Dailyhunt Logo
  • Light mode
    Follow system
    Dark mode
    • Play Story
    • App Story
ಮೊದಲು ಮತ್ತು ನಂತರ: ಪ್ಯಾಲೆಸ್ತೀನ್ ಪತ್ರಕರ್ತನ ಫೋಟೋಗಳು ವೈರಲ್: ಇಸ್ರೇಲ್ ಚಿತ್ರ ಹಿಂಸೆ?

ಮೊದಲು ಮತ್ತು ನಂತರ: ಪ್ಯಾಲೆಸ್ತೀನ್ ಪತ್ರಕರ್ತನ ಫೋಟೋಗಳು ವೈರಲ್: ಇಸ್ರೇಲ್ ಚಿತ್ರ ಹಿಂಸೆ?

ಜೆರುಸಲೇಂ: ಇಸ್ರೇಲ್ ಬಂಧನದಿಂದ ಬಿಡುಗಡೆಯಾದ ಪ್ಯಾಲೆಸ್ತೀನ್ ಪತ್ರಕರ್ತ ಮುಜಾಹಿದ್ ಬಾನಿ ಮುಫ್ಲೆಹ್ ಅವರ ಬಂಧನದ ಮೊದಲು ಮತ್ತು ನಂತರದ ಎರಡು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಇಸ್ರೇಲ್ ಕಾರಾಗೃಹಗಳಲ್ಲಿನ ಬಂಧಿತರ ಪರಿಸ್ಥಿತಿಯ ಕುರಿತು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿವೆ.

ಮೊದಲ ಚಿತ್ರದಲ್ಲಿ ಹಸನ್ಮುಖಿಯಾಗಿ ಕಾಣಿಸಿಕೊಂಡಿರುವ ಮುಜಾಹಿದ್ ಬಾನಿ ಮುಫ್ಲೆಹ್, ಎರಡನೇ ಚಿತ್ರದಲ್ಲಿ ತೀವ್ರವಾಗಿ ತೂಕ ಕಳೆದುಕೊಂಡ, ಮುಖ ಬಿಳಿಚಿಕೊಂಡಿರುವ ಹಾಗೂ ಗುರುತಿಸಲಾಗದಷ್ಟು ಬದಲಾಗಿರುವ ಸ್ಥಿತಿಯಲ್ಲಿದ್ದಾರೆ. ಮೆದುಳಿನ ಹಲವು ಶಸ್ತ್ರಚಿಕಿತ್ಸೆಗಳ ಹಿನ್ನೆಲೆಯಲ್ಲಿ ಅವರ ತಲೆಯ ಒಂದು ಭಾಗದ ಮೂಳೆಯನ್ನು ವೈದ್ಯರು ತೆರವುಗೊಳಿಸಿರುವುದು ಚಿತ್ರಗಳಲ್ಲಿ ಗೋಚರಿಸಿದೆ.

ಪ್ಯಾಲೆಸ್ತೀನ್ ಕೈದಿಗಳ ಹಕ್ಕುಗಳ ಪರ ಹೋರಾಟ ನಡೆಸುತ್ತಿರುವ 'ಪ್ಯಾಲೆಸ್ತೀನ್ ಪ್ರಿಸನರ್ ಸೊಸೈಟಿ' (PPS) ಈ ಪ್ರಕರಣವನ್ನು ಪ್ಯಾಲೆಸ್ತೀನ್ ಬಂಧಿತರ ಮೇಲಿನ "ದುರಂತಮಯ ವರ್ತನೆ"ಗೆ ಸಾಕ್ಷಿಯೆಂದು ಬಣ್ಣಿಸಿದೆ.

ಸುದ್ದಿ ಸಂಸ್ಥೆಗಳ ವರದಿ ಪ್ರಕಾರ, ಇಸ್ರೇಲ್‌ನ ಆಡಳಿತಾತ್ಮಕ ಬಂಧನ ನೀತಿಯಡಿ ಯಾವುದೇ ಅಧಿಕೃತ ಆರೋಪವಿಲ್ಲದೆ 2025ರ ಜೂನ್‌ನಲ್ಲಿ ಮುಜಾಹಿದ್ ಬಾನಿ ಮುಫ್ಲೆಹ್ ಅವರನ್ನು ಬಂಧಿಸಲಾಗಿತ್ತು. ಸುಮಾರು ಆರು ತಿಂಗಳ ಕಾಲ ಬಂಧನದಲ್ಲಿದ್ದ ಅವರನ್ನು 2026ರ ಜನವರಿಯಲ್ಲಿ ಬಿಡುಗಡೆ ಮಾಡಲಾಗಿತ್ತು ಎಂದು ಸಂಸ್ಥೆ ತಿಳಿಸಿದೆ.

