Dailyhunt Logo
  • Light mode
    Follow system
    Dark mode
    • Play Story
    • App Story
ಮೂಕ ಸಾಂಗತ್ಯ ಸಾಕುಪ್ರಾಣಿಗಳ ಸುಂದರ ಲೋಕದಲ್ಲಿ...

ಮೂಕ ಸಾಂಗತ್ಯ ಸಾಕುಪ್ರಾಣಿಗಳ ಸುಂದರ ಲೋಕದಲ್ಲಿ...

ಪ್ರತಿಫಲ ಬಯಸದೆ ಪ್ರೀತಿ ಹಂಚುವ ಜೀವಿಗಳೆಂದರೆ ಪ್ರಾಣಿಗಳು. ಅದರಲ್ಲೂ ನಾಯಿ-ಬೆಕ್ಕುಗಳು ತೋರುವ ಮಮತೆಗೆ ಸಾಟಿಯೇ ಇಲ್ಲ. ಅವುಗಳ ಮೌನಭಾಷೆ, ಸಾಕಿದವರಿಗೆ ತಕ್ಷಣ ಅರ್ಥವಾಗುತ್ತದೆ. ಜುಲೈ 5, ಸಾಕು ಪ್ರಾಣಿಗಳ ಸ್ಮರಣೆಯ ದಿನ. ಆ ನೆಪದಲ್ಲಿ, ತಾವು ಸಾಕಿದ ಪ್ರಾಣಿಗಳು ಕೊಟ್ಟ ಖುಷಿಯ, ಸ್ಮರಣೀಯ ಕ್ಷಣಗಳನ್ನು ಹಲವರು ಹಂಚಿಕೊಂಡಿದ್ದಾರೆ...

ಭಗವಂತ ಕಳಿಸಿದ್ದ ಕಿನ್ನರ...

ಏಳು ವರ್ಷಗಳ ಹಿಂದೆ ನೋಬಿ ಎಂಬ ಪುಟ್ಟ ಕಿನ್ನರ ನಮ್ಮ ಮನೆಗೆ ಬಂದಾಗ ಅವನಿಗೆ 34 ದಿನಗಳಷ್ಟೇ! ನೆಟ್ಟಗೆ ನಡೆಯಲೂ ಬಾರದ ಅವನನ್ನು ನಾವು ನೆಲಕ್ಕೆ ಇಳಿಸಿದ್ದೇ ಕಮ್ಮಿ. ಇನ್ನು ಹೊತ್ತು ತಿರುಗಲು ಸಾಧ್ಯವಿಲ್ಲ ಎಂಬಷ್ಟು ಭಾರ ಆಗುವವರೆಗೂ ಎದೆಗವಚಿಕೊಂಡೇ ಬೆಳೆಸಿದೆವು. ಅದಕ್ಕೆಲ್ಲ ಕೃತಜ್ಞತೆ ಎಂಬಂತೆ ಅವನು ನಮ್ಮ ಬದುಕನ್ನು ಒಪ್ಪವಾಗಿಸಿದ ರೀತಿಯಿದೆಯಲ್ಲ, ಅದು ಪದಗಳಲ್ಲಿ ಹೇಳಿ ಮುಗಿಸಲಿಕ್ಕಾಗದು. ಅವನಿದ್ದಷ್ಟು ವರ್ಷವೂ ನಾವು ಮಗುವಾಗಿದ್ದೆವು. ಅಕ್ಷರಶಃ ಮಕ್ಕಳಂತೆ ಖುಷಿಪಟ್ಟೆವು. ಅವನು ನಮ್ಮ ಮನೆ, ಮನಗಳನ್ನು ಆಳಿದ.

