Dailyhunt Logo
  • Light mode
    Follow system
    Dark mode
    • Play Story
    • App Story
Mulki: ಹೆಚ್ಚುತ್ತಿದೆ ಸಿಹಿನೀರ ಮೀನುಗಾರಿಕೆ

Mulki: ಹೆಚ್ಚುತ್ತಿದೆ ಸಿಹಿನೀರ ಮೀನುಗಾರಿಕೆ

ಮೂಲ್ಕಿ: ಸಮುದ್ರ ಮೀನುಗಾರಿಕೆಗೆ ಹೆಸರುವಾಸಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಹಿನೀರಿನ ಮೀನುಗಾರಿಕೆಯೂ ವಿಸ್ತಾರಗೊಳ್ಳುತ್ತಿದ್ದು, ಗ್ರಾಮೀಣ ಭಾಗದ ಜನರಿಗೆ ಪರ್ಯಾಯ ಆದಾಯದ ಮೂಲವಾಗಿ ರೂಪುಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 641 ಮಂದಿ ಸಿಹಿನೀರಿನ ಮೀನುಗಾರಿಕೆ ಹಾಗೂ ಮೀನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕೆರೆ, ಹೊಂಡ, ಕೃಷಿ ಹೊಂಡ ಹಾಗೂ ಇತರ ಜಲಮೂಲಗಳನ್ನು ಬಳಸಿಕೊಂಡು ಮೀನು ಸಾಕಾಣಿಕೆ ನಡೆಸಲಾಗುತ್ತಿದೆ. ಬಂಟ್ವಾಳದಲ್ಲಿ 64, ಬೆಳ್ತಂಗಡಿಯಲ್ಲಿ 152, ಕಡಬದಲ್ಲಿ 65, ಮಂಗಳೂರಿನಲ್ಲಿ 25, ಮೂಡುಬಿದಿರೆಯಲ್ಲಿ 70, ಮೂಲ್ಕಿಯಲ್ಲಿ 39, ಪುತ್ತೂರಿನಲ್ಲಿ 75, ಸುಳ್ಯದಲ್ಲಿ 126 ಹಾಗೂ ಉಳ್ಳಾಲದಲ್ಲಿ 22 ಮಂದಿ ಈ ಕ್ಷೇತ್ರದಲ್ಲಿದ್ದಾರೆ.

ಸ್ಥಳೀಯ ಮಾರುಕಟ್ಟೆ ಬೇಡಿಕೆ
ಸಿಹಿನೀರಿನ ಮೀನುಗಳಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರುವುದರಿಂದ ಮೀನು ಕೃಷಿ ರೈತರಿಗೆ ಆಕರ್ಷಕ ಆದಾಯದ ಅವಕಾಶವನ್ನು ಒದಗಿಸುತ್ತಿದೆ. ಸಮುದ್ರ ಮೀನುಗಳ ಲಭ್ಯತೆ ಹವಾಮಾನ, ಸಮುದ್ರದ ಪರಿಸ್ಥಿತಿ ಹಾಗೂ ಮೀನುಗಾರಿಕಾ ಋತುವಿನ ಮೇಲೆ ಅವಲಂಬಿತವಾಗಿದ್ದರೆ, ಸಿಹಿನೀರಿನ ಮೀನುಗಳನ್ನು ನಿಯಂತ್ರಿತ ವಾತಾವರಣದಲ್ಲಿ ಸಾಕಾಣಿಕೆ ಮಾಡುವ ಮೂಲಕ ವರ್ಷವಿಡೀ ಉತ್ಪಾದನೆ ನಡೆಸಲು ಸಾಧ್ಯವಾಗುತ್ತದೆ.

ರೋಹು, ಕಟ್ಲಾ, ಮೃಗಾಲ್ ಸೇರಿದಂತೆ ವಿವಿಧ ಸಿಹಿನೀರಿನ ಮೀನುಗಳು ಮಾರುಕಟ್ಟೆಯಲ್ಲಿ ಬೇಡಿಕೆ ಹೊಂದಿವೆ. ಹೋಟೆಲ್, ಮೀನು ಅಂಗಡಿಗಳು ಹಾಗೂ ಮನೆ ಬಳಕೆಯಲ್ಲಿ ಸಿಹಿನೀರಿನ ಮೀನುಗಳಿಗೆ ನಿರಂತರ ಬೇಡಿಕೆ ಇರುವುದರಿಂದ ಉತ್ಪಾದಕರಿಗೆ ಮಾರುಕಟ್ಟೆ ಅವಕಾಶವೂ ಹೆಚ್ಚಾಗಿದೆ.

