ಮಾಸ್ಕೋ: ರಷ್ಯಾದಾದ್ಯಂತ ತೀವ್ರ ಇಂಧನ ಕೊರತೆ ಎದುರಾಗಿದ್ದರೂ ಮತ್ತು ಅಲ್ಲಿನ ಪ್ರಮುಖ ತೈಲ ಸಂಸ್ಕರಣಾಗಾರಗಳ (Oil Refineries) ಮೇಲೆ ಉಕ್ರೇನ್ ನಿರಂತರವಾಗಿ ದಾಳಿ ನಡೆಸುತ್ತಿದ್ದರೂ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಾತ್ರ ಇದಕ್ಕೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ.
ಜಗತ್ತಿನ ಪ್ರಮುಖ ತೈಲ ಉತ್ಪಾದನಾ ರಾಷ್ಟ್ರಗಳಲ್ಲಿ ಒಂದಾದ ರಷ್ಯಾಕ್ಕೆ ಎದುರಾಗಿರುವ ಈ ಭಾರಿ ಹಿನ್ನಡೆಯನ್ನು "ಇದು ಅಷ್ಟು ಗಂಭೀರವಾದ ಸಮಸ್ಯೆಯಲ್ಲ" ಎಂದು ಅವರು ತಳ್ಳಿಹಾಕಿದ್ದಾರೆ. ಅಷ್ಟೇ ಅಲ್ಲದೆ, ಕದನ ವಿರಾಮದ ಪ್ರಸ್ತಾಪಗಳನ್ನು ತಿರಸ್ಕರಿಸಿರುವ ಅವರು, ತಮ್ಮ ಗುರಿ ಮುಟ್ಟುವವರೆಗೂ ಯುದ್ಧ ಮುಂದುವರಿಯಲಿದೆ ಎಂದು ಹಠ ಹಿಡಿದಿದ್ದಾರೆ.
ರಣರಂಗದಲ್ಲಿ ಉಕ್ರೇನ್ ಅನುಭವಿಸುತ್ತಿರುವ ಭಾರಿ ಸೋಲಿನಿಂದ ಜಗತ್ತಿನ ಗಮನವನ್ನು ಬೇರೆಡೆ ಸೆಳೆಯಲು ನಮ್ಮ ಇಂಧನ ಕೇಂದ್ರಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಪುಟಿನ್ ವಿಶ್ಲೇಷಿಸಿದ್ದಾರೆ. ಆದರೆ, ರಕ್ಷಣಾ ವಿಶ್ಲೇಷಕರ ಪ್ರಕಾರ, ಕಳೆದ ಕೆಲವು ತಿಂಗಳುಗಳಿಂದ ರಷ್ಯಾ ಪಡೆಗಳ ಮುನ್ನಡೆಗೆ ತೀವ್ರ ಅಡಚಣೆ ಉಂಟಾಗಿದೆ. ನಾಲ್ಕು ವರ್ಷಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಈ ಸುದೀರ್ಘ ಯುದ್ಧದ ನಡುವೆ, ದೇಶದಲ್ಲಿ ತಲೆದೋರಿರುವ ತೈಲ ಬಿಕ್ಕಟ್ಟು ತನ್ನ ಅಧಿಕಾರಕ್ಕಾಗಲಿ ಅಥವಾ ಯುದ್ಧಕ್ಕೆ ಜನಸಾಮಾನ್ಯರಿಂದ ಸಿಗುತ್ತಿರುವ ಬೆಂಬಲಕ್ಕಾಗಲಿ ಯಾವುದೇ ಧಕ್ಕೆ ತರುವುದಿಲ್ಲ ಎಂಬ ಬಲವಾದ ನಂಬಿಕೆಯಲ್ಲಿ ರಷ್ಯಾ ಅಧ್ಯಕ್ಷರಿದ್ದಾರೆ.
ಉಕ್ರೇನ್ ರಾಜಧಾನಿ ಕೀವ್ ಮೇಲೆ ಭೀಕರ ದಾಳಿ; 30 ಸಾವು!
ರಷ್ಯಾ ಸೇನೆಯು ಗುರುವಾರ ಮುಂಜಾನೆ ಉಕ್ರೇನ್ ರಾಜಧಾನಿ ಕೀವ್ ಮೇಲೆ ಬರೋಬ್ಬರಿ 11 ಗಂಟೆಗಳ ಕಾಲ ನಿರಂತರ ಹಾಗೂ ಅತ್ಯಂತ ಭೀಕರವಾದ ಕ್ಷಿಪಣಿ ದಾಳಿ ನಡೆಸಿದೆ. ಈ ಭೀಕರ ದಾಳಿಗೆ ಕನಿಷ್ಠ 30 ಜನರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದ ನಂತರ ಕೀವ್ ನಗರದ ಮೇಲೆ ನಡೆದ ಅತ್ಯಂತ ಮಾರಣಾಂತಿಕ ದಾಳಿಗಳಲ್ಲಿ ಇದು ಒಂದಾಗಿದೆ ಎಂದು ಹೇಳಲಾಗಿದೆ.