ನಮ್ಮ ಬದುಕಿನ ಮುಖ್ಯವಾದ ತೀರ್ಮಾನಗಳನ್ನೆಲ್ಲ ಅವನಿಗೆ ಅನುಕೂಲವಾಗುವಂತೆ ತೆಗೆದುಕೊಂಡೆವು. ಮನೆ ಕೊಳ್ಳುವಾಗ ನೋಬಿಗೆ ಸಾಕಷ್ಟು ಜಾಗ ಇಬೇìಕು ಎನ್ನುತ್ತಾ ಐದು ಬಾಲ್ಕನಿಗಳ ಮನೆ ಕೊಂಡೆವು. ಜಾಸ್ತಿ ಎತ್ತರಕ್ಕೆ ಮನೆ ಕೊಂಡರೆ ಅವನಿಗೆ ವಾಕ್‌ ಮಾಡಿಸಲು ಕಷ್ಟವಾಗತ್ತೆ ಎಂದು ಸೆಕೆಂಡ್‌ ಪ್ಲೋರ್‌ನಲ್ಲೇ ಉಳಿದೆವು. ಅವನಿಗಾಗಿ ಅದೆಷ್ಟೋ ಟ್ರಿಪ್‌ಗ್ಳನ್ನು ಕ್ಯಾನ್ಸಲ್‌ ಮಾಡಿದೆವು. ಎಲ್ಲಿಯೇ ಹೋದರೂ, ನಮಗಾಗಿ ಮನೆಯಲ್ಲೊಂದು ಜೀವ ಕಾಯುತ್ತಿದೆ ಎಂದು ಸಂಜೆ ಐದರೊಳಗೆ ಮನೆ ಸೇರುತ್ತಿದ್ದೆವು. ಎಲ್ಲಿಯೇ ಪ್ರವಾಸ ಹೋದರೂ ಅವನನ್ನು ಕರೆದುಕೊಂಡು ಹೋಗುತ್ತಿದ್ದೆವು. ಹೀಗಾಗಿ ರೆಸಾರ್ಟ್‌, ಬೀಚ್‌, ಬೆಟ್ಟ, ಕೆರೆ, ಹೊಳೆ, ಊರು ಎಂದು ಎಲ್ಲೆಡೆ ಓಡಾಡಿದ್ದರು ನಮ್ಮನೋಬಿ ಸಾಹೇಬರು. ಯಾವತ್ತೂ ನಾನ್‌ ವೆಜ್‌ ಮುಟ್ಟದ ನಾವು, ಅವನಿಗೋಸ್ಕರ ಕೆಲಸದವರಿಂದ ಮಟನ್‌ ಬಿರಿಯಾನಿ ತರಿಸಿ ಕೊಡುತ್ತಿದ್ದೆವು. ನನ್ನ ಕಾರನ್ನು ಅವನ ತಿರುಗಾಟಕ್ಕೆಂದೇ ಮೀಸಲಿಟ್ಟಿದ್ದೆವು. ಈಗ ಯೋಚಿಸಿದರೆ ಅರೆರೆ! ಹೌದಲ್ಲ, ನಮ್ಮ ಬದುಕಿನ ಆ ಆರು ವರ್ಷಗಳನ್ನು ಅವನಿಗಾಗಿಯೇ ತೆಗೆದಿರಿಸಿದ್ದೆವು ಎನ್ನಿಸುತ್ತದೆ.

ನಮ್ಮ ಲೆಕ್ಕದಲ್ಲಿ ಅವನು ಪೂರ್ಣಾಯಸ್ಸು ಮುಗಿಸಿಯೇ ಹೋಗಬೇಕಿತ್ತು. ಏಕೆಂದರೆ ನಾವು ಅವನನ್ನು ಪ್ರೀತಿಸಿದ, ನೋಡಿಕೊಂಡ ರೀತಿ ಹಾಗಿತ್ತು. ಆದರೆ ಅಷ್ಟೇ ಪ್ರೀತಿಯಿಂದ ಅವನು ಸಂತೃಪ್ತನಾದ ಅನ್ನಿಸತ್ತೆ... ಆರನೇ ವಯಸ್ಸಿಗೆ ಅವನಿಗೆ ಟಿಕ್ಸ್‌ ಫಿವರ್‌ಎಂಬ ಮಹಾಮಾರಿ ಬಂತು. ಇಪ್ಪತ್ತು ದಿನಗಳ ಕಾಲ ನಾವು ಮೂರೂ ಜನ ಹಗಲು ರಾತ್ರಿ ಅವನ ಪಕ್ಕ ನಿಂತರೂ ಅದೊಂದು ದಿನ ಎದ್ದು ನಡೆದೇ ಬಿಟ್ಟ.