ಬಿಡುಗಡೆಯಾದ ಕೇವಲ ಎರಡು ದಿನಗಳಲ್ಲೇ ಅವರಿಗೆ ತೀವ್ರ ಮೆದುಳಿನ ರಕ್ತಸ್ರಾವ ಉಂಟಾಗಿ, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಬಳಿಕ ಅವರಿಗೆ ಹಲವು ಬಾರಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಚಿಕಿತ್ಸೆಯ ಭಾಗವಾಗಿ ತಲೆಯ ಮೂಳೆಯ ಒಂದು ಭಾಗವನ್ನು ತೆಗೆದುಹಾಕಬೇಕಾಯಿತು ಎಂದು ಪಿಪಿಎಸ್ ಹೇಳಿದೆ. ಅವರು ಇನ್ನೂ ದೀರ್ಘಕಾಲದ ವೈದ್ಯಕೀಯ ಆರೈಕೆಯ ಅಗತ್ಯವಿರುವ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಲಾಗಿದೆ.

ಇದು ಪ್ರತ್ಯೇಕ ಘಟನೆ ಅಲ್ಲ ಎಂದು ಹೇಳಿರುವ ಪಿಪಿಎಸ್, ಸಾವಿರಾರು ಪ್ಯಾಲೆಸ್ತೀನ್ ಕೈದಿಗಳು ಇಸ್ರೇಲ್ ಕಾರಾಗೃಹಗಳಲ್ಲಿ ಹಿಂಸೆ, ಹಸಿವಿನ ಶಿಕ್ಷೆ, ವೈದ್ಯಕೀಯ ಸೇವೆ ನಿರಾಕರಣೆ ಹಾಗೂ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಪಿಪಿಎಸ್ ಆರೋಪಿಸಿದೆ.

ಹಲವಾರು ಬಂಧಿತರು ದೈಹಿಕ ಮತ್ತು ಮಾನಸಿಕವಾಗಿ ಹದಗೆಟ್ಟ ಸ್ಥಿತಿಯಲ್ಲಿ ಬಿಡುಗಡೆಗೊಂಡಿದ್ದಾರೆ. ಮರುಬಂಧನದ ಭೀತಿಯಿಂದ ಅನೇಕ ಕುಟುಂಬಗಳು ಇಂತಹ ಘಟನೆಗಳನ್ನು ಬಹಿರಂಗಪಡಿಸಲು ಮುಂದಾಗುತ್ತಿಲ್ಲ ಎಂದು ಪಿಪಿಎಸ್ ಸಂಸ್ಥೆ ಹೇಳಿದೆ.

ಇದೇ ವೇಳೆ, 2023ರ ಅಕ್ಟೋಬರ್‌ನಲ್ಲಿ ಗಾಜಾ ಯುದ್ಧ ಆರಂಭವಾದ ಬಳಿಕ ಇದುವರೆಗೆ 245 ಪ್ಯಾಲೆಸ್ತೀನ್ ಪತ್ರಕರ್ತರನ್ನು ಇಸ್ರೇಲ್ ಬಂಧಿಸಿದೆ ಎಂದು ಪಿಪಿಎಸ್ ಆರೋಪಿಸಿದ್ದು, ಇದು ಮಾಧ್ಯಮ ಪ್ರತಿನಿಧಿಗಳ ವಿರುದ್ಧದ ವ್ಯಾಪಕ ಕ್ರಮದ ಭಾಗವಾಗಿದೆ ಎಂದು ಹೇಳಲಾಗಿದೆ.

ಆಕ್ರಮಿತ ಪಶ್ಚಿಮ ದಂಡೆಯ ನಾಬ್ಲಸ್ ಸಮೀಪದ ಬೈತಾ ಪಟ್ಟಣದ ನಿವಾಸಿಯಾಗಿರುವ ಮುಜಾಹಿದ್ ಬಾನಿ ಮುಫ್ಲೆಹ್ ಅವರು ತಮ್ಮ ಬಂಧನದ ಸಂದರ್ಭಗಳ ಕುರಿತು ಸಾರ್ವಜನಿಕವಾಗಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಬಂಧನದ ಮೊದಲು ಮತ್ತು ನಂತರದ ಅವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ಯಾಲೆಸ್ತೀನ್ ಕೈದಿಗಳ ಮೇಲಿನ ವರ್ತನೆ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.

ಇನ್ನೊಂದೆಡೆ, ತಮ್ಮ ಬಂಧನ ಕೇಂದ್ರಗಳಲ್ಲಿ ವ್ಯವಸ್ಥಿತ ಹಿಂಸೆ ನಡೆಯುತ್ತಿದೆ ಎಂಬ ಆರೋಪಗಳನ್ನು ಇಸ್ರೇಲ್ ಈ ಹಿಂದೆ ತಳ್ಳಿಹಾಕಿದ್ದು, ಬಂಧಿತರನ್ನು ಇಸ್ರೇಲ್ ಕಾನೂನು ಪ್ರಕಾರವೇ ನಡೆಸಿಕೊಳ್ಳಲಾಗುತ್ತದೆ ಹಾಗೂ ಯಾವುದೇ ದೂರುಗಳು ಬಂದಲ್ಲಿ ಅವುಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani