ನವದೆಹಲಿ: ಉತ್ತರ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಬಲಗೊಳ್ಳುತ್ತಿರುವ ಸೂಚನೆಗಳು ಕಂಡುಬಂದಿದ್ದು, ಲೋಕಸಭೆ ಚುನಾವಣೆ ಈಗ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಆಗಸ್ಟ್ 2026ರ 'ಮೂಡ್ ಆಫ್ ದಿ ನೇಷನ್' (MOTN) ಸಮೀಕ್ಷೆ ತಿಳಿಸಿದೆ.
ದೇಶದ ರಾಜಕೀಯ ಭವಿಷ್ಯ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ ಇಂಡಿ ಮೈತ್ರಿಕೂಟ 41 ಸ್ಥಾನಗಳನ್ನು ಗೆಲ್ಲಬಹುದು, ಆದರೆ ಎನ್‌ಡಿಎ 38 ಸ್ಥಾನಗಳಿಗೆ ಸೀಮಿತವಾಗಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.
ಮತ ಹಂಚಿಕೆಯಲ್ಲಿಯೂ ಇಂಡಿಯಾ ಮೈತ್ರಿಕೂಟ ಶೇ.40ರಷ್ಟು ಮತ ಪಡೆಯುವ ಸಾಧ್ಯತೆ ಇದ್ದು, ಜನವರಿ ಸಮೀಕ್ಷೆಗೆ ಹೋಲಿಸಿದರೆ ಇದು 2% ಇಳಿಕೆಯಾಗಿದೆ. ಮತ್ತೊಂದೆಡೆ, ಎನ್‌ಡಿಎಗೆ ಶೇ.42ರಷ್ಟು ಮತಗಳು ಲಭಿಸುವ ನಿರೀಕ್ಷೆ ಇದ್ದು, ಜನವರಿ ಸಮೀಕ್ಷೆಗೆ ಹೋಲಿಸಿದರೆ ಅದರ ಮತ ಪ್ರಮಾಣದಲ್ಲಿ 5% ಕುಸಿತ ಕಂಡುಬಂದಿದೆ.
ಜನವರಿ ಸಮೀಕ್ಷೆಯ ಫಲಿತಾಂಶವೇ ತಿರುವು
ಜನವರಿ 2026ರ MOTN ಸಮೀಕ್ಷೆಯಲ್ಲಿ ಉತ್ತರ ಪ್ರದೇಶದಲ್ಲಿ ಎನ್‌ಡಿಎಗೆ 48 ಸ್ಥಾನಗಳು, ಇಂಡಿಯಾ ಮೈತ್ರಿಕೂಟಕ್ಕೆ 31 ಸ್ಥಾನಗಳು ದೊರೆಯುವ ಸಾಧ್ಯತೆ ಅಂದಾಜಿಸಲಾಗಿತ್ತು. ಇದೀಗ ಆಗಸ್ಟ್ ಸಮೀಕ್ಷೆಯಲ್ಲಿ ಇಂಡಿ ಮೈತ್ರಿಕೂಟದ ನಿರೀಕ್ಷಿತ ಸ್ಥಾನಗಳು 10ರಷ್ಟು ಹೆಚ್ಚಿದ್ದರೆ, ಎನ್‌ಡಿಎ ಸ್ಥಾನಗಳು ಅದೇ ಪ್ರಮಾಣದಲ್ಲಿ ಕುಸಿದಿವೆ.
ದೇಶಾದ್ಯಂತ ಎನ್‌ಡಿಎಗೆ 326 ಸ್ಥಾನಗಳ ನಿರೀಕ್ಷೆ
ರಾಷ್ಟ್ರಮಟ್ಟದಲ್ಲಿ ಬಿಜೆಪಿ ಇನ್ನೂ ಬಲಿಷ್ಠ ಸ್ಥಾನದಲ್ಲಿದ್ದರೂ, ಯುವಜನರ ಚಳವಳಿಗಳು ಮತ್ತು ವಿವಿಧ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪಕ್ಷದ ಜನಪ್ರಿಯತೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಲೋಕಸಭೆ ಚುನಾವಣೆ ಈಗ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ 326 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಅಂದಾಜಿಸಿದೆ. ಜನವರಿ ಸಮೀಕ್ಷೆಯ ಅಂದಾಜಿಗಿಂತ ಇದು 26 ಸ್ಥಾನಗಳಷ್ಟು ಕಡಿಮೆ.
ರಾಮಮಂದಿರ ದೇಣಿಗೆ ವಿವಾದದ ಪರಿಣಾಮ?
ಅಯೋಧ್ಯೆಯ ರಾಮಮಂದಿರ ದೇಣಿಗೆ ಹಣದ ಕಳವು ವಿವಾದವು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಶೇ.47ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಈ ವಿವಾದವು ಕೇಂದ್ರ ಸರ್ಕಾರದ ಮೇಲೆ ಮಾತ್ರ ಪರಿಣಾಮ ಬೀರಿದೆ ಎಂದು ಶೇ.8ರಷ್ಟು ಮಂದಿ, ಉತ್ತರ ಪ್ರದೇಶ ಸರ್ಕಾರದ ಮೇಲೆ ಮಾತ್ರ ಪರಿಣಾಮ ಬೀರಿದೆ ಎಂದು ಶೇ.7ರಷ್ಟು ಮಂದಿ ಹೇಳಿದ್ದಾರೆ.