ಆ ದಿನದಿಂದ ಮನೆ, ಮನ ಎರಡರಲ್ಲೂ ತುಂಬಲಾಗದ ಖಾಲಿತನ. ಅವನ ಆ ಒಳ್ಳೆತನವನ್ನು ಈ ಪ್ರಪಂಚದ ಯಾರಿಂದಲೂ ನಿರೀಕ್ಷಿಸಲು ಸಾಧ್ಯವಾಗದು. ಅಂಥ ದಿವ್ಯವಾದ ಜೀವ ಇನ್ನು ಹುಡುಕಿದರೂ ಸಿಗುವುದಿಲ್ಲ. ಹೀಗಾಗಿ ಸದಾ ಅಂದುಕೊಳ್ಳುತ್ತೇವೆ; ನೋಬಿಯನ್ನು ಭಗವಂತನೇ ನಮ್ಮ ಬಳಿ ಕಳಿಸಿದ್ದ ಎಂದು. ಈ ಜನ್ಮ ಮುಗಿಯುವವರೆಗೂ ಒಂದೇ ಒಂದು ದಿನವೂ ಮರೆಯದ, ಅತ್ಯಂತ ಅಕ್ಕರೆಯಿಂದ ನೆನಪಿಸಿಕೊಳ್ಳುವ ಜೀವ ಎಂದರೆ ಅದು ನೋಬಿ ಮಾತ್ರ!

ವಿ ಮಿಸ್‌ ಯು ನೋಬಿ ಬಂಗಾರ! ನೀನೆಂದರೆ ನಮಗೆ ಎಲ್ಲರಿಗಿಂತ ಮೆಚ್ಚು.

- ಗೀರ್ವಾಣಿ, ಬೆಂಗಳೂರು

*********************************************************************************************************

ಜೀವ ಮರೆಯಾದರೂ ನೆನಪುಗಳು ಶಾಶ್ವತ

ಸಾಂಗತ್ಯ ಎನ್ನುವುದು ಪ್ರತಿಯೊಬ್ಬ ಮನುಷ್ಯನ ಪ್ರಾಥಮಿಕ ಅಗತ್ಯ. ಅದರಲ್ಲೂ ಸಾಕುಪ್ರಾಣಿಗಳ ಸಾಂಗತ್ಯ ಅನುಭವಿಸಿಯೇ ತಿಳಿಯುವಂಥದ್ದು. ನನ್ನ ಮಟ್ಟಿಗಂತೂ ಅವು ಪ್ರಾಣಿಗಳಲ್ಲ, ನನ್ನ ಮನೆಯ ಸದಸ್ಯರು. ನನ್ನ ಸಂತೋಷ-ದುಃಖಗಳ ಮೌನ ಸಂಗಾತಿಗಳು. ಮನಸ್ಸಿನಲ್ಲಿ ಎಷ್ಟೇ ಭಾರವಿರಲಿ, ಮನೆಗೆ ಬಂದಾಗ ಓಡೋಡಿ ಬಂದು ಸ್ವಾಗತ ಕೋರುವ ಅವುಗಳ ಕಣ್ಣುಗಳಲ್ಲಿ ಕಾಣುವ ಆ ಪರಿಶುದ್ಧ ಆತ್ಮೀಯತೆ ಮತ್ತು ಪ್ರೀತಿಯನ್ನು ಪದಗಳಲ್ಲಿ ಬಿಚ್ಚಿಡಲು ಸಾಧ್ಯವೇ ಇಲ್ಲ.

