ಕಾಠ್ಮಂಡು: ನೇಪಾಳ ಟಿಬೆಟ್ ಗಡಿಯಲ್ಲಿ ಬುಧವಾರ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಾವಿನ ಸಂಖ್ಯೆ 469ಕ್ಕೆ ಏರಿಕೆಯಾಗಿದೆ. ಮಧ್ಯ ನೇಪಾಳದ ಹಲವು ಜಿಲ್ಲೆಗಳಲ್ಲಿ ಭಾರೀ ಹಾನಿ ಉಂಟಾಗಿದ್ದು, ನೂರಾರು ಜನರು ಇನ್ನೂ ಕಾಣೆಯಾಗಿದ್ದಾರೆ. ನೇಪಾಳ ಪ್ರವಾಸೋದ್ಯಮ ಮಂಡಳಿ ಪ್ರಕಾರ ಸುಮಾರು 800+ ಜನರು ನಾಪತ್ತೆಯಾಗಿದ್ದಾರೆ.ಆದರೆ, ಸ್ಥಳೀಯ ಮಾಧ್ಯಮಗಳ ಪೈಕಿ ಕಾಣೆಯಾದವರ ಸಂಖ್ಯೆ 1600 ದಾಟಿದೆ.
ಕಾಣೆಯಾದವರ ಹುಡುಕಾಟದಲ್ಲಿ ತೊಡಗಿರುವ ಕುಟುಂಬಗಳು, ತಮ್ಮವರ ಗುರುತು ಪತ್ತೆಗಾಗಿ ಆಸ್ಪತ್ರೆಗಳ ಮುಂದೆ ಜಮಾಯಿಸಿದ್ದಾರೆ. ಆಸ್ಪತ್ರೆಗಳಲ್ಲಿ ರಕ್ಷಿಸಲ್ಪಟ್ಟವರ ಹೆಸರುಗಳ ಪಟ್ಟಿಗಳನ್ನು ಹಾಕಲಾಗಿದ್ದು, ಚಿಕಿತ್ಸೆ ಪಡೆಯುತ್ತಿರುವವರ ಮಾಹಿತಿಯನ್ನು ಕುಟುಂಬಸ್ಥರು ಪರಿಶೀಲಿಸುತ್ತಿದ್ದಾರೆ. ತುರ್ತು ವಿಭಾಗಗಳು ಗಾಯಾಳುಗಳಿಂದ ತುಂಬಿಹೋಗಿದೆ. ತಿಮುರೆ, ಸ್ಯಾಬ್ರುಬೇಸಿ, ರಸುವಾಗಡಿಯ ಕೆಲವು ಆರೋಗ್ಯ ಕೇಂದ್ರಗಳೇ ಸಂಪೂರ್ಣವಾಗಿ ನಾಶವಾಗಿವೆ.
ತ್ರಿಶೂಲಿ ಮತ್ತು ನಾರಾಯಣಿ ನದಿಗಳಲ್ಲಿ ನಿರಂತರವಾಗಿ ಮೃತದೇಹಗಳು ಪತ್ತೆಯಾಗುತ್ತಿದ್ದು, ಇದರಿಂದ ಆಸ್ಪತ್ರೆಯ ಶವಾಗಾರಗಳಲ್ಲೂ ಸಮಸ್ಯೆಯಾಗಿದೆ. ಇನ್ನು ಭೋಟೆಕೋಶಿ ನದಿಯಿಂದ ಹರಿದುಬಂದ ಪ್ರವಾಹದ ನೀರು ಭಾರತದ ಗಂಡಕಿ ನದಿಗೆ ತಲುಪಿದ್ದು, ಉತ್ತರಪ್ರದೇಶದ ಮಹಾರಾಜ್‌ಗಂಜ್ ಬಳಿ 2 ಮಹಿಳೆ ಸೇರಿ 3 ಮೃತದೇಹಗಳು ಪತ್ತೆಯಾಗಿವೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.