ಆದರೆ, ಸಿ-ವೋಟರ್ ಸಂಸ್ಥೆಯ ಸಂಸ್ಥಾಪಕ ಹಾಗೂ ಚುನಾವಣಾ ವಿಶ್ಲೇಷಕ ಯಶವಂತ್ ದೇಶಮುಖ್ ಅವರ ಪ್ರಕಾರ, ರಾಮಮಂದಿರ ವಿವಾದವೇ ಪ್ರಮುಖ ಕಾರಣವಲ್ಲ. ಬದಲಾಗಿ ವಿಶ್ವವಿದ್ಯಾಲಯ ಅನುದಾನ ಆಯೋಗ (UGC)ದ ಸಮಾನತೆ ನಿಯಮಾವಳಿಗಳು ಪ್ರಮುಖ ಅಂಶವಾಗಿವೆ.
ಜನರೇಷನ್ ಎಕ್ಸ್ ಪೀಳಿಗೆಗೆ ಸೇರಿದ ಪೋಷಕರು, ಜೆನ್ ಜಿ ಪೀಳಿಗೆಯ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾರೆ. UGC ನಿಯಮಾವಳಿಗಳು 1980ರ ಕೊನೆ ಹಾಗೂ 1990ರ ದಶಕದ ಮಂಡಲ್ ಆಯೋಗದ ಕಾಲಘಟ್ಟವನ್ನು ನೆನಪಿಸಿದ್ದು, ತಮ್ಮ ಮಕ್ಕಳ ಮೇಲೂ ಇದರ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಪೋಷಕರಲ್ಲಿ ಮೂಡಿಸಿದೆ ಎಂದು ದೇಶಮುಖ್ ಹೇಳಿದ್ದಾರೆ.
25 ಸಾವಿರಕ್ಕೂ ಹೆಚ್ಚು ಮಂದಿಯಿಂದ ನೇರ ಸಮೀಕ್ಷೆ
'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯನ್ನು ಇಂಡಿಯಾ ಟುಡೇ ಗ್ರೂಪ್ ಕಳೆದ ಸುಮಾರು ಎರಡು ದಶಕಗಳಿಂದ ವರ್ಷಕ್ಕೆ ಎರಡು ಬಾರಿ ನಡೆಸುತ್ತಿದೆ. ಆಗಸ್ಟ್ 2026ರ ಸಮೀಕ್ಷೆಯನ್ನು ಸಿ-ವೋಟರ್ ಸಂಸ್ಥೆ ನಡೆಸಿದ್ದು, ಜುಲೈ 1ರಿಂದ ಆಗಸ್ಟ್ 25ರವರೆಗೆ 25,184 ಮಂದಿಯನ್ನು ನೇರವಾಗಿ ಸಂದರ್ಶಿಸಲಾಗಿದೆ. ಜತೆಗೆ, ಕಳೆದ ಆರು ತಿಂಗಳಲ್ಲಿ ಸಿ-ವೋಟರ್‌ನ ನಿಯಮಿತ ಟ್ರ್ಯಾಕಿಂಗ್ ಭಾಗವಾಗಿ ನಡೆಸಲಾದ 91,795 ಸಂದರ್ಶನಗಳ ಮಾಹಿತಿಯನ್ನೂ ಸಮೀಕ್ಷೆಯ ಫಲಿತಾಂಶ ರೂಪಿಸಲು ಬಳಸಲಾಗಿದೆ.
ಗಮನಾರ್ಹವಾಗಿ 2027 ರಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಸಿಎಂ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ಎನ್ ಡಿಎ ಮೈತ್ರಿಕೂಟ ಮೂರನೇ ಬಾರಿ ಅಧಿಕಾರ ಹಿಡಿಯಲು ಸಿದ್ಧತೆ ಆರಂಭಿಸಿದೆ. ವಿಪಕ್ಷಗಳು ಬಿಜೆಪಿಯನ್ನು ಶತಾಯಗತಾಯ ಅಧಿಕಾರದಿಂದ ಕೆಳಗಿಳಿಸಲು ರಣತಂತ್ರಗಳನ್ನು ಮಾಡುತ್ತಿವೆ.
2024ರಲ್ಲಿ ಉತ್ತರ ಪ್ರದೇಶದಲ್ಲಿ INDIA ಮೈತ್ರಿಕೂಟ 43, NDA 36 ಸ್ಥಾನಗಳನ್ನು ಗೆದ್ದಿತ್ತು. ಸಂಖ್ಯಾ ಬಲದಲ್ಲಿ ಇಳಿಕೆ ಬಿಜೆಪಿ ಪಾಲಿಗೆ ದೊಡ್ಡ ಹೊಡೆತವಾಗಿ ಪರಿಣಮಿಸಿತ್ತು.