ಪ್ರಾಣಿಗಳು ಎಂದು ಸುಲಭವಾಗಿ ಹೇಳಿಬಿಡುತ್ತೇವೆ; ಆದರೆ ಯಾವ ಮನುಷ್ಯರೂ ನೀಡದ ಭಾವನಾತ್ಮಕ ಆಸರೆಯನ್ನು ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೇ ನೀಡುವುದು ಇವೇ ಮೂಕಜೀವಗಳು. ನಾವು ದುಃಖದಲ್ಲಿದ್ದರೆ ಪಕ್ಕದಲ್ಲೇ ಕುಳಿತು ಧೈರ್ಯ ತುಂಬುತ್ತವೆ. ನಾವು ಸಂತೋಷದಲ್ಲಿದ್ದರೆ, ನಮ್ಮ ಜೊತೆಗೆ ಸಂಭ್ರಮಿಸುತ್ತಾ ಆ ಕ್ಷಣಗಳನ್ನು ಇನ್ನಷ್ಟು ಮಧುರಗೊಳಿಸುತ್ತವೆ.

ಕಣ್ಣ ರೆಪ್ಪೆಯ ಒಳಗೆ ಇಟ್ಟು ನೋಡಿಕೊಂಡರೂ ಯಾವುದೋ ಮಾಯದಲ್ಲಿ ಪಟಕ್‌ ಎಂದು ಕಣ್ಮರೆಯಾದಾಗ ಮಾತ್ರ ಆಗುವ ಸಂಕಟ ಅಗಾಧ..

ಇಂದು ನಮ್ಮ ಮನೆಯಲ್ಲಿ ನನ್ನ ಪ್ರೀತಿಯ ಬೆಕ್ಕುಗಳಾದ ಕಲ್ಕಿ, ಜೀವಮ್ಮುಖೀ, ಸುರಮೆ, ವೈದೇಹಿ, ನಾಯಿ ಚಂದ್ರಹಾಸ, ಕೃಷ್ಣ ಕುಮಾರ್‌ಯಾರೂ ಇಲ್ಲ. ಆದರೆ ಅವುಗಳ ಒಡನಾಟ, ತುಂಟಾಟ, ಪ್ರೀತಿಯ ನೋಟ ಮಾತ್ರ ಕಣ್‌ ಮುಚ್ಚಿದರೆ ಮತ್ತೆ ಮತ್ತೆ ನೆನಪಾಗಿ ಕಾಡುತ್ತದೆ. ಜೀವನದ ನಿತ್ಯದ ಮಜಲುಗಳಲ್ಲಿ ಅವುಗಳು ಬಿಟ್ಟು ಹೋದ ಹೆಜ್ಜೆಗುರುತುಗಳನ್ನು ಧೇನಿಸುತ್ತಾ ಮತ್ಯಾವುದೋ, ಮತ್ಯಾರಧ್ದೋ ನಾಯಿಬೆಕ್ಕುಗಳ ತಲೆ ಸವರುವಾಗ ಸಣ್ಣಗೆ ಕಣ್ಣಂಚು ಒದ್ದೆಯಾಗುತ್ತದೆ. ಮನಸ್ಸು ಮತ್ತೆ ಮತ್ತೆ ಭಾರವಾಗುತ್ತದೆ.

-ಧರ್ಮಶ್ರೀ ಅಯ್ಯಂಗಾರ್‌, ಕೆನಡಾ

*********************************************************************************************************

ಯಾರಿತ್ತರೀ ಚುಕ್ಕಿ?