ಕಡಿಮೆ ಜಾಗದಲ್ಲೂ ಕೃಷಿ ಸಾಧ್ಯ
ಕೃಷಿ ಹೊಂಡ, ಕೆರೆ ಹಾಗೂ ಲಭ್ಯವಿರುವ ಜಲಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮೀನು ಸಾಕಾಣಿಕೆ ನಡೆಸಬಹುದಾಗಿದೆ. ಇದರಿಂದ ಕೃಷಿಯೊಂದಿಗೆ ಮೀನುಗಾರಿಕೆಯನ್ನು ಸಂಯೋಜಿಸಿ ಹೆಚ್ಚುವರಿ ಆದಾಯ ಗಳಿಸಲು ಸಾಧ್ಯವಾಗುತ್ತದೆ. ಭತ್ತ, ತರಕಾರಿ ಮತ್ತಿತರ ಕೃಷಿ ಚಟುವಟಿಕೆಗಳ ಜತೆಗೆ ಮೀನು ಕೃಷಿ ಕೈಗೊಳ್ಳುವುದರಿಂದ ಒಂದೇ ಜಮೀನಿನಿಂದ ವಿವಿಧ ರೀತಿಯಲ್ಲಿ ಆದಾಯ ಪಡೆಯುವ ಅವಕಾಶ ರೈತರಿಗೆ ದೊರೆಯುತ್ತದೆ.

ಪೌಷ್ಟಿಕ ಆಹಾರಕ್ಕೂ ಮಹತ್ವ
ಸಿಹಿನೀರಿನ ಮೀನು ಉತ್ತಮ ಗುಣಮಟ್ಟದ ಪ್ರೋಟೀನ್‌ನ ಮೂಲವಾಗಿದ್ದು, ದೇಹಕ್ಕೆ ಅಗತ್ಯವಾದ ವಿವಿಧ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ. ಹೀಗಾಗಿ ಮೀನು ಸೇವನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಹಿನೀರಿನ ಮೀನುಗಳಿಗೆ ಬೇಡಿಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಸ್ಥಳೀಯವಾಗಿ ಉತ್ಪಾದನೆಯಾಗುವ ಮೀನುಗಳು ಗ್ರಾಹಕರಿಗೆ ತಾಜಾವಾಗಿ ದೊರೆಯುವ ಅವಕಾಶವನ್ನೂ ಕಲ್ಪಿಸುತ್ತವೆ.

ಉದ್ಯೋಗ, ಆದಾಯಕ್ಕೆ ಅವಕಾಶ
ಮೀನು ಕೃಷಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವಯಂ ಉದ್ಯೋಗ ಹಾಗೂ ಹೆಚ್ಚುವರಿ ಆದಾಯ ಸೃಷ್ಟಿಸುವ ಚಟುವಟಿಕೆಯಾಗಿ ಬೆಳೆಯುತ್ತಿದೆ. ಮೀನು ಮರಿಗಳ ಸಾಕಾಣಿಕೆ, ಆಹಾರ ಪೂರೈಕೆ, ಕೆರೆ ನಿರ್ವಹಣೆ, ಮೀನು ಹಿಡಿಯುವಿಕೆ, ಸಾಗಾಟ ಹಾಗೂ ಮಾರಾಟದ ಮೂಲಕ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ.

"ಜಿಲ್ಲೆಯಲ್ಲಿ ಸಿಹಿನೀರಿನ ಮೀನುಗಾರಿಕೆಗೆ ಉತ್ತಮ ಅವಕಾಶವಿದ್ದು, ವೈಜ್ಞಾನಿಕ ವಿಧಾನದಲ್ಲಿ ಮೀನು ಸಾಕಾಣಿಕೆ, ಗುಣಮಟ್ಟದ ಮೀನುಮರಿಗಳ ಲಭ್ಯತೆ, ತರಬೇತಿ, ಮಾರುಕಟ್ಟೆ ಸಂಪರ್ಕ ಹಾಗೂ ಅಗತ್ಯ ತಾಂತ್ರಿಕ ಮಾರ್ಗದರ್ಶನವನ್ನು ಮತ್ತಷ್ಟು ಬಲಪಡಿಸಿದರೆ ಈ ಕ್ಷೇತ್ರವನ್ನು ಇನ್ನಷ್ಟು ವಿಸ್ತರಿಸಬಹುದು," ಎನ್ನುತ್ತಾರೆ ಮೀನುಗಾರರೊಬ್ಬರು.

"ಸಿಹಿನೀರಿನ ಮೀನುಗಾರಿಕೆಗೆ ಸರಕಾರವೂ ಹಲವಾರು ರೀತಿಯ ಪ್ರೋತ್ಸಾಹ ನೀಡುತ್ತಿದ್ದು, ಇದರ ಪರಿಣಾಮವಾಗಿ ರೈತರು ಇದರಲ್ಲಿ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ." -ದಿಲೀಪ್ ಕುಮಾರ್, ಉಪ ನಿರ್ದೇಶಕರು (ಪ್ರಭಾರ), ಮೀನುಗಾರಿಕೆ ಇಲಾಖೆ.

- ಪುನೀತ್ ಸಾಲ್ಯಾನ್

Dailyhunt
Disclaimer: This content has not been generated, created or edited by Dailyhunt. Publisher: Udayavani