ಉಡುಪಿ: ಉಡುಪಿ ಮತ್ತು ಶೈಕ್ಷಣಿಕ ನಗರಿ ಮಣಿಪಾಲದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕುಪ್ರಾಣಿಗಳನ್ನು (ನಾಯಿ, ಬೆಕ್ಕು ಇತ್ಯಾದಿ) ಸಾಕುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಆದರೆ ಈ ಮೂಕಜೀವಿಗಳು ಮೃತಪಟ್ಟಾಗ ಅವುಗಳ ಕಳೇಬರವನ್ನು ಗೌರವಯುತವಾಗಿ ವಿಲೇವಾರಿ ಮಾಡಲು ಸೂಕ್ತ ಜಾಗವಿಲ್ಲದೆ ಸಾರ್ವಜನಿಕರು ಹಾಗೂ ಪ್ರಾಣಿ ಪ್ರೇಮಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಖಾಲಿ ಜಾಗವೇ ಆಸರೆ
ಸದ್ಯ ನಗರಸಭೆಯ ವತಿಯಿಂದ ಸಾಕುಪ್ರಾಣಿಗಳ ದಫನಕ್ಕಾಗಿ ಯಾವುದೇ ಪ್ರತ್ಯೇಕ ಅಥವಾ ಕಾದಿರಿಸಿದ ಜಾಗದ ವ್ಯವಸ್ಥೆ ಮಾಡಲಾಗಿಲ್ಲ. ಸಾರ್ವಜನಿಕರು ನಗರಸಭೆಯ ಆರೋಗ್ಯ ವಿಭಾಗಕ್ಕೆ ಕರೆ ಮಾಡಿ ತಿಳಿಸಿದರೆ, ಅಧಿಕಾರಿಗಳು ಪೌರಕಾರ್ಮಿಕರನ್ನು ಕಳುಹಿಸಿ ಎಲ್ಲಾದರೂ ಖಾಲಿ ಇರುವ ಜಾಗದಲ್ಲಿ ಪ್ರಾಣಿಯ ಕಳೆಬರಹವನ್ನು ದಫನ ಮಾಡುವ ತಾತ್ಕಾಲಿಕ ವ್ಯವಸ್ಥೆ ಮಾಡುತ್ತಿದ್ದಾರೆ. ಆದರೆ ಖಾಲಿ ಜಾಗ ದಿನೇ ದಿನೆ ಕಡಿಮೆಯಾಗುತ್ತಿರುವುದರಿಂದ ಮತ್ತು ಜನವಸತಿ ಪ್ರದೇಶಗಳಲ್ಲಿ ದಫನ ಮಾಡುವುದರಿಂದ ಸಾರ್ವಜನಿಕ ಆರೋಗ್ಯದ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಸುಸಜ್ಜಿತ ವ್ಯವಸ್ಥೆ ಬೇಕಿದೆ
ಮನೆಯ ಸದಸ್ಯನಂತೆ ಸಾಕಿದ ಪ್ರಾಣಿ ಮೃತಪಟ್ಟಾಗ ಎಲ್ಲೆಂದರಲ್ಲಿ ಹೂತು ಹಾಕುವುದು ಮನಸ್ಸಿಗೆ ಬೇಸರ ತರುತ್ತದೆ. ಉಡುಪಿಯಂತಹ ಬೆಳೆಯುತ್ತಿರುವ ನಗರಕ್ಕೆ ಸಾಕುಪ್ರಾಣಿಗಳಿಗಾಗಿಯೇ ಒಂದು ಸುಸಜ್ಜಿತ ಮತ್ತು ಪ್ರತ್ಯೇಕ ದಫನ ಭೂಮಿ ಅಥವಾ ವಿದ್ಯುತ್ ಚಿತಾಗಾರ ಅತ್ಯಗತ್ಯವಾಗಿದೆ ಎಂಬುದು ನಾಗರಿಕರ ಮತ್ತು ಪ್ರಾಣಿ ಪ್ರೇಮಿಗಳ ಪ್ರಮುಖ ಬೇಡಿಕೆಯಾಗಿದೆ. ಆದ್ದರಿಂದ ನಗರದ ಸ್ವಚ್ಛತೆ ಹಾಗೂ ನಾಗರಿಕರ ಭಾವನೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಉಡುಪಿ ನಗರಸಭೆಯು ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಏನು ಮಾಡಬಹುದು?
*ನಗರದ ಹೊರವಲಯದಲ್ಲಿ ಪರಿಸರಕ್ಕೆ ಧಕ್ಕೆಯಾಗದಂತೆ ಸಾಕುಪ್ರಾಣಿಗಳ ದಫನಕ್ಕೆ 1-2 ಎಕರೆ ಜಾಗ ಕಾದಿರಿಸುವುದು.