ಮನೆಗೆ ಒಂದು ನಾಯಿ ತರಬೇಕೆಂಬ ಆಲೋಚನೆ ಇತ್ತು. ನಾನು ಆಲ್ಸೇಶನ್‌ ತರಬೇಕೆಂದು, ಮನೆಯವಳು ಗೋಲ್ಡನ್‌ ರಿಟ್ರೆ„ವರ್‌ತರಬೇಕೆಂದು, ಮಗಳು ಕಾಕರ್‌ಸ್ಟೆನಿಯಲ್‌ ತರಬೇಕೆಂದು ಚರ್ಚೆ ನಡೆದಿತ್ತು. ನಾನು ಪ್ರಾಣಿಪ್ರಿಯನೆಂದು ನನ್ನ ವಿದ್ಯಾರ್ಥಿಗಳಿಗೂ ತಿಳಿದಿತ್ತು. ಒಂದು ಮುಂಜಾನೆ ದಿಢೀರನೆ ವಿದ್ಯಾರ್ಥಿನಿ ಆಯು ಲೋಧ ಫೋನ್‌ ಮಾಡಿ- "ಬೀದಿ ನಾಯಿಮರಿಯೊಂದು ಬಹಳ ತೊಂದರೆಯಲ್ಲಿದೆ. ಅದಕ್ಕೆ ಕೆಲವು ದಿನಗಳ ಆಶ್ರಯ ಬೇಕು' ಎಂಬ ಕೋರಿಕೆ ಇಟ್ಟಳು. ನಾನು ಒಪ್ಪಿಕೊಂಡು ಮಗಳೊಂದಿಗೆ ಹೋಗಿ ಒಂದು ಬುಟ್ಟಿಯಲ್ಲಿ ಮರಿ ತಂದೆ. ಅದು ಒಂದರೆ ಕ್ಷಣದಲ್ಲಿ ಮನೆ ತುಂಬಾ ಓಡಾಡಿ, ಮುಗ್ಗರಿಸಿ ಎದ್ದು ಬಿದ್ದು ಒಂದು ಮೂಲೆ ಸೇರಿ ಮಲಗಿತು.

ಬಂದ ಹೊಸದರಲ್ಲಿ ಚಪ್ಪಲಿ ಕಚ್ಚಿ, ಚಾರ್ಜರ್‌ವೈರ್‌ಕಚ್ಚಿ ತುಂಡರಿಸಿ ದಾಂಧಲೆ ಮಾಡಿದಾಗ, ಮರಿಯನ್ನು ಹಿಂದಿರುಗಿಸಿಬಿಡುವ ಮನಸ್ಸಾಗಿತ್ತು. ಆದರೆ ಅದಾಗಲೇ ಈ ಮರಿ ತಮಗೆ ಬೇಡವೆಂದು ಏಳು ಮನೆಯವರು ಹಿಂದಿರುಗಿಸಿದ್ದರಿಂದ ಅದನ್ನು ಬೀದಿ ಪಾಲು ಮಾಡುವುದು ಬೇಡ, ಇನ್ನೂ ಒಂದು ವಾರ ನೋಡೋಣವೆಂದು ಇರಿಸಿಕೊಂಡೆವು. ಅದೇ ವೇಳೆಗೆ ನಾಯಿ ಸಾಕಿದ ವ್ಯಕ್ತಿಯೊಬ್ಬರು ಕಚ್ಚುವ ಆಟಿಕೆಗಳನ್ನು ಉಡುಗೊರೆಯಾಗಿ ನೀಡಿದ ಬಳಿಕ ಈ ಸಮಸ್ಯೆ ನೀಗಿತು. ಈ ವೇಳೆಗಾಗಲೇ ಅದರ ಮೇಲಿನ ನಂಟು ಅಂಟಾಗಿ ಮರಿಯನ್ನು ನಾವೇ ಇಟ್ಟುಕೊಳ್ಳಲು ನಿರ್ಧರಿಸಿ, ಅದಕ್ಕೆ "ಚುಕ್ಕಿ' ಎಂದು ನಾಮಕರಣ ಮಾಡಿದೆವು.

