಥಾವಸ್ತು ಎಂದರು.
ಇದು ನನ್ನ ಅಭಿನಯದ 65 ನೇ ಚಿತ್ರ. ಪ್ರಮುಖಪಾತ್ರದಲ್ಲಿ ಅಭಿನಯಿಸಿರುವ ನಾಲ್ಕನೇ ಚಿತ್ರ. ಇದೊಂದು ಅಪ್ಪ - ಮಗಳ ಬಾಂಧವ್ಯದ ಚಿತ್ರವೂ ಹೌದು. ನಾನು ಅಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ರಂಗಸ್ವಾಮಿ ಅವರು ಒಂದೊಳ್ಳೆ ಕಥೆ ಮಾಡಿದ್ದಾರೆ ಎಂದು ನಟ ಆಟೋ ನಾಗರಾಜ್ ಹೇಳಿದರು.
ಚಿತ್ರದಲ್ಲಿ ನಟಿಸಿರುವ ತೇಜಸ್ವಿನಿ, ಮೈರಾ, ಅಮೂಲ್ಯ ನಾರಾಯಣ್, ಸೂರ್ಯ ಪ್ರವೀಣ್, ಸಂಜನಾ, ಉಮೇಶ್ ಸಕ್ಕರೆನಾಡು, ಉಮೇಶ್ ಪುಂಗ, ಪೃಥ್ವಿರಾಜ್, ನಾಗೇಶ್ ಮುಂತಾದವರು ಹಾಗೂ ಚಿತ್ರದ ತಂತ್ರಜ್ಞರು ಕುರಿತು ಮಾಹಿತಿ ಹಂಚಿಕೊಂಡರು. ರಮೇಶ್ ಕೃಷ್ಣ ಸಂಗೀತ, ರಾಜು ಹೆಮ್ಮಿಗೆಪುರ ಛಾಯಾಗ್ರಹಣ ಹಾಗೂ ದೀಪು ಎಸ್ ಸಂಕಲನ ಈ ಚಿತ್ರಕ್ಕಿದೆ.