*ಕಡಿಮೆ ಜಾಗದಲ್ಲಿ, ಪರಿಸರ ಮಾಲಿನ್ಯವಾಗದಂತೆ ಸಣ್ಣ ಪ್ರಮಾಣದ ಪರಿಸರ ಸ್ನೇಹಿ ವಿದ್ಯುತ್ ಚಿತಾಗಾರ ಸ್ಥಾಪಿಸುವುದು.
ಪ್ರಮುಖ ನಗರಗಳಲ್ಲಿ ಹೇಗಿದೆ?
ಬೆಂಗಳೂರು: ಬಿಬಿಎಂಪಿ ವತಿಯಿಂದ ಸುಮನಹಳ್ಳಿಯಲ್ಲಿ ಸಾಕುಪ್ರಾಣಿಗಳಿಗಾಗಿಯೇ ವಿದ್ಯುತ್ ಚಿತಾಗಾರ ಸ್ಥಾಪಿಸಲಾಗಿದೆ. ಇಲ್ಲಿ ಅಂತ್ಯಸಂಸ್ಕಾರ ನಡೆಸಿ, ಮಾಲಕರಿಗೆ ಚಿತಾಭಸ್ಮ ನೀಡುವ ವ್ಯವಸ್ಥೆಯೂ ಇದೆ.
ಮಂಗಳೂರು: ಬೊಂಡಂತಿಲದಲ್ಲಿ ಮಹಾನಗರ ಪಾಲಿಕೆ ಹಾಗೂ ಕೆಲವು ಪ್ರಾಣಿ ಕಲ್ಯಾಣ ಸಂಸ್ಥೆಗಳ ಸಹಯೋಗದೊಂದಿಗೆ ಜಾಗ ಗುರುತಿಸುವ ಮತ್ತು ಶವಸಂಸ್ಕಾರ ಘಟಕ ಸ್ಥಾಪಿಸುವ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗಿದೆ.
ಮುಂಬಯಿ, ಹೊಸದಿಲ್ಲಿ: ಸರಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಅತ್ಯಾಧುನಿಕ "ಪೆಟ್ ಸಿಮೆಟ್ರಿ' ಹಾಗೂ ಪರಿಸರಸ್ನೇಹಿ ಸಿಎನ್‌ಜಿ ಚಿತಾಗಾರಗಳನ್ನು ನಿರ್ಮಿಸಲಾಗಿದೆ. ಧಾರ್ಮಿಕ ವಿಧಿವಿಧಾನಗಳಿಗೂ ಅವಕಾಶವಿದೆ.
ಸರಕಾರಿ ಜಾಗ ಮೀಸಲಿಡುವ ಚಿಂತನೆ
ವ್ಯವಸ್ಥಿತವಾಗಿ, ಸಾಕುಪ್ರಾಣಿಗಳ ಗೌರವ ಪೂರ್ವಕ ಅಂತ್ಯಕ್ರಿಯೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಸೂಚಿಸಲಾಗುವುದು. ನಗರಸಭೆ ವ್ಯಾಪ್ತಿಯಲ್ಲಿ ಸರಕಾರಿ ಜಾಗ ಮೀಸಲಿಟ್ಟು ಸತ್ತ ಪ್ರಾಣಿಗಳ ಕಳೇಬರವನ್ನು ದಫನ ಮಾಡುವ ಪ್ರಕ್ರಿಯೆಗೆ ವಾಹನ ಸಹಿತ ಪೌರಕಾರ್ಮಿಕರ ತಂಡ ರಚಿಸುವ ಬಗ್ಗೆ ಚಿಂತನೆ ಇದೆ.
*ಯಶ್‌ಪಾಲ್ ಎ. ಸುವರ್ಣ, ಶಾಸಕ
ಶ್ಮಶಾನದಲ್ಲೇ ಜಾಗಕ್ಕೆ ಕ್ರಮ
ಸಾಕುಪ್ರಾಣಿಗಳ ಅಂತ್ಯಕ್ರಿಯೆಗೆ ವಿದ್ಯುತ್ ಚಿತಾಗಾರ ವ್ಯವಸ್ಥೆ ಮಾಡಲು ಅಧಿಕ ಖರ್ಚು ತಗಲುತ್ತದೆ; ಅದರ ನಿರ್ವಹಣೆಯು ದುಬಾರಿಯಾಗಬಹುದು. ಆದ್ದರಿಂದ ನಮ್ಮ ಅಧಿಕಾರಿಗಳ ಮೂಲಕ ಈಗ ಇರುವ ಶ್ಮಶಾನಗಳಲ್ಲೇ ನಿಗದಿತ ಜಾಗ ಗುರುತಿಸುವಂತೆ ಸೂಚಿಸುತ್ತೇನೆ.
*ಮಹಾಂತೇಶ ಹಂಗರಗಿ ಪೌರಾಯುಕ್ತರು, ಉಡುಪಿ
*ಗಣೇಶ ಕುಳಮರ್ವ