ಕಳೆದ 9 ವರ್ಷಗಳಲ್ಲಿ ನಾವು ಅವಳಿಗೆ ಕೊಟ್ಟ ಪ್ರೀತಿಗಿಂತ ಅವಳು ನಮಗೆ ಕೊಟ್ಟಿರುವ ಪ್ರೀತಿ ವಿಶ್ವಾಸವೇ ಅಧಿಕ. ಕಚೇರಿಯಿಂದ ನಾನು ಮನೆಗೆ ಬಂದಾಗ ಅವಳು ಸ್ವಾಗತ ನೃತ್ಯ ಮಾಡುತ್ತಾಳೆ. ಓದು, ಬರವಣಿಗೆಯಲ್ಲಿ ತೊಡಗಿದಾಗ ನನಗೆ ಒತ್ತಿ ಕುಳಿತು ಅಥವಾ ಕಾಲ ಬಳಿ ಮಲಗಿ "ನಿನ್ನೊಂದಿಗೆ ನಾನಿದ್ದೇನೆ' ಎಂಬ ಆಪ್ತಭಾವ ಮೂಡಿಸುತ್ತಾಳೆ. ನಿಜವಾದ ಪ್ರೀತಿಯ ಅರಿವಾಗಬೇಕೇ? ಹಾಗಾದರೆ ನಿಮ್ಮ ಮನೆಯಲ್ಲಿ ಒಬ್ಬ ಶ್ವಾನ ಸದಸ್ಯರಿರಲಿ. ಆದರೆ ಕೊಳ್ಳಬೇಡಿ, ದತ್ತು (ಅಛಟಟಠಿ) ಪಡೆದುಕೊಳ್ಳಿ.

-ಡಾ. ರಘು. ವಿ, ಪ್ರಾಂಶುಪಾಲರು

*********************************************************************************************************

ಮಾರ್ಜಾಲವೆಂಬ ಮಾಯಾಂಗನೆ

ಬೆಳಿಗ್ಗೆ ನಾಲ್ಕಕ್ಕೆ ಕೂಗುವ ಅಲಾರಾಂ ಸುಮ್ಮನಿರಿಸಿ ಇನ್ನೊಂದು ಹತ್ತು ನಿಮಿಷ ಮಲಗೋಣವೆಂದು ದಿಂಬು ಆತುಕೊಂಡರೆ ನಮ್ಮನೆಯ "ಮಲ್ಲಿ 'ಕಿಟಕಿಯಲ್ಲಿ ಕೂತು ಮಿಯಾಂವ್‌ ಮಿಯಾಂವ್‌ ಎನ್ನಲು ಶುರು ಮಾಡುತ್ತದೆ. ಎದ್ದು ಹೋಗಿ ಹಾಲು ಹಾಕದೆ ವಿಧಿ ಇಲ್ಲ. ಅಷ್ಟಾದರೆ ಸಾಲದು; ಎತ್ತಿಕೊಂಡು ಒಂದೆರೆಡು ನಿಮಿಷವಾದರೂ ಮೈ ಸವರಬೇಕು. ಇಲಿಯನ್ನೋ, ಹಲ್ಲಿಯನ್ನೋ ಹಿಡಿದು ತಿನ್ನುವ ಇದರ ಬೇಟೆಯ ವಿರಾಟ್‌ ದರ್ಶನ ಆಗಬೇಕೆಂದರೆ ಇವಳು ಮರಿ ಹಾಕಬೇಕು. ಹದಿನೈದಿಪ್ಪತ್ತು ದಿನಕ್ಕೆಲ್ಲಾ ಮರಿಗಳು ಕಣ್ತೆರೆದು ಪುಟ್ಟ ಪುಟ್ಟ ಹೆಜ್ಜೆ ಇಡಲು ಶುರು ಮಾಡಿದವೆಂದರೆ ಪುರುಸೊತ್ತಿಲ್ಲದೆ ಬಗೆಬಗೆಯ ಜೀವಿಗಳನ್ನು ಬೇಟೆಯಾಡಿ ತಂದು ಕೊಡುತ್ತದೆ. ಇಲಿ, ಹಲ್ಲಿ, ಕೋಳಿಮರಿ, ಮರಗಪ್ಪೆ, ಮಿಡತೆ ಕೊನೆಗೆ ಹಾವಿನ ಮರಿಯೂ ಸೇರಿದಂತೆ ಬಗೆಬಗೆಯ ಪೌಷ್ಟಿಕಾಹಾರ ಸರಬರಾಜಾಗುತ್ತದೆ. ಅದೂ ಕೊಂದು ತಂದು ತಿನ್ನಿಸೋಲ್ಲ. ಅರೆ ಜೀವ ಮಾಡಿ, ಮರಿಗಳೊಂದಷ್ಟು ಹೊತ್ತು ಬೇಟೆಯಾಟವಾಡಿ ನಂತರ ಕೊಂದು ತಿನ್ನಬೇಕು.

ಇದರ ಹೆಸರು ಮಲ್ಲಿ ಅಲ್ಲ, ತಾಟಕೆ ಅಂತಲೋ, ಹಿಡಿಂಬೆ ಅಂತಲೋ ಇಡಬೇಕು ಅನ್ನುವಷ್ಟು ಸಿಟ್ಟು ಬರುತ್ತದೆ ಇಂಥವೆಲ್ಲಾ ನೋಡುವಾಗ!!!

ಅದರ ಮರಿಗಳನ್ನು ಹಟ್ಟಿಯ ಅಟ್ಟದಲ್ಲೋ, ಸೌದೆ ಕೊಟ್ಟಿಗೆಯಲ್ಲೋ ಇಟ್ಟರೆ, ಅವುಗಳನ್ನು ಮತ್ಯಾವುದೋ ಮಾಯಕದಲ್ಲಿ ಹೊತ್ತು ತಂದು ಮಂಚದಡಿಯಲ್ಲಿಯೋ, ಮೂಲೆಯ ಕುರ್ಚಿಯಲ್ಲೋ ಬಿಡಾರ ಹೂಡುತ್ತದೆ. ಮರಿಗಳಿಗೆ ಬೇಟೆಯಷ್ಟೇ ಅಲ್ಲದೆ, ಹೊರಗೆ ಕರೆದೊಯ್ದು ಶೌಚವನ್ನೂ ಕಲಿಸುತ್ತದೆ. ಅದರ ಮಿಯಾಂವ್‌ ಸದ್ದು ಸಂಗೀತದಂತೆಯೂ, ಕೊಂಗಾಟಕ್ಕೆ ಮೈ ಸವರುವಾಗಿನ ಗುರುಗುಟ್ಟುವಿಕೆ ಥೆರಪಿಯಂತೆಯೂ, ಪೈಗಳ ಅಂಗಡಿಯ ಸಣ್ಣ ಪಾಕೀಟು ಚಕ್ಕುಲಿಗೆ ಹಣ ಕೊಡುವಾಗ ಅವರು ಪುಚ್ಚೆ(ಬೆಕ್ಕು) ಗಾ? ಅಂತ ಮುಗುಳ್ನಗುವಾಗಿನ ಸಂತಸ ಕೊಡುವ ಸಂತೃಪ್ತಿಯೇ ಬೇರೆ.

ನೀವೇನೇ ಹೇಳ್ರೀ, ಬೆಕ್ಕು ಬೇಕ್ರೀ.

-ಜ್ಯೋತಿಲಕ್ಷ್ಮೀ ಶೆಟ್ಟಿಗಾರ್‌, ಕುಂದಾಪುರ

Dailyhunt
Disclaimer: This content has not been generated, created or edited by Dailyhunt. Publisher: Udayavani